Asianet Suvarna News Asianet Suvarna News

Covid Booster Dose: ಬೆಂಗಳೂರಿನಲ್ಲಿ 1.39 ಲಕ್ಷ ಮಂದಿಗೆ ಬೂಸ್ಟರ್‌ ಡೋಸ್‌ ನೀಡುವ ಗುರಿ!

*ಬಿಬಿಎಂಪಿ ವ್ಯಾಪ್ತಿಯಲ್ಲಿಇಂದಿನಿಂದ ಅಭಿಯಾನ
*ಮುಂಜಾಗ್ರತಾ ಲಸಿಕೆ ಪಡೆಯುವ ಕುರಿತು ಸಂದೇಶ
*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ
 

BBMP in Aims to administer 139K Covid 19 Booster Dose in Bengaluru  mnj
Author
Bengaluru, First Published Jan 10, 2022, 3:30 AM IST

ಬೆಂಗಳೂರು (ಜ. 10):  ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಸೋಮವಾರದಿಂದ ಅರ್ಹ ಕೊರೋನಾ ವಾರಿಯರ್ಸ್ (Corona Warriors), ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟಸಹ ಅಸ್ವಸ್ಥತೆಗೆ ಒಳಗಾದವರು ಸೇರಿದಂತೆ ಒಟ್ಟು 1.39 ಲಕ್ಷ ಮಂದಿ ಮುಂಜಾಗ್ರತಾ ಲಸಿಕೆ (ಬೂಸ್ಟರ್‌ ಡೋಸ್‌‌ - Booster Dose) ಪಡೆಯಲಿದ್ದಾರೆ. ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ತ್ರಿಲೋಕ್‌ಚಂದ್ರ ಪ್ರತಿಕ್ರಿಯಿಸಿ, ನಗರದ ಎಂಟು ವಲಯಗಳಲ್ಲಿ ಲಸಿಕೆ ನೀಡಲು (Vaccine) ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡು ಡೋಸ್‌ ಪಡೆದು 39 ವಾರ ಪೂರ್ಣಗೊಂಡವರ ಮಾಹಿತಿ ಸಂಗ್ರಹಿಸಲಾಗಿದೆ. ಅರ್ಹರ ಮೊಬೈಲ್‌ಗೆ ಮುಂಜಾಗ್ರತಾ ಲಸಿಕೆ ಪಡೆಯುವ ಕುರಿತು ಸಂದೇಶ (Message) ಬರುತ್ತದೆ. ಸಂದೇಶ ಸ್ವೀಕರಿಸಿರುವ ಅರ್ಹರು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ (PHC), ಆರೋಗ್ಯ ಶಿಬಿರಗಳಲ್ಲಿ ಮುಂಜಾಗ್ರತಾ ಲಸಿಕೆ ಪಡೆಯಲಿದ್ದಾರೆ. ಆದರೆ 60 ವರ್ಷ ಮೇಲ್ಪಟ್ಟಸಹ ಅಸ್ವಸ್ಥತೆಗೆ ಒಳಗಾದ ವೃದ್ಧರು ವೈದ್ಯರ ಸಲಹೆ ಮೇರೆಗೆ ಲಸಿಕೆ ಪಡೆಯಲಿದ್ದಾರೆ ಎಂದರು.

ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರು ಸಭೆ ನಡೆಸಿ, 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಜತೆಗೆ ಮುಂಜಾಗ್ರತಾ ಲಸಿಕೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಕ್ರಮ ವಹಿಸಿರುವ ಅಧಿಕಾರಿಗಳು ಸದ್ಯ ಒಟ್ಟು 1.39 ಲಕ್ಷ ಮಂದಿಯ ಮಾಹಿತಿ ಕಲೆ ಹಾಕಿದ್ದಾರೆ. ಎಲ್ಲರಿಗೂ ಸರ್ಕಾರದ ನಿರ್ದೇಶನ ಮತ್ತು ಮಾರ್ಗಸೂಚಿ ಅನ್ವಯ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಿಎಂ ಚಾಲನೆ ಇಂದು

ಸೋಮವಾರ ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಾಜಿನಗರದಲ್ಲಿ ಮುಂಜಾಗ್ರತಾ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಸಚಿವರು, ಬಿಬಿಎಂಪಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Covid 19 Spike: ಮುಂದಿನ ವಾರ 3ನೇ ಅಲೆ ಗರಿಷ್ಠಕ್ಕೆ: ಲಾಕ್ಡೌನ್‌ ಭೀತಿಯಿಂದ ಮತ್ತೆ ವಲಸಿಗರ ಗುಳೆ ಶುರು!

ಯಾರು ಅರ್ಹ?:

ವೈದ್ಯಕೀಯ ಸಿಬ್ಬಂದಿ, 60 ವರ್ಷ ಮೇಲ್ಪಟ್ಟಪೂರ್ವರೋಗಪೀಡಿತರು ಹಾಗೂ ಮುಂಚೂಣಿ ಕಾರ್ಯಕರ್ತರು 2ನೇ ಡೋಸ್‌ ಲಸಿಕೆ ಪಡೆದು 9 ತಿಂಗಳು ಅಥವಾ 39 ವಾರ ಆಗಿರಬೇಕು. ಅಂಥವರು ಮುಂಜಾಗ್ರತಾ ಡೋಸ್‌ ಲಸಿಕೆ ಪಡೆಯಲು ಅರ್ಹ.

ಯಾವ ಲಸಿಕೆ?:

ಮೊದಲಿನ 2 ಡೋಸ್‌ ಲಸಿಕೆ ಯಾವ ಕಂಪನಿಯದ್ದಾಗಿರುತ್ತೋ, ಅದೇ ಕಂಪನಿಯ ಲಸಿಕೆಯನ್ನು 3ನೇ ಡೋಸ್‌ ಆಗಿ ಪಡೆಯಬೇಕು. ಉದಾಹರಣೆಗೆ: ಕೋವ್ಯಾಕ್ಸಿನ್‌ 2 ಡೋಸ್‌ ಪಡೆದವರು 3ನೇ ಡೋಸ್‌ ಆಗಿ ಕೋವ್ಯಾಕ್ಸಿನ್‌ಅನ್ನೇ ಪಡೆಯಬೇಕು. ‘ಲಸಿಕೆ ಮಿಶ್ರಣ’ (ಬೇರೆ ಕಂಪನಿಯ ಲಸಿಕೆ) ಮಾಡುವಂತಿಲ್ಲ.

ಪೂರ್ವರೋಗ ಪೀಡಿತರು ಅಂದರೆ ಯಾರು?:

ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕಿಡ್ನಿ ಕಾಯಿಲೆ, ಅಂಗಾಂಶ ಕಸಿಗೆ ಒಳಗಾದವರು, ಕ್ಯಾನ್ಸರ್‌, ಹೃದಯರೋಗಿಗಳು ಸೇರಿದಂತೆ 20 ಮಾದರಿಯ ವ್ಯಾಧಿ ಉಳ್ಳವರು ಪೂರ್ವರೋಗಪೀಡಿತರು ಎನ್ನಿಸಿಕೊಳ್ಳುತ್ತಾರೆ. ಇವರು 3ನೇ ಡೋಸ್‌ಗೆ ಅರ್ಹ.

ಇದನ್ನೂ ಓದಿ: Assembly Elections 2022: ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ‌ ಮೋದಿ ಹೆಸರು, ಫೋಟೋ ಔಟ್!

ಮುಂಜಾಗ್ರತಾ ಡೋಸ್‌ ಏಕೆ?:

ಕಾಯಿಲೆಪೀಡಿತರಿಗೆ ಮೊದಲ 2 ಡೋಸ್‌ ಪಡೆದರೂ ಅವರ ಪೂರ್ವಕಾಯಿಲೆಗಳ ಕಾರಣ ರೋಗನಿರೋಧಕ ಶಕ್ತಿ ಅಷ್ಟಾಗಿ ವೃದ್ಧಿಸದೇ ಇರಬಹುದು. ಹೀಗಾಗಿ ಅವರಿಗೆ 3ನೇ ಡೋಸ್‌ ನೀಡಲಾಗುತ್ತದೆ. ಇನ್ನು ವೈದ್ಯ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರು ಯಾವಾಗಲೂ ಕರ್ತವ್ಯ ಸ್ಥಳದಲ್ಲಿ ನಿತ್ಯ ಸಾವಿರಾರು ಜನರು, ರೋಗಿಗಳ ಸಂಪರ್ಕಕ್ಕೆ ಬರುತ್ತಿರುತ್ತಾರೆ. ಹೀಗಾಗಿ ಅವರಿಗೆ ಮುಂಜಾಗ್ರತಾ ಡೋಸ್‌ ನೀಡಲಾಗುತ್ತದೆ.

Follow Us:
Download App:
  • android
  • ios