ಪ್ರಿಯಾ ಕೆರ್ವಾಶೆ/ಮಹಾಬಲ ಸೀತಾಳಭಾವಿ

ಸಾಹಿತ್ಯ ಕ್ಷೇತ್ರದ ದಿಗ್ಗಜರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಎಂಬ ಹಂಬಲ ಸಹಜ, ಆದರೆ ನೀವು ಆ ಬಗ್ಗೆ ಯೋಚಿಸಿರಲೇ ಇಲ್ಲ ಎನ್ನುತ್ತೀರಲ್ಲ?

ಈವಿಷಯದಲ್ಲಿ ಅಂತಲ್ಲ. ಬದುಕಿನಲ್ಲಿ ಯಾವುದರ ಬಗ್ಗೆಯೂ ನಿರೀಕ್ಷೆ ಇಟ್ಟುಕೊಳ್ಳಬಾರದು ಅನ್ನುವವನು ನಾನು. ನಿರೀಕ್ಷೆ ಅನ್ನೋದು ನಮ್ಮ ಎಷ್ಟೋ ಸಂತೋಷಗಳನ್ನು ನಾಶ ಮಾಡುತ್ತದೆ. ನಾವೇನು ನಿರೀಕ್ಷೆ ಮಾಡುತ್ತೇವೋ ಅದು ಸಿಕ್ಕರೆ ಅಂಥಾ ಸಂತೋಷವೇನೂ ಆಗುವುದಿಲ್ಲ. ಅಥವಾ ಸಿಕ್ಕಿದ್ದರಲ್ಲಿ ಒಂದು ತಾಜಾತನವೂ ಇರುವುದಿಲ್ಲ. ಅದರಲ್ಲೂ ನಾನ  ಸ್ವಭಾವತಃ ಸಂಕೋಚ ಸ್ವಭಾವದವನು. ಹಳ್ಳಿಯವರು ಇರುತ್ತಾರಲ್ಲ, ಹಾಗೆ. ನಾನು ಹಳ್ಳಿಯವನೇ. ಶಿವಮೊಗ್ಗದ ಹೊದ್ದಿಗೆರೆ ಎಂಬ ಸಣ್ಣ ಊರಲ್ಲಿ ನಾನು ಹುಟ್ಟಿದ್ದು. ಬೆಂಗಳೂರಿಗೆ ಬಂದು ಎಷ್ಟೋ ವರ್ಷ ಆದರೂ ಆ ಹಳ್ಳಿಯ ಸಂಕೋಚ, ಹಿಂಜರಿಕೆ ಮರೆಯಾಗಿಲ್ಲ. ದಾರಿಯಲ್ಲಿ ಅಚಾನಕ್ ಆಗಿ ಸಿಗುವ ಅಚ್ಚರಿಗಳು ನನಗಿಷ್ಟ.

ಕಲಬುರ್ಗಿಯಲ್ಲಿ ಕನ್ನಡ ನುಡಿಜಾತ್ರೆ: ಕಲ್ಯಾಣ ಕರ್ನಾಟಕದ ನಿರೀಕ್ಷೆಗಳೇನು?

ನಮ್ಮ ಹೆಚ್ಚಿನ ಸಾಹಿತಿಗಳು ಸಾಹಿತ್ಯ ಸಮ್ಮೇಳನಗಳಿಗೇ ಹೋಗುವುದಿಲ್ಲ. ಆದರೆ ನೀವು ಹೋಗುತ್ತೀರಿ. ಬಹಳ ಹಿಂದಿನಿಂದಲೂ ಸಾಹಿತ್ಯ ಸಮ್ಮೇಳನಗಳನ್ನು ನೋಡುತ್ತಾ ಬಂದಿದ್ದೀರಿ. ಏನಾದರೂ ಬದಲಾವಣೆ ಆಗಿದೆಯಾ?

ನಾನು ಆರಂಭ ಕಾಲದ ಸಮ್ಮೇಳನಗಳಿಗೆ ಹೋಗಿದ್ದೇನೆ. ಆಮೇಲಿನ ಸಮ್ಮೇಳನಗಳಲ್ಲೂ ಭಾಗವಹಿಸಿದ್ದೇನೆ. ಮೊದಲೆಲ್ಲ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಸಮ್ಮೇಳನಗಳಲ್ಲಿ ಶುದ್ಧಾಂಗ ಸಾಹಿತ್ಯ ಇರುತ್ತಿತ್ತು. ಕಾವ್ಯದ ಬಗ್ಗೆ, ಗದ್ಯದ ಬಗ್ಗೆ ಗಂಭೀರ ಚರ್ಚೆಗಳಾಗುತ್ತಿದ್ದವು. ನಾಡಿನ ಪ್ರಮುಖ ಸಾಹಿತಿಗಳೆಲ್ಲ ಪಾಲ್ಗೊಳ್ಳುತ್ತಿದ್ದರು. ಕ್ರಮೇಣ ಅದರಲ್ಲಿ ಬದಲಾವಣೆಗಳಾದವು. ನಾಡು ನುಡಿ ಚಿಂತನೆ ಹೆಚ್ಚಾಯ್ತು. ಕ್ರಮೇಣ ರಾಜಕೀಯ, ಧಾರ್ಮಿಕ ವ್ಯಕ್ತಿಗಳ ಉಪಸ್ಥಿತಿಯೂ ಸಾಮಾನ್ಯವಾಯ್ತು. ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗುವ ವಿಷಯಗಳು ವಿಸ್ತಾರವಾಗುತ್ತಾ ಹೋಗಿ ನಾಡು, ನುಡಿ, ನೆಲ, ಜಲ, ರಾಜಕೀಯ, ಆರ್ಥಿಕತೆ, ಹೋರಾಟ, ಕೃಷಿ, ಜನಜೀವನ ಹೀಗೆ ಎಲ್ಲ ವಿಷಯಗಳಿಗೂ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ಸಿಗತೊಡಗಿತು.

ಈ ಬದಲಾವಣೆ ಬೇಕಿತ್ತಾ? ಅಥವಾ ಸಮ್ಮೇಳನಗಳು ಶುದ್ಧಾಂಗ ಸಾಹಿತ್ಯಕ್ಕೆ ಸೀಮಿತವಾಗಿದ್ದರೇ ಚೆನ್ನಾಗಿತ್ತಾ?

ನಾನು ಯಾವತ್ತೂ ಬದಲಾವಣೆಯನ್ನು ಸ್ವಾಗತಿಸುವವನು. ಬದಲಾವಣೆಯಲ್ಲಿ ನಮ್ಮಿಷ್ಟ ನಿಮ್ಮಿಷ್ಟ ಅನ್ನೋದಕ್ಕಿಂತ ಅದು ಈ ಕಾಲಕ್ಕೆ ಅವಶ್ಯಕ ಅಂತ ಒಪ್ಪಿಕೊಳ್ಳುವುದೇ ಜಾಣತನ. ಆರಂಭ ಕಾಲದ ಸಮ್ಮೇಳನಗಳಲ್ಲಿ ಸಾಹಿತ್ಯದ ಬಗ್ಗೆ ಬಹಳ ತೀವ್ರವಾದ ಚರ್ಚೆಗಳಾಗುತ್ತಿದ್ದದ್ದು ಕಂಡು ಬೆರಗಾಗಿದ್ದೆ. ಕ್ರಮೇಣ ಅದು ಇತರ ವಿಷಯಗಳಿಗೆ ವಿಸ್ತಾರವಾದ ಮೇಲೆ ಆ ತೀವ್ರತೆ ಕಡಿಮೆಯಾಯಿತು.

ಕನ್ನಡದ ಕಾವ್ಯಲೋಕ ಇಂದು ‘ಇಂಪ್ಯೂರ್’ ಆಗುತ್ತಿದೆಯಾ?

ಇದು ಹೊಸ ಕಾಲದ ಹಾದಿ. ಅನೇಕ ಈ ಕಾಲದ ಹುಡುಗರು ಸಾಹಿತ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಈ ಚೌಕಟ್ಟನ್ನೆಲ್ಲ ಬಿಟ್ಟು ನೋಡಿದರೆ ಪ್ರತಿಯೊಬ್ಬನ ಸಾಹಿತ್ಯ ಸೃಷ್ಟಿಯೂ ಅನನ್ಯವೇ. ಆ ಯುನಿಕ್‌ನೆಸ್ ಮುಖ್ಯವೇ ಹೊರತು ಹೊರಗಿನ ಚೌಕಟ್ಟಿನಲ್ಲಿ ಬದಲಾವಣೆಯಾದರೆ ಅದು ಅಂಥಾ ಮಹತ್ವದ್ದು ಅಂತ ಅನಿಸುವುದಿಲ್ಲ. ಇದೇ ಹಿನ್ನೆಲೆಯಲ್ಲಿ ಹಿಂದೊಮ್ಮೆ ವಚನಗಳು ಕಾವ್ಯಗಳೇ ಅಲ್ಲ ಎನ್ನುತ್ತಿದ್ದರು. ಎಷ್ಟು ದೊಡ್ಡ ಅನ್ಯಾಯ ಇದು. ಕ್ರಮೇಣ ಎಲ್ಲರಿಗೂ ಅರಿವಾಯ್ತು, ವಚನದ ಅರ್ಥವ್ಯಾಪ್ತಿ, ಕಾವ್ಯಶಕ್ತಿ ಎಂಥಾದ್ದು ಅಂತ. ಇಲ್ಲಿ ಒಂದು ವಿಷಯ ಗಮನದಲ್ಲಿಡಬೇಕು. ಕಾವ್ಯ ಬಂದ ಮೇಲೆ ಕಾವ್ಯ ಮೀಮಾಂಸೆ ಬಂದದ್ದೇ ಹೊರತು, ಕಾವ್ಯ ಮೀಮಾಂಸೆ ಬಂದ ಮೇಲೆ ಕಾವ್ಯ ಬಂದದ್ದಲ್ಲ. ಈಗ ಅಶುದ್ಧವಾಗಿರುವ ಕಾವ್ಯವೇ ಮುಂದೆ ಶುದ್ಧವಾಗಬಹುದು. ಒಂದು ಕಾಲದಲ್ಲಿ ವಚನಗಳೂ ಅಶುದ್ಧ ಕಾವ್ಯವಾಗಿದ್ದವು. ಕಾವ್ಯದ ರೂಪಕ್ಕಿಂತ ಅದರೊಳಗೆ ಏನಿದೆ ಎಂಬುದು ಮುಖ್ಯ.

ಹೊಸತಾಗಿ ಬರೆಯುತ್ತಿರುವ ಯುವಕರನ್ನು ವಿಮರ್ಶಕರು ಪರಿಗಣನೆಗೇ ತೆಗೆದುಕೊಳ್ಳುತ್ತಿಲ್ಲವಲ್ಲ?

ಇದು ಸತ್ಯ ಅಲ್ಲ. ಕಾವ್ಯ, ಗದ್ಯದಲ್ಲಿ ನಿಜಕ್ಕೂ ತೂಕ ಇದೆ ಅಂತಾದ್ರೆ ವಿಮರ್ಶೆ ಖಂಡಿತಾ ಬರುತ್ತೆ. ಹಿರಿಯ ವಿಮರ್ಶಕರು ಹೊಸಬರ ಕಡೆ ನೋಡದಿದ್ದರೆ ಈ ಕಾಲದಲ್ಲೇ ವಿಮರ್ಶಕರು ಹುಟ್ಟಿಕೊಳ್ಳುತ್ತಾರೆ. ಇವರೂ ಹೊಸ ಹಾದಿಯಲ್ಲಿರುವ ಕಾರಣ ಈ ಕೃತಿಗಳ ಮಹತ್ವ ಅವರಿಗೆ ತನ್ನಿಂತಾನೇ ಅರಿವಾಗುತ್ತದೆ. ಕೃತಿಯ ಫಾರ್‌ಮ್ಯಾಟ್ ಬದಲಾದ ಹಾಗೆ ವಿಮರ್ಶೆಯ ರೀತಿಯೂ ಬದಲಾಗಬೇಕು, ಅದು ಆಗುತ್ತದೆ. ಆದರೆ ಕ್ರಿಯೇಟಿವ್ ಬರಹಗಾರರು ವಿಮರ್ಶೆಗಾಗಲೀ, ಹೊಗಳಿಕೆಗಾಗಲೀ ಕಾಯೋದಿಲ್ಲ. ಅವರು ಅವರ ಹಾದಿಯಲ್ಲಿ ನಡೆಯುತ್ತಾ ಇರುತ್ತಾರೆ. ಕುವೆಂಪು ಅವರೇ ಹೇಳಲಿಲ್ಲವೇ, ‘ತೊಲಗಾಚೆ ಕೀರ್ತಿ ಶನಿ’ ಅಂತ. ಹೆಚ್ಚುತ್ತಿರುವ ಕೀರ್ತಿ ಬರಹಗಾರನ ಮನಸ್ಸಿಗೆ ಬಂದರೆ ಮುಗೀತು.

ಶರಣರ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ; ಸುವರ್ಣ ನ್ಯೂಸ್ ಜೊತೆ ಮನು ಬಳಿಗಾರ್ ಸಂದರ್ಶನ!

ಜೈಪುರ ಲಿಟರರಿ ಫೆಸ್ಟ್ ನಡೆಯಿತು. ಅಲ್ಲಿ ಅನೇಕ ಯುವ ಧ್ವನಿಗಳು ಅನುರಣಿಸಿದವು. ಆದರೆ ನಮ್ಮ ಸಾಹಿತ್ಯ ಸಮ್ಮೇಳನದಲ್ಲಿ ಅದೇ ಸವಕಲು ವಿಚಾರಗಳ ಬಗ್ಗೆಯೇ ಮತ್ತೆ ಮತ್ತೆ ಚರ್ಚೆ ನಡೆಯುತ್ತಿದೆ ಎಂಬ ಟೀಕೆಯಿದೆಯಲ್ಲ?

ಜೈಪುರ ಸಮ್ಮೇಳನಕ್ಕೆ ನಾನು ಹೋಗಿಲ್ಲ. ಆದರೆ ಕೇಳಿದ್ದೇನೆ. ಅಲ್ಲಿಯೂ ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುವುದಿಲ್ಲ. ಸಾಹಿತ್ಯ, ಸಂಸ್ಕೃತಿ, ಧರ್ಮ, ಸಿನಿಮಾ ಅಂತೆಲ್ಲ ಅನೇಕ ವಿಷಯಗಳನ್ನು ಚರ್ಚಿಸುತ್ತಾರೆ. ಕಳೆದ ಸಲ ಬೆಂಗಳೂರು ಲಿಟರರಿ ಫೆಸ್ಟಿವಲ್‌ಗೆ ಕರೆದಿದ್ದರು. ಹೋಗಿದ್ದೆ. ಬೆಂಗಳೂರಿನಲ್ಲೇ ಆ ಫೆಸ್ಟಿವಲ್ ನಡೆದರೂ ಇಲ್ಲಿ ಕನ್ನಡ ಅಷ್ಟಕ್ಕಷ್ಟೇ. ನಮ್ಮನ್ನು ಕರೆಸಿದ್ದರು, ಬರೀ ಮೂರು ನಿಮಿಷ ಮಾತಾಡಿ ಅಂದರು. ಅಷ್ಟು ಸಮಯದಲ್ಲಿ ಯಾವ ವಿಷಯ ಹೇಳಲಿಕ್ಕಾಗುತ್ತೆ? ಏನೋ ಹೇಳಿ ಸುಮ್ಮನಾದೆ. ಅಲ್ಲಿ ಬಂದಿರುವವರಿಗೂ ಕನ್ನಡ ಸಾಹಿತಿಗಳ ಮಾತು ಕೇಳುವ ಆಸಕ್ತಿ ಇದ್ದ ಹಾಗಿರಲಿಲ್ಲ. ಅದೇ ಹಿಂದಿ ಚಿತ್ರಸಾಹಿತಿಯೊಬ್ಬರ ಮಾತಿಗೆ ಜನ ಕಿಕ್ಕಿರಿದು ಸೇರಿದ್ದರು. ನಮ್ಮ ನೆಲದಲ್ಲಿ ನಮ್ಮ ಭಾಷೆಯನ್ನೇ ಕಡೆಗಣಿಸಿದರೆ ಹೇಗೆ? ಆದರೆ ಜೈಪುರ ಲಿಟ್ ಫೆಸ್ಟ್‌ನಿಂದ ಪ್ರೇರಿತವಾಗಿ ಹುಟ್ಟಿಕೊಂಡ ಧಾರವಾಡ ಸಾಹಿತ್ಯ ಸಂಭ್ರಮ ಅತ್ಯುತ್ತಮ ಚಿಂತನೆಗಳಿಗೆ ವೇದಿಕೆಯಾಗಿತ್ತು. ಗಿರಡ್ಡಿ ಬಹಳ ಚೆನ್ನಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದರು. ಆ ಪರಂಪರೆ ಮುಂದುವರಿದಿದೆ.

ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಅವವೇ ವಿಚಾರಗಳು ಚರ್ಚೆಯಾಗುತ್ತವೆ. ಅವುಗಳಲ್ಲಾದರೂ ಬದಲಾವಣೆ ತರಬಹುದಲ್ಲವೇ?

ಆ ಸಮಸ್ಯೆಗಳು ಅಂದಿನಿಂದ ಇಂದಿನವರೆಗೂ ಮುಂದುವರಿದಿರುತ್ತವೆ. ಅದೇ ಕಾರಣಕ್ಕೆ ಪ್ರತಿ ಸಲ ಚರ್ಚೆಯಾಗುತ್ತವೆಯೇನೋ. ಅವು ಜನಸಾಮಾನ್ಯರಿಗೆ ಹತ್ತಿರವಾಗಿರುವ ಸಬ್ಜೆಕ್ಟ್‌ಗಳು. ಅವುಗಳಿಗೆ ಪರಿಹಾರ ಸಿಗುತ್ತೋ ಇಲ್ಲವೋ, ಸಾಹಿತ್ಯ ಸಮ್ಮೇಳನದಂಥ ವೇದಿಕೆಗಳಲ್ಲಿ ಚರ್ಚೆಯಾಗೋದರಲ್ಲಿ ತಪ್ಪಿಲ್ಲ ಅನಿಸುತ್ತದೆ. ಜೊತೆಗೆ ಹೊಸ ಬಗೆಯ ವಿಚಾರಗಳಿಗಾಗಿ ಸಮಾನಾಂತರ ವೇದಿಕೆಗಳಿರುತ್ತವೆ. ಅಲ್ಲಿ ಭಿನ್ನ ವಿಷಯಗಳ ಬಗ್ಗೆ ಚರ್ಚೆ ನಡೆಸಬಹುದು.

ಸಾಹಿತ್ಯ ಸಮ್ಮೇಳನಕ್ಕೂ ಅದೇ ತೀವ್ರತೆ ತರಬಹುದಲ್ಲವೇ?

ಅದು ಹೇಗೆ ಸಾಧ್ಯ? ಕನ್ನಡ ಸಾಹಿತ್ಯ ಸಮ್ಮೇಳನ ಜನಸಾಮಾನ್ಯರದ್ದು. ಈ ಲಿಟರರಿ ಫೆಸ್ಟಿವಲ್‌ಗಳಲ್ಲಿ ಯಾವೊಬ್ಬ ಹಳ್ಳಿಯ ರೈತನೂ ಕಾಣುವುದಿಲ್ಲ. ಅದಕ್ಕೆ ಬರುವ ವರ್ಗವೇ ಬೇರೆ. ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರೇ ಬೇರೆ. ಜನರಿಗೆ ಇದೊಂಥರ ಉತ್ಸವ. ಸಮಸ್ತ ಕರ್ನಾಟಕದ ಉತ್ಸವ. ಇಲ್ಲಿ ಸಾಹಿತ್ಯದ ಗಂಧಗಾಳಿ ಇಲ್ಲದ ಹಳ್ಳಿಗನೊಬ್ಬನೂ ಬಂದು ಸಾಹಿತಿಗಳ ಮಾತು ಕೇಳಿಕೊಂಡು ಹೋಗುತ್ತಾನೆ. ಅವರ ಮನೆಯ ಹಬ್ಬದಷ್ಟೇ ಖುಷಿಯಿಂದ ಪಾಲ್ಗೊಳ್ಳುತ್ತಾನೆ. ಅವನ ಇಡೀ ಪರಿವಾರವೇ ಬಂದು ಖುಷಿಪಟ್ಟು ಹೋಗುತ್ತದೆ. ಸ್ಕೂಲ್, ಕಾಲೇಜು ಮಕ್ಕಳು, ಜನಸಾಮಾನ್ಯರು ಎಲ್ಲರೂ ಪಾಲ್ಗೊಳ್ಳುತ್ತಾರೆ. ಊರಿಗೆ ಊರೇ ಸಮ್ಮೇಳನದ ತಯಾರಿಯಲ್ಲಿ ಭಾಗಿಯಾಗುತ್ತದೆ. ಸಾಹಿತ್ಯದ ಚರ್ಚೆಗಿಂತ ಕನ್ನಡದ ಹೆಸರಿನಲ್ಲಿ ಜನರು ಅನುಭವಿಸುವ ಈ ಸಂಭ್ರಮ ದೊಡ್ಡದು.

ಆದರೆ ಸಮಾನಾಂತರ ವೇದಿಕೆಯಲ್ಲಿ ನಡೆಯುವ ಗೋಷ್ಠಿಗಳಲ್ಲಿ ಭಾಗವಹಿಸುವವರೇ ನಮಗೆ ಮುಖ್ಯ ವೇದಿಕೆಯಲ್ಲಿ ವಿಚಾರ ಮಂಡಿಸಲು ಅವಕಾಶ ಕೊಡಬೇಕಿತ್ತು, ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಪ್ರತಿವರ್ಷ ಕೂಗೆಬ್ಬಿಸುತ್ತಾರೆ.

ಹೌದಾ, ನನಗಿದು ತಿಳಿದಿಲ್ಲ. ಆದರೆ ಮುಖ್ಯವೇದಿಕೆಯಷ್ಟೇ ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಜನ ಸಮಾನಾಂತರ ವೇದಿಕೆಯ ಗೋಷ್ಠಿಗಳಲ್ಲಿ ಭಾಗವಹಿ ಸೋದನ್ನು ನೋಡಿದ್ದೇನೆ. ಈ ಸಲ ಎರಡು ಸಮಾನಾಂತರ ವೇದಿಕೆಗಳಿವೆ.? 

ಬಿಸಿಲೂರಿನಲ್ಲಿ ಕನ್ನಡ ಜಾತ್ರೆ: ಸಮ್ಮೇಳನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

ನೀವು ಪುರಾಣವನ್ನು ಸಮಕಾಲೀನ ನೆಲೆಗೆ ತಂದವರು. ಕುಮಾರವ್ಯಾಸ ಕಥಾಂತರದ ಜೊತೆಗೆ ಪಂಪನನ್ನೂ ಸರಳ ಕನ್ನಡಕ್ಕೆ ತಂದಿರಿ. ಯಾವ ಉದ್ದೇಶ ಇಟ್ಟುಕೊಂಡು ಬರೆದಿರಿ? ಅದು ಈಡೇರುತ್ತಿದೆಯಾ?

ಪಂಪನ ಕಾಲದ ಕನ್ನಡ ಈ ಕಾಲದ ಹುಡುಗರಿಗೆ ಅರ್ಥ ಆಗುವುದಿಲ್ಲ. ಹಾಗಾಗಿ ಅಂಥಾ ಅದ್ಭುತ ಕವಿಗಳ ಕವಿತೆಯಿಂದ ಈ ಕಾಲದ ಹುಡುಗರು ವಂಚಿತರಾಗುತ್ತಿದ್ದಾರೆ. ಹಾಗಾಗಿ ಈ ಕಾಲದವರಿಗೂ ಪಂಪ, ಕುಮಾರವ್ಯಾಸನ ಕಾವ್ಯದ ಸೊಗಸು ಗೊತ್ತಾಗಬೇಕು ಅನ್ನುವ ಹಂಬಲ ನನ್ನದಾಗಿತ್ತು. ಏಕೆಂದರೆ ಅವರು ಬರೆದದ್ದು ಆ ಕಾಲದ ವಿಚಾರ ಮಾತ್ರ ಅಲ್ಲ. ಅದಕ್ಕೊಂದು ಸಾರ್ವಕಾಲಿಕತೆ ಇದೆ. ಈ ಕಾಲದ ಹುಡುಗರಿಗೂ ಬೇಕಾದ್ದು ಆ ಕಾವ್ಯಗಳಲ್ಲಿ ಸಾಕಷ್ಟಿವೆ. ತಪಸ್ಸಿನ ಹಾಗೆ ಈ ಕೆಲಸ ಮಾಡಿದ್ದೇನೆ. ಸುಮಾರು ನಾಲ್ಕೈದು ವರ್ಷ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಬರೆಯುತ್ತಿದ್ದೆ. ಬರೆಯುತ್ತಾ ಬರೆಯುತ್ತಾ ಆ ಕಾವ್ಯದ ರಸಾಸ್ವಾದ ನನ್ನನ್ನೂ ಪ್ರಫುಲ್ಲಗೊಳಿಸುತ್ತಿತ್ತು. ಇದನ್ನು ಎಷ್ಟು ಜನ ಓದಿದರು ಬಿಟ್ಟರು ಅನ್ನೋದು ಗೊತ್ತಿಲ್ಲ. ಆದರೆ ಓದುಗ ನಿಗೂಢ. ಎಲ್ಲೋ ಅಜ್ಞಾತವಾಗಿಯೇ ಇದ್ದು ಓದುತ್ತಾನೆ. ಅವನಿಗೆ ತೃಪ್ತಿ ಸಿಕ್ಕರೆ ನನ್ನ ಪ್ರಯತ್ನ ಸಾರ್ಥಕ.

ಸಾಹಿತ್ಯದ ವಿಷಯಕ್ಕೆ ಬಂದರೆ ಒಂದು ಕೃತಿ ಇಂಗ್ಲಿಷ್‌ಗೆ ಅನುವಾದವಾದರೆ ಅದಕ್ಕೆ ಹೆಚ್ಚು ಮಹತ್ವ ಎಂಬ ಧೋರಣೆಯಿದೆಯಲ್ಲವೇ?

ಅದು ಒಂದು ರೀತಿಯಲ್ಲಿ ನಿಜ. ಜಗತ್ತಿನ ಸಾಹಿತ್ಯವನ್ನು ಕನ್ನಡದಲ್ಲೇ ಕನ್ನಡಿಗರಿಗೆ ತಲುಪಿಸುವ ಜೊತೆಗೆ ಕನ್ನಡ ಕೃತಿಗಳನ್ನೂ ಜಗತ್ತಿಗೆ ಪರಿಚಯಿಸುವ ಕೆಲಸ ಆಗಬೇಕಾದ್ದೇ. ಇತ್ತೀಚೆಗೆ ಕಾಯ್ಕಿಣಿ ಅವರ ಕೃತಿ, ವಿವೇಕ್ ಶಾನುಭಾಗ್ ಅವರ ಕೃತಿಗಳು ಇಂಗ್ಲಿಷ್‌ಗೆ ಅನುವಾದ ವಾಗಿ ಎಷ್ಟೆಲ್ಲ ಮನ್ನಣೆ ಗಿಟ್ಟಿಸಿಕೊಂಡವು. ಆದರೆ ಹೀಗೆ ಅನುವಾದಕ್ಕೆ ಹೊರಟಾಗ ಅನುವಾದಕನಿಗೆ ಬರೀ ಭಾಷೆ ಗೊತ್ತಿದ್ದರೆ ಸಾಲದು, ಪ್ರಾದೇಶಿಕ ನುಡಿಗಟ್ಟುಗಳು ಗೊತ್ತಿರಬೇಕು. ದ್ವಿದಳನಗೊಳ್ಳುವ ಅಪರೂಪದ ಅರ್ಥಶಕ್ತಿ ಕನ್ನಡಕ್ಕಿದೆ. ಕನ್ನಡ ಕನ್ನಡಿಸುತ್ತದೆ ಅಂದರೆ ತಪ್ಪಲ್ಲ. ಇಲ್ಲದೇ ಹೋದರೆ ಅನುವಾದ ನೀರಸವಾಗುತ್ತದೆ. ಲೇಖಕ ಹೇಳಿದ್ದು ಬಹಳ ಪೇಲವವಾಗಿ ಅಸ್ಥಿಪಂಜರವಷ್ಟೇ ದಕ್ಕುತ್ತದೆ. ಇದರಿಂದ ಮೂಲ ಬರಹಕ್ಕೂ ಅನ್ಯಾಯ ಆಗುತ್ತದೆ. ಅಂದರೆ ಕನ್ನಡದಲ್ಲೊಂದು ಸಮಗ್ರತೆ ಇದೆ. ಇದನ್ನು ಅನುವಾದಕ ಅಂತರ್ಗತಗೊಳಿಸಿ ಆಮೇಲೆ ಕನ್ನಡ ಕೃತಿಯನ್ನು ಬೇರೆ ಭಾಷೆಗೆ ಅನುವಾದ ಮಾಡಿದರೆ ಇಲ್ಲಿನ ದರ್ಶನ ಜಗತ್ತಿಗೆ ಸಿಗುತ್ತದೆ.