ಬೆಳಗಾವಿ ಅಧಿವೇಶನದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ರಾಜ್ಯದ ಕೇಬಲ್ ಆಪರೇಟರ್‌ಗಳಿಗೆ ವಿದ್ಯುತ್ ಕಂಬಗಳಿಗೆ ವಿಧಿಸುವ ಶುಲ್ಕದಲ್ಲಿ ಶೇ. 50ರಷ್ಟು ರಿಯಾಯಿತಿ ಘೋಷಿಸಿದ್ದಾರೆ. ಈ ಮೊದಲು ಪ್ರತಿ ಕಂಬಕ್ಕೆ ₹150 ಇದ್ದ ಶುಲ್ಕವನ್ನು ಇದೀಗ ₹75ಕ್ಕೆ ಇಳಿಸಲಾಗಿದೆ.

ಬೆಳಗಾವಿ (ಡಿ.8): ಇಂಧನ ಸಚಿವ ಕೆಜೆ ಜಾರ್ಜ್‌ ಬೆಳಗಾವಿ ಅಧಿವೇಶನ ಪ್ರಾರಂಭವಾದ ದಿನವೇ ರಾಜ್ಯದ ಕೇಬಲ್‌ ಆಪರೇಟರ್‌ಗಳಿಗೆ ರಿಲೀಫ್‌ ನೀಡುವಂಥ ದೊಡ್ಡ ಸುದ್ದಿ ನೀಡಿದ್ದಾರೆ. ಕಾಂಗ್ರೆಸ್‌ ಸದಸ್ಯೆ ಬಲ್ಕಿಶ್‌ ಭಾನು, ರಾಜ್ಯದಲ್ಲಿ ಕೇಬಲ್‌ ಆಪರೇಟರ್‌ಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದರು. ಈ ವೇಳೆ ಸಚಿವ ಕೆಜೆ ಜಾರ್ಜ್‌, ಈಗ ಇರುವ ಶುಲ್ಕದಲ್ಲಿ ಕೇಬಲ್‌ ಆಪರೇಟರ್‌ಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಇಡೀ ರಾಜ್ಯದಲ್ಲಿ 2800 ಕೇಬಲ್ ಆಪರೇಟರ್ ಇದ್ದಾರೆ. ಒಂದು ಕಂಬಕ್ಕೆ ಮೊದಲು 40 ರೂಪಾಯಿ ಶುಲ್ಕ ನಿಗದಿ ಮಾಡಲಾಗುತ್ತಿತ್ತು. ಆದರೆ, ಸರ್ಕಾರ ಈಗ ಹೊಸ ಸುತ್ತೋಲೆ ಮಾಡಿ ಒಂದು ಕಂಬಕ್ಕೆ 150 ರೂಪಾಯಿ ಜಿಎಸ್‌ಟಿ ಕಟ್ಟಬೇಕು ಅಂತಾ ಆದೇಶ ಮಾಡಿದ್ದಾರೆ. ಇದೇ ವೇಳೆ ಲೈಸೆನ್ಸ್‌ ಫೀ ಎಂದು ಕೇಂದ್ರಕ್ಕೆ 5 ಸಾವಿರ ರೂಪಾಯಿ ಹಾಗೂ ಸ್ಥಳೀಯಾಡಳಿತಕ್ಕೆ ಫೀಸ್‌ ಕಟ್ಟಬೇಕು ಇದು ಸಮಸ್ಯೆ ಆಗುತ್ತಿದೆ ಎಂದು ಹೇಳಿದರು. ಗ್ರಾಮೀಣ ಹಾಗೂ ಮಲೆನಾಡು ಸೇರಿ ಹಲವು ಭಾಗದಲ್ಲಿ ಇದರಿಂದ ಸಮಸ್ಯೆ ಬಹಳ ಹೆಚ್ಚಾಗುತ್ತದೆ. ಈ ಫೀಸ್‌ ಕಡಿಮೆ ಮಾಡಬೇಕು ಎಂದು ಒತ್ತಾಯ ಮಾಡಿದರು.

ಇದಕ್ಕೆ ಉತ್ತರ ನೀಡಿದ ಕೆಜೆ ಜಾರ್ಜ್‌, ಈಗ ಇರುವ ಶುಲ್ಕದಲ್ಲಿ 50%ದಷ್ಟು ರಿಯಾಯತಿ ಕೊಡುತ್ತೇವೆ. ಈ ಶುಲ್ಕವನ್ನು 75 ರೂ ಗೆ ಇಳಿಸೋದಾಗಿ ಸದನದಲ್ಲಿ ಭರವಸೆ ನೀಡಿದರು. ಗ್ರಾಮೀಣ ಮತ್ತು ಮಲೆನಾಡು ಭಾಗದಲ್ಲಿನ ಶುಲ್ಕ ಕಡಿಮೆಗೊಳಿಸಲು ಸಚಿವರು ನಿರ್ಧಾರ ಮಾಡಿದ್ದಾರೆ.