ಬೆಂಗಳೂರು: ಸರ್ಕಾರಗಳಲ್ಲಿ ಪಕ್ಷೇತರರ ರಾಜಕೀಯ ಆಟಾಟೋಪಕ್ಕೆ ಬ್ರೇಕ್ ಹಾಕಿರುವ ಮತದಾರರು, ಈ ಬಾರಿಯ ಚುನಾವಣೆಯಲ್ಲಿ ಒಬ್ಬ ಪಕ್ಷೇತರನಿಗೆ ಮಾತ್ರ ವಿಧಾನಸಭೆ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಚ್. ನಾಗೇಶ್ ಪರೋಕ್ಷವಾಗಿ ಕಾಂಗ್ರೆಸ್‌ನ ಮಾಜಿ ಶಾಸಕ ಕೊತ್ತೂರು ಮಂಜುನಾಥ ಬೆಂಬಲ ಪಡೆದು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 

ರಾಣಿಬೆನ್ನೂರು ಕ್ಷೇತ್ರದಿಂದ ಆರ್.ಶಂಕರ್ ಕೆಪಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ತಾಂತ್ರಿಕವಾಗಿ ಕೆಪಿಜೆಪಿಯಿಂದ ಸ್ಪರ್ಧಿಸಿದ್ದರೂ ಅವರನ್ನು ಕೂಡ ಪಕ್ಷೇತರ ಎಂದೇ ಪರಿಗಣಿಸಬಹುದಾಗಿದೆ. ರಾಜ್ಯದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಟಿಕೆಟ್ ಸಿಗದೆ ಅಸಮಾಧಾನಗೊಂಡು ಕೆಲವರು, ಸ್ವಸಾಮರ್ಥ್ಯದಿಂದ ಚುನಾವಣೆ ಎದುರಿಸಿ ಗೆಲುವಿನ ನಗೆ ಬೀರುತ್ತಿದ್ದರು. ಹೀಗೆ ಗೆದ್ದವರು ಪರಿಸ್ಥಿತಿಗೆ ಅನುಗುಣವಾಗಿ ದಾಳ ಉರುಳಿಸುತ್ತಿದ್ದರು. ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಗಳಲ್ಲಿ ಪಕ್ಷೇತರರನ್ನು ಆಶ್ರಯಿಸುತ್ತಿದ್ದ ಪ್ರಮುಖ ಪಕ್ಷಗಳು ಕೂಡ ಪಕ್ಷೇತರಿಗೆ ಕೆಲವು ಬಾರಿ ಎಲ್ಲಿಲ್ಲದ ಮಾನ್ಯತೆ ನೀಡುತ್ತಿದ್ದರು. ಇದನ್ನೇ ಲಾಭ ಮಾಡಿಕೊಂಡು ಕೆಲವು ಬಾರಿ ಪಕ್ಷೇತರ ರಾಜಕೀಯ ದೊಂಬರಾಟಕ್ಕೂ ಕಾರಣರಾಗುತ್ತಿದ್ದರು. 

ಕಳೆದ ಸರ್ಕಾರದ ಅವಧಿಯಲ್ಲಿ ಏಳು ಮಂದಿ ಪಕ್ಷೇತರು ಗೆದ್ದಿದ್ದರು. ಅದಕ್ಕಿಂತ ಮುಂಚೆ ಬಿಜೆಪಿ ಅವಧಿಯಲ್ಲಿ ಪಕ್ಷೇತರಾಗಿ ಗೆಲುವು ಸಾಧಿಸಿದ್ದ ಐವರು, ಬಹುಮತದ ಕೊರತೆ ಎದುರಿಸುತ್ತಿದ್ದ ಸರ್ಕಾರಕ್ಕೆ ಬೆಂಬಲ ನೀಡಿ ಮಂತ್ರಿ ಮಂಡಲ ಸೇರಿದ್ದರು. ನಂತರ ಏನೇನಾಯಿತು ಎಂಬುದು ಈಗ ಇತಿಹಾಸ. ಹೀಗೆ ಎರಡು ಅವಧಿಯಲ್ಲಿ ರಾಜಕೀಯವಾಗಿ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದ್ದ ಪಕ್ಷೇತರರಿಗೆ ಈ ಬಾರಿ ಮತದಾರನ ಕೃಪೆ ಸಿಕ್ಕಿಲ್ಲ.