Areca Farmers Problem : ಕರಾವಳಿ ಅಡಕೆ ಕೃಷಿಕರಿಗೆ ಪೊಟ್ಯಾಶ್‌ ಗೊಬ್ಬರ ನಾಟ್‌ ರೀಚೆಬಲ್‌!

  • ಕರಾವಳಿ ಅಡಕೆ ಕೃಷಿಕರಿಗೆ ಪೊಟ್ಯಾಶ್‌ ಗೊಬ್ಬರ ನಾಟ್‌ ರೀಚೆಬಲ್‌!
  • 2 ತಿಂಗಳಿಂದ ಪೊಟ್ಯಾಶ್‌ ಗೊಬ್ಬರಕ್ಕೆ ಬೆಳೆಗಾರರ ಪರದಾಟ, ಪೊಟ್ಯಾಶ್‌ ಬೇಕಾದರೆ ಲಿಂಕ್‌ ಗೊಬ್ಬರ ಖರೀದಿ ಕಡ್ಡಾಯ
Areca farmers Faces Scarcity Of potash in Coastal snr

 ಮಂಗಳೂರು (ಜ.04) :  ಕರಾವಳಿಯಲ್ಲಿ (Costal) ಅಡಕೆ (Areca) ಕೃಷಿಗೆ ಉಪಯುಕ್ತವಾದ ಪೊಟ್ಯಾಶ್‌ ರಾಸಾಯನಿಕ ಗೊಬ್ಬರ ಪೂರೈಕೆಯಲ್ಲಿ ಭಾರಿ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಳೆಗಾರರು ರಸಗೊಬ್ಬರಕ್ಕಾಗಿ ಪರದಾಟ ನಡೆಸುವಂತಾಗಿದೆ.  ಕೃಷಿ ಇಲಾಖೆಯ (Agriculture Department) ಅಂಕಿ ಅಂಶಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಪೊಟ್ಯಾಶ್‌ ಸಹಿತ ರಸಗೊಬ್ಬರ ದಾಸ್ತಾನು ತೋರಿಸಲಾಗುತ್ತಿದೆ. ವಾಸ್ತವದಲ್ಲಿ ಸಹಕಾರಿ ಸೊಸೈಟಿ, ಚಿಲ್ಲರೆ ಮಾರಾಟಗಾರರಿಗೆ ಪೊಟ್ಯಾಶ್‌ ಸೂಕ್ತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ ಎಂದು ದೂರು ವ್ಯಕ್ತವಾಗಿದೆ. ಕಳೆದ ಎರಡು ತಿಂಗಳಿಂದ ಪೊಟ್ಯಾಶ್‌ ನಾಟ್‌ ರೀಚಬಲ್‌ ಆಗಿದೆ ಎಂದು ಬೆಳೆಗಾರರು ಆರೋಪಿಸುತ್ತಿದ್ದಾರೆ.

ಕರಾವಳಿಯಲ್ಲಿ ಪ್ರಮುಖ ವಾಣಿಜ್ಯ ಬೆಳೆ ಅಡಕೆ (Areca). ಅಡಕೆ ತೋಟಗಳಿಗೆ ಅಕ್ಟೋಬರ್‌ ಬಳಿಕ ನೀರುಣಿಸುವ ಜೊತೆಗೆ ರಸಗೊಬ್ಬದ ಪೋಷಕಾಂಶ ನೀಡುತ್ತಾರೆ. ರಸಗೊಬ್ಬರ ನಿಗದಿತ ಸಮಯದಲ್ಲಿ ನೀಡದಿದ್ದರೆ ಬಿರು ಬೇಸಗೆಯಲ್ಲಿ ರಸಗೊಬ್ಬರ ನೀಡಲು ಸಾಧ್ಯವಾಗದು. ಆಗ ನೀರಿನ ಕೊರತೆ ತಲೆದೋರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಡಕೆ ಬೆಳೆಗಾರರಿಗೆ ತೋಟಕ್ಕೆ ರಸಗೊಬ್ಬರ ಪೂರೈಸಲು ಇದುವೇ ಉಪಯುಕ್ತ ಸಮಯ. ಉತ್ತಮ ಫಸಲಿಗೆ ಅಡಕೆ ಬೆಳೆಗಾರರು ನೆಚ್ಚಿಕೊಂಡಿರುವುದು ಪೊಟ್ಯಾಶ್‌, ಕಾಂಪ್ಲೆಕ್ಸ್‌ ಗೊಬ್ಬರಗಳನ್ನು. ಇದುವರೆಗೆ ಸಕಾಲದಲ್ಲಿ ಈ ಗೊಬ್ಬರಗಳನ್ನು ತೋಟಗಳಿಗೆ ಉಣಿಸುತ್ತಿದ್ದರು. ಈ ಬಾರಿ ಮಾತ್ರ ಗೊಬ್ಬರದ ಕೊರತೆ ಬೆಳೆಗಾರರನ್ನು ಇನ್ನಿಲ್ಲದಂತೆ ಬಾಧಿಸಿದೆ.

ಇಲಾಖೆ ಹೇಳೋದೇನು?:  ದ.ಕ. ಕೃಷಿ ಇಲಾಖೆ ಅಧಿಕಾರಿಗಳ (officers) ಪ್ರಕಾರ ಕರಾವಳಿಯಲ್ಲಿ ತೋಟಗಳ ಫಸಲಿಗೆ ಬೇಕಾದ ರಸಗೊಬ್ಬರಗಳ ಕೊರತೆ ಇಲ್ಲ, ಸಾಕಷ್ಟು ದಾಸ್ತಾನು ಇದೆ ಎನ್ನುತ್ತಾರೆ. 2021 ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯದ ವರೆಗಿನ ಅಂಕಿ ಅಂಶದಂತೆ ಯೂರಿಯಾ, ಡಿಎಪಿ (DAP), ಎನ್‌ಪಿಕೆ, ಎಂಒಪಿ ಸೇರಿ ಒಟ್ಟು 31,165 ಮೆಟ್ರಿಕ್‌ ಟನ್‌ ಬೇಡಿಕೆಯಲ್ಲಿ ಅದನ್ನು ಮೀರಿ 36,317.13 ಮೆಟ್ರಿಕ್‌ ಟನ್‌ ರಸಗೊಬ್ಬರ ಪೂರೈಸಲಾಗಿದೆ. ಅದರಲ್ಲೂ ಅಡಕೆ ತೋಟಗಳಿಗೆ (areca) ಅವಶ್ಯವಾದ ಪೊಟ್ಯಾಶ್‌ನ್ನು 3,200 ಮೆ.ಟನ್‌ ಬೇಡಿಕೆಯನ್ನು ಮೀರಿ 3,893.68 ಮೆ.ಟನ್‌ ಪೂರೈಸಲಾಗಿದೆ. ಪ್ರಸಕ್ತ 4,220 ಮೆ.ಟನ್‌. ಪೊಟ್ಯಾಶ್‌ ದಾಸ್ತಾನು ಇದೆ ಎಂದು ಹೇಳುತ್ತಾರೆ. ರಸಗೊಬ್ಬರಗಳ ಗುರಿಮೀರಿದ ಪೂರೈಕೆಗೆ ಕಾರಣ, ಕಳೆದ ಎರಡು ವರ್ಷಗಳ ಲಾಕ್‌ಡೌನ್‌ ಅವಧಿಯಲ್ಲಿ ಅಡಕೆ ತೋಟಗಳ ಸಂಖ್ಯೆ ಜಾಸ್ತಿಯಾಗಿರುವುದು. ಹೀಗಾಗಿ ರಸಗೊಬ್ಬರಗಳ ಬೇಡಿಕೆ ಏಕಾಏಕಿ ಏರಿಕೆಯಾಗಿದೆ. ಹಾಗಿದ್ದೂ ಬೇಡಿಕೆ ಮೀರಿ ಗೊಬ್ಬರ ಪೂರೈಸಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.

ಬೆಳೆಗಾರರ ನಿರಾಕರಣೆ:

ಕೃಷಿ ಇಲಾಖೆಯ ಅಂಕಿಅಂಶವನ್ನು ಬೆಳೆಗಾರರು ಒಪ್ಪುತ್ತಿಲ್ಲ. ಕೇವಲ ಅಂಕಿಅಂಶಗಳಲ್ಲಿ ಮಾತ್ರ ರಸಗೊಬ್ಬರ ದಾಸ್ತಾನು ತೋರಿಸುತ್ತಿದ್ದಾರೆ. ವಾಸ್ತವದಲ್ಲಿ ಪೊಟ್ಯಾಶ್‌ ರಸಗೊಬ್ಬರವೇ ಸಿಗುತ್ತಿಲ್ಲ. ಕಾಂಪ್ಲೆಕ್ಸ್‌ ಗೊಬ್ಬರಗಳು, ಇಪ್ಕೋದ 10:26:26 ರಸಗೊಬ್ಬರಗಳು ಸರಿಯಾಗಿ ಬೆಳೆಗಾರರಿಗೆ ಸಿಗುತ್ತಿಲ್ಲ. ದಾಸ್ತಾನು ಇರುವುದು ನಿಜವೇ ಆಗಿದ್ದರೆ, ಈ ಗೊಬ್ಬರಗಳು ಎಲ್ಲಿಗೆ ಹೋಯಿತು ಎಂದು ಬೆಳೆಗಾರರು ಪ್ರಶ್ನಿಸುತ್ತಾರೆ.

ಜಿಲ್ಲೆಯಲ್ಲಿ 162 ರಸಗೊಬ್ಬರ ಡೀಲರ್‌ಗಳಿದ್ದಾರೆ. ಅವರಿಗೆಲ್ಲ ರಸಗೊಬ್ಬರ ಪೂರೈಕೆ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಈ ಬಗ್ಗೆ ಬಂಟ್ವಾಳದ ರಸಗೊಬ್ಬರ ಡೀಲರ್‌ವೊಬ್ಬರನ್ನು ಸಂಪರ್ಕಿಸಿದಾಗ, ಈ ಬಾರಿ ಬೆಳೆಗಾರರಿಂದ ಜಾಸ್ತಿ ಬೇಡಿಕೆ ಬಂದಿದೆ. ಆದರೆ ಪೊಟ್ಯಾಶ್‌ ಪೂರೈಕೆಯಲ್ಲಿ ತುಸು ವ್ಯತ್ಯಯ ಆಗಿದೆ. ಎಲ್ಲಿಯೂ ದಾಸ್ತಾನು ಇಲ್ಲ ಎನ್ನುತ್ತಾರೆ. ಹಾಗಾದರೆ ಕೃಷಿ ಇಲಾಖೆಯ ಅಂಕಿಅಂಶದಲ್ಲಿ ನೀಡಿದ 4,200 ಮೆ.ಟನ್‌.ಗಳಷ್ಟುಪೊಟ್ಯಾಶ್‌ ದಾಸ್ತಾನು ಎಲ್ಲಿಗೆ ಹೋಯಿತು ಎಂಬುದೇ ಬೆಳೆಗಾರರನ್ನು ಕಾಡುತ್ತಿರುವ ನಿಗೂಢ ಪ್ರಶ್ನೆಯಾಗಿದೆ.

ಲಿಂಕ್‌ ಗೊಬ್ಬರ ಖರೀದಿ ಕಡ್ಡಾಯದಿಂದ ತೊಂದರೆ

ಅಡಕೆಗೆ ಬೇಕಾದ ಪೊಟ್ಯಾಶ್‌ ಗೊಬ್ಬರವನ್ನು ಖರೀದಿಸಬೇಕಾದರೆ ಇತರೆ ಲಿಂಕ್‌ ಗೊಬ್ಬರಗಳನ್ನು ಕಡ್ಡಾಯ ಖರೀದಿಸಲೇ ಬೇಕು. ಲಿಂಕ್‌ ಗೊಬ್ಬರ ಇಲ್ಲಿನ ಕೃಷಿಕರಿಗೆ (farmers) ಅವಶ್ಯವೇ ಎಂಬುದನ್ನು ರಸಗೊಬ್ಬರ ಕಂಪನಿಗಳು ಯೋಚಿಸುವುದಿಲ್ಲ. ಒಟ್ಟಾರೆ ಅವರ ರಸಗೊಬ್ಬರ ಖಾಲಿಯಾಗಬೇಕು ಅಷ್ಟೆಎನ್ನುತ್ತಾರೆ ಪ್ರಗತಿಪರ ಕೃಷಿಕರು.

ಪುಣಚದ ಅಡ್ಯನಡ್ಕ ಸಹಕಾರಿ ಸಂಘಕ್ಕೆ ಸ್ವಲ್ಪ ಪ್ರಮಾಣದಲ್ಲಿ ಪೊಟ್ಯಾಶ್‌ ಪೂರೈಕೆಯಾಗಿದೆ. ಅದನ್ನು ಖರೀದಿಸಬೇಕಾದರೆ ಬೆಳೆಗಾರರು 2 ಚೀಲಕ್ಕೆ ಒಂದು ಚೀಲ ಲಿಂಕ್‌ ಗೊಬ್ಬರ 16:16:16 ನ್ನು ಕಡ್ಡಾಯವಾಗಿ ಖರೀದಿಸಬೇಕು. ಇಲ್ಲದಿದ್ದರೆ ಪೊಟ್ಯಾಶ್‌ ನೀಡುವುದಿಲ್ಲ ಎಂದು ಕಂಪನಿ ತಿಳಿಸಿದೆ. ಲಿಂಕ್‌ ಗೊಬ್ಬರ ಇಲ್ಲಿ ಕೃಷಿಗೆ ಬಳಕೆ ಮಾಡುತ್ತಿಲ್ಲ. ಅಲ್ಲದೆ ಅದು ಬೇಗನೆ ಮೃದುವಾಗುತ್ತದೆ. ಅಂತಹ ಗೊಬ್ಬರವನ್ನು ಕಡ್ಡಾಯವಾಗಿ ಖರೀದಿಸಬೇಕು ಎಂದು ಕಂಪನಿಗಳು ಅಪ್ಪಣೆ ಕೊಡಿಸಿದರೆ ಏನು ಮಾಡುವುದು ಎಂದು ಪ್ರಶ್ನಿಸುತ್ತಾರೆ ಸೊಸೈಟಿಯ ರಸಗೊಬ್ಬರ ಗ್ರಾಹಕರು.

ಅಡಕೆ ಕೃಷಿಕರಿಗೆ ಪೊಟ್ಯಾಶ್‌ ಗೊಬ್ಬರವನ್ನು ನೇರವಾಗಿ ನೀಡಬೇಕು. ಯಾವುದೇ ಲಿಂಕ್‌ ಗೊಬ್ಬರ ಖರೀದಿಸಿದರೆ ಮಾತ್ರ ಪೊಟ್ಯಾಶ್‌ ನೀಡುವುದಾಗಿ ಷರತ್ತು ವಿಧಿಸಬಾರದು. ತೋಟಕ್ಕೆ ನೀರುಣಿಸುವ ಈ ಸಮಯದಲ್ಲಿ ಗೊಬ್ಬರ ಕೊಡಲು ಕೂಡಲೇ ಪೊಟ್ಯಾಶ್‌ನ್ನು ಪೂರೈಸಲು ಇಲಾಖೆ ಹಾಗೂ ಕಂಪನಿಗಳು ಕ್ರಮ ಕೈಗೊಳ್ಳಬೇಕು. ಪೊಟ್ಯಾಶ್‌ ದಾಸ್ತಾನು ಇದೆ ಎನ್ನುವ ಅಧಿಕಾರಿಗಳು, ಅದರ ಚೆಕ್‌ಲಿಸ್ಟ್‌ ಬಹಿರಂಗಪಡಿಸಲಿ.

-ದೇವಿ ಪ್ರಸಾದ್‌, ಪುಣಚ, ಮಾಜಿ ಅಧ್ಯಕ್ಷ ಸೇವಾ ಸಹಕಾರಿ ಬ್ಯಾಂಕ್‌, ಪುಣಚ.

Latest Videos
Follow Us:
Download App:
  • android
  • ios