ಬಿರು ಬೇಸಿಗೆ : ಮೇವು, ನೀರಿಲ್ಲದೆ ಜಾನುವಾರುಗಳ ದಾರುಣ ಸಾವು
ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮೇವು, ನೀರು ಇಲ್ಲದೆ ಜಾನುವಾರುಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹನೂರು : ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮೇವು, ನೀರು ಇಲ್ಲದೆ ಜಾನುವಾರುಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಲೀಸ್ ಠಾಣಾ ಸರಹದ್ದಿನ ಇಂಡಿಗನತ್ತ ಗ್ರಾಮದಲ್ಲಿ ಏ.26ರಂದು 146ರ ಮತಗಟ್ಟೆಯಲ್ಲಿ ಲೋಕಸಭಾ ಚುನಾವಣೆ ವೇಳೆ ನಡೆದ ಇವಿಎಂ ಮತಗಟ್ಟೆ ಧ್ವಂಸ ಪ್ರಕರಣ ಹಾಗೂ ಅಧಿಕಾರಿಗಳ ಮತ್ತು ಮೆಂದರೆ ಗ್ರಾಮದ ನಿವಾಸಿಗಳ ಮೇಲೆ ಹಲ್ಲೆ ಪ್ರಕರಣದಿಂದ 250 ರಿಂದ 300 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಹೀಗಾಗಿ ಕೆಲವರನ್ನು ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಕಳಿಸಿದರೆ ಉಳಿದಂತೆ ಇಡೀ ಗ್ರಾಮವೇ ಮನೆಗಳಿಗೆ ಬೀಗ ಜಡಿದು ಬಂಧನ ಭೀತಿಯಿಂದ ಇಡೀ ಗ್ರಾಮವನ್ನೇ ತೊರೆದಿರುವುದರಿಂದ ಅಲ್ಲಿನ ನಿವಾಸಿಗಳ ಪುಟ್ಟ ತಂಬಡಿ, ಮುರುಗೇಶ್ ತಂಬಡಿ, ಮತ್ತೋರ್ವರ ಜಾನುವಾರುಗಳು ಕಟ್ಟಿ ಹಾಕಿದ ಸ್ಥಳದಲ್ಲೇ ಸಾವನ್ನಪ್ಪಿದೆ. ಕಳೆದ ಏ.26 ರಿಂದ ಮೇವು ನೀರು ಹಾಕುವವರು ಯಾರು ಇಲ್ಲದೆ ಜಾನುವಾರಗಳು ಹಸಿವಿನಿಂದ ಸಾವನ್ನಪ್ಪಿವೆ.
ಇಂಡಿಗನತ್ತ ಗ್ರಾಮದಲ್ಲಿ ನೂರಾರು ಜನರ ಮೇಲೆ ಪ್ರಕರಣ ದಾಖಲಾಗಿರುವುದರಿಂದ ಅಲ್ಲಿನ ಜನ ಜಾನುವಾರುಗಳನ್ನು ರಕ್ಷಿಸಬೇಕೆಂದು ವಿವಿಧ ಸಂಘಟನೆಗಳು ಹಾಗೂ ಪ್ರಾಣಿ ಪ್ರಿಯ ವ್ಯಕ್ತಿಗಳು ಇಂಡಿಗನತ್ತ ಗ್ರಾಮದ ಮೂಕ ಪ್ರಾಣಿಗಳು ಧಾರುಣವಾಗಿ ಸಾವನ್ನಪ್ಪಿವೆ. ಕೂಡಲೇ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಇರುವ ಜಾನುವಾರುಗಳನ್ನಾದರೂ ಸಹ ಮೇವು, ನೀರು ನೀಡುವ ಮೂಲಕ ರಕ್ಷಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.
ಇಂಡಿಗನತ್ತದಲ್ಲಿ 250 ರಿಂದ 300 ಜನರ ಮೇಲೆ ಪ್ರಕರಣ ದಾಖಲಾಗಿದ್ದು 40ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿರುವ ಪೊಲೀಸರು ಇದರಿಂದಾಗಿ ಗ್ರಾಮದಲ್ಲಿ ಇರುವ ಬೆರಳಣಿಕೆಯಷ್ಟು ವಯಸ್ಸಾದವರು ಹೆಂಗಸರು ಮಕ್ಕಳು ಸಹ ಹಸಿವಿನಿಂದ ಬಳಲುತ್ತಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲ್ಲಿನಿಂದ ಕುಡಿಯುವ ನೀರಿಗೂ ಸಹ ನಿವಾಸಿಗಳು ಪರದಾಡುತ್ತಿದ್ದಾರೆ ಎನ್ನಲಾಗಿದೆ. ತಪ್ಪಿತಸ್ಥರನ್ನು ಪೊಲೀಸರು ಬಂಧಿಸಲಿ ಉಳಿದಂತ ಜನರು ಗ್ರಾಮದಲ್ಲಿ ಇರುವುದಕ್ಕೆ ಮುಕ್ತ ಅವಕಾಶ ನೀಡಬೇಕೆಂದು ಜಿಲ್ಲಾಡಳಿತ ಗಮನ ಹರಿಸಿ ಗ್ರಾಮದಲ್ಲಿರುವ ಜನ ಜಾನುವಾರಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ರಕ್ಷಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಮೂಕ ಪ್ರಾಣಿಗಳನ್ನು ರಕ್ಷಿಸಿ: ಚುನಾವಣಾ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಪ್ರಕರಣದಿಂದ ಇಲ್ಲಿನ ನಿವಾಸಿಗಳು ಮನೆಗಳಿಗೆ ಬೀಗ ಜಡಿದು ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವುದರಿಂದ ಇಲ್ಲಿರುವ ಜಾನುವಾರುಗಳಿಗೆ ಮೇವು ನೀರು ಇಲ್ಲದಾಗಿದೆ. ಇಡೀ ಗ್ರಾಮದಲ್ಲಿ ಪೊಲೀಸರ ಸರ್ಪಗಾವಲಿನಿಂದ ಯಾರು ಸಹ ಇರುವಂತಹ ಹೆಂಗಸರು ಮಕ್ಕಳು ಹೊರಬಾರದಂತೆ ನಿರ್ಬಂಧ ಹೇರಿರುವುದರಿಂದ ಹೊರಗೆ ಬಂದರೆ ಬಂಧಿಸಿ ಜೈಲಿಗೆ ಕಳಿಸುತ್ತಾರೆ ಎಂಬ ಭೀತಿಯಿಂದ ಇಲ್ಲಿನ ಜಾನುವಾರುಗಳನ್ನು ನೋಡಿಕೊಳ್ಳಲು ಯಾರು ಇಲ್ಲದೆ ಮೂಕ ಪ್ರಾಣಿಗಳು ಮೇವು ನೀರು ಇಲ್ಲದೆ ಪ್ರಾಣ ಬಿಡುತ್ತಿವೆ. ಮೂಕ ಪ್ರಾಣಿಗಳನ್ನು ರಕ್ಷಿಸುವಂತೆ ಪ್ರಾಣಿ ಪ್ರಿಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ