- Home
- Karnataka Districts
- ರಾಮನಗರ ಬೆಟ್ಟಕ್ಕೆ ಟ್ರೆಕ್ಕಿಂಗ್ ಬಂದು ದಾರಿ ತಪ್ಪಿದ ಯೂಟ್ಯೂಬರ್; ರಕ್ಷಣೆಗಾಗಿ ಪರದಾಡಿದ ಯುವಕನ ಕಥೆ ಕೇಳಿ!
ರಾಮನಗರ ಬೆಟ್ಟಕ್ಕೆ ಟ್ರೆಕ್ಕಿಂಗ್ ಬಂದು ದಾರಿ ತಪ್ಪಿದ ಯೂಟ್ಯೂಬರ್; ರಕ್ಷಣೆಗಾಗಿ ಪರದಾಡಿದ ಯುವಕನ ಕಥೆ ಕೇಳಿ!
ಒಡಿಶಾ ಮೂಲದ ಯೂಟ್ಯೂಬರ್ ಬಿಸ್ವಾಜಿತ್ ನಾಥ್ ರಾಮನಗರದ ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ಚಾರಣ ಮಾಡುವಾಗ ದಾರಿ ತಪ್ಪಿ ಸಿಲುಕಿದ್ದರು. ಬೆಟ್ಟವನ್ನು ಹತ್ತಿದ ನಂತರ ಕೆಳಗಿಳಿಯುವಾಗ ದಾರಿ ತಪ್ಪಿ ರಕ್ಷಣೆ ಮಾಡುವಂತೆ ಹೇಗೆಲ್ಲಾ ಪರದಾಡಿದ್ದಾನೆ ಎಂಬ ರೋಚಕ ಸ್ಟೋರಿ ಇಲ್ಲಿದೆ ನೋಡಿ…

ರಾಮನಗರ ಬೆಟ್ಟದಲ್ಲಿ ಕಳೆದುಹೋದ ಯೂಟ್ಯೂಬರ್
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪ್ರವಾಸಿಗರು ವಾರಾಂತ್ಯದ ವೇಳೆ ರಾಮನಗರದ ಸುತ್ತಮುತ್ತಲಿನ ಬೆಟ್ಟಗುಡ್ಡಗಳಿಗೆ ಚಾರಣ (Trekking) ಕೈಗೊಳ್ಳುವುದು ಸಾಮಾನ್ಯ. ಆದರೆ, ಸೂಕ್ತ ಮಾಹಿತಿ ಇಲ್ಲದೆ ಒಬ್ಬಂಟಿಯಾಗಿ ಚಾರಣಕ್ಕೆ ತೆರಳಿ ಅಪಾಯಕ್ಕೆ ಸಿಲುಕುವ ಘಟನೆಗಳು ಮರುಕಳಿಸುತ್ತಲೇ ಇವೆ. ಇದಕ್ಕೆ ಸಾಕ್ಷಿಯೆಂಬಂತೆ, ರಾಮನಗರ ತಾಲೂಕಿನ ಹುಣಸನಹಳ್ಳಿ ಸಮೀಪದ ಹನುಮಂತರಾಯಸ್ವಾಮಿ ಬೆಟ್ಟಕ್ಕೆ ಚಾರಣಕ್ಕೆ ಬಂದಿದ್ದ ಒಡಿಶಾ ಮೂಲದ ಯೂಟ್ಯೂಬರ್ ಒಬ್ಬರು ದಾರಿ ಕಾಣದೆ ಬೆಟ್ಟದ ತುದಿಯಲ್ಲಿ ಸಿಲುಕಿ, ಕೊನೆಗೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟಿದ್ದಾರೆ.
ಬೈಕ್ನಲ್ಲಿ ಒಬ್ಬನೇ ಬಂದು ಚಾರಣ ಆರಂಭಿಸಿದ್ದ ಯುವಕ:
ದಾರಿ ತಪ್ಪಿ ಸಂಕಷ್ಟಕ್ಕೆ ಸಿಲುಕಿದ ಯುವಕನನ್ನು ಒಡಿಶಾ ಮೂಲದ ಯೂಟ್ಯೂಬರ್ ಬಿಸ್ವಾಜಿತ್ ನಾಥ್ ಎಂದು ಗುರುತಿಸಲಾಗಿದೆ. ಯೂಟ್ಯೂಬ್ಗಾಗಿ ವಿಡಿಯೋ ಮಾಡಲು ಮತ್ತು ವಾರಾಂತ್ಯದ ಮಜಾ ಮಾಡಲು ಇಂದು (ಭಾನುವಾರ) ಬೆಳಿಗ್ಗೆ ಬಿಸ್ವಾಜಿತ್ ನಾಥ್ ತಮ್ಮ ಬೈಕ್ನಲ್ಲಿ ಒಬ್ಬಂಟಿಯಾಗಿ ರಾಮನಗರ ತಾಲೂಕಿನ ಹುಣಸನಹಳ್ಳಿ ಬಳಿಯಿರುವ ಹನುಮಂತರಾಯಸ್ವಾಮಿ ಬೆಟ್ಟಕ್ಕೆ ಬಂದಿದ್ದರು. ಬೆಟ್ಟ ಏರುವಾಗ ಹುರುಪಿನಿಂದಲೇ ಕಾಲ್ನಡಿಗೆ ಆರಂಭಿಸಿದ ಯುವಕ, ಬೆಟ್ಟದ ದುರ್ಗಮ ಹಾದಿಗಳಲ್ಲಿ ಸಾಗುತ್ತಾ ತುತ್ತತುದಿ ತಲುಪಿದ್ದಾರೆ.
ಆದರೆ, ವಾಪಸ್ ಕೆಳಗಿಳಿಯುವಾಗ ಯಾವ ಕಡೆ ಹೋಗಬೇಕೆಂಬುದು ತಿಳಿಯದೆ ದಾರಿ ತಪ್ಪಿದ್ದಾರೆ. ಮುಳ್ಳು ಕಂಟಿಗಳು, ಕಡಿದಾದ ಬಂಡೆಗಳ ನಡುವೆ ಸಿಲುಕಿದ ಯುವಕನಿಗೆ ವಾಪಸ್ ಬರುವ ದಾರಿ ಸಂಪೂರ್ಣವಾಗಿ ಕಾಣದಂತಾಗಿ ತೀವ್ರ ಆತಂಕಗೊಂಡಿದ್ದಾರೆ.
112 ತುರ್ತು ಸಂಖ್ಯೆಗೆ ಕರೆ:
ಬೆಟ್ಟದ ನಡುವೆ ಸಿಲುಕಿ ಅಸಹಾಯಕರಾದ ಯೂಟ್ಯೂಬರ್ ಬಿಸ್ವಾಜಿತ್, ತಕ್ಷಣವೇ ಮೊಬೈಲ್ ಮೂಲಕ ತುರ್ತು ಸ್ಪಂದನಾ ಸಂಖ್ಯೆ '112'ಗೆ ಕರೆ ಮಾಡಿ ಸಹಾಯ ಕೋರಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಮೊದಲಿಗೆ ಪೊಲೀಸರು ಮೊಬೈಲ್ ಫೋನ್ ಮೂಲಕ ಯೂಟ್ಯೂಬರ್ ಜೊತೆ ಸಂಪರ್ಕ ಸಾಧಿಸಿ, ತಾಳ್ಮೆಯಿಂದ ಇರುವಂತೆ ಧೈರ್ಯ ತುಂಬಿದರು.
ಜೊತೆಗೆ ಅವರು ನಿಂತಿರುವ ಲೊಕೇಶನ್ ಪಡೆದು, ಫೋನ್ನಲ್ಲೇ ವಾಪಸ್ ಬರಬಹುದಾದ ಹಾದಿಗಳ ಬಗ್ಗೆ ಮಾರ್ಗದರ್ಶನ ನೀಡಲು ಪ್ರಯತ್ನಿಸಿದರು. ಆದರೆ ಕಡಿದಾದ ಬಂಡೆಯಾಗಿದ್ದರಿಂದ ಆತ ತಾನಾಗಿಯೇ ಕೆಳಗೆ ಇಳಿಯಲು ಸಾಧ್ಯವಾಗಲಿಲ್ಲ.
ರೋಪ್ ಮೂಲಕ ಸಾಹಸಮಯ ರಕ್ಷಣಾ ಕಾರ್ಯಾಚರಣೆ:
ಸ್ಥಳದ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಟ್ಟದ ಕಡಿದಾದ ಭಾಗಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದರು. ಕೊನೆಗೆ ದಟ್ಟ ಕಾಡು ಹಾಗೂ ಬಂಡೆಗಳ ನಡುವೆ ಸಿಲುಕಿದ್ದ ಬಿಸ್ವಾಜಿತ್ ನಾಥ್ ಅವರನ್ನು ಪತ್ತೆ ಹಚ್ಚುವಲ್ಲಿ ತಂಡ ಯಶಸ್ವಿಯಾಯಿತು. ಕಡಿದಾದ ಪ್ರದೇಶವಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ರೋಪ್ (ಹಗ್ಗ) ಕಟ್ಟಿ, ಕೆಳಗೆ ಇಳಿದು ಅತ್ಯಂತ ಜಾಗರೂಕತೆಯಿಂದ ಯೂಟ್ಯೂಬರ್ ಅನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.
ಪ್ರಸ್ತುತ ಯುವಕನನ್ನು ಬೆಟ್ಟದಿಂದ ಸುರಕ್ಷಿತವಾಗಿ ಕೆಳಗೆ ಕರೆತರಲಾಗಿದ್ದು, ಆತಂಕದಲ್ಲಿದ್ದ ಯುವಕ ನಿಟ್ಟುಸಿರು ಬಿಟ್ಟಿದ್ದಾನೆ. ಸರಿಯಾದ ಸಮಯಕ್ಕೆ ಸ್ಪಂದಿಸಿ ಪ್ರಾಣ ಉಳಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಯೂಟ್ಯೂಬರ್ ಧನ್ಯವಾದ ಅರ್ಪಿಸಿದ್ದಾರೆ.
ಎಚ್ಚರಿಕೆ: ಪರಿಚಿತ ದಾರಿಗಳಿಲ್ಲದ ಅರಣ್ಯ ಹಾಗೂ ದುರ್ಗಮ ಬೆಟ್ಟಗಳಿಗೆ ಏಕಾಂಗಿಯಾಗಿ ಚಾರಣ ಹೋಗುವುದು ಅತ್ಯಂತ ಅಪಾಯಕಾರಿ. ಚಾರಣಕ್ಕೆ ಹೋಗುವ ಮುನ್ನ ಸ್ಥಳೀಯರ ಅಥವಾ ಗೈಡ್ಗಳ ಮಾರ್ಗದರ್ಶನ ಪಡೆಯುವುದು ಕಡ್ಡಾಯ ಎಂದು ಪೊಲೀಸರು ಎಚ್ಚರಿಸಿದ್ದಾರೆ.













