ಗುಂಡ್ಲುಪೇಟೆಯಲ್ಲಿ ಹನುಮ ಜಯಂತಿ ಮೆರವಣಿಗೆಯ ನಂತರ, ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಧ್ವನಿ ಬಳಸಿದ್ದಕ್ಕೆ ಪೊಲೀಸರು ಡಿಜೆ ವಾಹನವನ್ನು ವಶಕ್ಕೆ ಪಡೆದರು. ಆಕ್ರೋಶಗೊಂಡ ಹನುಮ ಭಕ್ತರಿಂದ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ. ಒತ್ತಡಕ್ಕೆ ಮಣಿದ ಪೊಲೀಸರು, ಒಂದೂವರೆ ಗಂಟೆ ಬಳಿಕ ವಾಹನ ಬಿಡುಗಡೆ ಮಾಡಿದರು.
ಚಾಮರಾಜನಗರ (ಡಿ.27): ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಇಂದು ಹನುಮ ಜಯಂತಿ ಮೆರವಣಿಗೆಯ ನಂತರ ಡಿಜೆ (DJ) ವಾಹನವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಪೊಲೀಸರ ನಡೆಯನ್ನು ಖಂಡಿಸಿ ಹನುಮ ಭಕ್ತರು ಪೊಲೀಸ್ ಠಾಣೆಯ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ.
ಡಿಜೆ ವಶಕ್ಕೆ ಪಡೆದಿದ್ದ ಪೊಲೀಸರು
ಯಾವುದೇ ವಿಘ್ನಗಳಿಲ್ಲದೆ ಅತ್ಯಂತ ಯಶಸ್ವಿಯಾಗಿ ಹನುಮ ಜಯಂತಿ ಮುಕ್ತಾಯಗೊಂಡಿತ್ತು. ಆದರೆ, ಮೆರವಣಿಗೆಯಲ್ಲಿದ್ದ ಡಿಜೆ ವಾಹನವನ್ನು ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಧ್ವನಿಯಲ್ಲಿ ಬಳಸಲಾಗಿದೆ ಎಂಬ ಕಾರಣ ನೀಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಡಿಜೆ ವಾಹನವನ್ನು ಠಾಣೆಗೆ ತಂದಿದ್ದರಿಂದ ಭಕ್ತರು ಕೆರಳಿದರು.
ಠಾಣೆ ಮುಂದೆ ಭಕ್ತರಿಂದ ಧಿಕ್ಕಾರ:
ಡಿಜೆ ವಾಹನ ವಶಪಡಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ನೂರಾರು ಹನುಮ ಭಕ್ತರು ಗುಂಡ್ಲುಪೇಟೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಶಾಂತಿಯುತವಾಗಿ ನಡೆದ ಕಾರ್ಯಕ್ರಮದ ನಂತರ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. ತಕ್ಷಣವೇ ಡಿಜೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಒಂದೂವರೆ ತಾಸಿನ ನಂತರ ವಾಹನ ಬಿಡುಗಡೆ
ಠಾಣೆಯ ಮುಂದೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು. ಭಕ್ತರ ತೀವ್ರ ಒತ್ತಡಕ್ಕೆ ಮಣಿದ ಗುಂಡ್ಲುಪೇಟೆ ಪೊಲೀಸರು, ಸುಮಾರು ಒಂದೂವರೆ ಗಂಟೆಯ ಸುದೀರ್ಘ ಚರ್ಚೆಯ ನಂತರ ವಶಕ್ಕೆ ಪಡೆದಿದ್ದ ಡಿಜೆ ವಾಹನವನ್ನು ಬಿಡುಗಡೆಗೊಳಿಸಿದರು. ವಾಹನ ಬಿಡುಗಡೆಯಾದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.


