ಬೆಂಗಳೂರಿನಲ್ಲಿ 9 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರಕ್ಕಿಂತ ಮೊದಲೇ ಸಂಸದ ಡಾ. ಸಿ.ಎನ್. ಮಂಜುನಾಥ್ ಸಿಹಿಸುದ್ದಿ ನೀಡಿದ್ದಾರೆ. ಕೇಂದ್ರದಿಂದ ಗೌರವಧನ ಹೆಚ್ಚಿಸುವ ಪ್ರಸ್ತಾವನೆ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ.

ರಾಮನಗರ (ನ.25): ಕಳೆದ 9 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚಳಿ, ಗಾಳಿ, ಮಳೆ ಎನ್ನದೇ ಮಕ್ಕಳ ಸಮೇತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರಕ್ಕಿಂತ ಮೊದಲೇ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಭರವಸೆಯ ಸಿಹಿಸುದ್ದಿ ನೀಡಿದ್ದಾರೆ.

ಹಗಲಿರುಳು ದುಡಿಯುವ ಆಶಾಗಳಿಗೆ ಸಮಂಜಸ ಬೇಡಿಕೆ:

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಾ. ಮಂಜುನಾಥ್, "ಆಶಾ ಕಾರ್ಯಕರ್ತೆಯರು ಇವತ್ತು ಬೀದಿಗೆ ಬಂದಿದ್ದಾರೆ. ಅವರ ಬೇಡಿಕೆಗಳು ಸಮಂಜಸವಾಗಿವೆ. ಇದು ಕೇವಲ ಮಾನವೀಯತೆ ದೃಷ್ಟಿಯಿಂದ ಮಾತ್ರವಲ್ಲ, ಅವರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ 5 ಸಾವಿರ ರೂಪಾಯಿ ಹಾಗೂ ಕೇಂದ್ರ ಸರ್ಕಾರ 2 ಸಾವಿರ ರೂಪಾಯಿ ನೀಡುತ್ತಿದೆ. ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು. ಜೊತೆಗೆ ಕೇಂದ್ರ ಸರ್ಕಾರ ಕೂಡ ಸ್ವಲ್ಪ ಅನುದಾನವನ್ನು ಹೆಚ್ಚು ಮಾಡಬೇಕು" ಎಂದು ಅಭಿಪ್ರಾಯಪಟ್ಟರು.

ಕೇಂದ್ರದಿಂದ 1,500 ರೂ. ಹೆಚ್ಚಳ ಪ್ರಸ್ತಾವನೆ:

"ಇಂದು ಬೆಳಿಗ್ಗೆ ನ್ಯಾಷನಲ್ ಹೆಲ್ತ್ ಮಿಷನ್ (NHM) ಅಡಿಷನಲ್ ಸೆಕ್ರೆಟರಿ ಜೊತೆ ಮಾತನಾಡಿದ್ದೇನೆ. ಅವರು ಒಂದು ಪ್ರಸ್ತಾವನೆ ಕಳುಹಿಸಿದ್ದಾರೆ. ಆಶಾ ಕಾರ್ಯಕರ್ತರಿಗೆ ಕೇಂದ್ರದಿಂದ 1,500 ರೂಪಾಯಿ ಹೆಚ್ಚು ಮಾಡಬೇಕು ಎಂಬುದಾಗಿದೆ. ಆ ಪ್ರಸ್ತಾವನೆ ಆರೋಗ್ಯ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಹತ್ತಿರ ಹೋಗುತ್ತದೆ. ಚಳಿಗಾಲದ ಅಧಿವೇಶನದಲ್ಲಿ ಇದನ್ನು ಎತ್ತಿಕೊಳ್ಳುತ್ತೇವೆ" ಎಂದು ಕೇಂದ್ರದಿಂದ ಗೌರವಧನ ಹೆಚ್ಚಳದ ವಿಚಾರ ಪ್ರಸ್ತಾಪಿಸಿದರು.

ಹಣಕಾಸು ಸಚಿವಾಲಯದ ಅನುಮೋದನೆ ಅಗತ್ಯ:

ಹಣಕಾಸು ಸಚಿವಾಲಯ ಇದಕ್ಕೆ ಅನುಮೋದನೆ ನೀಡಬೇಕು ಎಂದು ತಿಳಿಸಿದ ಡಾ. ಸಿ.ಎನ್. ಮಂಜುನಾಥ್, "ಆಶಾ ಕಾರ್ಯಕರ್ತರಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ" ಎಂದು ಹೇಳುವ ಮೂಲಕ ಹೋರಾಟನಿರತ ಕಾರ್ಯಕರ್ತೆಯರಿಗೆ ಭರವಸೆ ತುಂಬಿದರು.

ಆಶಾ ಕಾರ್ಯಕರ್ತೆಯರು ತಮಗೆ 15 ಸಾವಿರ ರೂ. ಮಾಸಿಕ ಗೌರವಧನ ನಿಗದಿ ಮಾಡಬೇಕು, ನಿವೃತ್ತಿಗೆ ಕನಿಷ್ಠ 5 ಲಕ್ಷ ರೂ. ಇಡಿಗಂಟು ನೀಡಬೇಕು ಹಾಗೂ ಆಶಾ ಕಾರ್ಯಕರ್ತರಿಗೆ ಉದ್ಯೋಗ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಈವರೆಗೆ ಯಾವುದೇ ಭರವಸೆಯನ್ನೂ ನೀಡಿಲ್ಲ. ಜೊತೆಗೆ, ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿದೇಶ ಪ್ರವಾಸಕ್ಕೆ ಹೋಗಿದ್ದು, ಅವರ ಒಪ್ಪಿಗೆಯಿಲ್ಲದೇ ಯಾವುದೇ ಭರವಸೆಯನ್ನೂ ನೀಡುವುದಕ್ಕೆ ಸರ್ಕಾರದ ಯಾವುದೇ ಸಚಿವರು ಅಥವಾ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.