*  ಹೊಸಪೇಟೆಯ ‘ಶಂಕರ ಆನಂದ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು*  ವಿವಿಧ ಖಾತೆಗಳಿಂದ 3 ಕೋಟಿ ಎತ್ತಿರುವ ಕುರಿತು ವದಂತಿ*  ಶೀಘ್ರ ಕಾಲೇಜು ಶಿಕ್ಷಣ ಇಲಾಖೆಯಿಂದ ತನಿಖೆ 

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಮೇ.29): ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ‘ಶಂಕರ ಆನಂದ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ’ನಲ್ಲಿ ಹಣದ ಗೋಲ್‌ಮಾಲ್‌ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕಾಲೇಜಿನ 16 ಬ್ಯಾಂಕ್‌ ಖಾತೆಗಳಿಂದ ಅಂದಾಜು 3 ಕೋಟಿ ತೆಗೆಯಲಾಗಿದ್ದು, ಈ ಹಣ ಎಲ್ಲೆಲ್ಲಿ ಖರ್ಚು ಮಾಡಲಾಗಿದೆ. ಯಾವ ಉದ್ದೇಶಕ್ಕೆ ಬಿಡಿಸಲಾಗಿದೆ ಎಂಬುದು ಸ್ಪಷ್ಟವಾಗಬೇಕಿದೆ. ಈ ಬಗ್ಗೆ ಲೆಕ್ಕ ಪರಿಶೋಧನೆಯಿಂದಲೇ ಖಚಿತವಾಗಲಿದ್ದು, ಇದಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಶಿಕ್ಷಣ ಇಲಾಖೆ ಶೀಘ್ರವೇ ಲೆಕ್ಕ ಪರಿಶೋಧನೆಗೆ ತಂಡ ಕಳುಹಿಸಲಿದೆ ಎಂದು ಕಾಲೇಜಿನ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಯಾವ್ಯಾವ ಖಾತೆಗಳು:

ಕಾಲೇಜು ಅಭಿವೃದ್ಧಿ ಸಮಿತಿ, ಕಾಲೇಜು ಅಭಿವೃದ್ಧಿ ಹಣಕಾಸು ಸಮಿತಿ, ಗ್ರಂಥಾಲಯ, ಎನ್‌ಎಸ್‌ಎಸ್‌, ಕ್ರೀಡಾ ಘಟಕಗಳು ಸೇರಿದಂತೆ 16 ಖಾತೆಗಳಿಂದ ಹಣ ಡ್ರಾ ಮಾಡಲಾಗಿದೆ. 2015-16ನೇ ಸಾಲಿನಿಂದ ಪೊ›. ಬಿ.ಜಿ. ಕನಕೇಶಮೂರ್ತಿ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದು, 2022ರ ಏಪ್ರಿಲ್‌ 30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

ಮೇ 1ರಿಂದ ನಟರಾಜ ಪಾಟೀಲ್‌ ಕಾಲೇಜಿನ ಪ್ರಾಚಾರ್ಯರಾಗಿದ್ದಾರೆ. ಕನಕೇಶಮೂರ್ತಿ ನಿವೃತ್ತಿ ಹೊಂದಿದಾಗ ಪ್ರತ್ಯೇಕವಾಗಿ ಕಾಲೇಜಿನ ಲೆಕ್ಕದ ಬಗ್ಗೆ ವಿವರ ನೀಡಿದ್ದಾರೆ. ಜತೆಗೆ .9.60 ಲಕ್ಷ ಬ್ಯಾಂಕ್‌ ಖಾತೆಗಳಲ್ಲಿ ಉಳಿದಿರುವ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ನಟರಾಜ ಪಾಟೀಲ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಗುಲಬರ್ಗಾ ವಿವಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಕ್ಯಾನ್ಸಲ್

ನ್ಯಾಕ್‌ ಮಾನ್ಯತೆ ಉದ್ದೇಶಕ್ಕಾಗಿ ಕಾಲೇಜಿನ ಬೆಳವಣಿಗೆಗೆ ಹಣ ಖರ್ಚು ಮಾಡಲಾಗಿದೆ. ಪ್ರತಿಯೊಂದು ವಿವರವೂ ಇದೆ. ಲೆಕ್ಕ ಪರಿಶೋಧನಾ ವರದಿಯಲ್ಲಿ ಇದೆಲ್ಲ ಸಾಬೀತಾಗಲಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ಈ ಮಧ್ಯೆ ನಿವೃತ್ತ ಪ್ರಾಚಾರ್ಯ ಪೊ›. ಬಿ.ಜಿ. ಕನಕೇಶಮೂರ್ತಿ ಅವರಿಗೆ ಈ ಬಗ್ಗೆ ವಿವರಣೆ ಪಡೆಯಲು ಫೋನಾಯಿಸಿದರೆ ಕರೆ ಸ್ವೀಕರಿಸಲಿಲ್ಲ. ಕಾಲೇಜ್‌ನ ಬ್ಯಾಂಕ್‌ ಖಾತೆಗಳಲ್ಲಿನ ಹಣ ಡ್ರಾ ಆಗಿರುವ ಕುರಿತು ಕಾಲೇಜು ಅಭಿವೃದ್ಧಿ ಸಮಿತಿ ಶನಿವಾರ ಸಭೆ ನಡೆಸಿ ಚರ್ಚಿಸಿದೆ ಎಂದು ಮೂಲಗಳು ಕನ್ನಡಪ್ರಭಕ್ಕೆ ಖಚಿತಪಡಿಸಿವೆ.

ಹಣದ ಗೋಲ್ಮಾಲ್‌ ಆಗಿದೆ ಎಂಬುದು ಬರೀ ಊಹಾಪೋಹ. ಎಲ್ಲವೂ ಲೆಕ್ಕಪರಿಶೋಧನೆಯಲ್ಲಿ ತಿಳಿಯಲಿದೆ. ಬ್ಯಾಂಕ್‌ ಖಾತೆಗಳಲ್ಲಿ 9.60 ಲಕ್ಷ ಇದೆ. ಈ ಹಿಂದಿನ ಪ್ರಾಚಾರ್ಯರು ಲೆಕ್ಕದ ಎಲ್ಲಾ ವಿವರ ನೀಡಿದ್ದಾರೆ ಅಂತ ಹೊಸಪೇಟೆ ನಗರದ ಶಂಕರ ಆನಂದ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ನಟರಾಜ ಪಾಟೀಲ್‌ ತಿಳಿಸಿದ್ದಾರೆ.