ತಾವು ಬದುಕು ಕಟ್ಟಿಕೊಳ್ಳುವುದಕ್ಕೆಂದು ಹೋದ ಮುಂಬೈ ಮಹಾನಗರದಲ್ಲಿ ಉದ್ಯಮ, ಉದ್ಯೋಗದ ಜೊತೆಗೆ ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಮಂಡಳಿಯವರು 1908ರಲ್ಲಿ ರಾತ್ರಿ ಪ್ರೌಢಶಾಲೆ ಆರಂಭಿಸಿದರು.
ಶೇಷಮೂರ್ತಿ ಅವಧಾನಿ, ರಾಹುಲ್ ದೊಡ್ಮನಿ
ಕಲಬುರಗಿ/ಚವಡಾಪುರ (ನ.29): ಬದುಕು ಕಟ್ಟಿಕೊಳ್ಳುವುದಕ್ಕಾಗಿ ಕೆಲಸ ಅರಸಿ ಕರ್ನಾಟಕದಿಂದ ಮುಂಬೈಗೆ ವಲಸೆ ಹೋಗುವ ಕಾರ್ಮಿಕರ ಮಕ್ಕಳಿಗೆ ಕನ್ನಡ ಕಲಿಸಲೆಂದೇ ಮುಂಬೈನಲ್ಲೊಂದು ಶಾಲೆ ಕೆಲಸ ಮಾಡುತ್ತಿದೆ. ಬಿಲ್ಲವರ ಸಂಸ್ಥೆ ವತಿಯಿಂದ ನಡೆಯುತ್ತಿರುವ ಗುರುನಾರಾಯಣ ರಾತ್ರಿ ಪ್ರೌಢಶಾಲೆಯಲ್ಲೇ ಕನ್ನಡ ದೀವಿಗೆ ಸದಾಕಾಲ ಉರಿಯುತ್ತಿದೆ. ಕೆಲಸ ಅರಸಿ ವಲಸೆ ಹೋಗುವ ಕಾರ್ಮಿಕರಿಗೇನು ಕೊರತೆ ಇಲ್ಲ. ಹೀಗೆ ಕರ್ನಾಟಕದ ಕಲಬುರಗಿ, ವಿಜಯಪುರ, ಯಾದಗಿರಿ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಿಂದ ಮಾಯಾನಗರಿ ಮುಂಬೈಗೆ ಹೋದವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪಾರಿಗಳು, ಉದ್ಯಮಿಗಳಿಂದ ಈ ಶಾಲೆ ಸ್ಥಾಪನೆಯಾಗಿದೆ.
ತಾವು ಬದುಕು ಕಟ್ಟಿಕೊಳ್ಳುವುದಕ್ಕೆಂದು ಹೋದ ಮುಂಬೈ ಮಹಾನಗರದಲ್ಲಿ ಉದ್ಯಮ, ಉದ್ಯೋಗದ ಜೊತೆಗೆ ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಮೊಗವೀರ ವ್ಯವಸ್ಥಾಪಕ ಮಂಡಳಿಯವರು 1908ರಲ್ಲಿ ರಾತ್ರಿ ಪ್ರೌಢಶಾಲೆ ಆರಂಭಿಸಿದರು. ಈ ಶಾಲೆ ತುಳು ಭಾಷಿಕರು, ಕನ್ನಡ ಭಾಷಿಕ ಕಾರ್ಮಿಕರ ಮಕ್ಕಳ ಪಾಲಿಗೆ ವರವಾಗಿ ಪರಿಣಮಿಸಿತು. 1939ರಲ್ಲಿ ಮುಂಬೈ ವಿವಿಯಿಂದ ಮಾನ್ಯತೆ ಪಡೆದುಕೊಂಡಿತು. 1990ರಲ್ಲಿ ಖಾರ್ ರಸ್ತೆಯಲ್ಲಿ ಶಾಲೆ ಆರಂಭಗೊಂಡು ನೂರಾರು ಮಕ್ಕಳ ಕಲಿಕೆಗೆ ಕಾರಣವಾಯಿತು. 90ರ ದಶಕದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಶಾಲೆ ಮುಚ್ಚಲ್ಪಟ್ಟಿತ್ತು. ಅದಾದ ನಂತರ ಶ್ರೇಷ್ಠ ಶಿಕ್ಷಕರಾದ ಎಂ.ಎಸ್ ರಾವ್ ಅವರು ಜವಾಹರಲಾಲ್ ರಾತ್ರಿ ಪ್ರೌಢಶಾಲೆ ಎಂದು ಸ್ಥಾಪಿಸಿದರು.
ಮಹಾರಾಷ್ಟ್ರ ಸರ್ಕಾರ ಮಾನ್ಯತೆ
ಈ ಶಾಲೆಗೆ ಆಗಿನ ಸರ್ಕಾರ ಮಾನ್ಯತೆ ಕೊಡಲಿಲ್ಲ. ಈ ಶಾಲೆಯನ್ನು ಬಿಲ್ಲವರ ಅಸೋಸಿಯೇಶನ್ ಅವರು ವಶಕ್ಕೆ ಪಡೆದು ಗುರು ನಾರಾಯಣ ರಾತ್ರಿ ಪ್ರೌಢಶಾಲೆಯ ಜೊತೆ ವಿಲೀನಗೊಳಿಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿಯಾಗಿದ್ದ ಎಂ.ಎಸ್.ಕೋಟ್ಯಾನ್, ವಕೀಲರಾದ ನಾಗೇಶ ಕೋಟ್ಯಾನ್, ಕೆ.ಕೆ.ಸುವರ್ಣ ಅವರ ಪ್ರಯತ್ನದಿಂದಾಗಿ ಮಹಾರಾಷ್ಟ್ರ ಸರ್ಕಾರದಿಂದ ಮಾನ್ಯತೆ ಪಡೆದುಕೊಂಡು ಅಂದಿನಿಂದ ಇಂದಿನವರೆಗೂ ಯಶಸ್ವಿಯಾಗಿ ಶಾಲೆ ಮುನ್ನಡೆದಿದೆ.
ಇಲ್ಲಿ ವಲಸೆ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಕನ್ನಡ ಕಲಿಕೆಯ ಜೊತೆಗೆ ವ್ಯವಹಾರ ಜ್ಞಾನಕ್ಕಾಗಿ ಎಲ್ಲಾ ಇತರ ವಿಷಯಗಳನ್ನು ಕಲಿಸಲಾಗುತ್ತಿದೆ. 65 ವರ್ಷಗಳನ್ನು ಪೂರೈಸಿ ಮುನ್ನುಗ್ಗುತ್ತಿದ್ದು 2035ಕ್ಕೆ ವಜ್ರ ಮಹೋತ್ಸವ ಆಚರಿಸಲಿದೆ. ಮಾತೃಸಂಸ್ಥೆ ಅಧ್ಯಕ್ಷ ದಿ.ಜಯ ಸಿ ಸುವರ್ಣರಿಂದ ಎಲ್.ವಿ.ಅಮೀನ್, ನಿತ್ಯಾನಂದ ಕೋಟ್ಯಾನ್ ಆದಿಯಾಗಿ ಪ್ರಸ್ತುತ ಅಧ್ಯಕ್ಷ ಹರೀಶ ಅಮೀನ್ ಅವರು ಈ ಶಾಲೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಬಿಲ್ಲವರ ಅಸೋಸಿಯೇಶನ್ ಹಾಗೂ ಶಾಲೆಯ ಶಿಕ್ಷಕರು ವಲಸೆ ಕಾರ್ಮಿಕರಿರುವ ಪ್ರದೇಶಗಳನ್ನು ಸಂಚರಿಸಿ ಕಾರ್ಮಿಕರ ಮಕ್ಕಳು ಹಗಲಿನಲ್ಲಿ ಯಾವುದಾದರೂ ಕೆಲಸ ಮಾಡಿಕೊಂಡಿರಲಿ ರಾತ್ರಿ ವೇಳೆಯಲ್ಲಿ ಕಡ್ಡಾಯವಾಗಿ ಕಲಿಕೆಗೆ ಒಳಪಡಬೇಕೆಂದು, ಕನ್ನಡ ಕಲಿಕೆಯನ್ನು ಪರಿಣಾಮಕಾರಿಯಾಗಿ ಬೋಧಿಸಲಾಗುತ್ತಿದೆ. ಶಾಲೆಯ ಪ್ರಗತಿಗಾಗಿ ಕಾರ್ಯಧ್ಯಕ್ಷ ಡಿ.ಯು.ಸಾಲ್ಯಾನ್, ಎಸ್.ಡಿ ಅಂಚನ್, ಎನ್.ಎಲ್ ಸುವರ್ಣ, ದಿ.ಎಂ.ಎನ್ ಸುವರ್ಣ, ಬನ್ನಂಜೆ ರವೀಂದ್ರ, ಜಯ ವಿ ಪೂಜಾರಿ ಸೇರಿದಂತೆ ಎಲ್ಲರೂ ತಮ್ಮ ಶಕ್ತಿಯಾನುಸಾರ ಕೊಡುಗೆ ನೀಡಿದ್ದಾರೆ.
ಕರ್ನಾಟಕದ ಕಾರ್ಮಿಕರ ಮಕ್ಕಳ ಕಲಿಕೆಗೆ ಯಾವುದೇ ಅಡಚಣೆ ಬರಬಾರದೆಂಬ ಉದ್ದೇಶದಿಂದ ಬಿಲ್ಲವ ಅಸೋಷಿಯೇಶನ್ ರಾತ್ರಿ ಕನ್ನಡ ಪ್ರೌಢಶಾಲೆ ಆರಂಭಿಸಲಾಗಿದೆ. ಮಕ್ಕಳ ಪಾಲಿನ ಆಶಾಕಿರಣವಾಗಿರುವ ರಾತ್ರಿ ಶಾಲೆಯು ಶಿಕ್ಷಣ, ಕಲೆ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುತ್ತಿದೆ.
- ಮಲ್ಲಿಕಾರ್ಜುನ ಬಡಿಗೇರ, ಮುಖ್ಯಗುರುಗಳು, ಗುರು ನಾರಾಯಣ ರಾತ್ರಿ ಪ್ರೌಢಶಾಲೆ ಮುಂಬೈಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕು. ಕೆಲಸ ಹುಡುಕಿಕೊಂಡು ಮುಂಬೈಗೆ ಬರುವ ಕರ್ನಾಟಕದ ಯಾವುದೇ ಜಿಲ್ಲೆಯ ಕಾರ್ಮಿಕರ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದೆನ್ನುವುದೇ ನಮ್ಮ ಧೇಯ. ಬಿಲ್ಲವ ಸಂಘದ ಸಂಸ್ಥಾಪಕರು ಕಂಡ ಕನಸನ್ನು ಎಲ್ಲಾ ಪದಾಧಿಕಾರಿಗಳು ನನಸಾಗಿಸುವ ಸಂಕಲ್ಪ ಮಾಡಿದ್ದೇವೆ.
- ಹರೀಶ್ ಜೀ ಅಮೀನ್, ಅಧ್ಯಕ್ಷರು ಬಿಲ್ಲವರ ಅಸೋಸಿಯೇಶನ್ ಮುಂಬೈ


