ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಚಿಕ್ಕೋಡಿಯ ರಾಯಬಾಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಸವ ತತ್ವದ ಅನುಯಾಯಿಗಳನ್ನು 'ತಾಲಿಬಾನ್‌ಗಳು' ಎಂದು ಕರೆದು ಹೊಸ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆಗೆ ಇತರೆ ಮಠಾಧೀಶರಿಂದ ತೀವ್ರ ಆಕ್ರೋಶ ವ್ಯಕ್ತವಾಗಿವೆ.
ಚಿಕ್ಕೋಡಿ: ಮಹಾರಾಷ್ಟ್ರದ ಪ್ರಸಿದ್ಧ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ. ಬಸವ ತತ್ವದ ಅನುಯಾಯಿಗಳನ್ನು ಉದ್ದೇಶಿಸಿ “ಬಸವ ತತ್ವದ ತಾಲಿಬಾನ್‌ಗಳು” ಎಂಬ ಪದ ಬಳಕೆ ಮಾಡಿದ ಸ್ವಾಮೀಜಿಯ ಭಾಷಣ ಇದೀಗ ವೈರಲ್ ಆಗಿದೆ. ರಾಯಬಾಗ ತಾಲ್ಲೂಕಿನ ರಾಯಬಾಗ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳ ಘಟಕಗಳಿಂದ ಆಯೋಜಿಸಲಾಗಿದ್ದ ಹನುಮ ಮಾಲಾ ಧೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಬಸವ ತತ್ವದ ಅನುಯಾಯಿಗಳ ಬಗ್ಗೆ ಕಿಡಿಕಾರಿದರು.
ಸ್ವಾಮೀಜಿಯ ಹೇಳಿಕೆಗಳು ಹೀಗಿವೆ
ಬಸವ ತತ್ವದ ತಾಲಿಬಾನ್‌ಗಳು ಎಂಬ ಪದ ಬಳಸಿದ ಸ್ವಾಮೀಜಿ, ಇಂತಹವರಿಗೆ ತಿಳಿಯುವ ಭಾಷೆಯಲ್ಲೇ ಮಾತನಾಡಬೇಕು, ಹಿಂದೆ ನಾನು ಹೇಳಿದ್ದೇ ರೀತಿ ಈಗಲೂ ಹೇಳುತ್ತೇನೆ ಎಂದರು. ರಾತ್ರಿ ಟೀ ಶರ್ಟ್ ಮತ್ತು ಬರ್ಮುಡ್ಸ್ ಹಾಕೋದು, ಹೋಟೆಲ್–ಬಾರ್‌ಗಳಿಗೆ ಹೋಗೋದು,ಅಂತವರಿಗೆ ಮಠದ ಕೆಲಸ ಏನು? ಮಠಗಳನ್ನೇ ಹಾಳು ಮಾಡಲು ಇಂತಹವರು ಮುಂದಾಗಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಹಾನಿಗೆಪ್ಪದ ಹನುಮ ಮಾಲೆ ಕಾರ್ಯಕ್ರಮದಲ್ಲೇ ವಿವಾದ
ಹನುಮ ಮಾಲಾ ಧೀಕ್ಷಾ ಕಾರ್ಯಕ್ರಮದ ವೇದಿಕೆಯಲ್ಲಿ ನೀಡಿದ ಈ ಹೇಳಿಕೆಗಳು ಸಾರ್ವಜನಿಕರಲ್ಲಿ ಮತ್ತು ಬಸವ ತತ್ವದ ಅನುಯಾಯಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿವೆ. ಇದೇ ಸಂದರ್ಭದಲ್ಲಿ ಸ್ವಾಮೀಜಿ, “ಹನುಮ ಮಾಲೆ ಬಗ್ಗೆ ಕೆಲವರು ಅರ್ಥಮಾಡಿಕೊಳ್ಳದೇ ಟೀಕೆ ಮಾಡುತ್ತಾರೆ” ಎಂದು ಹೇಳಿದ್ದಾರೆ.
ಹಿಂದಿನ ವಿವಾದ ಇನ್ನೂ ಶಮನವಾಗಿಲ್ಲ
ಕನೇರಿ ಸ್ವಾಮೀಜಿಯ ಈ ಹೊಸ ಹೇಳಿಕೆ, ಅವರ ಹಿಂದಿನ ವಿವಾದಾತ್ಮಕ ಭಾಷಣಗಳ ನೆನಪನ್ನು ಮತ್ತೆ ಮುನ್ನಲೆಗೆ ತಂದಿದೆ. ಇತ್ತೀಚೆಗೆ ಮಹಾರಾಷ್ಟ್ರದ ಒಂದು ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನಲೆಯಲ್ಲಿ, ವಿಜಯಪುರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಸ್ವಾಮೀಜಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿತ್ತು. ಈಗ ಮತ್ತೆ ಇದೇ ರೀತಿಯ ವಾಗ್ದಾಳಿ ಮುಂದುವರೆಸಿರುವುದು, ರಾಜಕೀಯ–ಸಾಮಾಜಿಕ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಸ್ವಾಮೀಜಿಯ ಹೇಳಿಕೆ ಕೇಳಿದ ಬಸವ ತತ್ವದ ಅನುಯಾಯಿಗಳು ಮತ್ತು ಸಾಂಪ್ರದಾಯಿಕ ಮಠ ಸಮುದಾಯದವರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಸವಣ್ಣನವರ ಪಾದದ ಧೂಳಿಗೂ ಸಮ
ಬಸವತತ್ವದ ಅನುಯಾಯಿಗಳು ತಾಲಿಬಾನಿಗಳು ಎಂದ ಕನ್ಹೇರಿ ಶ್ರೀಗಳ ಹೇಳಿಕೆಗೆ ಉರಿಲಿಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ ನೀಡಿ, ಕನ್ಹೇರಿ ಸ್ವಾಮಿಗಳ ವಿವಾದಾತ್ಮಕ ಹೇಳಿಕೆ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಜಡ್ಜ್ ಉತ್ತಮವಾಗಿ ಹೇಳಿದ್ದಾರೆ. ನೀವು ಭಾರತೀಯ ಪ್ರಜೆಯಾಗಲು ಯೋಗ್ಯರಲ್ಲ ಅಂತಾ ನೇರವಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ಹೇಳಿದ ಮಾತನ್ನ ಕನ್ಹೇರಿ ಶ್ರೀಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಮನುಷ್ಯ, ಮನುಷ್ಯತ್ವವನ್ನ ಗೌರವಿಸೋರು ಯಾರೂ ಈ ರೀತಿ ಮಾತನಾಡಲ್ಲ. ಕನ್ಹೇರಿ ಶ್ರೀಗಳ ಬಗ್ಗೆ ನಮಗೆಲ್ಲ ಬಹಳಷ್ಟು ಗೌರವವಿತ್ತು. ಆದರೆ ಅವರು ಈ ಭಾಷೆ ಬಳಸುತ್ತಾರೆಂದರೆ ನಾಲಿಗೆ ಅವರ ಕುಲವೇ ಹೇಳಿತ್ತಂತೆ. ಕನ್ಹೇರಿ ಶ್ರೀಗಳು ಅವರ ತಲೆ ಮತ್ತು ಮೆದುಳನ್ನ ಮಾರಾಟ ಮಾಡಿಕೊಂಡಿದ್ದಾರೆ. ಅವರು ಬಸವಣ್ಣನವರ ಪಾದದ ಧೂಳಿಗೂ ಸಮ ಆಗಲಾರರು ಎಂದು ಕಿಡಿಕಾರಿದ್ದಾರೆ.
ಕಾಡಸಿದ್ದೇಶ್ವರ ಸ್ವಾಮೀಜಿ ಅಲ್ಲ, ಅದು ಕಾಡು ಪ್ರಾಣಿ
ಬಸವ ತತ್ವದವರು ತಾಲಿಬಾನಿಗಳು ಎಂಬ ಕನ್ಹೇರಿ ಕಾಡಸಿದ್ದೇಶ್ವರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಬೀದರ್ ನಲ್ಲಿ ಡಾ.ಚನ್ನಬಸವಾಬಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ಹೇರಿ ಮಠದ ಸ್ವಾಮೀಜಿಗೆ ಸ್ವಾಮೀಜಿಗಳು ಅನ್ನಲು ನಮಗೆ ನಾಚಿಕೆ ಆಗುತ್ತದೆ. ಅವರು ಕಾಡಸಿದ್ದೇಶ್ವರ ಸ್ವಾಮೀಜಿ ಅಲ್ಲ, ಅದು ಕಾಡು ಪ್ರಾಣಿ. ನಾಲಿಗೆಗೆ ಸಂಸ್ಕಾರ ಇಲ್ಲ, ಬಾಯಿ ಬಿಚ್ಚಿದ್ರೆ ಮುತ್ತುಗಳೇ ಉದುರುತ್ತವೆ, ಆತರ ಬೈಗುಗಳನ್ನು ಬೈಯ್ತಾರೆ. ಇಂತಹವರು ಕಾವಿ ಬಟ್ಟೆ ಹಾಕಲು ಅಯೋಗ್ಯರು, ನಾಲಾಯಕರು. ಮನುವಾದಿಗಳನ್ನು ಮೆಚ್ಚಿಸಲು ಬಸವ ತತ್ವದವರಿಗೆ ಬೈತಾರೆ. ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದವರು ಮನುವಾದಿಗಳು, ಬಸವ ತತ್ವ ವಿರೋಧಿಗಳು. ಇವರಿಗೆ ಸಂತೋಷಪಡಿಸಲು ಪದೇ ಪದೇ ಈ ರೀತಿ ಹೇಳಿಕೆ ನೀಡ್ತಿದ್ದಾರೆ.ತಾಲಿಬಾನಿ ಅಂದ್ರೆ ಆ ಸ್ವಾಮಿಗೆ ಗೊತ್ತಿಲ್ಲ. ಈಗಾಗಲೇ ಕೋರ್ಟ್ ಛಿಮಾರಿ ಹಾಕಿದೆ, ಧಾರವಾಡಕ್ಕೆ ನಿರ್ಬಂಧ ಹಾಕಿದ್ದಾರೆ. ಬಸವಣ್ಣನವರ ಮತ್ತೆ ನಾಲಿಗೆ ಹರಿಬಿಟ್ಟರೇ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗ್ತದೆ. ಜೊತೆಗೆ ಸ್ವಾಮೀಜಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ. ಕನ್ಹೇರಿ ಶ್ರೀ ಎಚ್ಚರಿಕೆಯಿಂದ ಇರಬೇಕು. ಬಾಯಿ ಹರಿಬಿಟ್ಟು ಅಶ್ಲೀಲ ಪದ ಬಳಸಿದ್ರೆ ಸ್ವಾಮೀತ್ವಕ್ಕೆ ಹಾಗೂ ಅವರ ಕಾವಿ ಬಟ್ಟೆಗೆ ಮರ್ಯಾದೆ ಅಲ್ಲ ಎಂದು ಚನ್ನಬಸವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


