ಹರಿಹರದ ಅಂದನೂರು ಆಂಜನೇಯ ಅವರು 30 ವರ್ಷಗಳಿಂದ 620ಕ್ಕೂ ಹೆಚ್ಚು ಅಪರೂಪದ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿದ್ದಾರೆ. ತೀವ್ರ ಬರಗಾಲದಿಂದಾಗಿ ಈ ತಳಿಗಳು ನಾಶವಾಗುವ ಭೀತಿಯಲ್ಲಿದ್ದಾಗ, ಜಮೀನ್ದಾರ ಸಹೋದರರಾದ ಪ್ರಶಾಂತ ಮತ್ತು ಪ್ರಕಾಶ ನೆರವಿಗೆ ಬಂದಿದ್ದಾರೆ.

ನಾಗರಾಜ ಎಸ್. ಬಡದಾಳ್

ದಾವಣಗೆರೆ (ನ.3): ರೈತರಿಗೆ ರೈತನೇ ಆಸರೆಯೆಂಬ ಮಾತಿನಂತೆ ದಾವಣಗೆರೆ ಜಿಲ್ಲೆಯಲ್ಲಿ ಸಹೋದರರಿಬ್ಬರು ಅತ್ಯಪರೂಪದ ಭತ್ತದ ತಳಿಗಳ ಸಂರಕ್ಷಣೆಗೆ ಬೀಜ ಸಂರಕ್ಷಕರಿಗೆ ನೆರವಾಗಿ ಸಾರ್ಥಕತೆಯನ್ನು ಮೆರೆದಿದ್ದಾರೆ.

ಹರಿಹರದ ಭತ್ತದ ತಳಿ ಸಂರಕ್ಷಕ, ಸಂಶೋಧಕ ಅಂದನೂರು ಆಂಜನೇಯ

ದಾವಣಗೆರೆ ಜಿಲ್ಲೆಯ ಹರಿಹರ ಹೊರವಲಯದ ಶಿವಮೊಗ್ಗ ಬೈಪಾಸ್‌ ಬಳಿಯ ಹಲಸಬಾಳು ಗ್ರಾಮದ ಪಿ.ಎಚ್. ಪ್ರಶಾಂತ, ಪಿ.ಎಚ್. ಪ್ರಕಾಶ ಎಂಬ ಜಮೀನ್ದಾರ ಸಹೋದರರು, 560ಕ್ಕೂ ಹೆಚ್ಚು ಬಗೆಯ ಬೀಜ ಸಂರಕ್ಷಣೆಗೆ ಕುಂಬಳೂರು ಗ್ರಾಮದ ಅಂದನೂರು ಆಂಜನೇಯ ಎಂಬ ಸಂರಕ್ಷಕರಿಗೆ ತಮ್ಮ ಸ್ವಂತ ಜಮೀನಿನಲ್ಲಿನ ನೀರಾವರಿಯನ್ನು ಒದಗಿಸಿ, ಸ್ಪ್ರಿಂಕ್ಲರ್‌ ಅಳವಡಿಸಿ, ಸಹಾಯಕ್ಕೆ ಧಾವಿಸಿದ್ದಾರೆ.

30 ವರ್ಷಗಳಿಂದ ಭತ್ತದ ತಳಿಗಳ ಸಂರಕ್ಷಣೆ

ಅಂದನೂರು ಆಂಜನೇಯ ಅವರು ಸತತ 30 ವರ್ಷಗಳಿಂದ 620ಕ್ಕೂ ಹೆಚ್ಚು ಬಗೆಯ ದೇಶಿ, ಈಶಾನ್ಯ ರಾಜ್ಯಗಳು, ಔಷಧೀಯ, ಅತ್ಯಪರೂಪದ ಭತ್ತದ ತಳಿಗಳ ಸಂರಕ್ಷಣೆ, ಸಂಶೋಧನೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ತೀವ್ರ ಬರ ಆವರಿಸಿರುವ ಕಾರಣ ನಾಟಿ ಮಾಡಿದ ಭತ್ತಕ್ಕೆ ನೀರು ಸಿಗದೆ, ಭದ್ರ ಅಣೆಕಟ್ಟಿನಿಂದ ಸರಿಪ್ರಮಾಣದಲ್ಲಿ ನೀರು ಬಾರದೆ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಮನಗಂಡ ಜಮೀನ್ದಾರ ಸಹೋದರರು, ತಮ್ಮದೇ ಜಮೀನಿನಲ್ಲಿ 1 ಎಕರೆ ಭೂಮಿಯನ್ನು ಭತ್ತದ ಕೃಷಿಗೆ ಕೊಟ್ಟಿದ್ದಾರೆ. ಜೊತೆಗೆ ತಮ್ಮದೇ 3 ದೊಡ್ಡ ಕೆರೆಗಳು ಬತ್ತಿದ್ದರೂ ಸಹ ಭತ್ತಕ್ಕೆ ಸತತ 6 ತಿಂಗಳಿನಿಂದ ಸ್ಪ್ರಿಂಕ್ಲರ್‌ ವ್ಯವಸ್ಥೆ ಮಾಡಿ ನೀರಾವರಿ ಒದಗಿಸಿದ್ದಾರೆ.

ಅಂದನೂರು ಆಂಜನೇಯ ಅವರು ತಮ್ಮ ಬಳಿ ಇದ್ದ 620 ಬಗೆಯ ಭತ್ತದ ತಳಿಗಳನ್ನು ನಾಟಿ ಮಾಡಿದ್ದರು. ಆದರೆ ಬರದ ಹೊಡೆತಕ್ಕೆ ಕೇವಲ 550-560 ತಳಿಗಳು ಮಾತ್ರ ಬದುಕುಳಿದಿವೆ. ಇವುಗಳನ್ನು ರಕ್ಷಿಸಿಕೊಳ್ಳಲು ಜಮೀನ್ದಾರ ಸಹೋದರರು ಆಂಜನೇಯ ಅವರಿಗೆ ನೆರವಾಗಿದ್ದಾರೆ.

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬಂತೆ, ಇದೊಂದು ಬರಗಾಲ ತಪ್ಪಿಸಿಕೊಂಡು, ತಳಿಗಳನ್ನು ಉಳಿಸಿಕೊಳ್ಳಲು ಆಂಜನೇಯ ಅವರು ಟೊಂಕಕಟ್ಟಿ ನಿಂತಿದ್ದಾರೆ. ರಾಜ್ಯದ ವಿವಿಧೆಡೆ ಸುಮಾರು 7-8 ಜನ ಭತ್ತದ ತಳಿ ಸಂರಕ್ಷಕರಿದ್ದಾರೆ. ಇಡೀ ರಾಜ್ಯದಲ್ಲಿ ಬರವಿರುವ ಕಾರಣ ಅಂತಹ ಸಂರಕ್ಷಕರು ಅಸಹಾಯಕರಾಗಿದ್ದಾರೆ. ಆದರೆ ಆಂಜನೇಯ ಅವರಿಗೆ ಜಮೀನ್ದಾರ ಸಹೋದರು ಧಾವಿಸಿ 560 ತಳಿ ಉಳಿಯುವಲ್ಲಿ ಸಹಕಾರಿಯಾಗಿದ್ದಾರೆ.

ಮಕ್ಕಳಂತೆ ಕಾಪಾಡಿಕೊಂಡಿದ್ದೆ:

ತಳಿ ಸಂರಕ್ಷಣೆಯಾದರೆ ಸಾಕು, ಮುಂದೆ ನೋಡೋಣ. ಮಕ್ಕಳಂತೆ ಅವುಗಳನ್ನು ಆರೈಕೆ ಮಾಡಿದ್ದೇವೆ. ದೇವರ ಮೇಲೆ ಭಾರ ಹಾಕಿ ಹಲಸಬಾಳು ಪ್ರಕಾಶ, ಪ್ರಶಾಂತ ಸಹೋದರಿಗೆ ಕೇಳಿದ್ದರಿಂದ ಇಷ್ಟು ತಳಿಗಳು ಉಳಿದಿವೆ. ಆ ಸಹೋದರರ ಸಹಕಾರ ಇಲ್ಲದಿದ್ದರೆ ಯಾವ ತಳಿಯನ್ನೂ ನನ್ನಿಂದ ಉಳಿಸಿಕೊಳ್ಳಲಾಗುತ್ತಿರಲಿಲ್ಲ.

- ಅಂದನೂರು ಆಂಜನೇಯ, ಭತ್ತದ ತಳಿ ಸಂರಕ್ಷಕ.