ಅಂಜನಾದ್ರಿ ಅಭಿವೃದ್ಧಿಗೆ ಶೀಘ್ರ ನೀಲನಕ್ಷೆ: ಸಚಿವ ಆನಂದ ಸಿಂಗ್
ಒಂದೊಂದು ಪ್ರವಾಸಿತಾಣಕ್ಕೆ ಒಂದೊಂದು ರೀತಿಯ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಅವರ ಇಷ್ಟಕ್ಕೆ ತಕ್ಕಂತೆ ಅಭಿವೃದ್ಧಿಪಡಿಸುವ ಮತ್ತು ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ: ಆನಂದ ಸಿಂಗ್
ಕೊಪ್ಪಳ(ಜು.15): ಅಂಜನಾದ್ರಿ ಅಭಿವೃದ್ಧಿ ಕುರಿತು ಸಿಎಂ ನೇತೃತ್ವದಲ್ಲಿ ಸಭೆಯಾಗಿದ್ದು, ಅವರು ಶೀಘ್ರ ಹೆಲಿಕಾಪ್ಟರ್ ಮೂಲಕ ವೈಮಾನಿಕ ವೀಕ್ಷಣೆ ಮಾಡಲಿದ್ದು, ಅಭಿವೃದ್ಧಿಯ ಕುರಿತು ಶೀಘ್ರ ನೀಲನಕ್ಷೆ ಸಿದ್ಧವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು. ತುಂಗಭದ್ರಾ ಜಲಾಶಯಕ್ಕೆ ಗುರುವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಒಂದೊಂದು ಪ್ರವಾಸಿತಾಣಕ್ಕೆ ಒಂದೊಂದು ರೀತಿಯ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಅವರ ಇಷ್ಟಕ್ಕೆ ತಕ್ಕಂತೆ ಅಭಿವೃದ್ಧಿಪಡಿಸುವ ಮತ್ತು ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಅಂಜನಾದ್ರಿ ಬೆಟ್ಟಕ್ಕೆ ಸಾಮಾನ್ಯವಾಗಿ ಉತ್ತರ ಭಾರತದ ಪ್ರವಾಸಿಗರು ಹೆಚ್ಚು ಆಗಮಿಸುತ್ತಾರೆ. ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ನಾನಾ ಏಜೆನ್ಸಿಗಳ ಮೂಲಕ ನೀಲನಕ್ಷೆ ತಯಾರಿಸಿ ಟೆಂಡರ್ ಕರೆಯಲಾಗುತ್ತದೆ. ಹತ್ತಾರು ಬಾರಿ ಯೋಚನೆ ಮಾಡಿ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಈಗಾಗಲೇ ಭೂಮಿ ಕೊಡುವ ರೈತರು ಮುಂದೆ ಬಂದಿರುವುದರಿಂದ ಅಭಿವೃದ್ಧಿಯ ವೇಗ ಹೆಚ್ಚಿಸಲಾಗುವುದು. ಶೀಘ್ರದಲ್ಲಿಯೇ ಸಿಎಂ ಹೆಲಿಕಾಪ್ಟರ್ ಮೂಲಕ ಅಂಜನಾದ್ರಿಯನ್ನು ವೀಕ್ಷಣೆ ಮಾಡಲಿದ್ದಾರೆ. ಅದಾದ ಮೇಲೆ ಸಭೆ ನಡೆಸಿ ಫೈನಲ್ ಮಾಡಲಾಗುವುದು ಎಂದರು.
ಟ್ವೀಟ್ ಮಾಡಿದ್ದಕ್ಕೆಲ್ಲ ಉತ್ತರ ನೀಡಲು ಆಗುವುದಿಲ್ಲ. ಆದರೂ ಗುಜರಾತ್ ಪ್ರವಾಸೋದ್ಯಮ ಇಲಾಖೆ ಪಂಪಾಸರೋವರ ತಮ್ಮದು ಎಂದು ಹೇಳಿಕೊಂಡಿರುವ ಕುರಿತು ನಮ್ಮ ಪ್ರವಾಸೋದ್ಯಮ ಇಲಾಖೆಯ ಮೂಲಕವೂ ಟ್ವೀಟ್ ಮಾಡಿಸಲಾಗುವುದು ಎಂದರು.
ಅಂಜನಾದ್ರಿ ಬೆಟ್ಟ ವೀಕ್ಷಣೆಗೆ ಸಿಎಂ ವೈಮಾನಿಕ ಸಮೀಕ್ಷೆ: ಆನಂದ್ ಸಿಂಗ್
ಅಂಜನಾದ್ರಿ, ಪಂಪಾಸರೋವರ ಸೇರಿದಂತೆ ಅನೇಕ ಸ್ಥಳಗಳ ಕುರಿತು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದ್ಯಾವುದಕ್ಕೂ ಕಿವಿಗೊಡದೆ ಮತ್ತು ಪ್ರತಿಕ್ರಿಯೆ ನೀಡದೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ಸಿದ್ದರಾಮೋತ್ಸವ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ, ಅದು ಅವರ(ಕಾಂಗ್ರೆಸ್) ಪಕ್ಷದ ವಿಷಯವಾಗಿದೆ. ಆ ಕುರಿತು ನಾನು ಏನೂ ಹೇಳಲಾರೆ ಎಂದರು.
ತುಂಬಾ ಸಂತೋಷ:
ತುಂಗಭದ್ರಾ ಜಲಾಶಯ ಅವಧಿಗೂ ಮುನ್ನ ಭರ್ತಿಯಾಗಿದೆ. ಕಳೆದ 17 ವರ್ಷಗಳಲ್ಲಿಯೇ ಇಷ್ಟುಬೇಗನೆ ಇಷ್ಟೊಂದು ನೀರು ಬಂದಿರಲಿಲ್ಲವಂತೆ. ಇದು ನಮಗೆ ತುಂಬಾ ಸಂತೋಷವಾಗಿದೆ ಎಂದರು. ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ವಿಧಿವತ್ತಾಗಿ ಗಂಗಾಮಾತೆ ಪೂಜೆ ಸಲ್ಲಿಸಿ ಶಾಂತಿಯುತವಾಗಿ ಹರಿಯುವಂತೆ ಬೇಡಿಕೊಂಡಿರುವುದಾಗಿ ಹೇಳಿದರು.
ವಿಜಯನಗರ ಜಿಲ್ಲೆಯಾದ ಮೇಲೆ ಮತ್ತೆ ವೈಭವ ಮೆರೆಯುತ್ತಿದೆ. ಜಲಾಶಯಗಳು ಭರ್ತಿಯಾಗುತ್ತಿವೆ. ಅಂದುಕೊಂಡಿರುವ ಕಾರ್ಯಗಳು ಈಡೇರುತ್ತವೆ. ಇದು ಖುಷಿಯ ಸಂಗತಿ ಎಂದರು. ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ ಇದ್ದರು.