ಬಳ್ಳಾರಿಯಲ್ಲಿ ಲೇಔಟ್ ಸ್ಕೇಚ್ ನೀಡಲು 18 ಸಾವಿರ ರೂ. ಲಂಚ ಪಡೆಯುತ್ತಿದ್ದ ಸರ್ವೇಯರ್ ಹನುಮಂತಪ್ಪ ಅವರನ್ನು ಲೋಕಾಯುಕ್ತರು ಬಂಧಿಸಿದ್ದಾರೆ. ಅದೇ ರೀತಿ ಕೊಡಗಿನಲ್ಲಿ ಮೃತ ಪೊಲೀಸ್ ಪೇದೆಯ ವಿಮಾ ಹಣ ಬಿಡುಗಡೆಗೆ 25 ಸಾವಿರ ರೂ. ಲಂಚ ಪಡೆಯುತ್ತಿದ್ದ ಜಿಲ್ಲಾ ವಿಮಾ ಅಧಿಕಾರಿ ಹೇಮ್ ಕುಮಾರ್ ಕೂಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಳ್ಳಾರಿ: ಲೇಔಟ್ ಸ್ಕೇಚ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿಯೇ ಸರ್ವೇಯರ್ ಅನ್ನು ಲೋಕಾಯುಕ್ತ ಅಧಿಕಾರಿಗಳು ತಮ್ಮ ಬಲೆಗೆ ಕೆಡಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸರ್ವೇ ಕಚೇರಿಯಲ್ಲಿ ಘಟನೆ ನಡೆದಿದೆ.
ಬಳ್ಳಾರಿಯ ಲೇಔಟ್ ಮಾಲೀಕ ವೀರೇಶ ಎಂಬವರು ಲೇಔಟ್ ಸ್ಕೇಚ್ ಪಡೆದಲು ಆಗಮಿಸಿದ್ದ ಸಂದರ್ಭದಲ್ಲಿ ಸರ್ವೇಯರ್ ಹನುಮಂತಪ್ಪ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಕೊನೆಗೆ 18 ಸಾವಿರ ರೂಪಾಯಿಗೆ ಸರ್ವೇಯರ್ ಹನುಮಂತಪ್ಪ ಡೀಲ್ ಕುದಿಸಿಕೊಂಡಿದ್ದರಂತೆ. ಇದರಂತೆ ನೊಂದ ವೀರೇಶ, ಈ ಕುರಿತು ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದರಂತೆ.
ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, 18 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ. ದಾಳಿಯ ಬಳಿಕ ಸಾಕಷ್ಟು ಮಾಹಿತಿ ಕಲೆ ಹಾಕಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ದೂರುದಾರರು, ರೋಡ್ ಸ್ಕೇಚ್‌ಗೆ ಸಂಬಂಧಿಸಿದಂತೆ ನಾವು ಅರ್ಜಿ ಸಲ್ಲಿಕೆ ಮಾಡಿದಾಗ 20 ಸಾವಿರ ಬೇಡಿಕೆ ಇಟ್ಟಿದ್ದರು. ಅಲ್ಲದೇ ಮಾತುಕತೆ ಬಳಿಕ 18 ಸಾವಿರಕ್ಕೆ ಓಕೆ ಅಂದಿದ್ದರು. ಇದರಂತೆ ನಾವು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದೇವು, ಹಣ ಕೊಡಲಿಲ್ಲ ಎಂದರೆ ಕೆಲಸ ಮಾಡಿಕೊಡುವುದಿಲ್ಲ ಎಂದು ಹೇಳಿದ್ದರು. ಸರ್ಕಾರ ಪ್ರತಿಯೊಂದು ಇಲಾಖೆಯಲ್ಲೂ ಲಂಚ ತಿನ್ನುವ ಅಧಿಕಾರಿಗಳೇ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಕೊಡಗು ಜಿಲ್ಲಾ ವಿಮಾ ಅಧಿಕಾರಿ
ಇನ್ನು ಕೊಡಗು ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿಮಾ ಹಣ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಮೇರೆಗೆ ಕೆಜಿಐಡಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಜಿಲ್ಲಾ ವಿಮಾ ಅಧಿಕಾರಿ ಹೇಮ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, 25 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್‌ಹ್ಯಾಂಡಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಲೋಕಾಯುಕ್ತ DYSP ದಿನಕರ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಮೃತ ಪೊಲೀಸ್ ಪೇದೆಯೊಬ್ಬರ ವಿಮಾ ಹಣ ಬಿಡುಗಡೆಗೆ ರೋಹಿಣಿ ಎಂಬವರಿಗೆ ಲಂಚಕ್ಕೆ ಹೇಮಕುಮಾರ್ ಬೇಡಿಕೆ ಇಟ್ಟಿದ್ದರಂತೆ. ಈ ಸಂಬಂಧ ದೂರು ಸಿಗುತ್ತಿದ್ದಂತೆ ಮಡಿಕೇರಿಯ ಮಹದೇವಪೇಟೆಯಲ್ಲಿರುವ ಜಿಲ್ಲಾ ವಿಮಾ ಕೇಂದ್ರದಲ್ಲಿಯೇ ಟ್ರಾಪ್ ರೂಪಿಸಿ, ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.


