ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಸಚಿವ ಆನಂದ್ ಸಿಂಗ್; ದೂರು ದಾಖಲು
- ಸಚಿವ ಆನಂದ ಸಿಂಗ್ ವಿರುದ್ಧ ದೂರು ದಾಖಲು
- ಜಾತಿ ನಿಂದನೆ, ದೌರ್ಜನ್ಯ, ಬೆದರಿಕೆ ಆರೋಪದಲ್ಲಿ ದೂರು
- ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಆನಂದ ಸಿಂಗ್
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಆ.31): ಏನೋ ಮಾಡಲು ಹೋಗಿ ಇನ್ನೇನು ಮಾಡಿದಂಗೆ ಆಗಿದೆ ಸಚಿವ ಆನಂದ ಸಿಂಗ್ ಕತೆ. ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯ ಬಗೆಹರಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಕುಟುಂಬದರು ಎಸ್‌ಪಿ ಕಚೇರಿ ಮುಂದೆ ಆತ್ಮಹತ್ಯೆ(Suicide) ಪ್ರಯತ್ನ ಮಾಡುವ ಮೂಲಕ ಸಚಿವ ಆನಂದ ಸಿಂಗ್(Minister Anand Singh) ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಜಾತಿ ನಿಂದೆ ದೌರ್ಜನ್ಯ, ಸೇರಿದಂತೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಆದರೆ ಇದೆಲ್ಲವನ್ನು ಅಲ್ಲಗಳೆದಿರೋ ಆನಂದ ಸಿಂಗ್ ಇದರಲ್ಲಿ ತಮ್ಮದೇನೂ ಪಾತ್ರವಿಲ್ಲ ಎನ್ನುತ್ತಿದ್ದಾರೆ. ಇದೀಗ ಒಂದು ಕಡೆ ಆನಂದ ಸಿಂಗ್ ವಿರುದ್ಧ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ರೆ, ಇನ್ನೊಂದೆಡೆ ಆತ್ಮಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಕುಟುಂಬದ ಏಳು ಜನರ ಮೇಲೂ ಪ್ರಕರಣ ದಾಖಲಾಗಿದೆ.
ಅಷ್ಟಕ್ಕೂ ನಡೆದಿದ್ದಾದ್ರೂ ಏನು?
ಮಡಿವಾಳ ಸಮಾಜಕ್ಕೆ ಸೇರಿದ ಅಂದಾಜು 2ಎಕರೆ ಭೂಮಿಯನ್ನು ಕಳೆದ ಹಲವು ವರ್ಷಗಳಿಂದ ಹೊಸಪೇಟೆ(Hospet)ಯ 6ನೇ ವಾರ್ಡ್ ನ ಸುಣ್ಣದ ಬಟ್ಟಿ ಪ್ರದೇಶದಲ್ಲಿ ವಾಸವಿರುವ ಡಿ. ಪೋಲಪ್ಪ(D.Polappa) ಕುಟುಂಬದ ವಶದಲ್ಲಿತ್ತು. ಆದರೆ ಇದು ಮಡಿವಾಳ ಸಮಾಜಕ್ಕೆ ಸೇರಿದ ಭೂಮಿಯಾಗಿದೆ ಇದನ್ನು ಒತ್ತುವರಿ ಮಾಡಲಾಗಿದೆ ಎನ್ನುವ ಆರೋಪವಿತ್ತು. ಈ ಕುರಿತು ಮಡಿವಾಳ ಸಮುದಾಯದ ಜನರು ಸೇರಿದಂತೆ ಸ್ವಾಮೀಜಿಯೊಬ್ಬರು ಆನಂದ ಸಿಂಗ್ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದರಂತೆ ಈ ಕುರಿತು ಕಳೆದ ಎರಡು ದಿನಗಳ ಹಿಂದೆ ಅಧಿಕಾರಿಗಳನ್ನು ಕರೆದುಕೊಂಡು ಸ್ಥಳಕ್ಕೆ ತೆರಳಿದ್ದ ಆನಂದ ಸಿಂಗ್ ಮೇಲ್ನೋಟಕ್ಕೆ ಭೂಮಿ ಒತ್ತುವರಿಯಾಗಿರೋದು ಕಂಡು ಬಂದಿದೆ. ಇದನ್ನು ತೆರವು ಮಾಡಿ ಎಂದು ಹೇಳಿದ್ರಂತೆ. ಈ ವೇಳೆ ಒಂದಷ್ಟು ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಅಂತಿಮವಾಗಿ ಜಮೀನು ಸರ್ವೇ ಮಾಡಿ ಸೂಕ್ತ ದಾಖಲೆಗಳನ್ನು ಪರಿಶೀಲನೆ ಮಾಡಿ ಯಾರ ಬಳಿ ನೈಜ ದಾಖಲೆಗಳಿವೆಯೋ ಅವರಿಗೆ ಜಮೀನು ಹಸ್ತಾಂತರ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ರಂತೆ.
ಅಂಜನಾದ್ರಿ ಅಭಿವೃದ್ಧಿಗೆ ಶೀಘ್ರ ನೀಲನಕ್ಷೆ: ಸಚಿವ ಆನಂದ ಸಿಂಗ್
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ:
ಜಮೀನು ವಿವಾದಕ್ಕೆ ಸಂಬಂಧಿದಂತೆ ವಾಗ್ವಾದ ನಡೆದ ಬಳಿಕ ಪೋಲಪ್ಪ ಮತ್ತವರ ಕುಟುಂಬದ ಏಳು ಜನ ಸದಸ್ಯರು ನಿನ್ನೆ ( ಮಂಗಳವಾರ ) ಸಂಜೆ ಎಸ್ಪಿ ಕಚೇರಿ ಮುಂದೆ ಪೆಟ್ರೋಲ್(Petrol) ಸುರಿದುಕೊಮಡು ಆತ್ಮಹತ್ಯೆಗೆ ಯತ್ನಿಸಿದ್ರು. ಆಗ ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆತ್ಮಹತ್ಯೆ ತಡೆಯೋ ಮೂಲಕ ಘಟನೆಯ ಪೂರ್ವಾಪರವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರಲ್ಲೇ ಸಂತ್ರಸ್ತ ಕುಟುಂಬದ ಪೋಲಪ್ಪ ನೀಡಿದ ದೂರಿನ ಮೇರೆಗೆ ಆನಂದ ಸಿಂಗ್ ವಿರುದ್ಧ ಅವಾಚ್ಯ ಪದಗಳಿಂದ ನಿಂದನೆ, ದೌರ್ಜನ್ಯ, ಒತ್ತಡ ಮತ್ತು ಜಾತಿ ನಿಂದನೆ ಪ್ರಕರಣವನ್ನು ದಾಖಲು ಮಾಡಿದ್ರು. ನಮ್ಮದೇ ಜಮೀನು ಇದ್ರೂ ಅದನ್ನು ಕೆಲವರ ಕುಮ್ಮಕ್ಕಿನಿಂದ ಆನಂದ ಸಿಂಗ್ ತೆರವು ಮಾಡಿಸಲು ಮುಂದಾಗಿದ್ದಾರೆಂದು ಪೋಲಪ್ಪ ನೇರ ಆರೋಪವನ್ನು ಮಾಡಿದ್ದಾರೆ. ಅಲ್ಲದೇ ಈ ಹಿಂದೆ ಸಚಿವ ಆನಂದ ಸಿಂಗ್ ಮನೆ ನಿರ್ಮಾಣ ಅಕ್ರಮವಾಗಿದೆ ಎಂದು ಹೋರಾಟ ಮಾಡಿದ್ದೇ. ಆಗ ನನ್ನ ಮೇಲೆ ಅವರ ವೈಯಕ್ತಿಕ ದ್ವೇಷವನ್ನು ಕಟ್ಟಿ ಕೊಂಡಿದ್ರು ಅದೆಲ್ಲವನ್ನು ಮನಸ್ಸಿ ನಲ್ಲಿಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆಂದು ಪೋಲಪ್ಪ ಆರೋಪಿಸಿದ್ದಾರೆ.
ಹೀಗಾಗಿ ಪೋಲಪ್ಪಗೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಸಚಿವ ಆನಂದಸಿಂಗ್, ಮರಿಯಪ್ಪ, ಹನುಮಂತಪ್ಪ, ಹುಲಗಪ್ಪ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಇನ್ನೂ ಪೋಲಪ್ಪ ಹೇಳುವ ಪ್ರಕಾರ ತಾವು ವಾಸ ಮಾಡ್ತಾ ಇರೋ ಜಾಗ ಮಡಿವಾಳ ಸಮಾಜಕ್ಕೆ ಸೇರಿದಲ್ಲ ವಿರಕ್ತ ಮಠದ ಶ್ರೀಗಳಿಂದ ತಮ್ಮ ಪತ್ನಿಯ ಕುಟುಂಬಕ್ಕೆ ಬಂದಿದೆಯಂತೆ ನನ್ನ ಪತ್ನಿಯ ತಂದೆ (ಮಾವನವರಿಗೆ) ವೀಲ್ ಮೂಲಕ ಆಸ್ತಿ ನಮಗೆ ಬಂದಿದೆ. ನಾವೂ ವಾಸ ಇರೋ ಜಾಗದಿಂದ ನಮ್ಮ ಕುಟುಂಬವನ್ನ ಒಕ್ಕಲೆಬ್ಬಿಸಲು ಸಚಿವರು ಸಂಚು ರೂಪಿಸಿದ್ದಾರೆ ಆರೋಪಿಸುತ್ತಿದ್ದಾರೆ.
ಆನಂದ ಸಿಂಗ್ ಹೇಳೋದೇನು?
ತಮ್ಮ ವಿರುದ್ಧ ಜೀವ ಬೆದರಿಕೆ, ಜಾತಿ ನಿಂದನೆ ದೂರು ದಾಖಲಾದ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಸಚಿವ ಆನಂದ ಸಿಂಗ್, ತಾವು ಯಾರ ಮೇಲೆಯೂ ದೌರ್ಜನ್ಯ ಮಾಡಿಲ್ಲ. ತನಿಖೆ ಮಾಡಿದ್ರೆ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದಿದ್ದಾರೆ. ಆದರೆ, ಇದು ಮಡಿವಾಳ ಸಮಾಜಕ್ಕೆ ಸೇರಿದ ಸ್ಥಳದ ವಿಚಾರದಲ್ಲಿ ನಡೆದ ವಾಗ್ವಾದ ನಡೆದಿದೆ. ಮಡಿವಾಳ ಸಮಾಜ ಹಾಗೂ ಪೋಲಪ್ಪ ಕುಟುಂಬದ ಮಧ್ಯೆ ಕಾನೂನು ಹೋರಾಟ ನಡೆಯುತ್ತಿದೆ. ಮಡಿವಾಳ ಸಮಾಜ ನಮ್ಮದೂ ಜಾಗ ಅಂತಿದ್ದಾರೆ. ಪೋಲಪ್ಪ ನಮ್ಮದು ಅಂತಿದ್ದಾರೆ. ಈ ವಿಚಾರವಾಗಿ ನಾಲ್ಕು ತಿಂಗಳ ಹಿಂದೆ ಕರೆದು ಸಂಧಾನ ಮಾಡಿದ್ದೆ. ನಾನೇ ಪೋಲಪ್ಪಗೆ ಕಾಲ್ ಮಾಡಿ. ಸಮಾಜದವರನ್ನು ಕರೆದುಕೊಂಡು ಸ್ಥಳ ಪರಿಶೀಲನೆಗೆ ಹೋಗಿದ್ದೆ. ಸ್ಥಳ ಪರಿಶೀಲನೆ ಹಿನ್ನಲೆ ಯಲ್ಲಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ರು. ನಾನು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಬೆದರಿಕೆಯಾಗಲಿ. ಜಾತಿನಿಂದನೆ ಮಾಡಿಲ್ಲ. ಅದು ಪೋಲಪ್ಪ ಪಿತಾರ್ಜಿತ ಆಸ್ತಿ ಅಲ್ಲ. ಪೋಲಪ್ಪನ ಪತ್ನಿಯ ಕುಟುಂಬಕ್ಕೆ ಸೇರಿದ ಆಸ್ತಿ ಆಗಿದೆ ಎಂದು ಹೇಳುತ್ತಿದ್ದಾರೆ. ನಗರಸಭೆ ಅಧಿಕಾರಿಗಳಿಗೆ ದಾಖಲೆಗಳನ್ನು ಪರಿಶೀಲನೆ ನಡೆಸಲು ಹೇಳಿರುವೆ. ಆದರೆ ಸಂಜೆ ನಂತರ ಪೋಲಪ್ಪ ಕುಟುಂಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿಯಿತು.
ಹೊಸಪೇಟೆ ಸರ್ಕಾರಿ ಪದವಿ ಕಾಲೇಜಲ್ಲಿ ಹಣದ ಗೋಲ್‌ಮಾಲ್?
ಪೋಲಪ್ಪ ಯಾವ ಜಾತಿ ಅಂತಾ ಸಹ ನನಗೆ ಗೊತ್ತಿಲ್ಲ. ನಾನು ಜಾತಿ ನಿಂದನೆ ಮಾಡಿಲ್ಲ. ಕಾನೂನಿಗಿಂತ ನಾನು ದೊಡ್ಡವ ನಲ್ಲ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ರೆ ದಾಖಲೆಗಳನ್ನ ಕೊಡಲಿ ಸತ್ಯಾಸತ್ಯತೆಯನ್ನ ಪೊಲೀಸರು ಪರಿಶೀಲನೆ ಮಾಡಲಿ ಎಂದಿದ್ದಾರೆ. ಅದೇನೆ ಇರಲಿ ಏನು ಮಾಡಲು ಹೋಗಿ ಇನ್ನೇನು ಮಾಡಿದ್ರು ಅನ್ನೋ ಹಾಗೇ ಯಾರದ್ದೋ ಸಮಸ್ಯೆ ಬಗರೆಹರಿಸಲು ಹೋಗಿ ಇದೀಗ ಸ್ವತಃ ಸಚಿವ ಆನಂದ ಸಿಂಗ್ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.