ಕಲಬುರಗಿ ಜಿಲ್ಲೆಯ ಸುವರ್ಣಗಿರಿಯಲ್ಲಿ ಬಿತ್ತನೆ ಮಾಡದೆ ತಾನಾಗಿಯೇ ಬೆಳೆಯುವ ವಿಸ್ಮಯಕಾರಿ ಭತ್ತದ ಬೆಳೆಯ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ್ದಾರೆ. ಈ ಭತ್ತವು ವಿಜ್ಞಾನಕ್ಕೂ ನಿಲುಕದ ಪವಾಡವಾಗಿದ್ದು, ಮೂರು ಬಣ್ಣಗಳ ಛಾಯೆಯನ್ನು ಹೊಂದಿದೆ ಮತ್ತು ಇದು ವೈಕುಂಠ ಏಕಾದಶಿಯ ವಿಶೇಷ ಪೂಜೆಯಲ್ಲಿ ಬಳಸಲ್ಪಡುತ್ತದೆ.
ಕಲಬುರಗಿ: ಮನುಷ್ಯರು ತಾವೇ ಸರ್ವಾಂತರಯಾಮಿ, ತಮಗೆ ಎಲ್ಲವೂ ಗೊತ್ತು. ಸಂಶೋಧನೆಯಿಂದ ಎಲ್ಲವನ್ನೂ ಬಯಲು ಮಾಡಬಹುದು ಎಂದುಕೊಂಡರೂ ಈ ಪ್ರಕೃತಿಯ ಮುಂದೆ ಎಲ್ಲವೂ ಶೂನ್ಯವೇ. ಕೆಲವೊಂದು ಘಟನೆಗಳು ಯಾರ ಊಹೆಗೂ ನಿಲುಕುವುದೇ ಇಲ್ಲ. ಸಾಮಾನ್ಯವಾಗಿ ವೈಜ್ಞಾನಿಕವಾಗಿ ಸಾಬೀತಾದರೆ ಮಾತ್ರ ಅದು ನಿಜ ಎಂದು ನಂಬುವ ವರ್ಗ ನಮ್ಮದು. ಆದರೆ ಅದೆಷ್ಟೋ ಘಟನೆಗಳು ವಿಜ್ಞಾನಕ್ಕೂ ಮೀರಿ ನಡೆಯುತ್ತದೆ. ಅದು ಏನು, ಹೇಗೆ, ಎತ್ತ ಎನ್ನುವುದು ಯಾವುದೇ ಸಂಶೋಧನೆಯಿಂದಲೂ ತಿಳಿಯುವುದೇ ಇಲ್ಲ. ಅಂಥದ್ದೇ ಒಂದು ವಿಚಿತ್ರ ಕಲಬುರಗಿ ಜಿಲ್ಲೆಯ ಸುವರ್ಣಗಿರಿಯಲ್ಲಿದೆ. ಅದರ ಬಗ್ಗೆ ಇದೀಗ ಹೈಕೋರ್ಟ್ನಲ್ಲಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳೇ ಪ್ರಸ್ತಾಪ ಮಾಡಿದ್ದಾರೆ.
ವಿಚಾರಣೆ ಒಂದರ ಸಂದರ್ಭದಲ್ಲಿ ನ್ಯಾಯಮೂರ್ತಿಶ್ರೀಶಾನಂದ ಅವರು ಈ ಪವಾಡದ ಬಗ್ಗೆ ವಿವರಿಸಿದ್ದಾರೆ. ಅಷ್ಟಕ್ಕೂ, ಕಾಳಗಿ ತಾಲೂಕಿನ ಸೂಗೂರು (ಕೆ) ಗ್ರಾಮದ ಸುವರ್ಣಗಿರಿ ಬೆಟ್ಟದ ಮೇಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಯಾರೂ ಬಿತ್ತನೆ ಮಾಡದೆ, ನೀರು ಹಾಯಿಸದೆ ತಾನಾಗಿಯೇ ಸ್ವಯಂಪ್ರೇರಿತವಾಗಿ ಬೆಳೆಯುವ ಒಂದು ವಿಸ್ಮಯಕಾರಿ ಭತ್ತದ ಬೆಳೆ ಇದೆ. ಇಲ್ಲಿ ಯಾವುದೇ ಬೀಜ ಬಿತ್ತನೆ ಮಾಡದೆ ಅಥವಾ ಕೃಷಿ ಮಾಡದಿದ್ದರೂ ಭತ್ತ ಬೆಳೆಯುತ್ತದೆ. ಜೂನ್ನಿಂದ ಅಕ್ಟೋಬರ್ ತಿಂಗಳವರೆಗೆ ಮಾತ್ರ ಈ ಬೆಳೆ ಕಾಣಸಿಗುತ್ತದೆ. ಪ್ರತಿ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ತಿರುಮಲ-ತಿರುಪತಿಯ ಶ್ರೀ ಕೃಷ್ಣದಾಸ ಮಹಾರಾಜರ ಮಾರ್ಗದರ್ಶನದಲ್ಲಿ ಈ ಭತ್ತದ ರಾಶಿ ಮಾಡಲಾಗುತ್ತದೆ. ಇದರಿಂದ ಸುಮಾರು ಒಂದು ಕ್ವಿಂಟಲ್ ವರೆಗೆ ಉತ್ಪನ್ನ ದೊರೆಯುತ್ತದೆ. ಈ ಬೆಳೆಯಿಂದ ತಯಾರಿಸಿದ ಅಕ್ಕಿಯನ್ನು ವೈಕುಂಠ ಏಕಾದಶಿಯ ಸಂದರ್ಭದಲ್ಲಿ ವಿಶೇಷವಾಗಿ ಬಳಸಲಾಗುತ್ತದೆ.
ದೇವಸ್ಥಾನದ ಗುಡ್ಡದ ಮೇಲಿನ ಸುಮಾರು 20 ಗುಂಟೆ ಜಮೀನಿನಲ್ಲಿ ಪ್ರತಿವರ್ಷ ಮಳೆಗಾಲ ಆರಂಭದಲ್ಲಿಯೇ ಈ ವಿಸ್ಮಯ ಶುರುವಾಗುತ್ತದೆ. ಮಳೆಗಾಲ ಪ್ರಾರಂಭ ಆಗುತ್ತಿದ್ದಂತೆಯೇ ಸುಮಾರು 200 ಅಡಿ ಉದ್ದ ಹಾಗೂ 70 ಅಡಿ ಅಗಲದ ಪ್ರದೇಶದಲ್ಲಿ ಭತ್ತದ ಸಸಿಗಳು ಕಾಣಿಸಿಕೊಳ್ಳುತ್ತವೆ. ಈ ಪೈರು ಜೂನ್ನಿಂದ ಅಕ್ಟೋಬರ್ವರೆಗೆ ಮಾತ್ರ ವೀಕ್ಷಣೆಗೆ ಲಭ್ಯ. ಬಳಿಕ ಕಟಾವು ನಡೆಸಿ ಭತ್ತವನ್ನು ಸಂಗ್ರಹಿಸಲಾಗುತ್ತದೆ. ಇಲ್ಲಿನ ಪೈರಿನಿಂದ ದೊರೆಯುವ ಬೀಜವನ್ನು ಬೇರೆಡೆ ಬಿತ್ತಿದರೂ ಅದೇ ರೀತಿ ಮೊಳಕೆ ಬರುವುದಿಲ್ಲ ಎಂಬುದು ಸ್ಥಳೀಯರ ನಂಬಿಕೆ. ಈ ವಿಸ್ಮಯ ನೋಡಲು ದೇಶದ ಮೂಲೆಮೂಲೆಗಳಿಂದ ಜನರು ಬರುವುದು ಇದೆ. ಇಲ್ಲಿನ ಬೆಳೆಯ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಭತ್ತದಲ್ಲಿ ಮೂರು ಬಣ್ಣಗಳ ಛಾಯೆ ಕಂಡುಬರುತ್ತದೆ ಎನ್ನುವುದು. ಭತ್ತವನ್ನು ಅಕ್ಕಿಯಾಗಿ ಪರಿವರ್ತಿಸಿದಾಗ ಕಾಳಿನ ಮೇಲ್ಭಾಗದಲ್ಲಿ ಮೂರು ನಾಮಗಳಂತೆ ಗೆರೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎನ್ನಲಾಗಿದೆ.
ಹಿರಿಯರು ಹೇಳುವುದು ಏನು?
ಅಷ್ಟಕ್ಕೂ ಈ ಪವಾಡದ ಬಗ್ಗೆ ಹಲವು ಕಥೆಗಳೇ ಇವೆ. ಅವುಗಳಲ್ಲಿ ಮುಖ್ಯವಾದದ್ದು ಎಂದರೆ, ರಾಜಸ್ಥಾನದ ನಾಗೌರ್ ಜಿಲ್ಲೆಯ ಹಾಥಿರಾಮಜೀ ಮಹಾರಾಜರು ಬಾಲಾಜಿ ದರ್ಶನಕ್ಕಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಸುವರ್ಣಗಿರಿ ಬೆಟ್ಟಕ್ಕೆ ಬಂದಿದ್ದರು. ಇಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ಬಳಿಕ ಈ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿದರು. ಹೀಗಾಗಿ ಸೂಗೂರು (ಕೆ)ಯನ್ನು ವೆಂಕಟೇಶ್ವರ ಸ್ವಾಮಿಯ ಮೂಲಸ್ಥಾನವೆಂದು ಭಕ್ತರು ಪರಿಗಣಿಸುತ್ತಾರೆ. ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಈ ಬೆಟ್ಟದಲ್ಲಿ ಅನುಷ್ಠಾನ ನಡೆಸಿ ತಮ್ಮ ಆಹಾರಕ್ಕಾಗಿ ಪೈರು ಬೆಳೆಸುತ್ತಿದ್ದರು ಎಂಬ ನಂಬಿಕೆಯೂ ಇದೆ. ಇಲ್ಲಿನ ಭತ್ತವನ್ನು ಮೊದಲು ಸ್ವಾಮಿಗೆ ನೈವೇದ್ಯ ಅರ್ಪಿಸಿ, ಬಳಿಕ ಸಾಧು-ಸಂತರು ಹಾಗೂ ಭಕ್ತರು ಸ್ವೀಕರಿಸುತ್ತಿದ್ದರು ಎಂಬ ಪ್ರತೀತಿಯನ್ನು ಗ್ರಾಮಸ್ಥರು ಮುಂದುವರಿಸಿಕೊಂಡು ಬಂದಿದ್ದಾರೆ.
ಇನ್ನೂ ಸಿಕ್ಕಿಲ್ಲ ಉತ್ತರ
ಈ ವಿಶಿಷ್ಟ ಬೆಳೆಯ ಸ್ವರೂಪಕ್ಕೆ ಕಾರಣವೇನು? ಬೀಜ ಬೇರೆಡೆ ಮೊಳೆಯದಿರುವುದಕ್ಕೆ ವೈಜ್ಞಾನಿಕ ಕಾರಣವೇನು? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕೃಷಿ ಇಲಾಖೆ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಹಿಂದೆ ಈ ಬೆಳೆಯನ್ನು ಕೊಯ್ದು ರಾಶಿ ಮಾಡುವುದಕ್ಕೂ, ಅಕ್ಕಿಯಾಗಿ ಬಳಕೆ ಮಾಡುವುದಕ್ಕೂ ಭಕ್ತರು ಹಿಂಜರಿಯುತ್ತಿದ್ದರು. ಆದರೆ ಹಾಥಿರಾಮಜೀ ಮಠ, ತಿರುಮಲ-ತಿರುಪತಿಯ ಶ್ರೀ ಕೃಷ್ಣದಾಸ ಮಹಾರಾಜರ ಮಾರ್ಗದರ್ಶನದಲ್ಲಿ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ಪ್ರತಿ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಭತ್ತದ ರಾಶಿ ಮಾಡಲಾಗುತ್ತಿದೆ. ಸುಮಾರು ಒಂದು ಕ್ವಿಂಟಲ್ವರೆಗೆ ಉತ್ಪನ್ನ ದೊರೆಯುತ್ತದೆ ಎಂದು ದೇವಸ್ಥಾನದವರು ತಿಳಿಸಿದ್ದಾರೆ.














