Asianet Suvarna News Asianet Suvarna News

ಉಪನಯನ ಕಾರ್ಯಕ್ರಮದಲ್ಲಿ ಶೂನ್ಯ ತ್ಯಾಜ್ಯಗಳ ಅಳವಡಿಕೆ: ಪರಿಸರ ಸಂರಕ್ಷಣೆಯತ್ತ ಅನುಕರಣೀಯ ಹೆಜ್ಜೆ

ಇತ್ತೀಚಿನ ದಿನಗಳಲ್ಲಿ ಸಭೆ ಸಮಾರಂಭಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಮರು ಬಳಕೆ ಆಗದ ಪೇಪರ್ ಕಪ್ ಗಳು, ಟಿಶ್ಯೂ ಪೇಪರ್ ಗಳು ಯಥೇಚ್ಛವಾಗಿ ಬಳಕೆಯಾಗುವುದು ಕಂಡುಬರುತ್ತಿದೆ. 

Adoption of zero waste elements in Upanayana program at bengaluru gvd
Author
First Published May 17, 2023, 9:03 PM IST

ಸಹನಾ ಹೆಗಡೆ, ಹವ್ಯಾಸಿ ಪತ್ರಕರ್ತೆ

ಬೆಂಗಳೂರು (ಮೇ.17): ಇತ್ತೀಚಿನ ದಿನಗಳಲ್ಲಿ ಸಭೆ ಸಮಾರಂಭಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಮರು ಬಳಕೆ ಆಗದ ಪೇಪರ್ ಕಪ್ ಗಳು, ಟಿಶ್ಯೂ ಪೇಪರ್ ಗಳು ಯಥೇಚ್ಛವಾಗಿ ಬಳಕೆಯಾಗುವುದು ಕಂಡುಬರುತ್ತಿದೆ. ಇವೆಲ್ಲವೂ ಪ್ರತಿಷ್ಠೆಯ ದ್ಯೋತಕವಾಗಿ ಪ್ರತಿಬಿಂಬವಾಗುತ್ತಿದೆ. ಆದರೆ ಇದರಿಂದ ವೈಯಕ್ತಿಕವಾಗಿ ಹಾಗೂ ಪರಿಸರಕ್ಕೆ ಹಾನಿಯಾಗುವ ಬಗ್ಗೆ ಜನರು ತಲೆಕೆಡಿಸಿಕೊಳ್ಳುತ್ತಿಲ್ಲ.

ದಿನವೊಂದಕ್ಕೆ ಲಕ್ಷಾಂತರ ನೀರಿನ ಬಾಟಲಿಗಳು, ಪೇಪರ್ ಕಪ್ ಗಳು, ಪೇಪರ್ ಹಾಗೂ ಥರ್ಮಾಕೋಲ ಪ್ಲೇಟ್ ಗಳು ಭೂಭರ್ತಿಗೆ ಸೇರಿ ಪರಿಸರ ಮಾಲಿನ್ಯ ಹೆಚ್ಚು ಮಾಡುತ್ತಿರುವುದು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಕಾಣಸಿಗುತ್ತವೆ. ಆದರೆ ಶೂನ್ಯ ತ್ಯಾಜ್ಯ ಪರಿಕಲ್ಪನೆ ಗಮನದಲ್ಲಿಟ್ಟು ಕೊಂಡು ತಮ್ಮ ಮಗನ ಉಪನಯನ ಕಾರ್ಯಕ್ರಮವನ್ನು ಸಂಪೂರ್ಣ ಪರಿಸರ ಸ್ನೇಹಿಯಾಗಿಸಿದ್ದಾರೆ  ಕರ್ನಾಟಕ ರಾಜ್ಯ ಪರಿಸರ ಆಘಾತ ಅಂದಾಜಿಕರಣ ಪ್ರಾಧಿಕಾರದ ಅಧ್ಯಕ್ಷರಾದ  ಡಾ.ಕೆ.ಆರ್.ಶ್ರೀಹರ್ಷ ಅವರು.

ಕಮಲ ಹಿಡಿದಾಗಲೇ ಸಿ.ಪಿ.ಯೋಗೇಶ್ವರ್‌ಗೆ ಹೆಚ್ಚು ಸೋಲು!

ಎನ್ ಆರ್ ಕಾಲನಿಯ ರಾಮ ಮಂದಿರದಲ್ಲಿ ನಡೆದ ಡಾ.ಶ್ರೀಹರ್ಷ ಅವರ ಮಗನ ಉಪನಯನ ಕಾರ್ಯಕ್ರಮದಲ್ಲಿ ಉಪಹಾರಕ್ಕೆ ಮರುಬಳಕೆ ಆಗುವ ಸ್ಟೀಲ್ ತಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಸ್ಟೀಲ್ ಲೋಟಗಳಲ್ಲಿ ಅತಿಥಿಗಳಿಗೆ ಪಾನೀಯ ವ್ಯವಸ್ಥೆ ಹಾಗೂ ಊಟಕ್ಕೆ  ಬಾಳೆ ಎಲೆಗಳನ್ನ ಬಳಸಲಾಗಿತ್ತು. ಟಿಶ್ಯೂ ಪೇಪರ್ ಬದಲಿಗೆ ಮರುಬಳಕೆ ಮಾಡಬಹುದಾದ ಸ್ವಚ್ಚವಾದ ಕಾಟನ್ ಕರವಸ್ತ್ರವನ್ನು ಅಗತ್ಯಕ್ಕೆ ತಕ್ಕಂತೆ ಇಡಲಾಗಿತ್ತು. ಧಾರ್ಮಿಕ ಕಾರ್ಯಕ್ರಮದಲ್ಲಿ ಬಳಕೆಯಾದ ನೈರ್ಮಾಲ್ಯ ( ತ್ಯಾಜ್ಯ ಹೂವುಗಳು) , ಅಡಿಗೆ ಮನೆಯ ಹಸಿಕಸಗಳೆಲ್ಲವನ್ನು, ಮಾವಿನ ತೋರಣ , ಬಾಳೆ ಎಲೆ ಎಲ್ಲವೂ ಕಾರ್ಯಕ್ರಮದ ನಂತರ ಜೈವಿಕ ಗೊಬ್ಬರ ಘಟಕಕ್ಕೆ ವಿಲೇವಾರಿ ಮಾಡುವಂತೆ ಮಾಡಲಾಗಿದೆ. ಊಟದ ನಂತರ  ಐಸ್ಕ್ರೀಂ ಸಹ ಸ್ಟೀಲ್ ಬೌಲ್ ಮತ್ತು ಸ್ವೀಲ್ ಚಮಚಗಳಲ್ಲಿ ಬಡಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಸುಹಾಸನಿಯರಿಗೆ ಕೊಡುವ ಅರಿಶಿಣ ಕುಂಕುಮ ಕೂಡ  ಖಾದಿ ಬಣ್ಣದ ಪೇಪರ್ ಬ್ಯಾಗ್ ಆಗಿದ್ದು ಇಲ್ಲೂ ಕೂಡ ಪ್ಲಾಸ್ಟಿಕ್ ಸುಳಿದಿಲ್ಲ. ಅತಿಥಿಗಳಿಗೆ ತಾಂಬುಲಕ್ಕಾಗಿ ಕೊಟ್ಟ ಸೆಣಬಿನ ಚೀಲವು, ಸಾಮಾನ್ಯವಾಗಿ ಬಳಕೆ ಆಗುತ್ತಿರುವ ಹಾಗೂ ಪರಿಸರಕ್ಕೆ ಮಾರಕವಾಗಿರುವ ನಾನ್ ವೂವೆನ್ ಪೊಲೀ ಫ್ರೋಫಲಿನ್ ಬ್ಯಾಗಗಳಿಗೆ ಪರ್ಯಾಯವಾಗಿ ಕೆಲಸ ಮಾಡಿತು.

ಸಾಂಪ್ರದಾಯಕ್ಕೆ ಅನುಸಾರವಾಗಿ ಅತಿಥಿಗಳಿಗೆ ಮನೆಗೆ ಕೊಂಡೊಯ್ಯಲು ಕೊಡುವ ತಿಂಡಿ ಪ್ಯಾಕೆಟ್ ಗಳು ಸಹ ಉತ್ತಮ ದರ್ಜೆಯ ಪೇಪರ್ ಬ್ಯಾಗ್ ಬಳಸಲಾಗಿತ್ತು.  ಕಾಟನ್ ಬಟ್ಟೆಯಲ್ಲಿ ಬರೆದ ಉಪನಯನದ ನಾಮ ಫಲಕ ಮತ್ತು ಸಭೆಯ ಅಲಂಕಾರ ಎಲ್ಲವೂ ಪರಿಸರ ಸ್ನೇಹಿಯಾಗಿದ್ದದ್ದು ವಿಶೇಷವಾಗಿತ್ತು. ಅಲ್ಲದೇ ಪರಿಸರ ಸ್ನೇಹಿ ಮನೆಯಲ್ಲಿ ಇರಬೇಕಾದ ಅಂಶಗಳ ಪಟ್ಟಿ ತಯಾರಿಸಿ ಜನರು ಗಮನಿಸುವ ಕಡೆ ಅದನ್ನು ಲಗತ್ತಿಸಲಾಗಿತ್ತು. ಹೀಗೆ  ಚಿಕ್ಕ ಚಿಕ್ಕ ವಿಷಯಗಳಿಗೂ ಇಲ್ಲಿ ವಿಶೇಷ ಗಮನ ನೀಡಿ ಕಾರ್ಯಕ್ರಮವನ್ನು ಸಂಪೂರ್ಣ ಪರಿಸರ ಸ್ನೇಹಿಯಾಗಿಸಿರುವುದು ಒಂದು ಅನುಕರಣೀಯ ಹೆಜ್ಜೆಯಾಗಿದೆ.

ವಾಸ್ತವದಲ್ಲಿ ನಮ್ಮ ಸನಾತನ ಸಂಸ್ಕೃತಿಯ ಆಚರಣೆಗಳೆಲ್ಲವೂ ಪರಿಸರಕ್ಕೆ ಪೂರಕ ಆಚರಣೆಗಳೇ ಆಗಿದೆ. ಪರಿಸರವನ್ನು ಪ್ರಕೃತಿ ಮಾತೆ ಎಂದು ಆರಾಧಿಸುತ್ತಿದ್ದ ನಮ್ಮ ಹಿರಿಯರು ಯಾವುದೇ ಆಚರಣೆ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಮಾಡುವ ಕೆಲಸವನ್ನು ಮಾಡುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸ ಸುಲಭವಾಗಿಸಿಕೊಳ್ಳಲೊ, ಪರರ ಅನುಕರಣೆಯೋ ಅಥವಾ ಪ್ರತಿಷ್ಠೆಯ ಕಾರಣಕ್ಕೋ ಅಳವಡಿಸಿಕೊಳ್ಳುತ್ತಿರುವ ಕೆಲವು ಅಂಶಗಳಿಂದ ಮನುಷ್ಯನ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ತುಂಬಾ ಹಾನಿ ಉಂಟಾಗುತ್ತಿದೆ. ಈ ಅಂಶಗಳು ಬಗ್ಗೆ ಪ್ರತಿಯೊಬ್ಬರೂ ಯೋಚನೆ ಮಾಡಬೇಕಾದುದು ಅತ್ಯಂತ ಅವಶ್ಯಕ.

ಮೇಲುಕೋಟೆ ಅಭಿವೃದ್ಧಿಗೆ ಪ್ರಾಧಿಕಾರ: ದರ್ಶನ್‌ ಪುಟ್ಟಣ್ಣಯ್ಯ

ನಾವು ನಡೆಸುವ ಚಿಕ್ಕ ಸಭೆಗಳಿರಲಿ ಅಥವಾ ದೊಡ್ಡ ಸಮಾರಂಭಗಳಿರಲಿ ಎಲ್ಲವೂ ಪರಿಸರಕ್ಕೆ ಹಾನಿ ಉಂಟುಮಾಡದ ರೀತಿಯಲ್ಲಿ ಯೋಚಿಸಿ ಯೋಜಿಸಬೇಕಾಗಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ಪ್ರಕೃತಿ ಅವಘಡದಂತಹ ಸಮಸ್ಯೆ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಪ್ರತಿಹಂತದಲ್ಲೂ ಪರಿಸರ ಸ್ನೇಹಿ ಜೀವನ ನಡೆಸುವುದು ಅತಿ ಅವಶ್ಯ. ಉಪನಯನದ ಕರೆಯೋಲೆಯಿಂದ ಹಿಡಿದು ಪ್ರತಿ ವಿಷಯದಲ್ಲೂ ಪರಿಸರ ಸ್ನೇಹಿ ಆಗಿರುವ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮ ಎಂದೇ ಹೇಳಬಹುದು.

Follow Us:
Download App:
  • android
  • ios