ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಗುರ್ಲಾಪುರದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ 'ಜೈಲ್ ಚಲೋ' ಪಾದಯಾತ್ರೆ ನಡೆಸಿದ್ದಾರೆ. ಸರ್ಕಾರ ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಜೈಲಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ತಡೆದಿದ್ದಾರೆ.

ಜೈಲ್‌ ಚಲೋ ಹಾದಿ

  • 9 ದಿನಗಳಿಂದ ಗುರ್ಲಾಪುರ ಟೋಲ್‌ ಬಳಿ ನಡೆಯುತ್ತಿರುವ ರೈತರ ಪ್ರತಿಭಟನೆ
  • ಬೆಂಬಲ ನಿಗದಿಪಡಿಸುವಂತೆ ಸರ್ಕಾರಕ್ಕೆ ಕಾಲಾವಧಿ ನಿಗದಿ ಮಾಡಿದ್ದ ರೈತರು
  • ಸಮಯಾವಕಾಶ ಮುಕ್ತಾಯಗೊಂಡ ಬೆನ್ನಲ್ಲೇ ಬೆಳಗಾವಿ ಜೈಲಿಗೇ ಮುತ್ತಿಗೆ ಯತ್ನ
  • ಗುರ್ಲಾಪುರದಿಂದ ಬೆಳಗಾವಿಯ ಹಿಂಡಲಗಾಗೆ 80 ಕಿ.ಮೀ. ಪಾದಯಾತ್ರೆ, ರ್‍ಯಾಲಿ
  • ಕಾರವಾರ, ಧಾರವಾಡ ಸೇರಿದಂತೆ ವಿವಿಧ ಭಾಗಗಳಲ್ಲಿಯೂ ರೈತರಿಂದ ಚಲೋ
  • ರೈತರನ್ನು ತಡೆಯಲು ಹಿಂಡಲಗಾ ಜೈಲಿಗೆ ಬ್ಯಾರಿಕೇಡ್‌ ಹಾಕಿ ಪೊಲೀಸರ ಭದ್ರತೆ

--ಬೆಳಗಾವಿ (ನ.3): ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ ಸೋಮವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಗುರ್ಲಾಪುರದಿಂದ ಹಿಂಡಲಗಾ ಜೈಲಿಗೆ ರೈತರು ಪಾದಯಾತ್ರೆ, ಬೈಕ್‌ ಹಾಗೂ ಟ್ರ್ಯಾಕ್ಟರ್‌ಗಳ ಜೈಲ್‌ ಚಲೋಗೆ ಚಾಲನೆ ನೀಡಿದ್ದಾರೆ.

ಬೆಳಗಾವಿ ರೈತರಿಂದ ಹಿಂಡಲಗಾ ಜೈಲಿಗೆ ಮುತ್ತಿಗೆ

ಮತ್ತೊಂದೆಡೆ ‘ಜೈಲ್ ಚಲೋ’ ಹೋರಾಟದ ಭಾಗವಾಗಿ ನೂರಾರು ಸ್ಥಳೀಯ ರೈತರು ಹಿಂಡಲಗಾ ಜೈಲಿಗೆ ಮುತ್ತಿಗೆ ಹಾಕಿದರು. ಈ ವೇಳೆ ಬ್ಯಾರಿಕೇಡ್‌ಗಳನ್ನು ತಳ್ಳಿ ಜೈಲಿನೊಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ 9ನೇ ದಿನ ಪೂರೈಸಿದ್ದು, ರೈತ ಸಂಘಟನೆಗಳು ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ. ಗುರ್ಲಾಪುರದಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಹಿಂಡಲಗಾ ಜೈಲಿಗೆ ರೈತರು ಪಾದಯಾತ್ರೆ, ಬೈಕ್‌ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಆಗಮಿಸುತ್ತಿದ್ದಾರೆ. ಗುರ್ಲಾಪುರದಿಂದ ಪ್ರಮುಖ ರೈತ ಮುಖಂಡರ ನೇತೃತ್ವದಲ್ಲಿ ಜೈಲ್ ಚಲೋ ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಬೆಳಗಾವಿ ಸುತ್ತಮುತ್ತಲಿನ ಕೆಲವು ರೈತರು ನೇರವಾಗಿ ಹಿಂಡಲಗಾ ಜೈಲು ತಲುಪಿದರು.

ರೈತ ಮುಖಂಡ ಕಿಶನ್ ನಂದಿ ನೇತೃತ್ವದಲ್ಲಿ ನೂರಾರು ರೈತರು ಜೈಲು ಪ್ರವೇಶ ದ್ವಾರದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಜೈಲಿನ ಪ್ರವೇಶ ದ್ವಾರದ ಎದುರು ರಸ್ತೆ ಮೇಲೆ ಕುಳಿತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾರಿಕೇಡ್‌ಗಳನ್ನು ತಳ್ಳಿ ಜೈಲಿನೊಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಬೇಕೇ ಬೇಕು ನ್ಯಾಯ ಬೇಕು, ಅಯ್ಯಯ್ಯೋ ಅನ್ಯಾಯ ಎಂಬ ಘೋಷಣೆಗಳು ಮೊಳಗಿದವು.

ಜೈಲು ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪ್ರತಿಭಟನಾಕಾರರ ಚಲನವಲನದ ಮೇಲೆ ನಿಗಾ ಇರಿಸಿದರು.

ಗುರ್ಲಾಪುರದಲ್ಲಿ ರೈತ ಹೋರಾಟದ ಕಿಚ್ಚು

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ, ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಗುರ್ಲಾಪುರದಲ್ಲಿ ಹೋರಾಟ ನಡೆಯುತ್ತಿದೆ. ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ನೀಡಿದ್ದ ಗಡುವು ಮುಗಿದರೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಜೈಲ್ ಭರೋ ಚಳವಳಿಗೆ ಕರೆ ನೀಡಲಾಗಿದೆ.

ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ರಾಜ್ಯದ 31 ಜಿಲ್ಲೆಗಳ ರೈತರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಕಾರವಾರ, ಧಾರವಾಡ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ವಾಹನಗಳಲ್ಲಿ ರೈತರು ಆಗಮಿಸುತ್ತಿದ್ದಾರೆ. ಜೈಲಿಗೆ ಹೋಗಲು ರೈತರು ಸಿದ್ಧರಾಗಿದ್ದಾರೆ. ನಮ್ಮ ಮೇಲೆ ಯಾವುದೇ ಪ್ರಕರಣ ದಾಖಲಿಸಿದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಚುನಪ್ಪ ಪೂಜೇರಿ ಎಚ್ಚರಿಸಿದರು.

ಕಬ್ಬಿನ ದರ ಘೋಷಿಸಿ ಇಲ್ಲವೇ ರಾಜೀನಾಮೆ ನೀಡಿ

ಇಷ್ಟೆಲ್ಲ ಹೋರಾಟ ನಡೆಯುತ್ತಿದ್ದರೂ ಸರ್ಕಾರವಾಗಲಿ, ಜಿಲ್ಲಾಧಿಕಾರಿಯಾಗಲಿ ರೈತರನ್ನು ಸಂಪರ್ಕಿಸಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ಕಬ್ಬಿನ ದರ ಘೋಷಿಸಬೇಕು. ರೈತರ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಈ ವರ್ಷ ಸಕ್ಕರೆ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕೆ.ಜಿಗೆ ₹54ಕ್ಕೆ ತಲುಪಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಕೇಂದ್ರ ಸರ್ಕಾರಕ್ಕೂ ಮಾಹಿತಿ ಇದೆ. ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಕನಿಷ್ಠ ₹4,500 ಪ್ರತಿ ಟನ್‌ಗೆ ಬಿಲ್ ನೀಡಲು ಒಪ್ಪಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ವಹಿಸಬೇಕು ಎಂದು ಪೂಜೇರಿ ಒತ್ತಾಯಿಸಿದರು.

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿಪಡಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ. ಗುರ್ಲಾಪುರದಿಂದ ಆರಂಭವಾದ ಹೋರಾಟ ಇದೀಗ ಹಿಂಡಲಗಾ ಜೈಲಿನವರೆಗೆ ವ್ಯಾಪಿಸಿದ್ದು, ಸರ್ಕಾರದ ಮುಂದಿನ ನಡೆ ಕುತೂಹಲ ಮೂಡಿಸಿದೆ.