ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಅತಂತ್ರ ವಿಧಾನಸಭೆಗೆ ಅಸ್ತು ಎಂದಿದ್ದು, ಸಾಕಷ್ಟು ರಾಜಕೀಯ ಬೆಳವಣಿಗೆಗಳಿಗೆ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ.

ಅಧಿಕಾರದಲ್ಲಿದ್ದರೂ ಸಿಎಂ ಸೇರಿ ಹಲವು ಸಂಪುಟ ಸಚಿವರು ಸೋಲು ಕಂಡಿದ್ದು, ಕಾಂಗ್ರೆಸ್‌ಗೆ ಕೇವಲ 78 ಸ್ಥಾನಗಳನ್ನು ಪಡೆದಿದೆ. 38 ಸ್ಥಾನಗಳನ್ನು ಪೆಡದ ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಲು ಕೈ ಮುಂದಾಗಿದೆ. ಸೈದ್ಧಾಂತಿಕ ನಿಲುವು, ಸಮಾನ ಗುರಿಯುಳ್ಳ ಪ್ರಣಾಳಿಕೆ, ರೈತರ ಹಿತದೃಷ್ಟಿ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮಾಡಿಕೊಂಡ ಮೈತ್ರಿ ಇದಲ್ಲವೆಂಬುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಅವರು ಹೇಳಿದ್ದೇನು?

'ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ಹೀಗಾಗಿ ಜೆಡಿಎಸ್ ಸರಕಾರ ರಚನೆಗೆ ನಾವು ಬೆಂಬಲ ಕೊಟ್ಟಿದ್ದೇವೆ. ನಾವೆಲ್ಲರೂ ಒಗ್ಗಾಟಿಗಿದ್ದೇವೆ. ಪ್ರಧಾನಿ ಮೋದಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಬಿಡುವುದಿಲ್ಲ ಅಂದಿದ್ದು ತಪ್ಪು. ಪ್ರಧಾನಿ ಹುದ್ದೆಗೆ ಅಗೌರವ ತಂದಿದ್ದಾರೆ. ಅಗತ್ಯ ಬಿದ್ದರೆ ನಾವೂ ರೆಸಾರ್ಟ್‌ಗೆ ಹೋಗುತ್ತೇವೆ,' ಎಂದಿದ್ದು, ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ಈ ಮೈತ್ರಿಗೆ ಮುಂದಾಗಿರುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

'ಸಂಖ್ಯಾಬಲದ ಆಧಾರದ ಮೇಲೆ ಸರಕಾರ ರಚನೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ರಾಜ್ಯಪಾಲರು ಅವಕಾಶ ನೀಡಬೇಕು. ಒಂದು ವೇಳೆ ಬಿಜೆಪಿಗೆ ಅವಕಾಶ ಕೊಟ್ಟರೆ, ಸಂವಿಧಾನ ವಿರೋಧಿ ನಡೆಯಾಗುತ್ತದೆ. ಇದರ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ. ಸಂವಿಧಾನ ನಿಯಮವಳಿಗಳಂತೆ ನಡೆದುಕೊಳ್ಳಬೇಕು. ಸಂವಿಧಾನ ಬಾಹಿರವಾಗಿ ನಡೆದುಕೊಂಡ್ರೆ ಹುದ್ದೆಗೆ ಗೌರವ ಇರಲ್ಲ. ಬಿಜೆಪಿ ಕುದರೆ ವ್ಯಾಪಾರಕ್ಕೆ ಮುಂದಾದರೂ, ನಮ್ಮ ಶಾಸಕರು ಒಂದಾಗಿದ್ದಾರೆ,' ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷೇತರರ ಆಟಕ್ಕೆ ಮತದಾರ ಬ್ರೇಕ್