ಶಿವಮೊಗ್ಗದ ಅರನೆಳ್ಳಿ ಗ್ರಾಮದಲ್ಲಿ ಕ್ರಿ.ಶ. 1180ರ ಹೊಂಬುಜದ ವೀರಸಾಂತರಸನ ಕಾಲದ ಅಪ್ರಕಟಿತ ತುರುಗೋಳ್ ವೀರಗಲ್ಲು ಶಾಸನ ಪತ್ತೆಯಾಗಿದೆ. ದನಕರುಗಳನ್ನು ರಕ್ಷಿಸಿ, ಸ್ತ್ರೀಯರ ಮಾನ ಕಾಪಾಡಲು ಹೋರಾಡಿ ವೀರಮರಣ ಹೊಂದಿದ ಚೌಡಸೆಟ್ಟಿಯ ಸಾಹಸವನ್ನು ಇದು ವಿವರಿಸುತ್ತದೆ. ಈ ಶಾಸನವು ತುಳುವಲದೇವಿಯ ದಾನಪರಂಪರೆಯ ಸಂಬಂಧವನ್ನೂ ದಾಖಲಿಸಿದೆ.
ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಅರನೆಳ್ಳಿ ಗ್ರಾಮದ ಸಿದ್ದೇಶ್ವರ ದೇವಾಲಯದ ಬಳಿ ಅಪ್ರಕಟಿತ ತುರುಗೋಳ್ ವೀರಗಲ್ಲು ಶಾಸನವೊಂದು ಪತ್ತೆಯಾಗಿದೆ. ಹೊಂಬುಜದ ವೀರಸಾಂತರಸನ ಆಳ್ವಿಕೆಯ ಕಾಲಕ್ಕೆ ಸೇರಿದ ಈ ಶಾಸನವು ಕ್ರಿ.ಶ. 1180ರಲ್ಲಿ ನಡೆದ ಘಟನೆಯನ್ನು ದಾಖಲಿಸಿದೆ.
ವೀರನು ಪಲ್ಲಕ್ಕಿಯಲ್ಲಿ ಸ್ವರ್ಗಲೋಕಕ್ಕೆ ತೆರಳುತ್ತಿರುವ ಚಿತ್ರ
4.4 ಅಡಿ ಎತ್ತರ ಮತ್ತು 2.3 ಅಡಿ ಅಗಲದ ವೀರಗಲ್ಲು ಮೂರು ಪಟ್ಟಿಕೆಗಳನ್ನು ಹೊಂದಿದೆ. ಕೆಳಗಿನ ಪಟ್ಟಿಕೆಯಲ್ಲಿ ದನಕರುಗಳು ಹಾಗೂ ಯುದ್ಧದ ದೃಶ್ಯ, ಮಧ್ಯದ ಪಟ್ಟಿಕೆಯಲ್ಲಿ ವೀರನು ಪಲ್ಲಕ್ಕಿಯಲ್ಲಿ ಸ್ವರ್ಗಲೋಕಕ್ಕೆ ತೆರಳುತ್ತಿರುವ ಚಿತ್ರ ಹಾಗೂ ಮೇಲಿನ ಪಟ್ಟಿಕೆಯಲ್ಲಿ ಶಿವಲಿಂಗ, ಸೂರ್ಯ, ಚಂದ್ರ ಮತ್ತಿತರ ಚಿತ್ರಗಳನ್ನು ಕೆತ್ತಲಾಗಿದೆ. ಮಧ್ಯ ಮತ್ತು ಮೇಲಿನ ಪಟ್ಟಿಕೆಗಳಲ್ಲಿ ಒಟ್ಟು ಎಂಟು ಸಾಲುಗಳ ಶಾಸನವಿದೆ.
ಆಶ್ವೀಜ ಶುದ್ಧ ಭಾನುವಾರದಂದು ನಡೆದ ಘಟನೆ
ಶಾಸನದ ಪ್ರಕಾರ ಶಕವರ್ಷ 1102ನೇ ಶಾರ್ವರಿ ಸಂವತ್ಸರದ ಆಶ್ವೀಜ ಶುದ್ಧ ಭಾನುವಾರದಂದು ಘಟನೆ ನಡೆದಿದೆ. ಅರನೆಳ್ಳಿ ಗ್ರಾಮದ ಮಾಳಿ ಸೆಟ್ಟಿಯ ಅಳಿಯ ಚೌಡಸೆಟ್ಟಿಯು ಗ್ರಾಮಕ್ಕೆ ವಿರೋಧಿಗಳು ದಾಳಿ ಮಾಡಿ, ಸ್ತ್ರೀಯರ ಮಾನಭಂಗಕ್ಕೆ ಮುಂದಾಗಿ, ದನಕರುಗಳನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಹೋರಾಡಿದ್ದಾನೆ. ದನಕರುಗಳನ್ನು ಮರಳಿ ಪಡೆದು ಸ್ತ್ರೀಯರ ಮಾನವನ್ನು ರಕ್ಷಿಸಿದ ಬಳಿಕ ಚೌಡಸೆಟ್ಟಿ ವೀರಮರಣ ಹೊಂದಿ ಸುರಲೋಕ ಪ್ರಾಪ್ತನಾದ ಬಗ್ಗೆ ಶಾಸನ ತಿಳಿಸುತ್ತದೆ.
ದನಕರುಗಳ ರಕ್ಷಣೆ, ಸ್ತ್ರೀಯರ ಮಾನರಕ್ಷಣೆಗೆ ಹೋರಾಡಿ ವೀರಮರಣ
ದನಕರುಗಳ ರಕ್ಷಣೆಯ ಜತೆಗೆ ಸ್ತ್ರೀಯರ ಮಾನರಕ್ಷಣೆಗೆ ಹೋರಾಡಿದ ಘಟನೆಯನ್ನು ದಾಖಲಿಸಿರುವುದರಿಂದ ಈ ಶಾಸನವನ್ನು ತುರುಗೋಳ್ ಮತ್ತು ಪೆಣ್ಬುಯ್ಯಲ್ ವೀರಗಲ್ಲು ಎಂದು ಗುರುತಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಶಾಸನದಲ್ಲಿ ಅರನೆಳ್ಳಿ ಗ್ರಾಮವನ್ನು ‘ತುಳುವಲದೇವಿಯ ಕಂಣದಾನವೆನಿಸಿದ ನಾಡು’ ಎಂದು ವರ್ಣಿಸಲಾಗಿದೆ. ತುಳುವಲದೇವಿಯು ಹೊಂಬುಜದ ಅರಸ ವೀರಸಾಂತರಸನ ತಾಯಿಯಾಗಿದ್ದು, ದಾನಗುಣಕ್ಕೆ ಹೆಸರಾಗಿದ್ದವರೆಂಬುದು ಇತರ ಶಾಸನಗಳಿಂದ ತಿಳಿದುಬರುತ್ತದೆ. ಹೀಗಾಗಿ ಈ ಶಾಸನವು ಚೌಡಸೆಟ್ಟಿಯ ಪರಾಕ್ರಮ ಹಾಗೂ ತ್ಯಾಗವನ್ನು ದಾಖಲಿಸುವುದರ ಜತೆಗೆ, ಅರನೆಳ್ಳಿ ನಾಡಿನೊಂದಿಗೆ ತುಳುವಲದೇವಿಯ ದಾನಪರಂಪರೆಯ ಸಂಬಂಧವನ್ನೂ ದಾಖಲಿಸುತ್ತದೆ.
ಈ ಶಾಸನದ ಸಂಶೋಧನೆಯನ್ನು ರಮೇಶ್ ಹಿರೇಜಂಬೂರು ಮತ್ತು ಆದಿತ್ಯ ನಂಜವಳ್ಳಿಯವರು ನಡೆಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ವಿನಯ್ ಹಾಗೂ ಗ್ರಾಮಸ್ಥ ಗಣಪತಿ ಅವರು ಸಂಶೋಧನೆಗೆ ಸಹಕರಿಸಿದ್ದಾರೆ.


