ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲಿನ ಸಮಯವನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಬದಲಾಯಿಸಲಾಗಿದೆ. ಇದರೊಂದಿಗೆ, ಕಲಬುರಗಿ ಭಾಗದ ರೇಷ್ಮೆ ಉದ್ಯಮಕ್ಕೆ ಉತ್ತೇಜನ ನೀಡಲು ಹೊಸ ಸಾಗಾಟ ವ್ಯವಸ್ಥೆ ಮತ್ತು ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ವಂಚನೆ ತಡೆಯಲು ಒಟಿಪಿ ನಿಯಮವನ್ನು ರೈಲ್ವೆ ಇಲಾಖೆ ಜಾರಿಗೆ ತರುತ್ತಿದೆ.
ಕಲಬುರಗಿ: ಕಲಬುರಗಿ–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22231/22232) ನ ಕಲಬುರಗಿಯಿಂದ ಹೊರಡುವ ವೇಳೆ ಜ.1ರಿಂದ ಈಗಿರುವ ಬೆ. 5. 10 ನಿಮಿಷದ ಬದಲಾಗಿ ಬೆಳಿಗ್ಗೆ 6:10ಕ್ಕೆ ಪರಿಷ್ಕರಿಸಿರುವುದನ್ನು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಘಟಕ ಕೆಕೆಸಿಸಿಐ ಹರ್ಷದಿಂದ ಸ್ವಾಗತಿಸಿದೆ. ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ ಹಾಗೂ ಪದಾಧಿಕಾರಿಗಳು, ಈ ತಿದ್ದುಪಡಿ ಪ್ರಕಟಿಸಿದ್ದಕ್ಕೆ ದಕ್ಷಿಣ ಪಶ್ಚಿಮ ರೈಲ್ವೆ, ಸಚಿವರು, ಸಂಸದರಿಗೆ ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳಾ ಪ್ರಯಾಣಿಕರು ಹಾಗೂ ವ್ಯವಹಾರಕ್ಕೆ ತೆರಳುವವರಿಗೆ ಮುಂಚಿನ ಬೆಳಿಗ್ಗೆ 5:15ರ ಹೊರಡುವ ಸಮಯವು ಅನೇಕ ಅಡಚಣೆ ಉಂಟುಮಾಡುತ್ತಿತ್ತು. ಹೊಸ ವೇಳಾಪಟ್ಟಿ ಹೆಚ್ಚು ಸುಗಮ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ ನೆರವಾಗಲಿದೆ ಎಂದೂ ಕೆಕೆಸಿಸಿಐ ಹೇಳಿದೆ. ವಂದೇ ಭಾರತ ಕಲಬುರಗಿಗೆ ರಾತ್ರಿ 10:45ಕ್ಕೆ ಆಗಮಿಸುವಂತೆ ಹೊಸ ವೇಳಾಪಟ್ಟಿ ಪ್ರಕಟಿಸಿದೆ. ಬೆಂಗಳೂರಿನಿಂದ ಸಂಜೆ ಮರಳುವ ಪ್ರಯಾಣಿಕರಿಗೆ ಉತ್ತಮ ಅನುಕೂಲತೆ ದೊರೆಯಲಿದೆ. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣಾ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕೆಕೆಸಿಸಿಐ ಹೇಳಿದೆ.
ಮಧ್ಯ ರೈಲ್ವೆಯ ರೇಷ್ಮೆ ಗೂಡು ಸಂಪರ್ಕ - ಕಲಬುರಗಿ ರೇಷ್ಮೆ ಉದ್ಯಮಕ್ಕೆ ಉತ್ತೇಜನ ಮಧ್ಯ ರೈಲ್ವೆ ಪ್ರಕಟಿಸಿರುವ ಪಂಢರ್‌ಪುರ ಮತ್ತು ಕಲಬುರಗಿಯಿಂದ ರಾಮನಗರದ ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆಗೆ ನೇರ ರೇಷ್ಮೆ ಗೂಡು ಸಾಗಾಟ ವ್ಯವಸ್ಥೆಯನ್ನು ಸ್ವಾಗತಿಸುತ್ತೇವೆ. ಈ ಕ್ರಮವು ಕಲಬುರಗಿ ಪ್ರದೇಶದ ರೇಷ್ಮೆ ಕೃಷಿಕರು, ವ್ಯಾಪಾರಿಗಳು ಮತ್ತು ಗೂಡು ಉತ್ಪಾದಕರಿಗೆ ವೇಗವಾದ, ಸುರಕ್ಷಿತ ಮತ್ತು ಆರ್ಥಿಕವಾಗಿ ಲಾಭದಾಯಕ ಸಾರಿಗೆ ಸೌಲಭ್ಯ ಒದಗಿಸುತ್ತದೆ. ಈ ಬೇಡಿಕೆಗೆ ಮಧ್ಯ ರೈಲ್ವೆ ತ್ವರಿತ ಮತ್ತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿರೋದಕ್ಕೂ ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಝಡ್‌ಆರ್‌ಯೂಸಿಸಿ ಮೆಂಬರ್ ಶಶಿಕಾಂತ ಪಾಟೀಲ್ ಹೇಳಿಕೆಯಲ್ಲಿ ಅಭಿನಂದಿಸಿದ್ದಾರೆ.
ರಿಸರ್ವೇಷನ್ ಕೌಂಟರ್‌ನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಒಟಿಪಿ ಕಡ್ಡಾಯ
ನವದೆಹಲಿ: ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ನಕಲಿ ಟಿಕೆಟ್‌ಗಳನ್ನು ತಡೆಯುವ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ರಿಸರ್ವೇಷನ್ ಕೌಂಟರ್‌ನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವವರಿಗೆ ಶೀಘ್ರದಲ್ಲಿ ಒಟಿಪಿ ಕಡ್ಡಾಯಗೊಳಿಸಲಿದೆ. ಪ್ರಸ್ತುತ 52 ರೈಲುಗಳ ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿರುವ ಈ ವಿಧಾನವನ್ನು ಮುಂದಿನ ದಿನಗಳಲ್ಲಿ ಎಲ್ಲ ರೈಲುಗಳಿಗೂ ತರಲಾಗುವುದು ಎಂದು ಇಲಾಖೆ ತಿಳಿಸಿದೆ.
ಒಟಿಪಿ ಸೇವೆ ಹೇಗೆ?
ರಿಸರ್ವೇಷನ್ ಕೌಂಟರ್‌ನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವಾಗ, ಪ್ರಯಾಣಿಕರ ವಿವರದ ಜೊತೆಗೆ ಕೊಡುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಈ ಒಟಿಪಿಯನ್ನು ಕೌಂಟರ್‌ನಲ್ಲಿರುವ ಸಿಬ್ಬಂದಿಗೆ ಕೊಡಬೇಕು. ಅವರು ಒಟಿಪಿಯನ್ನು ಕಂಪ್ಯೂಟರ್‌ನಲ್ಲಿ ನಮೂದಿಸಿದರೆ ಮಾತ್ರ ಟಿಕೆಟ್ ಆಗಲಿದೆ. ಒಟಿಪಿ ಬಾರದಿದ್ದರೆ ಟಿಕೆಟ್ ಬುಕ್ ಆಗುವುದಿಲ್ಲ.
ಮಿಕ್ಕಂತೆ ಐಆರ್‌ಸಿಟಿಸಿ ವೆಬ್‌ಸೈಟ್/ಆ್ಯಪ್‌ನಲ್ಲಿ ಬುಕಿಂಗ್ ಮಾಡುವವರಿಗೆ ಯಾವುದೇ ಒಟಿಪಿ ಇರುವುದಿಲ್ಲ. ಇವರಿಗೆ ಈಗಾಗಲೇ ವೆಬ್/ಆ್ಯಪ್‌ಗೆ ಆಧಾರ್ ನೋಂದಣಿ ಕಡ್ಡಾಯ ಮಾಡಲಾಗಿದೆ


