ಕಾವೇರಿ ನೀರಿಗಾಗಿ ಈಗ ರೈತರಿಂದಲೇ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ!
ಕಾವೇರಿ ನೀರಿಗೆ ಸಂಬಂಧಿಸಿ ತಮಿಳುನಾಡು ಮತ್ತು ಕರ್ನಾಟಕ ಈಗಾಗಲೇ ಸಲ್ಲಿಸಿದ್ದ ತಕರಾರು ಅರ್ಜಿಗಳ ಜತೆಗೆ ಇದೀಗ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘಟನೆಗಳು ಕೂಡ ಮಂಗಳವಾರ ಪ್ರತ್ಯೇಕ ಅರ್ಜಿ ಸಲ್ಲಿಸಿವೆ.
ನವದೆಹಲಿ (ಸೆ.06): ಕಾವೇರಿ ನೀರಿಗೆ ಸಂಬಂಧಿಸಿ ತಮಿಳುನಾಡು ಮತ್ತು ಕರ್ನಾಟಕ ಈಗಾಗಲೇ ಸಲ್ಲಿಸಿದ್ದ ತಕರಾರು ಅರ್ಜಿಗಳ ಜತೆಗೆ ಇದೀಗ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘಟನೆಗಳು ಕೂಡ ಮಂಗಳವಾರ ಪ್ರತ್ಯೇಕ ಅರ್ಜಿ ಸಲ್ಲಿಸಿವೆ. ಆದರೆ ಈ ಹಿಂದೆ ನಿಗದಿಪಡಿಸಿದಂತೆ ಈ ಅರ್ಜಿಗಳ ವಿಚಾರಣೆ ಸೆ.11ರಂದು ವಿಚಾರಣೆಗೆ ಬರುವ ನಿರೀಕ್ಷೆ ಇದೆ.
ಈವರೆಗೆ ಸಂಕಷ್ಟದ ಸಮಯದಲ್ಲೂ ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತ ಸಂಘಟನೆಗಳು ಇದೀಗ ಒಂದಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಅದರ ಭಾಗವಾಗಿ ಇದೀಗ ಸುಪ್ರೀಂಕೋರ್ಚ್‌ಗೆ ಅರ್ಜಿ ಸಲ್ಲಿಸಿವೆ. ನಾವು ಬೆಳೆಗಾಗಿ ಅಲ್ಲ, ಕುಡಿಯುವ ನೀರಿಗೆ ಆದ್ಯತೆ ಕೊಡಿ ಎಂದು ಕೇಳುತ್ತಿದ್ದೇವೆ. ಆದರೆ ತಮಿಳುನಾಡು ಕುರುವೈ ಬೆಳೆಗೆ ನೀರು ಕೇಳುತ್ತಿದೆ. ಮಂಡ್ಯ, ಮೈಸೂರು ಸುತ್ತಮುತ್ತ ಮೂರು ದಿನಕ್ಕೊಮ್ಮೆ ಕುಡಿಯಲು ನೀರು ಬಿಡಲಾಗುತ್ತಿದೆ ಎಂದು ರೈತ ಸಂಘಟನೆಗಳು ಅಳಲು ತೋಡಿಕೊಂಡಿವೆ.
ಕಾಂಗ್ರೆಸ್ ಸರ್ಕಾರಕ್ಕೆ ಕಾವೇರಿ ನೀರನ್ನು ರಕ್ಷಣೆ ಮಾಡುವ ಆಸಕ್ತಿಯೇ ಇಲ್ಲ: ಸಿ.ಎಸ್.ಪುಟ್ಟರಾಜು
ಈಗಾಗಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತಂಡ ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲಿಸಿದೆ. ಆದರೆ ಕರ್ನಾಟಕಕ್ಕೆ ಭೇಟಿ ನೀಡಿಲ್ಲ, ನಮ್ಮ ನೋವು ನೋಡಿಲ್ಲ. ಸಂಕಷ್ಟದಲ್ಲಿ ನೀರು ಬಿಡುವುದರಿಂದ ರೈತರ ಮೇಲೆ ಸಾಮಾಜಿಕ, ಆರ್ಥಿಕ ದುಷ್ಪರಿಣಾಮಗಳು ಆಗಲಿವೆ. ಕರ್ನಾಟಕ ಸರ್ಕಾರ ಕೂಡ ಕಾವೇರಿ ಜಲಾನಯನ ಪ್ರದೇಶದ ಕೆಲ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಸಿದ್ಧತೆ ನಡೆಸಿದೆ ಎಂಬ ವಿಚಾರವನ್ನು ಸಂಘಟನೆಗಳು ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿವೆ.
24 ಸಾವಿರ ಕ್ಯುಸೆಕ್ ನೀರಿಗೆ ಆಗ್ರಹ: ಬರದ ವಾತಾವರಣದ ನಡುವೆಯೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಈಗಾಗಲೇ ಕರ್ನಾಟಕವು ತಮಿಳುನಾಡಿಗೆ 13 ಟಿಎಂಸಿ ಹರಿಸಿದೆ. ಇದೀಗ ಕಳೆದ ಮಂಗಳವಾರ ನೀಡಿದ ಮತ್ತೊಂದು ಸೂಚನೆಯಂತೆ ಮತ್ತೆ ನೀರು ಹರಿಸುತ್ತಿದೆ. ತನ್ನ ಸೂಚನೆಯನ್ನು ಕರ್ನಾಟಕ ಪಾಲಿಸುತ್ತಿದೆ ಎಂದು ಪ್ರಾಧಿಕಾರ ಕೂಡ ಸುಪ್ರೀಂಕೋರ್ಚ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸಿದೆ.
ಈ ನಡುವೆ ತಮಿಳುನಾಡು ಸಲ್ಲಿಸಿದ್ದ ಅರ್ಜಿ ಮತ್ತು ಅದಕ್ಕೆ ತಕಾರರು ಎತ್ತಿ ಕರ್ನಾಟಕವೂ ಸಲ್ಲಿಸಿದ್ದ ಆಕ್ಷೇಪಣೆ ಕಳೆದ ಶುಕ್ರವಾರವೇ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬರಬೇಕಿತ್ತು. ಆದರೆ ನ್ಯಾಯಾಧೀಶರೊಬ್ಬರ ಅಲಭ್ಯತೆ ಹಿನ್ನೆಲೆಯಲ್ಲಿ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆಯಾಗಿತ್ತು. ಆದರೆ ಇದೀಗ ಪೀಠದಲ್ಲಿರುವ ನ್ಯಾ.ನರಸಿಂಹ ಅವರ ಅಲಭ್ಯತೆ ಹಿನ್ನೆಲೆಯಲ್ಲಿ ವಿಚಾರಣೆ ಸೆ.11ಕ್ಕೆ ಮುಂದೂಡಿಕೆಯಾಗುವ ನಿರೀಕ್ಷೆ ಇದೆ. ಆದರೂ ನೀರಿಗಾಗಿ ಪಟ್ಟು ಹಿಡಿದು ಕೂತಿರುವ ತಮಿಳುನಾಡು ದ್ವಿಸದಸ್ಯ ಪೀಠದ ಮುಂದೆ ಮತ್ತೆ ಕಾವೇರಿ ವಿಚಾರ ಪ್ರಸ್ತಾಪ ಮಾಡುವ ನಿರೀಕ್ಷೆ ಇದೆ.
ಕಾವೇರಿ ವಿಚಾರಕ್ಕೆ ನಿಮ್ಮ ಜೊತೆ ಜೈಲಿಗೆ ಬರಲು ಸಿದ್ಧ: ಶಾಸಕ ಜಿ.ಟಿ.ದೇವೇಗೌಡ
ಇಲ್ಲಿ ಸರ್ಕಾರದ ವಿರುದ್ಧ, ಅಲ್ಲಿ ತಮಿಳ್ನಾಡು ವಿರುದ್ಧ: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಮಂಡ್ಯದಲ್ಲಿ ರೈತ ಸಂಘಟನೆಗಳು ಅಹೋರಾತ್ರಿ ಹೋರಾಟ ನಡೆಸುತ್ತಿವೆ. ಆದರೂ ಸರ್ಕಾರ ಕೆಆರ್‌ಎಸ್‌ನಿಂದ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಈಗ ಸುಪ್ರೀಂಕೋರ್‌್ಟನಲ್ಲಿ ತಮಿಳುನಾಡಿನ ವಿರುದ್ಧವೂ ಹೋರಾಟ ನಡೆಸಲು ರೈತರು ಮುಂದಾಗಿದ್ದಾರೆ.