ಶಿವಮೊಗ್ಗ: ಕಾರಾಗೃಹದಲ್ಲಿ ಕಣ್ಣೀರ ಕೋಡಿಯಾದ ಕೈದಿಗಳ ರಕ್ತಸಂಬಂಧ..!
* ಸಿನಿಮಾ ದೃಶ್ಯ, ರಿಯಾಲಿಟಿ ಶೋ ಮೀರಿಸುವಂತೆ ಬಾಂಧವ್ಯ ಅನಾವರಣಗೊಳಿಸಿದ ದೃಶ್ಯ
* ಕೈದಿಗಳ ಪ್ರತಿಭೆಗಳಿಗೆ ಸಾಣೆ ಹಿಡಿದ ಅಧಿಕಾರಿಗಳು
* ತಪ್ಪಿಗೆ ಪ್ರಾಯಶ್ಚಿತಪಡುತ್ತಲೇ ಮಗವನ್ನು ಮುದ್ದಾಡುತ್ತ ಅತ್ತ ಕೈದಿ
ಶಿವಮೊಗ್ಗ(ಜೂ.04): ಆತ ಜೈಲಿನಲ್ಲಿರುವುದು ಹೆತ್ತ ತಾಯಿಗೆ ಗೊತ್ತಿಲ್ಲ. ದೂರದ ಮುಂಬೈನಲ್ಲಿ ಮಗ ಇದ್ದಾನೆ ಎಂದು ಮನೆಯವರು ಹೇಳಿದ ಮಾತನ್ನು ನಂಬಿದ್ದಾರೆ. ತನ್ನ ಅಮ್ಮನ ಆಸೆಯಂತೆ ತಾನು ಡ್ಯಾನ್ಸರ್ ಆಗಿ ಸಾಧನೆ ಮಾಡಬೇಕೆಂಬ ಆಸೆಗೆ ಕೊಳ್ಳಿ ಇಟ್ಟಿದ್ದು ಕ್ಷಣದ ಕೋಪ!
ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಇದನ್ನೆಲ್ಲಾ ಹೇಳುತ್ತ ದುಃಖಿಸುವ ಹೊತ್ತಿಗೆ ತನ್ನ ಸೋದರ ಮತ್ತು ಚಿಕ್ಕಮ್ಮ ನೇರವಾಗಿ ಮುಖಾಮುಖಿಯಾದರೆ ಹೇಗಿರುತ್ತದೆ?! ಇಂತಹ ಸಿನಿಮಾ ರೀತಿಯಂಥ ದೃಶ್ಯಕ್ಕೆ, ರಿಯಾಲಿಟಿ ಶೋಗೆ ಸಾಕ್ಷಿಯಾಗಿದ್ದು ಇಲ್ಲಿನ ಹೊರವಲಯದ ಸೋಗಾನೆಯಲ್ಲಿ ಇರುವ ಕೇಂದ್ರ ಕಾರಾಗೃಹದ ಕಾರ್ಯಕ್ರಮ.
ಜೈಲಲ್ಲಿ ಶಿಕ್ಷೆಯೊಂದಿಗೆ ಶಿಕ್ಷಣ ಮುಂದುವರಿಕೆ: ಐವರು ಕೈದಿಗಳಿಗೆ ಕುವೆಂಪು ವಿವಿ ಪದವಿ ಕಿರೀಟ..!
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪ್ರೆಸ್ ಟ್ರಸ್ಟ್ ಶಿವಮೊಗ್ಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೇಂದ್ರ ಕಾರಾಗೃಹ ಮತ್ತು ಮಹಿಳಾ ಕೇಂದ್ರ ಕಾರಾಗೃಹದ ವತಿಯಿಂದ ‘ತಾಯಂದಿರ ದಿನಾಚರಣೆ’ ಮತ್ತು ‘ಕಾನೂನು ಅರಿವು’ ಕಾರ್ಯಕ್ರಮದಲ್ಲಿ ಅಮ್ಮಂದಿರ ಕುರಿತಾಗಿ ಕೈದಿಗಳು ನಡೆಸಿಕೊಟ್ಟ ನಾಯಕ, ನೃತ್ಯರೂಪಕ, ಹಾಡು ಇತ್ಯಾದಿ ಕಾರ್ಯಕ್ರಮಗಳ ಮಧ್ಯೆ ಕೈದಿಯೊಬ್ಬ ತನ್ನ ಕತೆಯನ್ನು ಹೇಳುತ್ತ ನೃತ್ಯ ಪ್ರದರ್ಶಿಸಿ, ಇದನ್ನು ಅಮ್ಮನಿಗೆ ಅರ್ಪಿಸಿದರು.
ಈ ವೇಳೆಯಲ್ಲಿ ಕಾರ್ಯಕ್ರಮ ನಿರೂಪಿಸುತ್ತಿದ್ದ ಕೇಂದ್ರ ಕಾರಾಗೃಹದ ಶಿಕ್ಷಕ ಗೋಪಾಲಕೃಷ್ಣ ಅವರು ‘‘ಈ ವೇಳೆಯಲ್ಲಿ ಅಮ್ಮ ಎದುರಾದರೆ’’ ಎಂದಾಗ ಆತ ದಿಕ್ಕೆಟ್ಟನಂತಾದ. ‘‘ಇಲ್ಲ, ಆಕೆ ಇಲ್ಲಿಗೆ ಬಂದು ನೋಡಿದರೆ ಹೃದಯ ಒಡೆದು ಸಾಯುತ್ತಾಳೆ. ಅದಾಗಬಾರದು’’ ಎಂದ. ‘‘ಹೋಗಲಿ ಅಣ್ಣ, ಮತ್ತು ಚಿಕ್ಕಮ್ಮ ಬಂದರೆ..’’ ಎಂದು ಕೇಳುತ್ತಿರುವಾಗಲೇ ಮರೆಯಿಂದ ಸೋದರ ಮತ್ತು ಚಿಕ್ಕಮ್ಮ ಆಗಮಿಸಿದರು. ಅವರನ್ನು ನೋಡುತ್ತಲೇ ದುಃಖ ಉಮ್ಮಳಿಸಿ ಬಂದಿತು. ಅವರನ್ನು ಅಪ್ಪಿಕೊಂಡು ಕುಸಿದುಬಿದ್ದ. ತನ್ನನ್ನು ಕೇಂದ್ರ ಕಾರಾಗೃಹದಲ್ಲಿ ಈ ರೂಪದಲ್ಲಿ ನೋಡಿದ್ದು ಆತನಿಗೆ ಶಾಕ್ ಆಗಿತ್ತು. ಯಾವುದೋ ಸಿನಿಮಾದ ದೃಶ್ಯ ಇಲ್ಲಿ ಮರುಕಳಿಸಿದಂತಾಯ್ತು. ರಿಯಾಲಿಟಿ ಶೋ ನೆನಪಾಗುವಂತಾಯ್ತು. ಈ ಸಂದರ್ಭಕ್ಕೆ ನ್ಯಾಯಾಧೀಶರು, ಪತ್ರಕರ್ತರು, ಜೈಲು ಅಧೀಕ್ಷಕರು, ಕೈದಿಗಳು ಎಲ್ಲರೂ ಸಾಕ್ಷಿಯಾದರು. ಅಲ್ಲಿದ್ದವರ ಎಲ್ಲರ ಕಣ್ಣಿನಲ್ಲಿಯೂ ನೀರು ತುಂಬಿ ಹರಿಯಿತು.
ಬಳಿಕ ತನ್ನ ಕತೆಯನ್ನು ಹೇಳಿದ. ಯಾರದೋ ಹಣ ವಸೂಲಿಯ ವೇಳೆಯಲ್ಲಿ ತಾನು ಮಧ್ಯ ಪ್ರವೇಶಿಸಿ, ತಡೆಯಲು ಯತ್ನಿಸಿದಾಗ ಆದ ಘಟನೆಯ ಕುರಿತು ಮಾತನಾಡಿದ. ಅಮ್ಮನ ಆಸೆ ಈಡೇರಿಸಲಾಗುತ್ತಿಲ್ಲ ಎಂಬ ನೋವನ್ನು ಹಂಚಿಕೊಂಡು ಅತ್ತುಬಿಟ್ಟ. ನೃತ್ಯ ಕಲಿತು ಡ್ಯಾನ್ಸರ್ ಆಗಿ ಅಮ್ಮನ ಆಸೆ ಈಡೇರಿಸಲಾಗಲಿಲ್ಲ. ಇಲ್ಲಿ ಡ್ಯಾನ್ಸ್ ಮಾಡಿ ಅಮ್ಮನಿಗೆ ಅರ್ಪಿಸುತ್ತೇನೆ. ಸಧ್ಯ ಮನೆಯಲ್ಲಿ ಕಿವುಡತನದಿಂದ ಬಳಲುತ್ತ ತನಗಾಗಿ ಕಾಯುತ್ತಿರುವ ಅಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ.
ಪುಟ್ಟ ಕಂದನ ಅಪ್ಪಿ ಮುದ್ದಾಡಿದ:
ಇನ್ನೊಂದು ಘಟನೆಯಲ್ಲಿ ರೂಪಕವೊಂದರಲ್ಲಿ ಶಿವನ ಪಾತ್ರ ಮಾಡಿದ್ದ ಕೈದಿ ನವೀನ್ ತನ್ನ ಎರಡೂವರೆ ವರ್ಷದ ಮಗುವನ್ನು ಮುಂದಿಟ್ಟುಕೊಂಡು ತನ್ನ ತಾಯಿಗಾಗಿ ಬರೆದ ಹಾಡನ್ನು ಹಾಡಿದ, ಕೀ ಬೋರ್ಡ್ ನುಡಿಸಿದ. ಅಪ್ಪನ ತಪ್ಪಿಗೆ ಈ ಪುಟ್ಟಮಗು ಜೈಲಿನಲ್ಲಿ ಇರಬೇಕಾದ ಸ್ಥಿತಿಯನ್ನು ಕೂಡ ಇಲ್ಲಿ ನೋಡುವಂತಾಯಿತು. ಏನೂ ಅರಿವಾಗದ, ಏನೂ ಅರಿವಿಲ್ಲದ ಪುಟ್ಟಕಂದಮ್ಮ ಅಪ್ಪನ ಮಡಿನಲ್ಲಿ ಇದ್ದರೂ ಅಳುತ್ತಲೇ ಇತ್ತು. ಅದಕ್ಕೆ ತನ್ನಪ್ಪನ ಸ್ಪರ್ಶದ ಸ್ಪಷ್ಟತೆ ಸಿಕ್ಕೇ ಇಲ್ಲ. ಅಮ್ಮನ ಮಡಿಲು ಕನಸಾಗಿತ್ತು.
ಪುಟ್ಟ ಮಗುವನ್ನು ಪ್ರೀತಿಯಿಂದ ಅಪ್ಪಿಹಿಡಿದು, ‘‘ತಪ್ಪು ಮಾಡಿದ್ದೇನೆ. ಎರಡು ಕುಟುಂಬಗಳ ಕಣ್ಣೀರಿಗೆ ಕಾರಣನಾಗಿದ್ದೇನೆ, ನನ್ನನ್ನು ಕ್ಷಮಿಸಿ ಎನ್ನುವುದರ ಹೊರತಾಗಿ ಇನ್ನೇನೂ ಹೇಳಲು ಸಾಧ್ಯವಿಲ್ಲ. ಚಾಲಕನಾಗಿದ್ದ ನನಗೆ ಕಾನೂನು, ಜೈಲು ಎಂಬ ಅರಿವು ಕೂಡ ಇಲ್ಲದೆ ತಪ್ಪೆಸಗಿ ಬಿಟ್ಟೆ. ಪುಟ್ಟಕಂದಮ್ಮನ ಅನಾಥನನ್ನಾಗಿ ಮಾಡಿದೆ. ಮತ್ತೆ ಬದುಕುವ ಕನಸು ಕೊಟ್ಟವರು ಜೈಲು ಅಧಿಕಾರಿ ಮತ್ತು ಸಿಬ್ಬಂದಿ. ನನ್ನ ಸಂಗೀತ ಸಾಧನೆಗೆ ಸಾಥ್ ನೀಡಿದರು. ಕಲಿಯಲು ಉಪಕರಣ ತಂದುಕೊಟ್ಟರು’’ ಎಂದು ಹೇಳುತ್ತಲೇ ಕಣ್ಣೀರುಗರೆವರು ಕೈದಿ ನವೀನ್. ‘‘ಈಗ ಮತ್ತೆ ಬದುಕಬೇಕು ಎನಿಸುತ್ತದೆ. ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆನಿಸುತ್ತದೆ’’ ಎಂದು ಎಲ್ಲ ಕೈದಿಗಳ ಎದುರು ಹೇಳಿಕೊಂಡರು.
ಇದಾವುದೂ ಅರಿಯದ ಮಗು ಅಳುತ್ತಲೇ ಇತ್ತು
ತಾಯಂದಿರ ದಿನಾಚರಣೆ ಕಾರಣಕ್ಕೆ ಮಗುವನ್ನು ಮುದ್ದಾಡಲು ಅವಕಾಶ ನೀಡಲಾಗಿತ್ತು. ಎರಡು ತಿಂಗಳಿಗೊಮ್ಮೆ ಮಾತ್ರ ಈತನಿಗೆ ಮಗುವನ್ನು ತೋರಿಸಲಾಗುತ್ತದೆ. ಕೈದಿ ಆನಂದ ತನ್ನ ಆರು ವರ್ಷದ ಮಗಳೊಂದಿಗೆ ನಿಂತು ಹಾಡು ಹಾಡಿದ. ಮಗಳ ತಲೆ ನೇವರಿಸಿ ಸಂತಸಪಟ್ಟ.
ಬಳಿಕ ವಿವಿಧ ಕೈದಿಗಳು ಅಮ್ಮನ ಕುರಿತಾದ ಹತ್ತು ಹಲವು ಹಾಡುಗಳನ್ನು ಹಾಡಿ ಅಮ್ಮನ ಮೇಲಿನ ಪ್ರೀತಿ ಮೆರೆದರು. ತಾಯಂದಿರ ದಿನಾಚರಣೆ ಅಂಗವಾಗಿ ಕೈದಿಗಳು ವಿವಿಧ ರೂಪಗಳನ್ನು ಅಭಿನಯಿಸಿ ತಮ್ಮ ನಟನಾ ಚಾತುರ್ಯ ಮೆರೆದರು. ‘ಬ್ರಹ್ಮ, ವಿಷ್ಣು, ಶಿವಾ ಎದೆಹಾಲು ಕುಡಿದರೋ’ ಎಂಬುವುದರಿಂದ ಹಿಡಿದು, ‘ಏಳು ಮಲೆ ಮ್ಯಾಲೇರಿ ಬಂದನವ್ವ ಮಾದೇವ’ ಎಂಬ ‘ಜೋಗಿ’ ಚಿತ್ರದ ದೃಶ್ಯಗಳನ್ನು ಅಭಿನಯಿಸಿದರು. ಅಮ್ಮ-ಮಗನ ಸಂಬಂಧವನ್ನು ಕಟ್ಟಿಕೊಡುವ ಗಣಪತಿ ಹುಟ್ಟಿದ ಕತೆ, ಜಮದಗ್ನಿಯ ಆದೇಶದಂತೆ ತಾಯಿಯ ತಲೆ ಕಡಿದ ಪರಶುರಾಮ ಮತ್ತು ಕೊನೆಗೆ ಅಪ್ಪನಿಂದ ಅಮ್ಮನನ್ನು ವಾಪಸ್ಸು ಪಡೆದ ಕತೆಗಳನ್ನ ಕೈದಿಗಳು ಪ್ರಸ್ತುತಪಡಿಸಿದರು.
ಖಾಸಗಿ ವಿಡಿಯೋ ಬಹಿರಂಗ ಬೆದರಿಕೆ: ಪತಿ ವಿರುದ್ಧ ಪತ್ನಿ ದೂರು
ಕೈದಿಗಳಿಗೆ ತಾಯಂದಿರನ್ನು ಭೇಟಿ ಮಾಡಿಸುವ, ತಂದೆಗೆ ಮಕ್ಕಳನ್ನು ಭೇಟಿ ಮಾಡಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದಕ್ಕೆಲ್ಲಾ ಸಾಕ್ಷಿಯಾದವರು ಹಿರಿಯ ಸಿವಿಲ್ ನ್ಯಾಯಾಧೀಶರಾದ ನ್ಯಾ.ರಾಜಣ್ಣ ಸಂಕಣ್ಣನವರ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಹಿರಿಯ ನಿರ್ದೇಶಕ ಷಫಿ ಮತ್ತಿತರರು.
ಜೈಲುಗಳನ್ನು ಮನಃಪರಿವರ್ತನಾ ಕೇಂದ್ರವಾಗಿ ರೂಪಿಸಬೇಕೆಂಬ ಸರ್ಕಾರ ಮತ್ತು ಸಮಾಜದ ಆಸೆ ಇಲ್ಲಿ ಈಡೇರುತ್ತಿತ್ತು. ವರ್ಷದಲ್ಲಿ ಹಲವು ಬಾರಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಿ ಕೈದಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುವ, ಅವರನ್ನು ಸಾಂಸ್ಕೃತಿಕ ಜಗತ್ತಿಗೆ ಕೊಂಡೊಯ್ಯುವ ಈ ಮೂಲಕ ಅವರನ್ನು ಪರಿವರ್ತಿಸುವ ಪ್ರಯತ್ನ ಇಲ್ಲಿ ನಿರಂತರವಾಗಿ ಸಾಗುತ್ತಿದೆ.
ಕೇಂದ್ರ ಕಾರಾಗೃಹದ ಅಧೀಕ್ಷಕ ಮಹದೇವ ನಾಯ್ಕರವರ ಆಸಕ್ತಿ ಮತ್ತು ಪ್ರೋತ್ಸಾಹದಿಂದ ಶಿಕ್ಷಕಿ ಎಸ್. ಎನ್. ಲೀಲಾ, ಶಿಕ್ಷಕ ಗೋಪಾಲಕೃಷ್ಣ ಅವರ ಪ್ರಯತ್ನಕ್ಕೆ ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಅನಿತಾ ಎಸ್. ಹಿರೇಮನಿ, ಜೈಲರ್ ಅನಿಲ್ ಮತ್ತಿತರರು ಸಾಥ್ ನೀಡಿದರು.