ರಾಜ್ಯದಲ್ಲಿ ಕುಸಿದಿರುವ ಅಬಕಾರಿ ಆದಾಯವನ್ನು ಹೆಚ್ಚಿಸಲು, ಕುಡುಕರ ಲಿವರ್‌ಗೆ ಸರ್ಕಾರ ಗ್ಯಾರಂಟಿ ನೀಡಬೇಕೆಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಮದ್ಯಪಾನದಿಂದ ಬರುವ ಆದಾಯದ 20% ಅನ್ನು ಅವರ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಸಲಹೆ ನೀಡಿದ್ದಾರೆ.
ಬೆಳಗಾವಿ (ಡಿ.8): ರಾಜ್ಯದಲ್ಲಿ ಅಬಕಾರಿ ಆದಾಯ ಕುಸಿಯುತ್ತಿರುವ ಹೊತ್ತಿನಲ್ಲಿ ಬಿಜೆಪಿ ಎಂಎಲ್‌ಸಿ ರವಿಕುಮಾರ್, ಸರ್ಕಾರಕ್ಕೆ ಖತರ್ನಾಕ್ ಐಡಿಯಾ ನೀಡಿದ್ದಾರೆ. ಸರ್ಕಾರ ಕುಡುಕರ ಲಿವರ್‌ಗೆ ಗ್ಯಾರಂಟಿ ಕೊಟ್ಟರೆ, ಖಂಡಿತವಾಗಿ ರಾಜ್ಯದಲ್ಲಿ ಅಬಕಾರಿ ಆದಾಯ ಹೆಚ್ಚಾಗಲಿದೆ ಎಂದು ಬೆಳಗಾವಿ ಅಧಿವೇಶನದ ಮೊದಲ ದಿನ ಹೇಳಿದ್ದಾರೆ. ಮದ್ಯಪಾನ ಸೇವನೆಯಿಂದ ಲಿವರ್‌ಗೆ ಹಾನಿ, ಜಾಂಡೀಸ್ ಕಾಯಿಲೆಗೆ ತುತ್ತಾಗುವ ವಿಚಾರದ ಬಗ್ಗೆ ನಿಯಮ 330ರ ಅಡಿಯಲ್ಲಿ ಎಂಎಲ್ ಸಿ ರವಿಕುಮಾರ್ ಪ್ರಸ್ತಾಪ ಮಾಡಿದರು.
ಮದ್ಯಸೇವನೆಯಿಂದ 3% ಜನರು ರೋಗಕ್ಕೆ ತುತ್ತಾಗುತ್ತಿದ್ಧಾರೆ. ವರ್ಷಕ್ಕೆ 43 ಸಾವಿರ ಕೋಟಿ ಆದಾಯಕ್ಕೆ ಸರ್ಕಾರ ಗುರಿ ಇರಿಸಿಕೊಂಡಿದೆ. ಆದರೂ 20% ಆದಾಯ ಕಡಿಮೆಯಾಗಿದೆ. ಮದ್ಯಸೇವನೆಯಿಂದ ಜಾಂಡಿಸ್, ಲಿವರ್ ಚಿಕಿತ್ಸೆಗೆ ಹೆಚ್ಚಿನ ಖರ್ಚು ಆಗುತ್ತಿದೆ. ಸರಕಾರಕ್ಕೆ ಬರುವ ಆದಾಯದಲ್ಲಿ ಮದ್ಯಪ್ರಿಯರ ಅನಾರೋಗ್ಯ ಚಿಕಿತ್ಸೆಗೆ ಹಣ ಮೀಸಲಿಡಿ. ಅಬಕಾರಿ ಆದಾಯದ 20% ಹಣವನ್ನು ಸರಕಾರ ಇವರ ಚಿಕಿತ್ಸೆಗಾಗಿಯೇ ಮೀಸಲಿಡಿ. ಜಾಂಡಿಸ್‌ನಿಂದ ಮದ್ಯಪ್ರಿಯರು ಬೇಗ ಸಾಯುತ್ತಿದ್ದಾರೆ. ರೋಗದ ಚಿಕಿತ್ಸೆಗೆ ಸರಕಾರ ಹಣ ನೀಡಿದರೆ ಹೆಚ್ಚು ಕುಡಿಯಲೂಬಹುದು. ಆಗ ಸರಕಾರ ಹೆಚ್ಚು ಆದಾಯ ಪಡೆಯಬಹುದು ಎಂದು ಹೇಳಿದ್ದಾರೆ.
ಮದ್ಯಪ್ರಿಯರಿಂದಲೇ ಗ್ಯಾರಂಟಿ ನಡೆಯುತ್ತಿದೆ
ಮದ್ಯಸೇವನೆಯಿಂದ ಶೇ.2ಕ್ಕಿಂತ ಹೆಚ್ಚು ಜನರು ಸಾವನ್ನಪ್ಪುತ್ತಿದ್ಧಾರೆ. ದೇಶದಲ್ಲಿ 15 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಐದರಲ್ಲಿ ಓರ್ವ ಮದ್ಯಸೇವನೆ ಮಾಡಿ ಜಾಂಡಿಸ್ ರೋಗದಿಂದ ಸಾವು ಕಾಣುತ್ತಿದ್ದಾರೆ. ಮದ್ಯಸೇವನೆ ಮಾಡುವವರಿಗೆ ಚಿಕಿತ್ಸೆ ಕೊಡಬೇಕು. ಗ್ಯಾರಂಟಿಗಳು ನಡೆಯುತ್ತಿರುವುದು ಮದ್ಯಪ್ರಿಯರಿಂದ. ಸರಕಾರಕ್ಕೆ ಮದ್ಯಪ್ರಿಯರ ಯೋಗದಾನ ಹೆಚ್ಚಿದೆ. ಅಬಕಾರಿ ಆದಾಯದಲ್ಲಿ ರೋಗದ ಚಿಕಿತ್ಸೆಗೆ 20% ಮೀಸಲಿಡಿ ಎಂದು ಎಂಎಲ್ ಸಿ ರವಿಕುಮಾರ್ ಒತ್ತಾಯಿಸಿದ್ದಾರೆ.
ಲಿಖಿತ ಉತ್ತರ ನೀಡಿದ ಅಬಕಾರಿ ಸಚಿವ
ಮದ್ಯಪ್ರಿಯರ ಆರೋಗ್ಯ ಚಿಕಿತ್ಸೆಗೆ ಅಬಕಾರಿ ಆದಾಯದ 20% ಮೀಸಲಿಡುವಂತೆ ಎಂಎಲ್‌ಸಿ ರವಿಕುಮಾರ್ ಪ್ರಸ್ತಾಪಕ್ಕೆ ಲಿಖಿತ ಉತ್ತರ ನೀಡಿದ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ, ಏಪ್ರಿಲ್ 2025 ರಿಂದ ಸೆಪ್ಟೆಂಬರ್ ವರೆಗೆ 195 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟ ಆಗಿದೆ. ಕಳೆದ ಇದೇ ಅವಧಿಗೆ ಹೋಲಿಸಿದಲ್ಲಿ 47, 46 ಸಾವಿರ ಪೆಟ್ಟಿಗೆಗಳು ಕಡಿಮೆ ಮಾರಾಟ. ಶೇ.19.55 ಮಾರಾಟ ಬೆಳವಣಿಗೆ ಕುಂಠಿತವಾಗಿದೆ. ಪ್ರಸ್ತುತ ಸಾಲಿನಲ್ಲಿ ಬಿಯರ್ ಮಾರಾಟವು ಕಡಿಮೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಹೆಚ್ಚಿನ ಮಳೆಯಿಂದ ಶೀತ ವಾತಾವರಣವಿದೆ. ಶೀತ ವಾತಾವರಣದ ಕಾರಣ ಬಿಯರ್ ಮಾರಾಟದಲ್ಲಿ ಕುಸಿತ ಆಗಿದೆ ಎಂದಿದ್ದಾರೆ.
ಅಬಕಾರಿ ಆದಾಯವನ್ನು ಬಜೆಟ್ ಕಾರ್ಯಕ್ರಮಗಳಿಗೆ ಕೊಡಲಾಗುತ್ತಿದೆ. ಆದಾಯವನ್ನು ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡಲಾಗುತ್ತಿದೆ. ನಿಮ್ಮ ಕೋರಿಕೆಯಂತೆ ಕ್ರಮ ವಹಿಸಲು ಅವಕಾಶ ಇರುವುದಿಲ್ಲ. ಮದ್ಯಸೇವನೆ ಮಾಡುವವರಿಗೆ ಅನಾರೋಗ್ಯ ಚಿಕಿತ್ಸೆಗೆ ಪ್ರತ್ಯೇಕವಾಗಿ ಅನುದಾನ ನೀಡಲು ಅಸಾಧ್ಯ ಎಂದು ಹೇಳಿದ್ದಾರೆ.
ಅಬಕಾರಿ ಇಲಾಖೆಯಿಂದ ಸಂಗ್ರಹವಾಗುವ ಆದಾಯ ಆರೋಗ್ಯ ಇಲಾಖೆಗೂ ಹೋಗುತ್ತದೆ. ರಾಜ್ಯ ಸರ್ಕಾರ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೂ ಹೋಗುತ್ತದೆ. ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಗಳಡಿ ರಾಜ್ಯದ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಗಳ ಬೇಡಿಕೆಯಡಿ ಅನುದಾನ ಒದಗಿಸಲಾಗುತ್ತಿದೆ ಎಂದು ಹೇಳಿದರು.


