Asianet Suvarna News Asianet Suvarna News

ಕಾರವಾರ: ಶರಾವತಿ ನದಿ ಪಾತ್ರದಲ್ಲಿ ಪ್ರವಾಹ ಆತಂಕ

* ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ
*  ಯಾವುದೇ ಕ್ಷಣದಲ್ಲೂ ನದಿಗೆ ನೀರು ಬಿಡುವ ಸೂಚನೆ
* ನದಿಯ ದಡದ ವಾಸಿಗಳು ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚನೆ
 

Again Flood Anxiety in Sharavati River at Karwar grg
Author
Bengaluru, First Published Jul 30, 2021, 8:47 AM IST

ಕಾರವಾರ(ಜು.30):  ಅಂಕೋಲಾ, ಕಾರವಾರ ತಾಲೂಕಿನಲ್ಲಿ ಪ್ರವಾಹ ಕಡಿಮೆಯಾಗಿ ಜನರು ನಿಟ್ಟುಸಿರು ಬಿಟ್ಟಿದ್ದರೆ ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದ ಕೆಳಭಾಗದಲ್ಲಿ ಪ್ರವಾಹದ ಆತಂಕ ಪ್ರಾರಂಭವಾಗಿದೆ.

ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಗುರುವಾರ ಮಳೆ ಕಡಿಮೆಯಾಗಿದೆ. ಆದರೆ ಶರಾವತಿ ನದಿಗೆ ಕಟ್ಟಲಾದ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಯಾವುದೇ ಕ್ಷಣದಲ್ಲೂ ನೀರನ್ನು ಹೊರಬಿಡುವ ಎಚ್ಚರಿಕೆ ನೀಡಲಾಗಿದೆ. ಲಿಂಗನಮಕ್ಕಿಯ ನೀರು ಹೊನ್ನಾವರದ ಗೇರುಸೊಪ್ಪ ಜಲಾಶಯ ಸೇರಲಿದ್ದು, ಹೇರಳವಾಗಿ ಒಳಹರಿವು ಉಂಟಾದರೆ ಅಲ್ಲಿಂದಲೂ ನೀರನ್ನು ಹೊರಕ್ಕೆ ಬಿಡಲಾಗುತ್ತದೆ. ಹೀಗಾಗಿ ಶರಾವತಿ ನದಿ ಪಾತ್ರದಲ್ಲಿ ಆತಂಕ ಪ್ರಾರಂಭವಾಗಿದೆ.

ಕಳೆದ ಗುರುವಾರ, ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಗಂಗಾವಳಿ ನದಿ ಉಕ್ಕಿ ಹರಿದು ಅಂಕೋಲಾ ತಾಲೂಕಿನಲ್ಲಿ, ಕಾಳಿ ನದಿಯ ಕದ್ರಾ ಜಲಾಶಯದ ಗೇಟ್‌ ತೆರೆದು ಹೆಚ್ಚಿನ ನೀರು ಬಿಟ್ಟಿದ್ದರಿಂದ ಕಾರವಾರ ಭಾಗದಲ್ಲಿ ನೆರೆ ಉಂಟಾಗಿತ್ತು. ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಮಳೆ ಕಡಿಮೆಯಾಗಿ ಪ್ರವಾಹದ ಆತಂಕ ದೂರವಾಗಿದೆ. ಆದರೆ ಶರಾವತಿ ನದಿ ತೀರದಲ್ಲಿ ಆತಂಕ ನಿರ್ಮಾಣವಾಗಿದೆ.

ನೆರೆಪೀಡಿತರಿಗೆ ಬೊಮ್ಮಾಯಿ ನೆರವು: ರಸ್ತೆಗಳ ಮರು ನಿರ್ಮಾಣಕ್ಕೆ 210 ಕೋಟಿ ರೂ. ಘೋಷಣೆ!

ಕಾರವಾರ ತಾಲೂಕಿನಲ್ಲಿ ಮಧ್ಯಾಹ್ನದ ವರೆಗೂ ಬಿಸಿಲಿತ್ತು. ಮಧ್ಯಾಹ್ನ 2 ಗಂಟೆ ಅವಧಿಯಲ್ಲಿ ಏಕಾಏಕಿ ಮೋಡಕವಿದು ಕೆಲಹೊತ್ತು ರಭಸದಿಂದ ಮಳೆಯಾಗಿದೆ. ಸಂಜೆ ಮೋಡ ಕವಿದ ವಾತಾವರಣವಿತ್ತು. ಯಲ್ಲಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಸಿಲ ನಡುವೆ ಆಗಾಗ ಮಳೆಯಾದರೆ, ಶಿರಸಿ, ಸಿದ್ದಾಪುರ ತಾಲೂಕಿನ ಅಲ್ಲಲ್ಲಿ ಆಗಾಗ ರಭಸದಿಂದ, ಅಂಕೋಲಾ, ಕುಮಟಾ ಭಾಗದ ಕೆಲವಡೆ ತುಂತುರು, ಮುಂಡಗೋಡ, ಹಳಿಯಾಳ, ದಾಂಡೇಲಿ ಭಾಗದಲ್ಲಿ ಹಾಗೂ ಹೊನ್ನಾವರ, ಭಟ್ಕಳ ಭಾಗದಲ್ಲಿ ಮಳೆ ಕಡಿಮೆಯಾಗಿದೆ.

ಬುಧವಾರ ಬೆಳಗ್ಗೆ 8ರಿಂದ ಮುಂದಿನ 24 ಗಂಟೆ ಅವಧಿಯಲ್ಲಿ ತಾಲೂಕುಗಳಲ್ಲಿ ಸುರಿದ ಮಳೆಯ ಪ್ರಮಾಣ ಇಂತಿದೆ. ಅಂಕೋಲಾ 0.2 ಮಿಮೀ, ಭಟ್ಕಳ 4.4 ಮಿಮೀ, ಹಳಿಯಾಳ 1.8 ಮಿಮೀ, ಹೊನ್ನಾವರ 2.1 ಮಿಮೀ, ಕಾರವಾರ 7.1 ಮಿಮೀ, ಕುಮಟಾ 19.6 ಮಿಮೀ, ಮುಂಡಗೋಡ 4.0 ಮಿಮೀ, ಸಿದ್ದಾಪುರ 6.4 ಮಿಮೀ, ಶಿರಸಿ 14.0 ಮಿಮೀ, ಜೋಯಿಡಾ 8.2 ಮಿಮೀ, ಯಲ್ಲಾಪುರ 14.6 ಮಿ.ಮೀ. ಮಳೆಯಾಗಿದೆ.

ಜಲಾಶಯ ಮಟ್ಟ:

ಕದ್ರಾ: 34.50 ಮೀ (ಗರಿಷ್ಠ ಮಟ್ಟ), 29.20 ಮೀ (ಇಂದಿನ ಮಟ್ಟ), 13966.00 ಕ್ಯುಸೆಕ್‌ (ಒಳಹರಿವು) 12441.00 ಕ್ಯುಸೆಕ್‌ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗ), 66.95 ಮೀ (ಇ.ಮಟ್ಟ), 9030 ಕ್ಯುಸೆಕ್‌ (ಒಳ ಹರಿವು), 9284.0 ಕ್ಯುಸೆಕ್‌ (ಹೊರ ಹರಿವು), ಸೂಪಾ: 564.00 ಮೀ (ಗ), 551.31 ಮೀ (ಇ.ಮಟ್ಟ), 11721.6 ಕ್ಯುಸೆಕ್‌ (ಒಳ ಹರಿವು), 3330.941 ಕ್ಯುಸೆಕ್‌ (ಹೊರ ಹರಿವು), ತಟ್ಟಿಹಳ್ಳ: 468.38 ಮೀ (ಗ), 465.27 ಮೀ (ಇ.ಮಟ್ಟ), 1500 ಕ್ಯುಸೆಕ್‌ (ಒಳ ಹರಿವು) 1500.00 ಕ್ಯುಸೆಕ್‌ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 433.67 ಮೀ (ಇ.ಮಟ್ಟ), 4268.0 ಕ್ಯುಸೆಕ್‌ (ಒಳ ಹರಿವು) 5536.0 ಕ್ಯುಸೆಕ್‌ (ಹೊರ ಹರಿವು), ಗೇರುಸೊಪ್ಪ: 55.00 ಮೀ (ಗ), 48.81 ಮೀ(ಇ.ಮಟ್ಟ), 6277.027 ಕ್ಯುಸೆಕ್‌ (ಒಳ ಹರಿವು) 4133.093 ಕ್ಯುಸೆಕ್‌ (ಹೊರ ಹರಿವು), ಲಿಂಗನಮಕಿ:್ಕ 1819.00 ಅಡಿ (ಗ), 1806.20 ಅಡಿ (ಇ.ಮಟ್ಟ), 18552.00 ಕ್ಯುಸೆಕ್‌ (ಒಳ ಹರಿವು) 5522.00 ಕ್ಯುಸೆಕ್‌ (ಹೊರ ಹರಿವು).

ಮುಳುಗಿದ ತೋಟ, ಕೊಚ್ಚಿಹೋದ ಸೇತುವೆ.. ತತ್ತರಿಸಿದ ಉತ್ತರ ಕನ್ನಡ ವೀಕ್ಷಿಸಿದ ಬೊಮ್ಮಾಯಿ

ಒಳಹರಿವಿನಲ್ಲಿ ಹೆಚ್ಚಳ

ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಶಯಕ್ಕೆ ಹೇರಳ ಪ್ರಮಾಣದ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ1819.00 ಮೀ. ಆಗಿದ್ದು, ಗುರುವಾರ ಬೆಳಗ್ಗೆ 8 ಗಂಟೆಗೆ 1806.20 ಮೀ. ತುಂಬಿದೆ. ಒಳ ಹರಿವಿನ ಪ್ರಮಾಣ ಸುಮಾರು 18552 ಕ್ಯುಸೆಕ್‌ ಆಗಿದ್ದು, ಹೀಗೆ ನೀರಿನ ಒಳ ಹರಿವು ಮುಂದುವರಿದರೆ ಆಣೆಕಟ್ಟಿನ ಸುರಕ್ಷತಾ ಹಿತದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಲಿಂಗನಮಕ್ಕಿಯಿಂದ ಬಿಟ್ಟ ಹೆಚ್ಚುವರಿ ನೀರು ಹೊನ್ನಾವರ ತಾಲೂಕಿನ ಗೇರುಸೊಪ್ಪ ಆಣೆಕಟ್ಟೆ ಸೇರಲಿದ್ದು, ಇದರ ಕೆಳಭಾಗದಲ್ಲಿ ದೋಣಿ ಸಂಚಾರ, ಮೀನುಗಾರಿಗೆ ಮತ್ತು ಇತರೆ ಚಟುವಗಳನ್ನು ನಡೆಸಬಾರದರು. ಆಣೆಕಟ್ಟು ಕೆಳದಂಡೆಯ ಹಾಗೂ ನದಿಯ ದಡದ ವಾಸಿಗಳು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದು ಶರಾವತಿ ಟೇಲರೇಸ್‌ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios