ಎಸ್ಸೆಸ್ಸೆಲ್ಸಿ, ಪಿಯುಗೆ ಇನ್ಮುಂದೆ 3 ಪರೀಕ್ಷೆ: ಪರೀಕ್ಷಾ ವ್ಯವಸ್ಥೆ ಭಾರೀ ಬದಲಾವಣೆ
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಸರ್ಕಾರ ತೀರ್ಮಾನಿಸಿದ್ದು, ಎರಡೂ ತರಗತಿಯ ವಿದ್ಯಾರ್ಥಿಗಳು ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯಬಹುದು.
ಬೆಂಗಳೂರು (ಸೆ.06): ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಸರ್ಕಾರ ತೀರ್ಮಾನಿಸಿದ್ದು, ಎರಡೂ ತರಗತಿಯ ವಿದ್ಯಾರ್ಥಿಗಳು ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯಬಹುದು. ಆ ಮೂರೂ ಪರೀಕ್ಷೆ ಬರೆದವರು ಹೆಚ್ಚು ಅಂಕಗಳು ಯಾವ ಪರೀಕ್ಷೆಯಲ್ಲಿ ಬಂದಿರುತ್ತದೋ ಆ ಫಲಿತಾಂಶವನ್ನು ಉಳಿಸಿಕೊಳ್ಳುವ ಅವಕಾಶ ದೊರೆಯಲಿದೆ. ಇದು 2023-24ನೇ ಸಾಲಿನಿಂದಲೇ ಜಾರಿಯಾಗಲಿದೆ.
ಈ ವಿಶೇಷ ಅವಕಾಶ ಒಟ್ಟಾರೆ ಫಲಿತಾಂಶಕ್ಕೆ ಸೀಮಿತವಲ್ಲ, ವಿಷಯವಾರು ಫಲಿತಾಂಶಕ್ಕೂ ಅನ್ವಯ. ಈ ಮೂರು ಪ್ರಯತ್ನಗಳಲ್ಲಿ ಗಳಿಸಿದ ಅಂಕಗಳಲ್ಲಿ, ವಿಷಯವಾರು ಅತ್ಯುತ್ತಮವಾದ ಅಂಕಗಳನ್ನು ಯಾವುದೇ ಪರೀಕ್ಷೆಯಿಂದ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಉದಾಹರಣೆಗೆ ಮೊದಲ ಪರೀಕ್ಷೆಯಲ್ಲಿ ಗಣಿತದಲ್ಲಿ ಹೆಚ್ಚು ಅಂಕ ಬಂದಿದ್ದರೆ ಆ ಫಲಿತಾಂಶವನ್ನು, ಎರಡನೇ ಪರೀಕ್ಷೆಯಲ್ಲಿ ವಿಜ್ಞಾನದಲ್ಲಿ ಅತಿ ಹೆಚ್ಚು ಅಂಕ ಬಂದಿದ್ದರೆ ಆ ಫಲಿತಾಂಶವನ್ನು, ಮೂರನೇ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನದಲ್ಲಿ ಹೆಚ್ಚು ಫಲಿತಾಂಶ ಬಂದಿದ್ದರೆ ಆ ಫಲಿತಾಂಶವನ್ನು ಉಳಿಸಿಕೊಳ್ಳಬಹುದಾಗಿದೆ. ಒಂದು ಪರೀಕ್ಷೆಯಲ್ಲಿ ಅನುತ್ತಿರ್ಣಗೊಂಡಿರುವ ವಿಷಯದಲ್ಲಿ ಮತ್ತೊಂದು ಪರೀಕ್ಷೆಯಲ್ಲಿ ಪಾಸಾದಾಗ ಆ ಫಲಿತಾಂಶವನ್ನು ಒಟ್ಟಾರೆ ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ.
ಕಾಂಗ್ರೆಸ್ ಸರ್ಕಾರಕ್ಕೆ ಕಾವೇರಿ ನೀರನ್ನು ರಕ್ಷಣೆ ಮಾಡುವ ಆಸಕ್ತಿಯೇ ಇಲ್ಲ: ಸಿ.ಎಸ್.ಪುಟ್ಟರಾಜು
ಕಡ್ಡಾಯವಲ್ಲ: ಹಾಗಂತ ಪ್ರತಿ ವಿದ್ಯಾರ್ಥಿಗಳು ಮೂರೂ ಪರೀಕ್ಷೆ ಬರೆಯುವುದು ಕಡ್ಡಾಯವಲ್ಲ. ಮೊದಲ ಅಥವಾ ವಾರ್ಷಿಕ ಪರೀಕ್ಷೆಯಲ್ಲಿ ಬಂದ ಫಲಿತಾಂಶದಲ್ಲಿ ಸಮಾಧಾನವಿದ್ದರೆ ಎರಡನೇ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಸಮಾಧಾನ ಇಲ್ಲದಿದ್ದರೆ ಅಥವಾ ಕಡಿಮೆ ಅಂಕಗಳು ಬಂದಿದ್ದರೆ ಎರಡನೇ ಪರೀಕ್ಷೆ ಬರೆಯಬಹುದು. ಎರಡನೇ ಪರೀಕ್ಷೆಯ ಫಲಿತಾಂಶದಲ್ಲೂ ಸಮಾಧಾನ ಇಲ್ಲದಿದ್ದರೆ ಮೂರನೇ ಪರೀಕ್ಷೆ ಬರೆಯಬಹುದು. ಈ ರೀತಿ ಮೂರೂ ಪರೀಕ್ಷೆ ಬರೆದರೂ ಮೂರರಲ್ಲಿ ಯಾವ ಫಲಿತಾಂಶವನ್ನು ಬೇಕಾದರೂ ಅಥವಾ ಮೂರೂ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದಿರುವ ಬೇರೆ ಬೇರೆ ವಿಷಯಗಳ ಫಲಿತಾಂಶಗಳನ್ನು ಒಟ್ಟಾರೆ ಫಲಿತಾಂಶಕ್ಕೆ ಪರಿಗಣಿಸಬಹುದಾಗಿದೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಈ ಮಾಹಿತಿ ನೀಡಿದರು. ಬಳಿಕ ಪರೀಕ್ಷಾ ಸುಧಾರಣೆ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕೂಡ ವಿವರವಾದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಪರೀಕ್ಷೆ 1, 2, 3: ಆ ಪ್ರಕಾರ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇನ್ಮುಂದೆ ವಾರ್ಷಿಕ ಮತ್ತು ಪೂರಕ ಪರೀಕ್ಷೆಗಳು ಎನ್ನುವ ಹೆಸರಿನ ಬದಲು ವಾರ್ಷಿಕ ಪರೀಕ್ಷೆಯನ್ನು ಪರೀಕ್ಷೆ 1 ಎಂದು, ಇನ್ನೆರಡು ಪೂರಕ ಪರೀಕ್ಷೆಗಳನ್ನು ಪರೀಕ್ಷೆ 2 ಮತ್ತು ಪರೀಕ್ಷೆ 3 ಎಂದು ಹೆಸರಿಸಲಾಗಿದೆ. ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಈಗಾಗಲೇ ವರ್ಷದಲ್ಲಿ ಎರಡು ಪೂರಕ ಪರೀಕ್ಷೆ ಜಾರಿಗೊಳಿಸಿರುವಂತೆ ಪ್ರಸಕ್ತ ಸಾಲಿನಿಂದ ಎಸ್ಸೆಸ್ಸೆಲ್ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೂ ವರ್ಷದಲ್ಲಿ ಎರಡು ಪೂರಕ ಪರೀಕ್ಷೆಗಳು ನಡೆಯಲಿವೆ.
ಏಕೆ ಈ ಕ್ರಮ?: ಹಾಲಿ ಇರುವ ಪರೀಕ್ಷಾ ಪದ್ಧತಿಯು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಮತ್ತು ಪರೀಕ್ಷಾ ಆತಂಕವನ್ನು ಸೃಷ್ಟಿಸುತ್ತಿದೆ. ಆದರಿಂದ ವಿದ್ಯಾರ್ಥಿಗಳ ಜ್ಞಾನಧಾರಣೆ, ಅರ್ಥಪೂರ್ಣ ಕಲಿಕೆ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಈ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಫಲಿತಾಂಶದಲ್ಲಿ ಸಮಾಧಾನವಾಗದಿದ್ದರೆ ವಿದ್ಯಾರ್ಥಿ ಅದನ್ನು ತಿರಸ್ಕರಿಸಿ ಪೂರಕ ಪರೀಕ್ಷೆ ಬರೆಯಬಹುದಿತ್ತು. ಆದರೆ, ಪೂರಕ ಪರೀಕ್ಷೆಯಲ್ಲೇನಾದರೂ ಇನ್ನೂ ಕಳಪೆ ಫಲಿತಾಂಶ ಬಂದರೆ ಅಥವಾ ಫೇಲಾದರೆ ವಾರ್ಷಿಕ ಪರೀಕ್ಷೆಯ ಫಲಿತಾಂಶ ಉಳಿಸಿಕೊಳ್ಳಲು ಅವಕಾಶವಿರಲಿಲ್ಲ.
ಈಗ ಮೂರರಲ್ಲಿ ಯಾವ ಫಲಿತಾಂಶವನ್ನು ಬೇಕಾದರೂ ಉಳಿಸಿಕೊಳ್ಳಬಹುದು. ಒಂದು ಪರೀಕ್ಷೆಯಲ್ಲಿ ಫೇಲಾಗಿರುವ ವಿಷಯ ಮತ್ತೊಂದು ಪರೀಕ್ಷೆಯಲ್ಲಿ ಪಾಸಾದಾಗ ಆ ಫಲಿತಾಂಶವನ್ನು ಒಟ್ಟಾರೆ ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸುಧಾರಣಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಇನ್ನಷ್ಟುವಿವರವಾದ ಮಾರ್ಗಸೂಚಿಯನ್ನು ಸುತ್ತೋಲೆಯ ಮೂಲಕ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಮಂಡಳಿ ಹೇಳಿದೆ.
ಮಾರ್ಚ್‌ನಿಂದ ಜುಲೈವರೆಗೆ 3 ಪರೀಕ್ಷೆ: ಮೂರೂ ಪರೀಕ್ಷೆ ನಡೆಸಲು ಹಾಗೂ ಅವುಗಳ ಫಲಿತಾಂಶ ಪ್ರಕಟಣೆಗೆ ಮಂಡಳಿಯು ಸಂಭವನೀಯ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾಚ್‌ರ್, ಏಪ್ರಿಲ್, ಮೇನಲ್ಲಿ ನಡೆದರೆ, ಪಿಯು ಪರೀಕ್ಷೆ ಮಾರ್ಚ್-ಏಪ್ರಿಲ್, ಜೂನ್ ಹಾಗೂ ಜುಲೈನಲ್ಲಿ ನಡೆಯಲಿದೆ. ಎಸ್ಸೆಸ್ಸೆಲ್ಸಿಗೆ ‘ಪರೀಕ್ಷೆ 1’ನ್ನು ಮಾ.1ರಿಂದ ಮಾ.25ರೊಳಗೆ ನಡೆಸಿ ಏ.22ಕ್ಕೆ ಫಲಿತಾಂಶ ನೀಡುವುದು. ‘ಪರೀಕ್ಷೆ 2’ನ್ನು ಮೇ 15ರಿಂದ ಜೂ.5ರೊಳಗೆ ನಡೆಸಿ ಜೂ.21ಕ್ಕೆ ಫಲಿತಾಂಶ ನೀಡುವುದು.
‘ಪರೀಕ್ಷೆ 3’ಕ್ಕೆ ಜು.12ರಿಂದ ಜು.30ರೊಳಗೆ ನಡೆಸಿ ಆ.16ಕ್ಕೆ ಫಲಿತಾಂಶ ನೀಡುವ ಲೆಕ್ಕಾಚಾರ ಹಾಕಿದೆ. ಅದೇ ರೀತಿ ದ್ವಿತೀಯ ಪಿಯುಸಿಯ ಪರೀಕ್ಷೆ 1ನ್ನು ಮಾ.30ರಿಂದ ಏ.15ರ ನಡುವೆ ನಡೆಸಿ ಮೇ 8ಕ್ಕೆ ಫಲಿತಾಂಶ ನೀಡುವುದು, ಪರೀಕ್ಷೆ 2ನ್ನು ಜೂ.12ರಿಂದ ಜೂ.19ರೊಳಗೆ ನಡೆಸಿ ಜೂ.29ಕ್ಕೆ ಫಲಿತಾಂಶ ಪ್ರಕಟಿಸುವುದು, ಪರೀಕ್ಷೆ 3ನ್ನು ಜು.29ರಿಂದ ಆ.5ರೊಳಗೆ ನಡೆಸಿ ಆ.19ರಂದು ಫಲಿತಾಂಶ ನೀಡಬಹುದಾಗಿ ವೇಳಾಪಟ್ಟಿಪ್ರಕಟಿಸಿದೆ.
ಕಾವೇರಿ ವಿಚಾರಕ್ಕೆ ನಿಮ್ಮ ಜೊತೆ ಜೈಲಿಗೆ ಬರಲು ಸಿದ್ಧ: ಶಾಸಕ ಜಿ.ಟಿ.ದೇವೇಗೌಡ
ಏನು ಬದಲಾವಣೆ?
- 1 ಮುಖ್ಯ ಪರೀಕ್ಷೆ, 1 ಅಥವಾ 2 ಪೂರಕ ಪರೀಕ್ಷೆ ಬದಲು 3 ಮುಖ್ಯ ಪರೀಕ್ಷೆ
- ಇನ್ಮುಂದೆ ಪೂರಕ ಪರೀಕ್ಷೆ ಇಲ್ಲ, ಬದಲಿಗೆ ಪರೀಕ್ಷೆ 1, ಪರೀಕ್ಷೆ 2, ಪರೀಕ್ಷೆ 3
- ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಮತ್ತೆ ಪರೀಕ್ಷೆ ಬರೆಯಬಹುದು
- ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದಿದೆಯೋ ಅದನ್ನು ಉಳಿಸಿಕೊಳ್ಳಬಹುದು
- ಒಂದೊಂದು ಪರೀಕ್ಷೇಲಿ ಒಂದೊಂದು ವಿಷಯ ಬರೆದು ಹೆಚ್ಚು ಅಂಕ ಗಳಿಸಬಹುದು
- ಮೂರೂ ಪರೀಕ್ಷೆಯಲ್ಲಿ ಆಯ್ದ ವಿಷಯಗಳ ಅಂಕ ಸೇರಿಸಿ ಒಟ್ಟು ಫಲಿತಾಂಶ ನೀಡಿಕೆ
- ಫೇಲಾದವರಿಗೆ ಅಥವಾ ಫಲಿತಾಂಶ ಉತ್ತಮಗೊಳಿಸಿಕೊಳ್ಳುವವರಿಗೆ ಇಬ್ಬರಿಗೂ ಲಾಭ