ತೀವ್ರ ಜಿದ್ದಾಜಿದ್ದಿನ ಅಖಾಡ ಎನ್ನಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಪರಾಭಗೊಂಡಿದ್ದಾರೆ.

ವಿಜಯ್‌ ಕೇಸರಿ

ಚನ್ನಪಟ್ಟಣ (ಮೇ.17): ತೀವ್ರ ಜಿದ್ದಾಜಿದ್ದಿನ ಅಖಾಡ ಎನ್ನಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಪರಾಭಗೊಂಡಿದ್ದಾರೆ. ಅವರ ಒಟ್ಟಾರೆ ರಾಜಕೀಯ ಜೀವನದಲ್ಲಿ ಇದು ನಾಲ್ಕನೇ ಸೋಲಾಗಿದೆ. ಅವರು ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದರೆ, ಒಂದು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಈ ಎಲ್ಲ ಸೋಲುಗಳು ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾಗಲೇ ಅನುಭವಿಸಿದ್ದಾರೆ ಎಂಬುದು ವಿಶೇಷ.

ಯೋಗೇಶ್ವರ್‌ ಪಕ್ಷೇತರರಾಗಿ, ಕಾಂಗ್ರೆಸ್‌ ಕೈಹಿಡಿದು ಹಾಗೂ ತಾಲೂಕಿನ ಮಟ್ಟಿಗೆ ನೆಲೆಯೇ ಇಲ್ಲದಿದ್ದ ಸಮಾಜವಾದಿ ಪಕ್ಷದ ಸೈಕಲ್‌ ಏರಿ ಸ್ಪರ್ಧಿಸಿದ್ದಾಗಲೂ ಗೆಲುವು ಸಾಧಿಸಿದ್ದಾರೆ. ಆದರೆ, ಬಿಜೆಪಿಯ ಕಮಲದ ಚಿಹ್ನೆಯಡಿ ಸ್ಪರ್ಧಿಸಿದ್ದ ಐದು ಚುನಾವಣೆಗಳಲ್ಲಿ ಒಂದು ಚುನಾವಣೆಯಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಸಫಲರಾಗಿದ್ದು, ನಾಲ್ಕು ಬಾರಿ ಪರಾಜಿತರಾಗಿದ್ದಾರೆ.

ಸೈನಿಕನನ್ನು ಮಕಾಡೆ ಮಲಗಿಸಿದ ದಳಪತಿ: ಯೋಗೇಶ್ವರ್‌ ವಿರುದ್ಧ ಎರಡನೇ ಬಾರಿ ಗೆದ್ದ ಎಚ್‌ಡಿಕೆ

ಪಕ್ಷೇತರರಾಗಿ ಮೊದಲ ಗೆಲುವು: 1999ರಲ್ಲಿ ಪಕ್ಷೇತರರಾಗಿ ರಾಜಕೀಯ ರಂಗಕ್ಕೆ ಆರಂಗೇಟ್ರಂ ಮಾಡಿದ ಯೋಗೇಶ್ವರ್‌, ಘಟಾನುಘಟಿ ರಾಜಕಾರಣಿಗಳಾದ ಎಂ.ವರದೇಗೌಡ ಹಾಗೂ ಸಾದತ್‌ ಅಲಿಖಾನ್‌ ಅವರನ್ನು ಪರಾಭವಗೊಳಿಸಿದರು. ರಾಜಕೀಯ ಕ್ಷೇತ್ರಕ್ಕೆ ಹೊಸಬರಾದರೂ ಮೊದಲ ವಿಧಾನಸಭಾ ಚುನಾವಣೆಯಲ್ಲೇ ಜಯ ಸಾಧಿಸಿ ವಿಧಾನಸಭೆಯ ಮೆಟ್ಟಿಲೇರಿದ್ದರು. ಪಕ್ಷೇತರರಾಗಿ ಗೆದ್ದ ಯೋಗೇಶ್ವರ್‌ ಆ ನಂತರ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡರು. 2004 ಮತ್ತು 2008ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ವಿಜಯ ಸಾಧಿಸಿದರು.

2009ರಲ್ಲಿ ಆಪರೇಷನ್‌ ಕಮಲಕ್ಕೆ ಒಳಗಾದ ಅವರು, 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಅವರು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಮೊದಲ ಸೋಲಿನ ಕಹಿಯುಂಡರು. ಅ ನಂತರ ತಮ್ಮ ರಾಜೀನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ ಕ್ಷೇತ್ರದ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಹುರಿಯಾಳಾಗಿ ಸ್ಪರ್ಧಿಸಿದ ಅವರು, ಜೆಡಿಎಸ್‌ ಅಭ್ಯರ್ಥಿ ಎಂ.ಸಿ.ಅಶ್ವತ್‌್ಥ ವಿರುದ್ಧ ಮತ್ತೊಮ್ಮೆ ಸೋಲನುಭವಿಸಿದರು. ಆ ನಂತರ ರಾಜ್ಯ ರಾಜಕೀಯದಲ್ಲಿ ನಡೆದ ವಿದ್ಯಮಾನಗಳ ಹಿನ್ನಲೆಯಲ್ಲಿ ಬಿಜೆಪಿ ಸರ್ಕಾರ ವಿಶ್ವಾಸ ಮತ ಸಾಬೀತುಪಡಿಸುವ ಅನಿವಾರ್ಯತೆಗೆ ಸಿಲುಕಿತ್ತು. ಈ ವೇಳೆ ಚನ್ನಪಟ್ಟಣದ ಶಾಸಕ ಎಂ.ಸಿ.ಅಶ್ವತ್‌್ಥ ಆಪರೇಷನ್‌ ಕಮಲಕ್ಕೆ ಒಳಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಅಶ್ವತ್‌ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ 2011ರಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಪಿವೈ ಆ ಚುನಾವಣೆ ಜೆಡಿಎಸ್‌ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಅವರನ್ನು ಪರಾಭವಗೊಳಿಸಿ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. 2013ರ ವೇಳೆಗೆ ಯೋಗೇಶ್ವರ್‌ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರ್ಪಡೆಗೊಂಡರು. ಆದರೆ ಆ ಚುನಾವಣೆಯಲ್ಲಿ ಸಿಪಿವೈಗೆ ಕಾಂಗ್ರೆಸ್‌ ಟಿಕೆಟ್‌ ನೀಡದೇ ಮಾಜಿ ಶಾಸಕ ಸಾದತ್‌ ಅಲಿಖಾನ್‌ಗೆ ಮಣೆ ಹಾಕಿತು. 

ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಸೈಕಲ್‌ ಏರಿದ ಯೋಗೇಶ್ವರ್‌ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸಿಪಿವೈ ಪ್ರತಿ ಸ್ಪರ್ಧಿಯಾಗಿದ್ದರು. ಕ್ಷೇತ್ರದ ಮಟ್ಟಿಗೆ ಅಪರಿಚಿತವಾದ ಸಮಾಜ ಪಾರ್ಟಿಯಿಂದ ಸ್ಪರ್ಧಿಸಿದ್ದರೂ ಸಹ ಅವರು ಅನಿತಾ ಕುಮಾರಸ್ವಾಮಿ ಅವರನ್ನು ಮಣಿಸುವಲ್ಲಿ ಸಫಲರಾಗಿದ್ದರು. ಆ ನಂತರ ಕಾಂಗ್ರೆಸ್‌ನೊಂದಿಗೆ ಮತ್ತೆ ಗುರುತಿಸಿಕೊಂಡ ಯೋಗೇಶ್ವರ್‌, 2018ರಲ್ಲಿ ಮತ್ತೆ ಬಿಜೆಪಿ ತೆಕ್ಕೆಗೆ ಜಾರಿದರು. 2018 ಹಾಗೂ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಅವರು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಸೋಲನುಭವಿಸಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿದಾಗ 4 ಬಾರಿ ಸೋಲು: ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿದ್ದ 5 ಚುನಾವಣೆಯಲ್ಲಿ ಯೋಗೇಶ್ವರ್‌ ನಾಲ್ಕು ಬಾರಿ ಸೋಲಿನ ಸುಳಿಗೆ ಸಿಲುಕಿದ್ದಾರೆ. 2008, 2018 ಹಾಗೂ 2023ರ ವಿಧಾನಸಭೆ ಚುನಾವಣೆ ಹಾಗೂ 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದಾಗಲೇ ಅವರಿಗೆ ಸೋಲಾಗಿದೆ. 2011ರ ವಿಧಾನಸಭೆ ಉಪಚುನಾವಣೆಯಲ್ಲಿ ಒಮ್ಮೆ ಮಾತ್ರ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸುವಲ್ಲಿ ಅವರು ಸಫಲರಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗಲೆಲ್ಲ ಅವರಿಗೆ ಹಿನ್ನೆಡೆಯಾಗಿದೆ. ಅದೇ ರೀತಿ ಬೇರೆ ಪಕ್ಷದಿಂದ ಸ್ಪರ್ಧಿಸಿದಾಗ ಅವರು ಒಮ್ಮೆಯೂ ಸೋಲಿನ ದವಡೆಗೆ ಸಿಲುಕಿಲ್ಲ ಎಂಬುದು ಸೋಜಿಗ.

ಸಿಪಿವೈ ಸೋತಾಗಲೇ ಅಧಿಕಾರ ದಕ್ಕಿದ್ದು!: ಪಕ್ಷೇತರ, ಕಾಂಗ್ರೆಸ್‌, ಸಮಾಜವಾದಿ ಪಕ್ಷಗಳಿಂದ ಸ್ಪರ್ಧಿಸಿ ಒಟ್ಟಾರೆಯಾಗಿ 5ಬಾರಿ ಚನ್ನಪಟ್ಟಣದ ಶಾಸಕರಾಗಿ ಯೋಗೇಶ್ವರ್‌ ಆಯ್ಕೆಯಾದರೂ ಸಹ ಅವರಿಗೆ ಒಮ್ಮೆಯೂ ಆ ಪಕ್ಷಗಳಲ್ಲಿ ಸಚಿವ ಸ್ಥಾನದ ಅಧಿಕಾರ ದಕ್ಕಲಿಲ್ಲ. ಆದರೆ, ಕಮಲ ಹಿಡಿದು ಸೋತಾಗಲೆಲ್ಲ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. 2009ರಲ್ಲಿ ಆಪರೇಷನ್‌ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿ ಅವರು ಲೋಕಸಭೆ, ವಿಧಾನಸಭೆ ಎರಡು ಚುನಾವಣೆಗಳಲ್ಲಿ ಸೋತರು ಸಹ ಸಿಪಿವೈಗೆ ಬಿಜೆಪಿಯಲ್ಲಿ ಕೆಎಸ್‌ಐಸಿ ನಿಗಮದ ಅಧ್ಯಕ್ಷಗಿರಿ ಸಿಕ್ಕಿದೆ. 

ಅದೇ ರೀತಿ 2011ರ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಅವರನ್ನು ಬಿಜೆಪಿ ಅರಣ್ಯ ಸಚಿವರನ್ನಾಗಿ ಮಾಡಿತು. ಅದೇ ರೀತಿ 2018ರ ವಿಧಾನಸಭೆ ಚುನಾವಣೆಯಲ್ಲಿ ಸಿಪಿವೈ ಸೋತರು ಸಹ ವಿಧಾನಪರಿಷತ್‌ಗೆ ಆಯ್ಕೆ ಮಾಡಿ ಅವರಿಗೆ ಕೆಲ ಕಾಲ ಪ್ರವಾಸೋದ್ಯಮ ಸಚಿವ ಸ್ಥಾನವನ್ನು ನೀಡಿದ್ದು ಸಹ ಬಿಜೆಪಿ. ಯೋಗೇಶ್ವರ್‌ ಬೇರೆ ಪಕ್ಷಗಳಿಂದ ಸ್ಪರ್ಧಿಸಿದಾಗಲೆಲ್ಲಾ ಗೆದ್ದಿದ್ದರು ಸಹ ಅವರು ಸೋತರು ಸಹ ಅವರಿಗೆ ಅಧಿಕಾರ ಸಿಕ್ಕಿದ್ದು ಬಿಜೆಪಿಯಲ್ಲಿ ಮಾತ್ರ ಎಂಬುದು ವಿಪರ್ಯಾಸ.

ದೇವೇ​ಗೌ​ಡರ 3ನೇ ತಲೆ​ಮಾ​ರಿನ ಎಂಟ್ರಿಗೆ ‘ಕೈ’ ಬ್ರೇಕ್‌: ನಿಖಿಲ್‌ ಸೋಲಿಗೆ ಕಾರ​ಣ​ಗ​ಳೇನು?

2 ಬಾರಿ ಸಾದತ್‌ ಅಲಿಖಾನ್‌ಗೆ ಮಣೆ ಹಾಕಿದ ಕೈ!: 1999ರಲ್ಲಿ ರಾಜಕೀಯ ರಂಗ ಪ್ರವೇಶಿಸಿ ಯೋಗೇಶ್ವರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಆ ಚುನಾವಣೆಯಲ್ಲಿ ಮಾಜಿ ಶಾಸಕ ಸಾದತ್‌ ಅಲಿಖಾನ್‌ಗೆ ಮಣೆ ಹಾಕಿದ ಕಾಂಗ್ರೆಸ್‌ ಯೋಗೇಶ್ವರ್‌ಗೆ ಟಿಕೆಟ್‌ ನಿರಾಕರಿಸಿತ್ತು. ಈ ವೇಳೆ ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದ ಯೋಗೇಶ್ವರ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ನಂತರ 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಯೋಗೇಶ್ವರ್‌ ಬಯಸಿದ್ದರು. ಆದರೆ, ಆ ಚುನಾವಣೆಯಲ್ಲಿ ಸಹ ಕಾಂಗ್ರೆಸ್‌ ಸಾದತ್‌ ಅಲಿಖಾನ್‌ಗೆ ಟಿಕೆಟ್‌ ನೀಡಿತ್ತು. ಕಡೆಕ್ಷಣದಲ್ಲಿ ಸಮಾಜವಾದಿ ಪಕ್ಷದ ಸೈಕಲ್‌ ಏರಿದ್ದ ಯೋಗೇಶ್ವರ್‌ ಆ ಚುನಾವಣೆಯಲ್ಲಿ ಸಹ ಗೆಲುವು ಸಾಧಿಸಿದ್ದರು. ಹೀಗೆ ಎರಡು ಬಾರಿ ಸಹ ಸಾದತ್‌ ಅಲಿಖಾನ್‌ಗೆ ಮಣೆ ಹಾಕಿದ ಕಾರಣಕ್ಕೆ ಯೋಗೇಶ್ವರ್‌ಗೆ ಟಿಕೆಟ್‌ ಕಾಂಗ್ರೆಸ್‌ ತಪ್ಪಿದ್ದು ಮಾತ್ರ ವಿಪರ್ಯಾಸ.