ಕಲಬುರಗಿಯಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಯತ್ನಿಸಿದ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸಲಾಯಿತು.

ಕಲಬುರಗಿ (ನ.29): ಅಕ್ರಮವಾಗಿ ಗೋ ಸಾಗಾಟವನ್ನು ತಡೆಯಲು ಮುಂದಾಗಿದ್ದ ಹಿಂದೂ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಇಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಶಿವಸೇನಾ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಕೇಸರಿ ಮಾಲೆಗಳನ್ನು ಧರಿಸಿ ಭಾಗವಹಿಸಿದ್ದರು.

ಪ್ರತಿಭಟನಕಾರರು ನಗರದ ಎಸ್‌ವಿಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ತಮ್ಮ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ನಂತರ ಎಸ್‌ವಿಪಿ. ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.

ರಾಜ್ಯ ಸರ್ಕಾರದ ವಿರುದ್ಧ ಕಿಡಿ:

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರವು ಮುಸ್ಲಿಂ ತುಷ್ಠೀಕರಣ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ಗೋಹತ್ಯೆ ಕಾಯ್ದೆ :

ಇಂತಹ ಘಟನೆಗಳು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ-2020 ರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಈ ಕಾಯ್ದೆಯು ಗೋವುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಅವುಗಳ ಅಕ್ರಮ ಸಾಗಾಟ ಮತ್ತು ಮಾರಾಟಕ್ಕೆ ಕಠಿಣ ದಂಡ ಹಾಗೂ ಶಿಕ್ಷೆಯನ್ನು ವಿಧಿಸುತ್ತದೆ. ಆದರೆ ಕಾಯ್ದೆ ಜಾರಿಯಲ್ಲಿದ್ದರೂ ಸಹ ಅಕ್ರಮ ಗೋ ಸಾಗಾಟದ ಪ್ರಯತ್ನಗಳು ನಡೆಯುತ್ತಿರುವುದು ಮತ್ತು ಅದನ್ನು ತಡೆಯಲು ಪ್ರಯತ್ನಿಸುವ ಸಂಘಟನೆಗಳ ಕಾರ್ಯಕರ್ತರ ಮೇಲೆಯೇ ಹಲ್ಲೆಗಳು ನಡೆಯುತ್ತಿರುವುದು, ರಾಜ್ಯದಲ್ಲಿ ಕಾನೂನಿನ ಪಾಲನೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂಬುದು ಸೂಚಿಸುತ್ತದೆ.