ಚಾಮರಾಜನಗರದಲ್ಲೊಂದು ನೀರು, ವಿದ್ಯುತ್‌ನ್ನೇ ಕಾಣದ ಕುಗ್ರಾಮ

ಹಳ್ಳ ದಿಣ್ಣೆಗಳ ರಸ್ತೆ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಇಲ್ಲದ ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ರೈತರ ಜಮೀನುಗಳಿಗೆ ದಾಖಲೆಗಳಿಲ್ಲದ ಕುಗ್ರಾಮ ತುಳಸಿಕೆರೆ ಗ್ರಾಮ.

A village in Chamarajanagar has no water or electricity snr

ಜಿ ದೇವರಾಜ ನಾಯ್ಡು

 ಹನೂರು :  ಹಳ್ಳ ದಿಣ್ಣೆಗಳ ರಸ್ತೆ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಇಲ್ಲದ ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ರೈತರ ಜಮೀನುಗಳಿಗೆ ದಾಖಲೆಗಳಿಲ್ಲದ ಕುಗ್ರಾಮ ತುಳಸಿಕೆರೆ ಗ್ರಾಮ.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲಿ 170 ಕುಟುಂಬಗಳಿದ್ದು, 480 ಮತದಾರರಿದ್ದು, ಜನಸಂಖ್ಯೆ 600ಕ್ಕೂ ಹೆಚ್ಚು ಹೊಂದಿರುವ ಈ ಗ್ರಾಮಕ್ಕೆ ಜನಪ್ರತಿನಿಧಿ ಅಧಿಕಾರಿಗಳು ಸೌಲಭ್ಯಗಳನ್ನು ನೀಡುವಲ್ಲಿ ವಿಫಲರಾಗಿರುವುದರಿಂದ ನಾಗರಿಕರಿಗೆ ಸಿಗುವಂತ ಸೌಲಭ್ಯಗಳು ಸಿಗದೇ ಕಾಡು ಪ್ರಾಣಿಗಳಂತೆ ವಾಸ ಮಾಡುತ್ತಿರುವ ಇವರ ಸಮಸ್ಯೆಯನ್ನು ಕೇಳುವವರೆ ಇಲ್ಲದಂತಾಗಿದೆ.

 ಕಲ್ಲು, ಮಣ್ಣು, ಹಳ್ಳದಿಣ್ಣೆಯ ರಸ್ತೆ 

ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಮಲೆ ಮಹದೇಶ್ವರ ಬೆಟ್ಟ ಆರಾಧ್ಯ ದೈವ ಮಾದೇಶ್ವರನ ಬೆಟ್ಟದಿಂದ ಐದು ಕಿಮೀ ದೂರದಲ್ಲಿರುವ ಗ್ರಾಮಕ್ಕೆ ಸುಸಜ್ಜಿತವಾದ ರಸ್ತೆ ಇಲ್ಲದೆ ಕಲ್ಲು ಮಣ್ಣಿನ ಹಳ್ಳ ದಿಣ್ಣೆಗಳ ರಸ್ತೆಯಲ್ಲಿ ಓಡಾಡುವುದೇ ಪ್ರಾಯಸವಾಗಿದ್ದು ಇಲ್ಲಿನ ಜನತೆಗೆ ಹಲವಾರು ವರ್ಷಗಳಿಂದ ಸೌಲಭ್ಯ ಕಲ್ಪಿಸದೆ ಗ್ರಾಮಸ್ಥರು ಪರದಾಡುವಂತಾಗಿದೆ.

 ವಿದ್ಯುತ್ ಇಲ್ಲದ ಗ್ರಾಮ 

ತುಳಸಿಕೆರೆ ಗ್ರಾಮ ಮಲೆ ಮಾದೇಶ್ವರ ಬೆಟ್ಟದ ಕೂಗಳತೆ ದೂರದಲ್ಲಿದ್ದರೂ ಇನ್ನೂ ವಿದ್ಯುತ್ ಕಾಣದ ಗ್ರಾಮವಾಗಿರುವುದರಿಂದ ಇಲ್ಲಿನ ಜನತೆ ಹಳ್ಳದ ನೀರು, ಕೊಳ್ಳಿ ಬೆಳಕಿನಲ್ಲಿ ರಾತ್ರಿ ವೇಳೆ ವಿದ್ಯಾರ್ಥಿಗಳು ಮತ್ತು ನಾಗರಿಕರು ಜೀವಿಸುತ್ತಿದ್ದಾರೆ. ಇಲ್ಲಿನ ಗ್ರಾಮಸ್ಥರಿಗೆ ಸಾಮಾನ್ಯ ಜನರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯವಿಲ್ಲದೆ ಕಾಲ ಕಳೆಯುವಂತಾಗಿದೆ.

 ಕಾಡು ಪ್ರಾಣಿಗಳ ಹಾವಳಿ 

170 ರೈತ ಕುಟುಂಬಗಳಿರುವ ಕುಗ್ರಾಮದಲ್ಲಿ ಇರುವ ಜಮೀನಿಗೆ ಕಂದಾಯ ಇಲಾಖೆ ಸರಿಯಾದ ದಾಖಲಾತಿಗಳನ್ನು ಸಹ ನೀಡದೆ, ಸರ್ಕಾರದಿಂದ ಸಿಗುವ ಸವಲತ್ತು ಸಿಗದೆ ಬೆಳೆಯುವ ಬೆಳೆ ಮತ್ತು ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಅರಣ್ಯದ ಮಧ್ಯ ಭಾಗದಲ್ಲಿರುವ ಗ್ರಾಮದಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಕಚ್ಚಾ ರಸ್ತೆಯಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಅರಣ್ಯ ಅಧಿಕಾರಿಗಳು ತಡೆಗಟ್ಟುವ ನಿಟ್ಟಿನಲ್ಲಿ ವಿಫಲರಾಗಿರುವುದರಿಂದ ಜನತೆ ಭಯದ ವಾತಾವರಣದಲ್ಲೇ ಕಾಲ ಕಳೆಯುವಂತಾಗಿದೆ.

 ಕುಡಿಯುವ ನೀರಿನ ವ್ಯವಸ್ಥೆ ವಿಫಲ 

ಗ್ರಾಮದಲ್ಲಿರುವ ಪುರಾತನ ಬಾವಿಗಳು ಮತ್ತು ಎರಡು ಕೊಳವೆಬಾವಿಗಳಲ್ಲಿ ಅಲ್ಪಸ್ವಲ್ಪ ನೀರಿದ್ದು, ಮಳೆ ಇಲ್ಲದೆ ಅಂತರ್ಜಲ ತಳಮಟ್ಟಕ್ಕೆ ಹೋಗಿದೆ. ಪುರಾತನ ಬಾವಿಗಳಲ್ಲಿ ಇಲ್ಲಿನ ಜನತೆ ಬರುವ ಪಾಚಿ ಕಟ್ಟಿದ ನೀರನ್ನು ಬಸಿದು ಬಳಕೆ ಮಾಡುವ ನಿಟ್ಟಿನಲ್ಲಿ ದಿನ ದೂಡುತ್ತಿದ್ದಾರೆ. ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಜಲಜೀವನ್ ಮಿಷನ್ ಯೋಜನೆ ಅಡಿ ಪೈಪ್ಲೈನ್ ಸಹ ಕಳಪೆ ಕಾಮಗಾರಿಯಿಂದ ಯೋಜನೆ ಫಲಪ್ರದವಿಲ್ಲದೆ ವಿಫಲವಾಗಿದೆ.

 ಜನಪ್ರತಿನಿಧಿ ಅಧಿಕಾರಿಗಳ ನಿರ್ಲಕ್ಷ: 

ಹಲವಾರು ವರ್ಷಗಳಿಂದ ತುಳಸಿಕೆರೆ ಗ್ರಾಮದ ನಿವಾಸಿಗಳು ಈ ಹಿಂದೆ ಇದ್ದಂತ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡುತ್ತಾ ಬಂದಿದ್ದರೂ ಇನ್ನು ಈ ಗ್ರಾಮಕ್ಕೆ ಯಾವುದೇ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷ್ಯ ವಹಿಸಿರುವುದರಿಂದ ನಿವಾಸಿಗಳು ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಿದ್ದರು. ನಿವಾಸಿಗಳನ್ನು ಅಧಿಕಾರಿಗಳು ಮನವೊಲಿಸಲು ಹೋದಾಗ ಸೌಲಭ್ಯ ನೀಡದೆ ಮತದಾನ ಮಾಡುವುದಿಲ್ಲ ಎಂದು ಅಧಿಕಾರಿಗಳನ್ನು ಬರಿಗೈಯಲ್ಲಿ ಕಳಿಸಿದ ಗ್ರಾಮದ ಜನತೆ ಇನ್ನು ಮುಂದಾದರು ಮಲೆ ಮಾದೇಶ್ವರ ಬೆಟ್ಟದ ಕೂಗಳತೆ ದೂರದಲ್ಲಿರುವ ಕುಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡುವರೇ ಕಾದು ನೋಡಬೇಕಾಗಿದೆ.

ತುಳಸಿಕೆರೆ ಗ್ರಾಮಕ್ಕೆ ಕಳೆದ ಹಲವಾರು ವರ್ಷಗಳಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ನಿವಾಸಿಗಳು ಹೋರಾಟ ಮಾಡುವ ಮೂಲಕ ಜನಪ್ರತಿನಿಧಿ, ಅಧಿಕಾರಿಗಳಿಗೆ ತಿಳಿಸಿದ್ದರು. ಗ್ರಾಮಕ್ಕೆ ಚುನಾವಣಾ ಸಂದರ್ಭದಲ್ಲಿ ಸಹ ಜನಪ್ರತಿನಿಧಿಗಳು ಬಾರದೆ ಅಧಿಕಾರಿಗಳು ಮಾತ್ರ ಈ ಸಂದರ್ಭದಲ್ಲಿ ಮತದಾನ ಮಾಡುವಂತೆ ಹೇಳಲು ಬರುತ್ತಾರೆ. ಹೀಗಾಗಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ. ಜಿಲ್ಲಾಡಳಿತ ಸೌಲಭ್ಯ ಕಲ್ಪಿಸಲಿ ಮತದಾನ ಮಾಡುತ್ತೇವೆ ಇಲ್ಲದಿದ್ದರೆ ಯಾವ ಚುನಾವಣೆಯಲ್ಲೂ ಗ್ರಾಮಸ್ಥರು ಮತದಾನ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದೇವೆ. ಹಳ್ಳದ ನೀರು, ಕೊಳ್ಳಿ ಬೆಳಕು, ಕಾಡುಪ್ರಾಣಿಗಳ ಹಾವಳಿ, ರಸ್ತೆ ಹಾಗೂ ವಿದ್ಯುತ್ ಸಮಸ್ಯೆಗಳಿಂದ ಕೂಡಿರುವ ಗ್ರಾಮಕ್ಕೆ ಮುಂದಾದರೂ ಸರ್ಕಾರ ಗಮನ ಹರಿಸಲಿ.

-ಕೆಂಪಯ್ಯ, ತುಳಸಿಕೆರೆ ನಿವಾಸಿ

Latest Videos
Follow Us:
Download App:
  • android
  • ios