ಮೇಲುಕೋಟೆ ಅಭಿವೃದ್ಧಿಗೆ ಪ್ರಾಧಿಕಾರ: ದರ್ಶನ್ ಪುಟ್ಟಣ್ಣಯ್ಯ
ಮೇಲುಕೋಟೆ ಚೆಲುವನಾರಾಯಣಸ್ವಾಮಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಮಲೈಮಹದೇಶ್ವರ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಮೇಲುಕೋಟೆ (ಮೇ.17): ಮೇಲುಕೋಟೆ ಚೆಲುವನಾರಾಯಣಸ್ವಾಮಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಮಲೈಮಹದೇಶ್ವರ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು. ಶಾಸಕರಾಗಿ ಆಯ್ಕೆಯಾದ ನಂತರ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ, ಮೇಲುಕೋಟೆ ಪ್ರವಾಸಿ ಕ್ಷೇತ್ರವಾದರೂ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಬರುವ ಭಕ್ತರು ಮತ್ತು ನಾಗರೀಕರ ಅನುಕೂಲಕ್ಕಾಗಿ ದೇವಾಲಯ ಹಾಗೂ ಬೆಟ್ಟದ ಬಳಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಅತ್ಯಾಧುನಿಕ ಶೌಚಾಲಯಗಳನ್ನು ತಕ್ಷಣವೇ ನಿರ್ಮಿಸಲಾಗುತ್ತದೆ ಎಂದರು.
ನಾಗರಿಕರಿಗೆ ಪ್ರತಿದಿನ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲು ಕ್ರಮವಹಿಸಿ ದೇವಾಲಯಕ್ಕೆ ಸೇರಿದ ಜಮೀನುಗಳನ್ನು ವಶಕ್ಕೆ ಪಡೆದು ಭಕ್ತರು ಉಳಿದುಕೊಳ್ಳಲು ಅನುಕೂಲವಾಗುವಂತೆ ವಸತಿಗೃಹಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು. ತಂದೆ ಪುಟ್ಟಣ್ಣಯ್ಯ ಶಾಸಕರಾಗಿದ್ದ ವೇಳೆ ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಕಾಂಕ್ರಿಚ್ ರಸ್ತೆ ನಿರ್ಮಿಸಲು 2ಕೋಟಿ ರೂ ಅನುದಾನ ಮಂಜೂರು ಮಾಡಿಸಿದ್ದರು. ತಕ್ಷಣವೇ ಕಾಮಗಾರಿ ಆರಂಭಿಸಲಾಗುತ್ತದೆ. ಸಣ್ಣನೀರಾವರಿ ಇಲಾಖೆಯಿಂದ 32 ಕೋಟಿ ರು. ವೆಚ್ಚದಲ್ಲಿ ಕಲ್ಯಾಣಿ ಮತ್ತು ಕೊಳಗಳ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ, ಕಾಮಗಾರಿಯೇ ಆರಂಭವಾಗಿಲ್ಲ ಎಂದರು.
ಕಾಂಗ್ರೆಸ್‌ನ ಚುನಾವಣಾ ಚಾಣಕ್ಯ ಚಲುವರಾಯಸ್ವಾಮಿ
2 ಕೋಟಿರೂ ವೆಚ್ಚದಲ್ಲಿ ನಿರ್ಮಾಣವಾದ ಅನ್ನದಾನ ಭವನ ಒಂದು ವರ್ಷದಿಂದ ಕಟ್ಟಡ ಅನಾಥವಾಗಿದೆ. ಪ್ರಾಚ್ಯವಸ್ತು ಇಲಾಖೆಯಿಂದ ನಡೆಯಬೇಕಾದ ವಸಂತೋದ್ಯಾನ ಮಂಟಪ ನವೀಕರಣ ಕಾಮಗಾರಿಯೂ ಆರಂಭವಾಗಿಲ್ಲ. ಯೋಗಾನರಸಿಂಹಸ್ವಾಮಿ ಬೆಟ್ಟದ ಸುತ್ತ ಒತ್ತುವರಿಯಾಗಿರುವದನ್ನು ತೆರವುಗೊಳಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಿಲ್ಲ. ಇನ್ಪೋಸಿಸ್ ಸುದಾಮೂರ್ತಿಯವರನ್ನು ಮೇಲುಕೋಟೆ ಕಲ್ಯಾಣಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಮತ್ತೆ ಬರುವಂತೆ ಮನವೊಲಿಸುತ್ತೇನೆ ಎಂದು ಹೇಳಿದರು. ದೇವಾಲಯದಲ್ಲಿ ಅಧಿಕಾರಿಗಳು, ಕಚೇರಿಸಿಬ್ಬಂದಿ ಒಂದು ಪಕ್ಷದ ಏಜಂಟರಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೆ. ದೇಗುಲದ ಇಒಗೆ ಕ್ರಮವಹಿಸಲು ಸೂಚಿಸಿದ್ದೇನೆ. ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಭ್ರಷ್ಠಾಚಾರ ಮಿತಿಮೀರಿದೆ. ರೈತರನ್ನು ವಿನಾಕಾರಣ ಅಲೆದಾಡಿಸಲಾಗುತ್ತಿದೆ. ಇನ್ನು ಮುಂದೆ ಅಧಿಕಾರಿಗಳು ಕಾನೂನು ಬದ್ಧವಾಗಿ ಕೆಲಸ ಮಾಡುವ ಮೂಲಕ ರೈತರ ಮತ್ತು ನಾಗರೀಕರ ಸಮಸ್ಯೆ ಪರಿಹರಿಸಬೇಕು. ಈ ಸಂಬಂಧ ದೂರುಗಳು ಕೇಳಿ ಬಂದರೆ ಕ್ರಮವಹಿಸಲಾಗುತ್ತದೆ ಎಂದು ಎಚ್ಚರಿಸಿದರು. ಕವಿ ಪುತಿನ ವ್ಯಾಸಂಗ ಮಾಡಿದ ಶತಮಾನದ ಶಾಲೆಯನ್ನು ಬಲವರ್ಧನೆ ಮಾಡಲಾಗುವುದು. ಇಲ್ಲಿಗೆ ಮಂಜೂರಾದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಗ್ರಾಪಂ ಪಿಡಿಒಗೆ ಸೂಚಿಸಿದ್ದೇನೆ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ವಿಶೇಷ ಕಾರ್ಯಯೋಜನೆ ಹಾಕಿಕೊಂಡಿದ್ದೇನೆ ಎಂದು ಹೇಳಿದರು.
ಚಲುವರಾಯಸ್ವಾಮಿ ಮತ್ತೆ ನಾಗಮಂಗಲ ಅಧಿಪತಿ
ಶಾಸಕರಾಗಿ ಪ್ರಥಮ ಬಾರಿಗೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸಿದ ದರ್ಶನ್ ಪುಟ್ಟಣ್ಣಯ್ಯರನ್ನು ದೇಗುಲದ ಇಒ ಮಹೇಶ್, ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ ಅಭಿನಂದಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಕೆ.ಬಿ ನರಸಿಂಹೇಗೌಡ, ಕನಗೋನಹಳ್ಳಿ ಪರಮೇಶ್‌ಗೌಡ, ರೈತಸಂಘದ ಹೊಸಕೋಟೆ ವಿಜಯಕುಮಾರ್, ನ್ಯಾಮನಹಳ್ಳಿ ಶಿವರಾಮೇಗೌಡ, ಈಶಮುರುಳಿ, ದೀಲೀಪ್ ಸುಬ್ಬಣ್ಣ ವೆಂಕಟರಾಮೇಗೌಡ, ಯೋಗನರಸಿಂಹೇಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.