ಬೆಂಗಳೂರಿನ ಅಲಯನ್ಸ್ ಫ್ರಾನ್ಸೈಸ್ನಲ್ಲಿ ಗಿರೀಶ್ ಕಾರ್ನಾಡ್ ಥಿಯೇಟರ್ ಫೆಸ್ಟಿವಲ್ ನಡೆಯಲಿದೆ. ‘ತುಘಲಕ್’, ‘ಎ ಹೀಪ್ ಆಫ್ ಬ್ರೋಕನ್ ಇಮೇಜಸ್’ ಮತ್ತು ‘ಹಯವದನ’ ಸೇರಿದಂತೆ ಕಾರ್ನಾಡರ ಮೂ ರು..
ನವೆಂಬರ್ 22 ರಂದು ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಅವರ ಮೂರು ಕೃತಿಗಳು ರಂಗದ ಮೇಲೆ ಅನಾವರಣಗೊಳ್ಳುತ್ತಿವೆ. ಒಂದೇ ದಿನ ಮೂರು ಕೃತಿಗಳು ಹೊಸ ರೂಪದಲ್ಲಿ ರಂಗ ಪ್ರಿಯರ ಮುಂದೆ ತೆರೆದುಕೊಳ್ಳುತ್ತಿದ್ದು, ಈ ಕುರಿತು ವಿಶೇಷ ಮಾಹಿತಿ ಇಲ್ಲಿ.
ಹೊಸ ರಂಗಸ್ಪರ್ಶ
ಕನ್ನಡ ಸಾಹಿತ್ಯ ಹಾಗೂ ರಂಗಭೂಮಿಗೆ ಜಾಗತಿಕ ಮನ್ನಣೆ ತಂದುಕೊಟ್ಟ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಕೃತಿಗಳು ಕಾಲದ ಗಡಿಯನ್ನು ದಾಟಿ ಇಂದಿಗೂ ಹೊಸ ತಲೆಮಾರಿನ ಕಲಾವಿದರು ಹಾಗೂ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಪುರಾಣ, ಇತಿಹಾಸ, ಸಮಕಾಲೀನ ಬದುಕು ಹಾಗೂ ಮನುಷ್ಯನ ಅಂತರಂಗದ ಸಂಘರ್ಷಗಳನ್ನು ತಮ್ಮದೇ ವಿಶಿಷ್ಟ ನಾಟಕೀಯ ಭಾಷೆಯಲ್ಲಿ ಕಟ್ಟಿಕೊಟ್ಟ ಕಾರ್ನಾಡರ ಕೃತಿಗಳಿಗೆ ಇದೀಗ ವಿಶೇಷ ರಂಗಸ್ಪರ್ಶ ದೊರೆಯಲಿದೆ.
ಮೂರು ನಾಟಕಗಳ ಫೆಸ್ಟಿವಲ್
ನವೆಂಬರ್ 22ರಂದು ಬೆಂಗಳೂರಿನ ಶಿವಾಜಿನಗರ ಬಳಿಯ ವಸಂತನಗರದಲ್ಲಿರುವ ಅಲಯನ್ಸ್ ಫ್ರಾನ್ಸೈಸ್ನಲ್ಲಿ ‘ಗಿರೀಶ್ ಕಾರ್ನಾಡ್ ಥಿಯೇಟರ್ ಫೆಸ್ಟಿವಲ್’ ಆಯೋಜಿಸಲಾಗಿದೆ. ಆರ್ಗನೈಸೇಷನಲ್ ಥಿಯೇಟರ್ ಸಾರಥ್ಯದ ಈ ಉತ್ಸವದಲ್ಲಿ ಕಾರ್ನಾಡರ ಮೂರು ಪ್ರಮುಖ ಕೃತಿಗಳಾದ ‘ತುಘಲಕ್’, ‘ಎ ಹೀಪ್ ಆಫ್ ಬ್ರೋಕನ್ ಇಮೇಜಸ್’ ಹಾಗೂ ‘ಹಯವದನ’ ನಾಟಕಗಳು ಪ್ರದರ್ಶನಗೊಳ್ಳಲಿವೆ.
ನಾಟಕಗಳ ವೈಶಿಷ್ಟ್ಯ
ಕಾರ್ನಾಡರ ನಾಟಕಗಳ ವೈಶಿಷ್ಟ್ಯವೆಂದರೆ ಅವು ಕೇವಲ ಒಂದು ಕಾಲಘಟ್ಟದ ಕಥೆಗಳಾಗಿ ಉಳಿಯುವುದಿಲ್ಲ. ಅಧಿಕಾರದ ರಾಜಕಾರಣ, ವ್ಯಕ್ತಿತ್ವದ ಹುಡುಕಾಟ, ಮನುಷ್ಯನ ಅಂತರಂಗದ ತೊಳಲಾಟ ಹಾಗೂ ಸಾರ್ವಕಾಲಿಕ ವಿಚಾರಗಳನ್ನು ಪ್ರೇಕ್ಷಕರ ಮುಂದಿಡುತ್ತವೆ. ಕನ್ನಡದ ರಂಗ ಸಾಹಿತ್ಯಕ್ಕೆ ಜಾಗತಿಕ ಆಯಾಮ ತಂದುಕೊಟ್ಟ ಮಹತ್ವದ ಕೃತಿಗಳು ಅನ್ಯಭಾಷೆಯ ಪ್ರೇಕ್ಷಕರನ್ನು ತಲುಪುತ್ತಿರುವುದು ಈ ಉತ್ಸವದ ವಿಶೇಷ. ಕಾರ್ನಾಡರ ಸೃಜನಶೀಲ ಜಗತ್ತನ್ನು ಮತ್ತೊಮ್ಮೆ ನೆನಪಿಸಿಕೊಳ್ಳಲು ಮತ್ತು ಅವರ ನಾಟಕಗಳ ಸಮಕಾಲೀನ ಪ್ರಸ್ತುತತೆಯನ್ನು ಅರಿಯಲು ಈ ಉತ್ಸವ ಉತ್ತಮ ವೇದಿಕೆಯಾಗಲಿದೆ.
ಈ ಕಾರ್ಯಕ್ರಮದ ವಿಶೇಷವೆಂದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡರ ಕೃತಿಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಹೊಸ ತಲೆಮಾರಿನ ಕಲಾವಿದರಿಂದ ಮರು ಪ್ರಸ್ತುತಗೊಳ್ಳುತ್ತಿರುವುದು. ಕನ್ನಡ ರಂಗಭೂಮಿಯ ಮಹತ್ವದ ಕೃತಿಗಳು ಭಾಷೆಯ ಗಡಿಯನ್ನು ದಾಟಿ ಹೀಗೆ ಹೊಸ ಪ್ರೇಕ್ಷಕರನ್ನು ತಲುಪುತ್ತಿರುವುದು ಈ ಉತ್ಸವದ ಸಾಂಸ್ಕೃತಿಕ ಮಹತ್ವವಾಗಿ ನೋಡಬಹುದು.
ಮೂವರು ನಿರ್ದೇಶಕರು
ಮೂರು ನಾಟಕಗಳನ್ನು ಪ್ರತ್ಯೇಕ ಬೇರೆ ಬೇರೆ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಪುಂಕಜ್ ಗುಪ್ತಾ ಅವರ ನಿರ್ದೇಶನದಲ್ಲಿ ‘ತುಘಲಕ್’, ಸಂಜಯ್ ಸಿಂಗ್ ನಿರ್ದೇಶನದಲ್ಲಿ ‘ಎ ಹೀಪ್ ಆಫ್ ಬ್ರೋಕನ್ ಇಮೇಜಸ್’ ಹಾಗೂ ಝರ್ನಾ ಗುಪ್ತಾ ಅವರು ‘ಹಯವದನ’ ನಾಟಕ ನಿರ್ದೇಶಿಸಲಿದ್ದಾರೆ. ಪ್ರತಿಯೊಂದು ನಾಟಕವೂ ಸುಮಾರು 45 ನಿಮಿಷಗಳ ಅವಧಿಯನ್ನು ಹೊಂದಿದ್ದು, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಸ್ತುತಗೊಳ್ಳಲಿದೆ.
ಎಲ್ಲಿ, ಯಾವಾಗ, ಯಾರಿಂದ?
ಸ್ಥಳ: ಅಲಯನ್ಸ್ ಫ್ರಾನ್ಸೈಸ್, ವಸಂತನಗರ, ಬೆಂಗಳೂರು
ಸಮಯ: ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ
ಭಾಷೆ: ಇಂಗ್ಲಿಷ್ ಮತ್ತು ಹಿಂದಿ
ಆಯೋಜನೆ: ಆರ್ಗನೈಸೇಷನಲ್ ಥಿಯೇಟರ್














