'ಗಾಂಧಿ ಹತ್ಯೆಯ ಸತ್ಯ' ನಾಟಕ ಪ್ರದರ್ಶನದ ವೇಳೆ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ. ನಾಟಕದಲ್ಲಿ ಗಾಂಧೀಜಿ ಬಗ್ಗೆ ಆಕ್ಷೇಪಾರ್ಹ ಅಂಶಗಳಿವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಪ್ಪ ಬಂಧನಕ್ಕೆ ಆಗ್ರಹ.
ಬೆಂಗಳೂರು (ನ.3): ನಾಟಕ ನಿರ್ದೇಶಕ ಅಡ್ಡಂಡ ಕಾರ್ಯಪ್ಪ(Addanda cariappa) ಅವರಿಗೆ ಮಸಿ ಬಳಿದ ಪ್ರಕರಣದ ಸಂಬಂಧ ಬನಶಂಕರಿ ಪೊಲೀಸ್ ಠಾಣೆ(Banashankari police station)ಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.
ಅಡ್ಡಂಡ ಕಾರ್ಯಪ್ಪ ಮತ್ತು ಕುಶಾಲ್ ಹರುವೇಗೌಡ ಎಂಬುವರು ನೀಡಿದ ದೂರಿನನ್ವಯ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.
ಅಡ್ಡಂಡ ಕಾರ್ಯಪ್ಪ ಎಂಬುವರು ನೀಡಿದ ದೂರಿನನ್ವಯ 15 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಕುಶಾಲ್ ಹರುವೇಗೌಡ ಎಂಬುವರು ನೀಡಿದ ದೂರಿನ ಅನ್ವಯ ಅಡ್ಡಂಡ ಕಾರ್ಯಪ್ಪ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಧಿ ಹ ತ್ಯೆಯ ಸತ್ಯ ನಾಟಕ ವಿವಾದ
ಗಾಂಧಿ ಹ ತ್ಯೆಯ ಸತ್ಯ ಎಂಬ ನಾಟಕದಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ದೇಶ ವಿರೋಧಿ, ಮುಸ್ಲಿಂ ಗುಲಾಮರಂತೆ ಬಿಂಬಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅಪಚಾರ ಮಾಡುವ ಮೂಲಕ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಗಾಂಧೀಜಿ ಅವರು ದೇಶ ವಿಭಜಿಸಿದರು. ಪಾಕಿಸ್ತಾನಕ್ಕೆ 50 ಕೋಟಿ ರು. ಸಂದಾಯ ಮಾಡಿದ್ದಾರೆಂದು ನಾಟಕದಲ್ಲಿ ಬಿಂಬಿಸಲಾಗಿದೆ. ನಾಟಕ ಪ್ರದರ್ಶನದ ವೇಳೆ ಗಾಂಧಿ ವಿರುದ್ಧವೂ ಸಭೀಕರೂ ಧಿಕ್ಕಾರ ಕೂಗುತ್ತಿದ್ದರು. ಹೀಗಾಗಿ ನಾಟಕದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹಾಗೂ ನಾಟಕದಲ್ಲಿ ಅಭಿನಯಿಸಿದ ಕಲಾವಿದರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕುಶಾಲ್ ಹರುವೇಗೌಡ ಮನವಿ ಮಾಡಿದ್ದಾರೆ.
50 ಪುಸ್ತಕಗಳನ್ನು ಅಧ್ಯಯನ ಮಾಡಿ ಈ ನಾಟಕವನ್ನು ಸಿದ್ಧಪಡಿಸಿದ್ದೇನೆ
ಅ.31ರ ಸಂಜೆ 7ರ ಸುಮಾರಿಗೆ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಗಾಂಧಿ ಹತ್ಯೆಯ ಸತ್ಯ ಎಂಬ ನಾಟಕ ಪ್ರದರ್ಶನವಾಗುತ್ತಿದ್ದಾಗ ನನಗೆ ಮಸಿ ಬಳಿದು ಹಲ್ಲೆ ಮಾಡಲಾಗಿತ್ತು. ಸುಮಾರು 50 ಪುಸ್ತಕಗಳನ್ನು ಅಧ್ಯಯನ ಮಾಡಿ ಈ ನಾಟಕವನ್ನು ಸಿದ್ಧಪಡಿಸಿದ್ದೇನೆ. ನಾಟಕದಲ್ಲಿ ಚರಿತ್ರೆಯ ಸತ್ಯವನ್ನಷ್ಟೆ ನಾವು ನಾಟಕದಲ್ಲಿ ಅಳವಡಿಕೆ ಮಾಡಿದ್ದೇವೆ. ನಾಟಕ ಪ್ರದರ್ಶನ ವೇಳೆ ತನ್ನ ಮೇಲೆ ಹಾಗೂ ತಮ್ಮ ನಾಟಕದ ಕಲಾವಿದರ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದವರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಅಡ್ಡಂಡ ಕಾರ್ಯಪ್ಪ ಮನವಿ ಮಾಡಿದ್ದಾರೆ.
ಪೊಲೀಸ್ ಕಮೀಷನರ್ ಕಚೇರಿ ಬಳಿ ಹೈಡ್ರಾಮ:
ಗಾಂಧಿ ಹ ತ್ಯೆಯ ಸತ್ಯ ನಾಟಕದಲ್ಲಿ ಮಹಾತ್ಮ ಗಾಂಧೀಜಿ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆ ಬಳಸಿರುವ ನಿರ್ದೇಶಕರಾಗಿರುವ ಅಡ್ಡಂಡ ಕಾರ್ಯಪ್ಪ ಅವರನ್ನ ಬಂಧಿಸಬೇಕೆಂದು ನಗರ ಪೊಲೀಸ್ ಆಯುಕ್ತರನ್ನು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹಾಗೂ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದ ಕಾರ್ಯಕರ್ತರು ಒತ್ತಾಯಿಸಿದರು. ಸೋಮವಾರ ಕಾಂಗ್ರೆಸ್ ನಿಯೋಗವು ಏಕಾಏಕಿ ಫ್ಲೆಕ್ಸ್ಗಳನ್ನು ಹಿಡಿದು ಆಯುಕ್ತರ ಕಚೇರಿಗೆ ಬರುತ್ತಿದ್ದಂತೆ ಪೊಲೀಸರು ತಡೆದು ಅವರನ್ನು ಪ್ರಶ್ನಿಸಿದರು. ಈ ವೇಳೆ ಕೆಲಕಾಲ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಅಡ್ಡಂಡ ಕಾರ್ಯಪ್ಪ ಅವರನ್ನ ಬಂಧಿಸುವಂತೆ ಒತ್ತಾಯಿಸಿ ಧರಣಿ ಮಾಡಲು ಮುಂದಾಗುತ್ತಿದಂತೆ ಮುಂಜಾಗ್ರತ ಕ್ರಮವಾಗಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ನಂತರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ತೆರಳಿದರು. ಈ ವೇಳೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಮಾತನಾಡಿ, ಗಾಂಧಿ ಹ ತ್ಯೆಯ ಸತ್ಯ ಎಂಬ ನಾಟಕದಲ್ಲಿ ಗಾಂಧೀಜಿ ಅವರ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆಗಳನ್ನ ಬಳಸಲಾಗಿದೆ. ಈ ಸಂಬಂಧ ನಾಟಕ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ಬಂಧಿಸದೇ ಅವರಿಗೆ ರಕ್ಷಣೆ ನೀಡುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದರೆ, ನಮ್ಮನ್ನೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಬಂಧಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.






