ಸೌಜನ್ಯಾ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಗಡೀಪಾರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕುರಿತು ವಿಚಾರಣೆಗಾಗಿ ಪುತ್ತೂರು ಎಸಿ ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ, ಅವರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ತಮಗೆ ದೇವರ ನ್ಯಾಯಾಲಯದಲ್ಲಿ ನ್ಯಾಯ ಸಿಗಲಿದೆ ಎಂದರು.
ಪುತ್ತೂರು (ಡಿ.8): ಸೌಜನ್ಯಾ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಮತ್ತೊಮ್ಮೆ ಗಡೀಪಾರು (Externment) ಸಂಕಷ್ಟ ಎದುರಾಗಿದ್ದು, ಈ ಕುರಿತು ವಿಚಾರಣೆಗಾಗಿ ಅವರು ಇಂದು ಪುತ್ತೂರು ಎಸಿ ಕೃfಟ್‌ಗೆ ಹಾಜರಾದರು.
ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ದೇವರ ಮೊರೆ
ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹೇಶ್ ಶೆಟ್ಟಿ ತಿಮರೋಡಿಯವರು ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದಲ್ಲಿ ಅವರು ತುಪ್ಪದ ದೀಪ ಮತ್ತು ಎಳ್ಳೆಣ್ಣೆಯನ್ನು ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ದೇವರ ನ್ಯಾಯಾಲಯದಲ್ಲಿ ನ್ಯಾಯ ಸಿಗಲಿದೆ ಎಂದರು.
ಅಲ್ಲಿ ಆ ಘಟನೆ ನಡೆದಿದ್ದು ನಿಜ:
ನಾನು ಕಳೆದ 14 ವರ್ಷಗಳಿಂದ ಸೌಜನ್ಯಾ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ. ನನ್ನ ಮೇಲೆ ಏನೆಲ್ಲಾ ಆರೋಪಗಳನ್ನು ಮಾಡಲಾಗಿದೆಯೋ ಅದೆಲ್ಲವೂ ಮಹಾಲಿಂಗೇಶ್ವರ ಸ್ವಾಮಿ ಮತ್ತು ಮಂಜುನಾಥ ಸ್ವಾಮಿಗೆ ತಿಳಿದಿದೆ. ನಾನು ಹೇಳಿದ್ದು ಸತ್ಯವೇ, ಅಲ್ಲಿ ಅತ್ಯಾ೧ಚಾರ ನಡೆದಿದೆ. ದೀನ ದಲಿತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವುದು ಮತ್ತು ಬಡ್ಡಿ ವ್ಯವಹಾರ ಮಾಡಿರುವುದು ಹೌದು, ಈ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ತಿಮರೋಡಿ ಹೇಳಿದರು.
ಅವರು ಮುಂದುವರೆದು, 'ಯಾರಾರೂ ಅತ್ಯಾ೧ಚಾರಿಗಳ ಜೊತೆ ಇದ್ದಾರೋ ಮಾಡಿದ ತಪ್ಪಿಗೆ ಮಹಾಲಿಂಗೇಶ್ವರ ದೇವರೇ ಶಿಕ್ಷೆ ಕೊಡಬೇಕು. ಈ ಕಾರ್ಯಾಂಗದ ವ್ಯವಸ್ಥೆಯಲ್ಲಿ ನನಗೆ ನ್ಯಾಯ ಸಿಗದಿದ್ದರೂ ಕೂಡಾ, ಈ ಮಹಾಲಿಂಗೇಶ್ವರ ದೇವರ ಮತ್ತು ಧರ್ಮಸ್ಥಳ ಮಂಜುನಾಥ ದೇವರ ಹಾಗೂ ಅಣ್ಣಪ್ಪ ಸ್ವಾಮಿಯ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಡೀಪಾರು ಸಂಕಷ್ಟ ಹಿನ್ನೆಲೆ
ಮಹೇಶ್ ಶೆಟ್ಟಿ ತಿಮರೋಡಿಯವರ ವಿರುದ್ಧ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪಗಳ ಮೇಲೆ ಪೊಲೀಸ್ ಇಲಾಖೆಯು ಗಡೀಪಾರು ಪ್ರಸ್ತಾವನೆಯನ್ನು ಸಲ್ಲಿಸಿದೆ. ಕರ್ನಾಟಕ ಪೊಲೀಸ್ ಕಾಯ್ದೆಯಡಿ, ಸಾರ್ವಜನಿಕ ಶಾಂತಿಗೆ ಭಂಗ ತರುವ ವ್ಯಕ್ತಿಯನ್ನು ನಿರ್ದಿಷ್ಟ ಪ್ರದೇಶ ಅಥವಾ ಜಿಲ್ಲೆಯಿಂದ ದೂರ ಇರುವಂತೆ ಆದೇಶ ನೀಡಲಾಗುತ್ತದೆ. ತಿಮರೋಡಿಯವರು ಸೌಜನ್ಯಾ ಪ್ರಕರಣದ ಹೋರಾಟದ ಹಿನ್ನೆಲೆಯಲ್ಲಿ ಹಲವು ಪ್ರತಿಭಟನೆಗಳು ಮತ್ತು ಹೇಳಿಕೆಗಳನ್ನು ನೀಡಿದ್ದು, ಹೀಗಾಗಿ ಇದೀಗ ಮತ್ತೆ ತಿಮರೋಢಿಗೆ ಮತ್ತೆ ಗಡಿಪಾರು ಸಂಕಷ್ಟ ಎದುರಾಗಿದೆ.

