ನಿರ್ದೇಶಕರು ಇಲ್ಲಿ ಪ್ರೇಮ ಮತ್ತು ಶಿಕ್ಷಣ ಎಂಬ ಎರಡು ಅಂಶಗಳನ್ನು ಇಟ್ಟಿದ್ದಾರೆ. ಕುತೂಹಲಕರವಾಗಿ ಕತೆ ಮುಂದಕ್ಕೆ ಹೋಗುವಂತೆ ಚಿತ್ರಕತೆ ಹೆಣೆದಿದ್ದಾರೆ. ಮಲ್ಲು, ಸುಲಕ್ಷಾ ಸೊಗಸಾಗಿ ನಟಿಸಿದ್ದಾರೆ. 

ಆರ್.ಬಿ.

ಪ್ರೇಮಕತೆಯನ್ನು ಹೇಳುತ್ತಲೇ ಉದಾತ್ತ ಸಂದೇಶವನ್ನು ದಾಟಿಸಲು ಯತ್ನಿಸುವ ಸಿನಿಮಾ ಇದು. ಹೆಸರಲ್ಲೇ ಇರುವಂತೆ ವಿದ್ಯಾಳಿಗೂ ಗಣೇಶನಿಗೂ ಪ್ರೀತಿ ಆಗುತ್ತದೆ. ಆದರೆ ಆ ಪ್ರೀತಿಯನ್ನು ದಕ್ಕಿಸಿಕೊಳ್ಳುತ್ತಾರೆಯೇ ಎಂಬುದು ಕಥನ ಕುತೂಹಲ. ಮೂಲತಃ ಪ್ರೇಮಕತೆಯನ್ನು ಹೊಂದಿರುವ ಈ ಸಿನಿಮಾದ ವಿಶೇಷತೆ ಎಂದರೆ ಸರ್ಕಾರಿ ಶಾಲೆಯನ್ನು ಉತ್ತಮಗೊಳಿಸುವ ಅಂಶವನ್ನು ಧರಿಸಿಕೊಂಡಿರುವುದು. ಸಾಮಾನ್ಯವಾಗಿ ಪ್ರೇಮ ಕತೆಯಲ್ಲಿ ಅಡ್ಡಿ ಉಂಟು ಮಾಡಲು ಯಾರೋ ಒಬ್ಬರು ಬರುತ್ತಾರೆ. 

ಆದರೆ ಇಲ್ಲಿ ಪ್ರೇಮಕ್ಕೆ ರಾಜಕೀಯ ವಿರೋಧವಾಗಿ ನಿಲ್ಲುತ್ತದೆ. ಈ ತಡೆಯನ್ನು ದಾಟಿ ಪ್ರೇಮಿಗಳು ಪ್ರೇಮವನ್ನು ಗೆಲ್ಲುತ್ತಾರೆಯೇ ಮತ್ತು ಶಾಲೆಗೆ ಒಳಿತಾಗುತ್ತದೆಯೇ ಎಂಬುದನ್ನು ಅರಿಯಲು ಈ ಸಿನಿಮಾ ನೋಡಬೇಕು. ನಿರ್ದೇಶಕರು ಇಲ್ಲಿ ಪ್ರೇಮ ಮತ್ತು ಶಿಕ್ಷಣ ಎಂಬ ಎರಡು ಅಂಶಗಳನ್ನು ಇಟ್ಟಿದ್ದಾರೆ. ಕುತೂಹಲಕರವಾಗಿ ಕತೆ ಮುಂದಕ್ಕೆ ಹೋಗುವಂತೆ ಚಿತ್ರಕತೆ ಹೆಣೆದಿದ್ದಾರೆ. ಮಲ್ಲು, ಸುಲಕ್ಷಾ ಸೊಗಸಾಗಿ ನಟಿಸಿದ್ದಾರೆ. ಉತ್ತರ ಕರ್ನಾಟಕದ ಭಾಷೆ ಚಿತ್ರಕ್ಕೆ ಮತ್ತಷ್ಟು ಮೆರುಗು ತಂದು ಕೊಟ್ಟಿದೆ.

ವಿದ್ಯಾ ಗಣೇಶ
ನಿರ್ದೇಶನ:
ಉಮೇಶ್ ಚಂದ್ರ
ತಾರಾಗಣ: ಮಲ್ಲು ಜಮಖಂಡಿ, ಸುಲಕ್ಷಾ ಕೈರಾ, ರಮೇಶ್ ಭಟ್, ಸುಚೇಂದ್ರ ಪ್ರಸಾದ್, ಕಾಕ್ರೋಚ್ ಸುಧಿ

ಟ್ರೇಲರ್‌ ಬಿಡುಗಡೆ: ಉತ್ತರ ಕರ್ನಾಟಕದ ಮಲ್ಲು ಜಮಖಂಡಿ ನಾಯಕನಾಗಿ ಅಭಿನಯಿಸಿರುವ ‘ವಿದ್ಯಾ ಗಣೇಶ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಲವ್, ಫ್ಯಾಮಿಲಿ ಡ್ರಾಮಾ, ಆ್ಯಕ್ಷನ್ ಒಳಗೊಂಡ ಈ ಚಿತ್ರ ಫೆ.21ರಂದು ತೆರೆಗೆ ಬರಲಿದೆ. ಉತ್ತರ ಕರ್ನಾಟಕದ ಭಾಷಾ ಹಾಗೂ ಸಂಸ್ಕೃತಿಯ ಚಿತ್ರಣ ಈ ಸಿನಿಮಾದಲ್ಲಿ ಇದೆ. ನಿರ್ದೇಶಕ ಉಮೇಶ್‌ ಚಂದ್ರ, ‘ಹಳ್ಳಿ ಹುಡುಗನ ಕಥೆ ಇರುವ ಸಿನಿಮಾ. ಲವ್ ಸ್ಟೋರಿಯಲ್ಲಿ ರಾಜಕೀಯ ಎಂಟ್ರಿ ಆಗಿ ಏನೆಲ್ಲಾ ಆಗುತ್ತೆ ಎಂಬುದು ಸಿನಿಮಾ. ಉತ್ತರ ಕರ್ನಾಟಕದ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ರಿಲೀಸ್ ಮಾಡಲಿದ್ದೇವೆ’ ಎಂದರು. ಮಲ್ಲು ಜಮಖಂಡಿ ಹಾಗೂ ಸುಲಕ್ಷಾ ಕೈರಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಚೇತನ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಾಕ್ರೋಚ್‌ ಸುಧಿ ಖಳನಾಯಕನಾಗಿ ನಟಿಸಿದ್ದಾರೆ.