Asianet Suvarna News Asianet Suvarna News

ಬೆಂಗಳೂರು: ಜೀವಕ್ಕೆ ಮಾರಕವಾದ ರಸ್ತೆಗುಂಡಿ ತೇಪೆ ಕಾರ್ಯ..!

*  ಮಳೆಯಲ್ಲೇ ಸಿಮೆಂಟ್‌ ಮಿಶ್ರಣ ಬಳಸಿ ರಸ್ತೆಗುಂಡಿಗಳ ಭರ್ತಿ
*  ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಸಿಮೆಂಟ್‌, ಜಲ್ಲಿ ಕಲ್ಲು
*  ರಸ್ತೆ ತುಂಬೆಲ್ಲಾ ಜಲ್ಲಿ ಚೆಲ್ಲಾಡಿ ವಾಹನ ಸವಾರರಿಗೆ ಕಿರಿಕಿರಿ 
 

Patching to Potholes in Road in Bengaluru grg
Author
Bengaluru, First Published Oct 25, 2021, 1:55 PM IST

ಸಂಪತ್‌ ತರೀಕೆರೆ

ಬೆಂಗಳೂರು(ಅ.25):  ನಿರಂತರ ಮಳೆಯಿಂದಾಗಿ ನಗರದ(Bengaluru) ಮುಖ್ಯ ರಸ್ತೆಗಳು(Road), ಉಪ ಮುಖ್ಯರಸ್ತೆಗಳು, ವಾಹನ ದಟ್ಟಣೆಯ(Traffic) ಕಾರಿಡಾರ್‌ ರಸ್ತೆಗಳು ಸೇರಿದಂತೆ ಎಲ್ಲಾ ವಾರ್ಡ್‌ ರಸ್ತೆಗಳಲ್ಲಿನ ರಸ್ತೆಗುಂಡಿಗಳಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಬಿಬಿಎಂಪಿ ಮಳೆಯಲ್ಲೇ ರಸ್ತೆ ಗುಂಡಿ ಮುಚ್ಚಲು ಮುಂದಾಗಿರುವುದು ಜನರನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸಿದೆ.

ರಸ್ತೆ ಮೂಲಭೂತ ಸೌಕರ್ಯ ವಿಭಾಗದ ವತಿಯಿಂದ ಆರ್ಟಿರಿಯಲ್‌, ಸಬ್‌ ಆರ್ಟಿರಿಯಲ್‌ ರಸ್ತೆಗಳ ಅಭಿವೃದ್ಧಿ, ಯೋಜನೆ ವಿಭಾಗದಿಂದ ವೈಟ್‌ಟಾಪಿಂಗ್‌ ಮತ್ತು ವಾರ್ಡ್‌ಗಳ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿ(BBMP) ಕಾರ್ಯೋನ್ಮುಖವಾಗಿದೆ. ಸಿಮೆಂಟ್‌, ಜಲ್ಲಿ ಕಲ್ಲಿನ ಮಿಶ್ರಣವನ್ನು ಬಳಸಿಕೊಂಡು ಸಿಮೆಂಟ್‌ ಮಿಶ್ರಣವನ್ನು ತಾತ್ಕಾಲಿಕವಾಗಿ ರಸ್ತೆಗುಂಡಿಗಳಿಗೆ(Potholes) ಸುರಿದು ಮುಚ್ಚುವ ಕೆಲಸ ಮಾಡುತ್ತಿದೆ.

ರಸ್ತೆಗುಂಡಿಗೆ ಸುರಿದ ಸಿಮೆಂಟ್‌, ಜಲ್ಲಿಕಲ್ಲುಗಳು ಮಳೆ(Rain) ಮತ್ತು ವಾಹನಗಳ ನಿರಂತರ ಓಡಾಟದಿಂದ ಕಿತ್ತುಬಂದು ರಸ್ತೆತುಂಬೆಲ್ಲಾ ಚೆಲ್ಲಾಡುತ್ತಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದೆ. ಮುಖ್ಯವಾಗಿ ದ್ವಿಚಕ್ರ ಸವಾರರು(Bike) ಕಲ್ಲಿನ ಪುಡಿಯ ದೆಸೆಯಿಂದ ಬ್ರೇಕ್‌ ಹಾಕಿದರೆ ಜಾರಿ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಸಿಮೆಂಟ್‌ ಪುಡಿ ಮಳೆಯಿಲ್ಲದಿದ್ದಾಗ ಧೂಳಾಗಿ ಕಿರಿಕಿರಿಯುಂಟು ಮಾಡುತ್ತಿದೆ ಎಂದು ಬೈಕ್‌ ಸವಾರರು ಅವಲತ್ತುಕೊಂಡಿದ್ದಾರೆ.

ಬೆಂಗ್ಳೂರಿನ ರಸ್ತೆಗಳು ಈಗ ಮೃತ್ಯಗುಂಡಿಗಳು..!

ನಿತ್ಯವೂ ಸರ್ಕಸ್‌:

ನಗರದ ಮಲ್ಲೇಶ್ವರದಿಂದ ಯಶವಂತಪುರ ಮಾರ್ಗವಾಗಿ ಗೊರಗುಂಟೆ ಪಾಳ್ಯಕ್ಕೆ ಹೋಗುವ ರಸ್ತೆ(ತುಮಕೂರು ರಸ್ತೆ). ಸಂಜಯನಗರ ಮುಖ್ಯ ರಸ್ತೆ, ಭದ್ರಪ್ಪ ಲೇಔಟ್‌ನಿಂದ ಕೊಡುಗೆಹಳ್ಳಿಗೆ ಕಡೆಗೆ ತೆರಳುವ ರಸ್ತೆ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಮೈಸೂರು ರಸ್ತೆ, ಶಾಂತಿನಗರದಿಂದ ಡೈರಿ ಸರ್ಕಲ್‌ಗೆ ತೆರಳುವ ರಸ್ತೆ ಹಾಗೂ ಮಡಿವಾಳ ಮಾರುಕಟ್ಟೆಯಿಂದ ಬೊಮ್ಮನಹಳ್ಳಿ ಕಡೆಗೆ ಹೋಗುವ ಮುಖ್ಯ ರಸ್ತೆಗಳಲ್ಲಿ ಮಳೆಯಿಂದ ರಸ್ತೆಗುಂಡಿಗಳ ಆರ್ಭಟ ಜಾಸ್ತಿಯಾಗಿದೆ. ಇದರಿಂದ ವಾಹನ ಸವಾರರು ದಿನವೂ ಸರ್ಕಸ್‌ ಮಾಡುವುದು ತಪ್ಪುತ್ತಿಲ್ಲ.

ಲಕ್ಷಾಂತರ ರು. ವ್ಯರ್ಥ:

ಬೆಳಗ್ಗೆ ಬಿಸಿಲು ಇದೆ ಎಂದು ರಸ್ತೆ ಗುಂಡಿಗಳಿಗ ಸಿಮೆಂಟ್‌, ಜೆಲ್ಲಿ ಮಿಶ್ರಣವನ್ನು ಸುರಿದು ಗುಂಡಿ ಮುಚ್ಚಿ ಹೋಗುತ್ತಿದ್ದಂತೆ ಸಂಜೆ ಮಳೆ ಸುರಿದು ಎಲ್ಲವು ಕೊಚ್ಚಿಕೊಂಡು ಹೋಗುತ್ತಿದೆ. ಬಿಬಿಎಂಪಿ ರಸ್ತೆಗುಂಡಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಬದಲು ತಾತ್ಕಾಲಿಕ ಪರಿಹಾರ ಒದಗಿಸುವ ಭರದಲ್ಲಿ ಲಕ್ಷಾಂತರ ರು.ಗಳನ್ನು ಸುಖಾಸುಮ್ಮನೆ ಕಳೆದುಕೊಳ್ಳುತ್ತಿದೆ. ಅಂದರೆ ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಡಿವಾಣ ಹಾಕಿ:

ಮಳೆ ನಿಂತ ಬಳಿಕ ರಸ್ತೆಗುಂಡಿಗಳನ್ನು ಶಾಶ್ವತವಾಗಿ ಮುಚ್ಚುವಂತೆ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವ ಬದಲು ತಾತ್ಕಾಲಿಕವಾಗಿ ರಸ್ತೆ ಗುಂಡಿಗೆ ತೇಪೆ ಹಾಕಿ ಜನರ ಕಣ್ಣೊರೆಸುವ ತಂತ್ರವನ್ನು ಬಿಬಿಎಂಪಿ ಅಧಿಕಾರಿಗಳು ಮಾಡುತ್ತಿದ್ದಾರೆ. ಹಾಗಾಗಿ ರಸ್ತೆಗುಂಡಿಗಳನ್ನು ಮುಚ್ಚುವುದು ನಿರಂತರ ಪ್ರಕ್ರಿಯೆ ಎಂಬಂತೆ ಮಾಡಿಕೊಂಡಿದ್ದು ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಇದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gourav Gupta) ಹಾಗೂ ರಾಜ್ಯ ಸರ್ಕಾರ(State Government) ಕಡಿವಾಣ ಹಾಕಬೇಕೆಂದು ಸಂಜಯನಗರದ ನಿವಾಸಿ ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.

ಪೊಲೀಸರ ಸಹಾಯದಿಂದ 5300 ಗುಂಡಿ ಭರ್ತಿ

ರಸ್ತೆ ಗುಂಡಿಗಳನ್ನು ಮುಚ್ಚಲು ಎಲ್ಲ ವಲಯದಲ್ಲಿ ಸಂಬಂಧಪಟ್ಟ ವಲಯದ ಮುಖ್ಯ ಅಭಿಯಂತರರು, ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ವಾರ್ಡ್‌ ಎಂಜಿನಿಯರ್‌ಗಳನ್ನು ಒಳಗೊಂಡಂತೆ ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಗಿದೆ.

ವಲಯ ಮಟ್ಟದಲ್ಲಿನ ವಿಭಾಗದ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲಾ ರಸ್ತೆಗಳ (ಮುಖ್ಯ ರಸ್ತೆ ಮತ್ತು ಉಪ ಮುಖ್ಯರಸ್ತೆಗಳನ್ನು ಒಳಗೊಂಡಂತೆ) ಪಟ್ಟಿಮಾಡಿ ರಸ್ತೆಗುಂಡಿಗಳನ್ನು ಗುರುತಿಸಿ ಅಗತ್ಯಕ್ಕೆ ತಕ್ಕಂತೆ ಡಾಂಬರು ಮಿಶ್ರಣ ಅಥವಾ ಸಿಮೆಂಟ್‌ ಜಲ್ಲಿಕಲ್ಲು ಮಿಶ್ರಣದಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮವಹಿಸುವಂತೆ ಈಗಾಗಲೇ ಬಿಬಿಎಂಪಿ ಸೂಚಿಸಿದೆ. ಆದರೆ, ಮಳೆ ನಿಂತ ಬಳಿಕ ರಸ್ತೆ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳುವ ಬದಲು ಮಳೆಯಲ್ಲೇ ರಸ್ತೆಗುಂಡಿ ಮುಚ್ಚುತ್ತಿದ್ದು ಬಂಡೆಮೇಲೆ ಮಳೆ ಸುರಿದಂತಾಗುತ್ತಿದೆ.

ಶಾಶ್ವತ ಪರಿಹಾರಕ್ಕೆ ಯೋಜನೆ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ಟೋಬರ್‌ ಮೊದಲ ವಾರದಿಂದ ಇಲ್ಲಿವರೆಗೂ ನಿರೀಕ್ಷೆಗೂ ಮೀರಿ ಮಳೆ ಸುರಿಯುತ್ತಿದೆ. ಮಳೆಗಾಲಕ್ಕೂ ಮುನ್ನವೇ ಹಲವು ರಸ್ತೆಗಳಲ್ಲಿ ವೈಟ್‌ಟಾಪಿಂಗ್‌(Whitetopping) ಮಾಡಿ ರಸ್ತೆಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ, ಈಗ ಕೇಬಲ್‌, ಬೆಸ್ಕಾಂ, ಜಲಮಂಡಳಿಯವರು ನೆಲ ಅಗೆಯುತ್ತಿದ್ದು, ಕೆಸರು ರಸ್ತೆಗಳಿಗೆ ಬಂದು ಗುಂಡಿಗಳು ಉಂಟಾಗುತ್ತಿದೆ. ಜೊತೆಗೆ ಸುರಿಯುತ್ತಿರುವ ಭಾರೀ ಮಳೆಯಿಂದ ಇನ್ನಷ್ಟು ಗುಂಡಿಗಳಾಗಿವೆ. ಮಳೆ ನಿಂತ ನಂತರವೇ ರಸ್ತೆ ಗುಂಡಿ ಮುಚ್ಚುವ ಉದ್ದೇಶವಿದ್ದರೂ, ರಸ್ತೆಗುಂಡಿಗಳಿಂದ ಈಗಾಗಲೇ ಮೂರ್ನಾಲ್ಕು ಮಂದಿ ಬೈಕ್‌ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ದುರಂತಗಳು(Tragedy) ನಡೆಯಬಾರದೆಂದು ತಾತ್ಕಾಲಿಕವಾಗಿ ಗುಂಡಿ ಮುಚ್ಚುತ್ತಿದ್ದೇವೆ. ಮಳೆ ಮುಗಿದ ಬಳಿಕ ರಸ್ತೆ ಗುಂಡಿಗಳ ಸಮಸ್ಯೆಯನ್ನು ನಿವಾರಿಸಲು ಶಾಶ್ವತ ಯೋಜನೆ ರೂಪಿಸಲಾಗುತ್ತಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ(Kannada Prabha) ಮಾಹಿತಿ ನೀಡಿದರು.
 

Follow Us:
Download App:
  • android
  • ios