ತೀರ್ಥಹಳ್ಳಿ ಸಮೀಪದ ನಂದಿಹೊಳೆಯಲ್ಲಿ ಹುಲಿಯೊಂದಿಗೆ ಹೋರಾಡಿ ಮೃತಪಟ್ಟ ವೀರ ಹಾಗೂ ಆತನ ಪತ್ನಿಯ ಸಹಗಮನವನ್ನು ಚಿತ್ರಿಸುವ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ವಿಜಯನಗರೋತ್ತರ ಕಾಲಘಟ್ಟಕ್ಕೆ ಸೇರಿದ ಈ ಶಿಲ್ಪವನ್ನು ಇತಿಹಾಸ ಸಂಶೋಧಕರು ಪತ್ತೆಹಚ್ಚಿದ್ದು, ಇದರ ನಿಖರ ಇತಿಹಾಸದ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ.

ತೀರ್ಥಹಳ್ಳಿ: ರಿಪ್ಪನ್‌ಪೇಟೆ ಸಮೀಪದ ಹರಿದ್ರಾವತಿ ಗ್ರಾ.ಪಂ. ವ್ಯಾಪ್ತಿಯ ನಂದಿಹೊಳೆಯಲ್ಲಿ ಹುಲಿಯೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ ವ್ಯಕ್ತಿ ಹಾಗೂ ಗಂಡನ ಮರಣದ ನಂತರ ಅತನ ಪತ್ನಿಯ ಸಹಗಮನವನ್ನು ಚಿತ್ರಿಸಿರುವ ಅಪರೂಪದ ವೀರಗಲ್ಲು ಶಿಲ್ಪ ಪತ್ತೆಯಾಗಿದೆ. ಇತಿಹಾಸ ಸಂಶೋಧಕ ಆದಿತ್ಯ ನಂಜುವಳ್ಳಿ ಮತ್ತು ವಡಗೆರೆ ಸುದರ್ಶನ್ ಸಿಂಗ್ ಈ ಶಿಲ್ಪವನ್ನು ಪತ್ತೆ ಹಚ್ಚಿದ್ದಾರೆ.

ಸುಮಾರು ಎರಡು ಅಡಿ ಎತ್ತರ ಹಾಗೂ ಮೂರು ಅಡಿ ಅಗಲದ ಈ ಶಿಲ್ಪದಲ್ಲಿ ವೀರ, ಅತನ ಪತ್ನಿ ಹಾಗೂ ಜೊತೆಗಾರನ ಚಿತ್ರಣವಿದೆ. ಸೂರ್ಯ ಚಂದ್ರ, ಶಿವಲಿಂಗ, ಹಸು- ಕರು ಮತ್ತು ಬೇಟೆ ನಾಯಿಯ ಚಿತ್ರಗಳನ್ನು ಕೆತ್ತಲಾಗಿದೆ. ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಡಾ. ಶೇಜೇಶ್ವರ ಅವರ ಹೇಳುವ ಪ್ರಕಾರ ಈ ಶಿಲ್ಪ ವಿಜಯನಗರೋತ್ತರ ಕಾಲಘಟ್ಟಕ್ಕೆ ಸೇರಿದೆ.

ಹೆಚ್ಚಿನ ಅದ್ಯಯನದ ಅಗತ್ಯವಿದೆ

ಈ ವೀರಗಲ್ಲು ಯಾರೋ ನದಿಗೆ ತಂದು ಹಾಕಿರುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಶಿಲ್ಪದ ಸ್ಥಳ, ನಿಖರ ಕಾಲಮಾನ ಮತ್ತು ಅದರ ಹಿಂದಿನ ಐತಿಹಾಸಿಕ ಘಟನೆಯ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಸಂಶೋಧಕ ಅದಿತ್ಯ ನಂಜುವಳ್ಳಿ ಮಾಧ್ಯಮಕ್ಕೆ ತಿಳಿಸಿದರು.