Asianet Suvarna News Asianet Suvarna News

ಇಟಲಿಯವಳಾದರೂ ನನ್ನ ತಾಯಿ ನೈಜ ಭಾರತೀಯಳು: ರಾಹುಲ್ ಗಾಂಧಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ರಾಜ್ಯ ಹಾಗೂ ರಾಷ್ಟ್ರ ನಾಯಕರು ಚುನಾವಣೆಯಲ್ಲಿ ಎಲ್ಲೆಡೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಅದರಲ್ಲಿಯೂ ಮೋದಿ 21 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಎಲ್ಲವಕ್ಕೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಇಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

My mother is a true Indian though she is from italy

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ರಾಜ್ಯ ಹಾಗೂ ರಾಷ್ಟ್ರ ನಾಯಕರು ಚುನಾವಣೆಯಲ್ಲಿ ಎಲ್ಲೆಡೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಅದರಲ್ಲಿಯೂ ಮೋದಿ 21 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಎಲ್ಲೆಡೆ ಪ್ರಾದೇಶಿಕ ವಿಶೇಷತೆ ಹಾಗೂ ಅಲ್ಲಿನ ಸಮಸ್ಯೆಗಳನ್ನು ಉಲ್ಲೇಖಿಸಿ ಪ್ರಧಾನಿ ಮಾತನಾಡಿದ್ದರು. ಬಸವಣ್ಣನ ತತ್ವಗಳು ಹಾಗೂ ಲಿಂಗಾಯತ ಧರ್ಮ ಒಡೆದ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಎಲ್ಲವಕ್ಕೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ಪ್ರಬುದ್ಧರಂತೆ ಮಾತನಾಡಿದ ರಾಹುಲ್, ಮಹದಾಯಿ ನದಿ ನೀರು ವಿವಾದವನ್ನು ಪ್ರಸ್ತಾಪಿಸಿದರು. ಬಿಜೆಪಿ ನಿಲುವನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. ಆದರೆ, ಕಾಂಗ್ರೆಸ್‌ನದು ಈ ವಿಷಯವಾಗಿ ಏನು ನಿಲುವು ಎಂಬುದನ್ನು ಮಾತ್ರ  ಸ್ಪಷ್ಟಪಡಿಸಲು ನಿರಾಕರಿಸಿದರು.

ರಾಹುಲ್ ಹೇಳಿದ್ದೇನು?
- ಈ ಚುನಾವಣೆ ಆರ್‌ಎಸ್‌ಎಸ್ ಹಾಗೂ ಪ್ರತಿಯೊಬ್ಬ ನಾಗರಿಕನಿಗೂ ಬೆಲೆ ಕೊಡುವಂಥ ಸಿದ್ಧಾಂತವನ್ನು ಆಧರಿಸಿ ನಡೆಯಲಿದೆ. ಜನರೇ ಸೂಕ್ತವಾದದ್ದನ್ನು ಆಯ್ಕೆ ಮಾಡುತ್ತಾರೆ. 

- ಮೋದಿಗೆ ನಾನೆಂದರೆ ಭಯ. ಕರ್ನಾಟಕದಲ್ಲಿಯೂ ಬಿಜೆಪಿ ಸೋಲಿನ ಭೀತಿಯಲ್ಲಿದೆ. ಅದಕ್ಕೆ ಮೋದಿ ರಾಜ್ಯದ ಸಮಸ್ಯೆಗಳನ್ನು ಮಾತನಾಡುವುದ ಬಿಟ್ಟು, ಸದಾ ನನ್ನನ್ನೇ ಟಾರ್ಗೆಟ್ ಮಾಡುತ್ತಾರೆ.

- ಈ ಚುನಾವಣೆ ನನ್ನ ಭವಿಷ್ಯಕ್ಕಾಗಿ ಅಲ್ಲ. ನಾನು ಮುಂದೆ ಪ್ರಧಾನಿ ಆಗಲು ಸಹಕಾರಿಯೂ ಅಲ್ಲ. ಈ ಚುನಾವಣೆ ಕರ್ನಾಟಕದ ಜನರ ಭವಿಷ್ಯಕ್ಕಾಗಿ.

- ಬೆಂಗಳೂರು ರಾಷ್ಟ್ರದ ಹೆಮ್ಮೆ, ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಲಿದೆ. ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರ. ಈ ಚುನಾವಣೆ ಕರ್ನಾಟಕದ ಅಭಿವೃದ್ಧಿಗಾಗಿ ನಡೆಯಬೇಕಿದೆ.

- ನಮ್ಮ ತಾಯಿ ದೇಶಕ್ಕಾಗಿ ತಮ್ಮ ಬದುಕು ತ್ಯಾಗ ಮಾಡಿದ್ದಾರೆ. ಇಟಲಿಯವರಾದರೂ, ಇಲ್ಲೀಯೆ ಇದ್ದು, ನೈಜ ಭಾರತೀಯಳು ಎನಿಸಿಕೊಂಡಿದ್ದಾಳೆ. ನಾನು, ನನ್ನಮ್ಮನ ಬಗ್ಗೆ ಮಾತನಾಡಿದರೆ ಮೋದಿಗೆ ಖುಷಿಯಾಗುತ್ತೆ ಎನ್ನುವುದಾದರೆ, ಮಾತನಾಡಲಿ. ಎಲ್ಲವನ್ನೂ ಜನ ನೋಡುತ್ತಿದ್ದಾರೆ, ಮುಂದೆ ನಮ್ಮ ಟೈಂ ಬರುತ್ತದೆ.

- ವೈಯಕ್ತಿಕ ದಾಳಿ ಮೂಲಕ ನಿಜವಾದ ವಿಚಾರಗಳಿಂದ ವಿಮುಖರಾಗಿದ್ದಾರೆ. ಬಿಜೆಪಿ ಧರ್ಮ ಒಡೆಯುತ್ತಿದೆ, ನಾವು ಸಮಾಜ ಕಟ್ಟುತ್ತಿದ್ದೇವೆ. 

- ಯುಪಿಎ ಅವಧಿಯಲ್ಲಿ ಕಚ್ಚಾ ತೈಲದ ಬಗ್ಗೆ ಹೆಚ್ಚಿತ್ತು. ಇದೀಗ ಕಚ್ಚಾ ತೈಲದ ಭಾರಿ ಇಳಿಕೆ ಕಂಡಿದೆ. ಆದರೂ, ಪೆಟ್ರೋಲ್​, ಡೀಸೆಲ್​ ಬೆಲೆ ದೇಶವ್ಯಾಪಿ ಹೆಚ್ಚಿದೆ
ಯಾಕೆ ಪೆಟ್ರೋಲ್, ಡೀಸೆಲ್​ ಬೆಲೆ ಇಳಿಸುತ್ತಿಲ್ಲ? ಯುಪಿಎ ಅವಧಿಯಲ್ಲಿ ತೈಲ ಬೆಲೆ ಕುರಿತು ರಾಷ್ಟ್ರೀಯ ನೀತಿ ರೂಪಿಸಲಾಗಿತ್ತು

- ರೆಡ್ಡಿ ಬ್ರದರ್ಸ್ ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ನೈತಿಕತೆ ಇರುವುದಿಲ್ಲ.

- ಮೋದಿಗೆ ತಮಗೆ ಬೇಕಾದ ಟೀಂ ಜತೆ ವಿದೇಶಕ್ಕೆ ಹೋಗ್ತಾರೆ. ವಿದೇಶಾಂಗ ಸಚಿವಾಲಯದ ತಜ್ಞರೊಂದಿಗೆ ಚರ್ಚಿಸಬೇಕು. ವಿದೇಶ ಪ್ರವಾಸಕ್ಕೂ ಮುನ್ನ ತಜ್ಞರೊಂದಿಗೆ ಚರ್ಚಿಸಲಿ.

- ಪಾಕಿಸ್ತಾನದ ಗಣರಾಜ್ಯೋತ್ಸವದಲ್ಲಿ ಚೀನಾ ಪಥಸಂಚಲನ ನಡೆಸಿದೆ. ಚೀನಾ ಭೇಟಿ ವೇಳೆ ಡೋಕ್ಲಾಮ್ ಚರ್ಚೆ ನಡೆದಿಲ್ಲ. ಪ್ರಧಾನಿ ಮೋದಿ ಡೋಕ್ಲಾಂ ಹೆಸರೇ ಎತ್ತಲಿಲ್ಲ. ಮೋದಿ ಚೀನಾ ಭೇಟಿ ಹಿಂದೆ ಯಾವುದೇ ಅಜೆಂಡಾ ಇರಲಿಲ್ಲ.

- ಹಿಂದೂ ಧರ್ಮದ ಬಗ್ಗೆ ನನ್ನ ಪರಿಕಲ್ಪನೆ ಬೇರೆ. ಬಿಜೆಪಿ, ಮೋದಿ ಅವರ ಪರಿಕಲ್ಪನೆ ನನಗೆ ಗೊತ್ತಿಲ್ಲ. ಹಿಂದೂ ಅಂದ್ರೆ ನಂಬಿಕೆ, ನಾವು ಅನುಸರಿಸುವ ಬದ್ಧತೆ, ಅದೊಂದು ಜೀವನ ಕ್ರಮ.

- ನಾನು ದೇವಸ್ಥಾನ, ಮಸೀದಿ, ಗುರುದ್ವಾರ ಸೇರಿ ಎಲ್ಲ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ಭೇಟಿ ನೀಡುವೆ. ಆದರೆ, ದ್ವೇಷ ಹುಟ್ಟಿ ಹಾಕುವ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಲ್ಲ. ನನ್ನನ್ನು 'ಎಲೆಕ್ಷನ್​ ಹಿಂದೂ' ಎಂದು ಕರೆಯುತ್ತಾರೆ. ಅದು ಅವರವರ ವಿವೇಚನೆಗೆ ಬಿಟ್ಟಿದ್ದು.

- ಕರ್ನಾಟಕದ ರೈತರಿಗಾಗಿ 8 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಮಾಡಿದ್ದೇವೆ. ಆದರೆ, ಮೋದಿ ಸರ್ಕಾರ ಒಂದೇ ಒಂದು ಪೈಸೆ ಕೊಟ್ಟಿಲ್ಲ. 

- ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಅಕ್ರಮ ಗಣಿಗಾರಿಕೆ ನಡೆಸಿದ ರೆಡ್ಡಿ ಬ್ರದರ್ಸ್ ಬಗ್ಗೆ ಮೋದಿ ಮಾತಾಡಲ್ಲ. 35 ಸಾವಿರ ಕೋಟಿ  ಅಕ್ರಮ ಗಣಿಗಾರಿಕೆ ನಡೆಸಿರುವ ರೆಡ್ಡಿ ಬ್ರದರ್ಸ್​ ಅವರನ್ನು ಪಕ್ಕದಲ್ಲಿಟ್ಟುಕೊಂಡು ಭ್ರಷ್ಟಚಾರದ ಬಗ್ಗೆ ಮಾತನಾಡುತ್ತಾರೆ.

- ಪ್ರಧಾನಿ ಮೋದಿ ಏಕೆ ದಲಿತರ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ? ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ, ಹತ್ಯೆ ನಡೆಯುತ್ತಿದೆ. ರೋಹಿತ್ ವೇಮುಲಾ ಸಾವನ್ನು ವ್ಯವಸ್ಥಿತವಾಗಿ ಮುಗಿಸಲಾಯ್ತು. ಮಹಿಳೆಯರ ಮೇಲಿನ ಅತ್ಯಾಚಾರದ ಬಗ್ಗೆ ಮೋದಿ ಮಾತನಾಡುವುದಿಲ್ಲ. ಅತ್ಯಾಚಾರ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕಾದ ವಿಷಯ. ಇದು ರಾಜಕೀಯ ವಿಚಾರ ಅಂತ ಅವ್ರು ಹೇಗೆ ಹೇಳ್ತಾರೆ. ನಾವು ದಲಿತರ ಎಲ್ಲ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇವೆ. 

-  ರೆಫೆಲ್ ಒಪ್ಪಂದ ಮೋದಿ ಮಿತ್ರರಿಗಾಗಿ ನಡೆಯಿದೇ ಹೊರತು, ದೇಶಕ್ಕಲ್ಲ. ರಫೆಲ್ ಒಪ್ಪಂದ ಚೆನ್ನಾಗಿಯೇ ಇದೆ, ಆದರೆ ಯಾರಿಗಾಗಿ ಈ ಒಪ್ಪಂದ? ಎನ್​ಡಿಎ ಅವಧಿಯಲ್ಲಿ ನಡೆದ ಡೀಲ್​‌ನಿಂದ ಬಿಜೆಪಿ ನಾಯಕರು ಮೋದಿ ಸ್ನೇಹಿತ ಉದ್ಯಮಿಗಳಿಗೆ ಮಾತ್ರ ಪ್ರಯೋಜನವಾಗಿದೆ. ಇದರಿಂದ ಎಚ್​ಎಎಲ್​ಗೆ ತುಂಬಾ ನಷ್ಟವಾಗಿದೆ.ಕರ್ನಾಟಕದ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ.

- ಕಾಂಗ್ರೆಸ್ ಯೋಜನೆಗಳು ಜಾತಿ,ವರ್ಗ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ವರ್ಗದ ಜನರಿಗೆ ತಲುಪುವ ಕಾರ್ಯಕ್ರಮ ರೂಪಿಸಿದ್ದೆವು. ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂಬ ಆತ್ಮವಿಶ್ವಾಸವಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಜನರ ಆರ್ಶೀವಾದ ಸಿಗುವ ಸ್ಪಷ್ಟ ಸೂಚನೆ ಇದೆ.

- ಅಭಿವೃದ್ಧಿ ವಿಚಾರದಲ್ಲಿ ಟೀಕಿಸಿದ್ದರೆ ಜನ ಮೆಚ್ಚುತ್ತಿದ್ದರು. ರಾಜ್ಯ, ರಾಷ್ಟ್ರದ ಅಭಿವೃದ್ಧಿ ವಿಚಾರವನ್ನು ಪ್ರಚಾರಕ್ಕೆ ಬಳಸಬೇಕಿತ್ತು. ಆದರೆ, ವೈಯಕ್ತಿಕ ಟೀಕಾಪ್ರಹಾರಗಳಿಗೆ ಬಿಜೆಪಿ ಹೆಚ್ಚಿನ ಆದ್ಯತೆ ನೀಡಿತು. ಇದನ್ನು ರಾಜ್ಯದ ಪ್ರಬುದ್ಧ ಜನತೆ ಮೆಚ್ಚುವುದಿಲ್ಲ. ಮೋದಿ, ಅಮಿತ್ ಶಾ ಏನೇ ಹೇಳಿದರೂ ಜನರು ನಂಬುವುದಿಲ್ಲ. ರಾಜ್ಯದ ಪ್ರಬುದ್ಧ ಜನರು ಜವಾಬ್ದಾರಿಯುತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ರಾಜ್ಯ ಕಾಂಗ್ರೆಸ್​​ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಜನತೆ ಕಾಂಗ್ರೆಸ್ ಆಡಳಿತ, ಕಾರ್ಯಕ್ರಮ, ನಡವಳಿಕೆ ಬಗ್ಗೆ ಜನ ಮೆಚ್ಚುಗೆ ಇದೆ.
 

Follow Us:
Download App:
  • android
  • ios