2025-26ರ ಅವಧಿಯಲ್ಲಿ ಮಂಗಳೂರು ಸೆಂಟ್ರಲ್, ಜಂಕ್ಷನ್ ಮತ್ತು ಉಳ್ಳಾಲ ರೈಲು ನಿಲ್ದಾಣಗಳು ಒಟ್ಟು 70 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿವೆ. ಈ ಮೂರು ನಿಲ್ದಾಣಗಳಿಂದ ಸರಿಸುಮಾರು ₹195.48 ಕೋಟಿ ಪ್ರಯಾಣಿಕ ಆದಾಯ ಸಂಗ್ರಹವಾಗಿದೆ.

ಮಂಗಳೂರು (ಅ.15): 2025-26ರ ಅವಧಿಯಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಟಿಕೆಟ್ 16,99,232 ಕಾಯ್ದಿರಿಸಿದ ಮತ್ತು 39,85,579 ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರು ಸೇರಿದಂತೆ ಒಟ್ಟು 56,84,811 ಪ್ರಯಾಣಿಕರನ್ನು ನಿರ್ವಹಿಸಲಾಗಿದೆ.

ಮಂಗಳೂರು ಜಂಕ್ಷನ್ 5,70,828 ಟಿಕೆಟ್ ಕಾಯ್ದಿರಿಸಿದ ಮತ್ತು 6,61,877 ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರನ್ನೊಳಗೊಂಡಂತೆ ಒಟ್ಟು 12,32,705 ಪ್ರಯಾಣಿಕರನ್ನು ನಿರ್ವಹಿಸಿದರೆ, ಉಳ್ಳಾಲ 27,978 ಟಿಕೆಟ್ ಕಾಯ್ದಿರಿಸಿದ ಮತ್ತು 65,277 ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರು ಸೇರಿದಂತೆ ಒಟ್ಟು 93,255 ಪ್ರಯಾಣಿಕರನ್ನು ನಿರ್ವಹಿಸಿದೆ. ಒಟ್ಟಾರೆಯಾಗಿ ಈ ಮೂರು ನಿಲ್ದಾಣಗಳು 70,10,771 ಪ್ರಯಾಣಿಕರ ಸಂಚಾರವನ್ನು ದಾಖಲಿಸಿದ್ದು, ಇದರಲ್ಲಿ ಮಂಗಳೂರು ಸೆಂಟ್ರಲ್ ಒಂದೇ ಶೇಕಡಾ 81ಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ಸಂಗತಿ ರೈಲ್ವೆ ಸಂಘಟನೆಗಳು ಪಡೆದ ಮಾಹಿತಿ ಹಕ್ಕಿನಲ್ಲಿ ತಿಳಿದುಬಂದಿದೆ.

ಪ್ರಯಾಣಿಕ ರೈಲುಗಳ ಆದಾಯ:

ವರದಿಯಾದ ಅವಧಿಯಲ್ಲಿ ಮಂಗಳೂರು ಸೆಂಟ್ರಲ್ ₹ 133.06 ಕೋಟಿ, ಮಂಗಳೂರು ಜಂಕ್ಷನ್ ₹ 62.10 ಕೋಟಿ ಮತ್ತು ಉಳ್ಳಾಲ ₹ 32.72 ಲಕ್ಷ ಪ್ರಯಾಣಿಕ ಆದಾಯವನ್ನು ಗಳಿಸಿವೆ. ಈ ಮೂರು ನಿಲ್ದಾಣಗಳ ಒಟ್ಟು ಆದಾಯ ಸರಿಸುಮಾರು ₹ 195.48 ಕೋಟಿಗಳಾಗಿದ್ದು, ಇದು ಮಂಗಳೂರು ರೈಲ್ವೆ ಜಾಲದ ಗಣನೀಯ ಕೊಡುಗೆಯನ್ನು ತೋರಿಸುತ್ತದೆ.

ನಾನ್-ಸಬರ್ಬನ್ ಗ್ರೂಪ್ (ಎನ್‌ಎಸ್‌ಜಿ) ವರ್ಗೀಕರಣ:

ಮಂಗಳೂರು ಸೆಂಟ್ರಲ್‌ನ್ನು NSG-2, ಮಂಗಳೂರು ಜಂಕ್ಷನ್‌ನ್ನು NSG-3 ಮತ್ತು ಉಳ್ಳಾಲವನ್ನು NSG-4 ಎಂದು ವರ್ಗೀಕರಿಸಲಾಗಿದೆ. ಮೂಲಸೌಕರ್ಯ, ಪ್ರಯಾಣಿಕರ ಸೌಲಭ್ಯಗಳು, ರೈಲು ಸೇವೆಗಳು ಮತ್ತು ಕಾರ್ಯಾಚರಣಾ ಸೌಲಭ್ಯಗಳನ್ನು ಯೋಜಿಸುವಾಗ ಪ್ರಯಾಣಿಕರ ದಟ್ಟಣೆ, ಆದಾಯ ಮತ್ತು ಪ್ರದೇಶದ ಭವಿಷ್ಯದ ಅಗತ್ಯಗಳೊಂದಿಗೆ ಈ ವರ್ಗೀಕರಣಗಳನ್ನು ಪರಿಗಣಿಸುತ್ತಾರೆ. ಪ್ರಮುಖ ರೈಲ್ವೆ ಟರ್ಮಿನಲ್ ಆಗಿರುವ ಮಂಗಳೂರು ಸೆಂಟ್ರಲ್ ಆಧುನೀಕರಣ ಮತ್ತು ಸಾಮರ್ಥ್ಯ ವಿಸ್ತರಣೆಯಲ್ಲಿ ಸೂಕ್ತ ಆದ್ಯತೆಗೆ ಅರ್ಹವಾಗಿದೆ ಎಂಬುದು ರೈಲ್ವೆ ಸಂಘಟನೆಗಳ ಅಭಿಪ್ರಾಯ.

ಸರಕು ಸಾಗಣೆ ಮತ್ತು ನಿರ್ವಹಣೆ:

ಮಂಗಳೂರು ಸೆಂಟ್ರಲ್ ಮತ್ತು ಉಳ್ಳಾಲ ನಿಲ್ದಾಣಗಳ ಸರಕು ಸಾಗಣೆಯ ಅಂಕಿಅಂಶಗಳು ನಿರಂತರ ಬೆಳವಣಿಗೆಯನ್ನು ದಾಖಲಿಸಿವೆ.

2024-25ರಲ್ಲಿ ಸಾಗಿಸಿದ ಸರಕು 38,816 ಟನ್‌ ಮತ್ತು ಸರಕು ಆದಾಯ ₹ 13,78,416 ಆಗಿತ್ತು. 2025-26ರಲ್ಲಿ ಸಾಗಿಸಿದ ಸರಕು 53,293 ಟನ್‌ಗೆ ಏರಿಕೆಯಾಗಿ ಆದಾಯ ₹ 43,49,281 ತಲುಪಿದೆ. 2026-27ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಸಾಗಿಸಿದ ಸರಕು 38,859 ಟನ್‌ ಮತ್ತು ಸರಕು ಆದಾಯ ₹ 25,98,729 ತಲುಪಿದೆ. ಉತ್ತಮ ಸರಕು ನಿರ್ವಹಣಾ ಸೌಲಭ್ಯಗಳು ಮತ್ತು ರೈಲ್ವೆ ಮೂಲಸೌಕರ್ಯಗಳ ಸಮರ್ಪಕ ಬಳಕೆಯಿಂದ ಇದು ಸಾಧ್ಯವಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.