Asianet Suvarna News Asianet Suvarna News

Assembly Elections 2022: ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ‌ ಮೋದಿ ಹೆಸರು, ಫೋಟೋ ಔಟ್!

ಕೇಂದ್ರ ಆರೋಗ್ಯ ಸಚಿವಾಲಯವು ಕೋ-ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಫಿಲ್ಟರ್‌ಗಳನ್ನು ಅನ್ವಯಿಸಿದ್ದು, ವಿಧಾನಸಭೆ ಚುನಾವಣೆ ಇರುವ ಐದು ರಾಜ್ಯಗಳಲ್ಲಿ ನೀಡಲಾಗುವ ಲಸಿಕೆ ಪ್ರಮಾಣಪತ್ರಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಹೊರಗಿಡಲಾಗಿದೆ

Assembly Elections 2022 Health Ministry Excludes photo name of PM Narendra Modi from Vaccine Certificates mnj
Author
Bengaluru, First Published Jan 10, 2022, 12:14 AM IST

ನವದೆಹಲಿ (ಜ. 10): ಕೇಂದ್ರ ಆರೋಗ್ಯ ಸಚಿವಾಲಯವು ಕೋ-ವಿನ್ ಪ್ಲಾಟ್‌ಫಾರ್ಮ್‌ನಲ್ಲಿ (CoWin) ಫಿಲ್ಟರ್‌ಗಳನ್ನು ಅನ್ವಯಿಸಿದ್ದು,  ವಿಧಾನಸಭೆ ಚುನಾವಣೆ ಇರುವ ಐದು ರಾಜ್ಯಗಳಲ್ಲಿ (Assembly Elections 2022) ನೀಡಲಾಗುವ ಲಸಿಕೆ ಪ್ರಮಾಣಪತ್ರಗಳಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಫೋಟೋವನ್ನು ಹೊರಗಿಡಲಾಗಿದೆ. ಭಾರತದ ಚುನಾವಣಾ ಆಯೋಗದ ಘೋಷಣೆಯ ನಂತರ ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ಶನಿವಾರದಿಂದ  ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲಸಿಕೆ ಪ್ರಮಾಣಪತ್ರದಿಂದ (Vaccine Certificate) ಮೋದಿಯವರ ಹೆಸರು ಮತ್ತು ಫೋಟೋವನ್ನು ಹೊರಗಿಡಲು ಶನಿವಾರ ರಾತ್ರಿಯೇ ಅಗತ್ಯ ಫಿಲ್ಟರ್‌ಗಳನ್ನು ಅನ್ವಯಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಚುನಾವಣಾ ಸಮಿತಿಯು ಶನಿವಾರ  ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿತು. ಫೆಬ್ರವರಿ 10 ರಿಂದ ಮಾರ್ಚ್ 7 ರ ನಡುವೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: Vaccine Certificate: ಮೋದಿ ಫೋಟೋ ತೆಗೆಯುವಂತೆ ಸಲ್ಲಿಸಿದ್ದ ಅರ್ಜಿ ವಜಾ, 1 ಲಕ್ಷ ರೂ. ದಂಡ!

ರಾಜಕೀಯ ಪಕ್ಷಗಳಿಗೆ  ನೀತಿ ಸಂಹಿತೆ ಜಾರಿ

ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ತಕ್ಷಣ ಸರ್ಕಾರಗಳು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ  ನೀತಿ ಸಂಹಿತೆ ಜಾರಿಗೆ ಬರುತ್ತದೆ ಮತ್ತು ಚುನಾವಣೆಗಳು ಪೂರ್ಣಗೊಳ್ಳುವವರೆಗೆ ಇದು ಜಾರಿಯಲ್ಲಿರುತ್ತದೆ. ಈ ಬೆನ್ನಲ್ಲೇ ಈಗ ಕೋ-ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಮತ್ತು ಫೋಟೋ ತೆಗಯಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: cVIGIL App ಚುನಾವಣೆ ಅಕ್ರಮ ತಡೆಯಲು ಸಿವಿಜಿಲ್ ಆ್ಯಪ್, ದೂರು ನೀಡಲು ನಾಗರೀಕರ ಕೈಗೆ ಆಸ್ತ್ರ ನೀಡಿದ ಆಯೋಗ!

"ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತಿರುವುದರಿಂದ ಐದು ಚುನಾವಣೆಗೆ ಒಳಪಟ್ಟ ರಾಜ್ಯಗಳ ಜನರಿಗೆ ನೀಡಲಾಗುವ COVID-19 ಪ್ರಮಾಣಪತ್ರಗಳಿಂದ ಪ್ರಧಾನ ಮಂತ್ರಿಯ ಚಿತ್ರವನ್ನು ಹೊರಗಿಡಲು ಆರೋಗ್ಯ ಸಚಿವಾಲಯವು CoWIN ಪ್ಲಾಟ್‌ಫಾರ್ಮ್‌ನಲ್ಲಿ ಅಗತ್ಯ ಫಿಲ್ಟರ್‌ಗಳನ್ನು ಅನ್ವಯಿಸುತ್ತದೆ" ಎಂದು ವರದಿಯಾಗಿದೆ.  ಕೆಲವು ರಾಜಕೀಯ ಪಕ್ಷಗಳು ನೀಡಿದ್ದ ದೂರುಗಳ ಅನ್ವಯ ಆಯೋಗವು ಸೂಚಿಸಿದಂತೆ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ಚುನಾವಣೆಗೆ ಮುನ್ನ ಮಾರ್ಚ್ 2021 ರಲ್ಲಿ ಆರೋಗ್ಯ ಸಚಿವಾಲಯವು ಇದೇ ರೀತಿಯ ಕ್ರಮವನ್ನು ತೆಗೆದುಕೊಂಡಿತ್ತು.

 690 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ

ಉತ್ತರ ಪ್ರದೇಶ, ಉತ್ತರಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಯು ಒಟ್ಟು 690 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಮಾರ್ಚ್ 7ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ.  ಉತ್ತರ ಪ್ರದೇಶದಲ್ಲಿ ಏಳೂ ಹಂತದಲ್ಲಿ ಚುನಾವಣೆ ನಡೆಯಲಿದ್ದರೆ, ಮಣಿಪುರದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಉಳಿದಂತೆ ಗೋವಾ, ಪಂಜಾಬ್ ಹಾಗೂ ಉತ್ತರಾಖಂಡದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಒಟ್ಟು 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಎಲ್ಲಾ ಏಳೂ ಹಂತದಲ್ಲಿ (ಫೆಬ್ರವರಿ 10, 14, 20, 23, 27 ಮಾರ್ಚ್ 3, 7) ಚುನಾವಣೆ ನಡೆಯಲಿದ್ದರೆ, 117 ಕ್ಷೇತ್ರಗಳಿರುವ ಪಂಜಾಬ್, 70 ಕ್ಷೇತ್ರಗಳಿರುವ ಉತ್ತರಾಖಂಡ ಹಾಗೂ 40 ಕ್ಷೇತ್ರಗಳಿರುವ ಗೋವಾದಲ್ಲಿ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ. ಈಶಾನ್ಯ ರಾಜ್ಯ ಮಣಿಪುರದ 60 ಕ್ಷೇತ್ರಗಳಿಗೆ ಫೆಬ್ರವರಿ 27 ಹಾಗೂ ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಪಂಚ ರಾಜ್ಯ ಚುನಾವಣೆಯ ಫಲಿತಾಂಶವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಲಿದೆ.

Follow Us:
Download App:
  • android
  • ios