ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ ನಡೆದಿದೆ. ಬೆಂಗಳೂರಿನ ಗೋವಿಂದರಾಜನಗರದಲ್ಲಿ ಈ ದುರಂತ ನಡೆದಿದೆ. ಗೀಸರ್ ಅನಿಲ ಸೋರಿಕೆಯಾಗಿ ತಾಯಿ ಹಾಗೂ ಮಗೂ ಇಬ್ಬರು ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರು (ಡಿ.08) ಗೀಸರ್ ಬಳಸುವ ಮಂದಿ ಅತೀವ ಎಚ್ಚರಿಕೆ ವಹಿಸಬೇಕು. ಬಿಸಿ ನೀರಿಗಾಗಿ ಬಹುತೇಕರು ಗೀಸರ್ ಬಳಕೆ ಮಾಡುತ್ತಾರೆ. ಆದರೆ ಗೀಸರ್ ಸೋರಿಕೆ ಅತ್ಯಂತ ಅಪಾಯಾಕಾರಿಯಾಗಿದೆ. ಇದೀಗ ಬೆಂಗಳೂರಿನ ಗೋವಿಂದರಾಜನಗರದ ಬಳಿ ಇರುವ ಪಂಚಶೀಲನಗರದ ಗೀಸರ್ ಸೋರಿಕೆಯಿಂದ ತಾಯಿ ಹಾಗೂ 4 ವರ್ಷದ ಮಗು ಮೃತಪಟ್ಟ ಘಟನ ನಡೆದಿದೆ. ಮಗುವನ್ನು ಸ್ನಾನ ಮಾಡಿಸಲು ತೆರಳಿದಾಗ ಗೀಸರ್ ಸೋರಿಕೆಯಾಗಿರುವುದು ಅರಿವಿಗೆ ಬಂದಿಲ್ಲ. ಇಬ್ಬರು ಕಾರ್ಬನ್ ಡೈಆಕ್ಸೈಡ್ ಗಾಳಿ ಸೇವಿಸಿ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ.
ಮಗುವಿನ ಸ್ನಾಕ್ಕೆ ಗೀಸರ್ ಆನ್ ಮಾಡಿದ್ದ ತಾಯಿ
26 ವರ್ಷದ ಚಾಂದಿನಿ ತನ್ನ ನಾಲ್ಕು ವರ್ಷದ ಮಗು ಯುವಿ ಸ್ನಾನ ಮಾಡಿಸಲು ಗೀಸರ್ ಆನ್ ಮಾಡಿದ್ದರು. ಆದರೆ ಗೀಸರ್ ಸೋರಿಕೆಯಾಗುತ್ತಿರುವುದು ಗೊತ್ತಿರಲಿಲ್ಲ. ಗೀಸರ್‌ನಿಂದ ಸೋರಿಕೆಯಾದ ಕಾರ್ಬನ್ ಡೈಆಕ್ಸೈಡ್ ಬಾತ್ ರೂಂ ತುಂಬಿಕೊಂಡಿದೆ. ಮಗುವಿನ ಸ್ನಾನ ಮಾಡಿಸಲು ಬಾತ್ ರೂಂ ಒಳ ಹೊಕ್ಕ ತಾಯಿ ಮಗು ಕೆಲವೇ ನಿಮಿಷದಲ್ಲಿ ಅಸ್ವಸ್ಥರಾಗಿದ್ದಾರೆ. ಮಗುವನ್ನು ಎತ್ತಿ ಹೊರಬಂದರೂ ಇಬ್ಬರು ವಿಲವಿಲ ಒದ್ದಾಡಿದ್ದಾರೆ.
ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ
ಅಸ್ವಸ್ಥರಾಗಿ ಬಿದ್ದಿದ್ದ ತಾಯಿ ಹಾಗೂ ಮಗುವನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಎರಡು ಜೀವಗಳು ಗೀಸರ್ ಸೋರಿಕೆಗೆ ಬಲಿಯಾಗಿದೆ. ಚಾಂದಿನಿ ಪತಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಡ ಕುಟುಂಬ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿತ್ತು. ಹಲವು ಕನಸುಗಳ ಹೊತ್ತು ಸಾಗಿತ್ತು. ಆದರೆ ಬದುಕಿನಲ್ಲ ಎದುರಾದ ವಿದಿಯಾಟಕ್ಕೆ ಎರಡು ಅಮೂಲ್ಯ ಜೀವಗಳು ಬಲಿಯಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹ
ತಾಯಿ ಹಾಗೂ ಮಗುವಿನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿದೆ. ಇತ್ತ ಆಸ್ಪತ್ರೆಯಿಂದ ಮಾಹಿತಿ ತಿಳಿದ ಪೊಲೀಸರು ಪ್ರಕರಣ ದಾಖಳಿಸಿಕೊಂಡಿದ್ದಾರೆ. ಇದೀಗ ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರ ನಡೆಯಲಿದೆ.


