₹38,000 ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿ, ಸ್ವಂತ ಚಹಾ ಅಂಗಡಿ ಆರಂಭಿಸಿದ ಯುವಕನೊಬ್ಬನ ಸ್ಪೂರ್ತಿದಾಯಕ ಕಥೆಯಿದು. ಕೇವಲ ₹2 ಲಕ್ಷ ಹೂಡಿಕೆಯಿಂದ ತಿಂಗಳಿಗೆ ₹1 ಲಕ್ಷ ನಿವ್ವಳ ಲಾಭ ಗಳಿಸಿ, ಇದೀಗ ತನ್ನ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.

ದೆಹಲಿ: ಉತ್ತಮ ಡಿಗ್ರಿ ಪಡೆದು ಯಾವುದೋ ಕಂಪೆನಿಯಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿ ಸುಸ್ತಾದವರೇ ಹೆಚ್ಚುಮಂದಿ. ವೈಟ್ ಕಾಲರ್​ ಜಾಬ್​ ಬೇಕೆಂದು ಪಟ್ಟು ಹಿಡಿದು ಕುಳಿತವರು ಹಲವರು. ಚಿಕ್ಕ ಪುಟ್ಟ ಕೆಲಸ ಸಿಕ್ಕರೂ ತಾವು ಪಡೆದ ಡಿಗ್ರಿಗೆ ತಕ್ಕನಾಗಿಲ್ಲ ಎಂದು ಸಿಗುವ ಕೆಲಸವನ್ನೆಲ್ಲಾ ಬಿಟ್ಟು ಕೊನೆಗೆ ನಿರುದ್ಯೋಗಿಯಾಗಿದ್ದೇನೆ ಎಂದು ಸರ್ಕಾರದ ಮೇಲೆ ಗೂಬೆ ಕೂಡ್ರಿಸೋದು, ಎಲ್ಲೆಲ್ಲೂ ನಿರುದ್ಯೋಗ ಎಂದು ಬಾಯಿಬಾಯಿ ಬಡಿದುಕೊಳ್ಳುವುದು ನಡೆದೇ ಇದೆ. ಒಂದೆಡೆ ಇಂಥವರು ತಮ್ಮ ಸರ್ಟಿಫಿಕೇಟ್​ ಹಿಡಿದು ಉದ್ಯೋಗಕಕ್ಕೆ ಅಲೆದಾಡುತ್ತಿದ್ದರೆ, ಅದೇ ಇನ್ನೊಂದೆಡೆ ತಣ್ಣಗೇ ತಾವೇ ಸ್ವ ಉದ್ಯೋಗ ಮಾಡಿ ಲಕ್ಷ ಲಕ್ಷ ದುಡಿಯುತ್ತಿರುವ ಯುವಕರು ಮತ್ತೊಂದೆಡೆ. ಲಕ್ಷ ಲಕ್ಷ ದುಡಿದರೂ ಚಿಕ್ಕಪುಟ್ಟ ಉದ್ಯೋಗ ಮಾಡಿದರೆ ಮದುವೆಯಾಗಲು ಹೆಣ್ಣು ಸಿಗಲ್ಲ ಎನ್ನುವ ಕೊರಗೂ ಕೆಲವು ಯುವಕರದ್ದು. ಆದರೆ ಹಣಕ್ಕಾಗಿಯೇ ಬರುವ ಹುಡುಗಿಯರಿಗೆ ಸೆಡ್ಡು ಹೊಡೆದು ಕೈತುಂಬಾ ಸಂಪಾದನೆ ಮಾಡುವ ಮಾರ್ಗವನ್ನು ಹುಡುಕುವವನೇ ನಿಜವಾದ ಹೀರೋ ಎನ್ನುವ ಸ್ಟೋರಿಯೊಂದು ಇದೀಗ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.

ಇದೀಗ ಅಂಥದ್ದೇ ಒಂದು ಇನ್​ಸ್ಪೈರಿಂಗ್​ ಸ್ಟೋರಿ ಈ ಯುವಕದ್ದು. ಜನರು ನಿರಂತರವಾಗಿ ಸುರಕ್ಷಿತ ಉದ್ಯೋಗವನ್ನು ಹುಡುಕುತ್ತಿರುವಾಗ, ತಮ್ಮದೇ ಆದ ಹಣೆಬರಹವನ್ನು ಸೃಷ್ಟಿಸಿಕೊಳ್ಳಲು ಧೈರ್ಯ ಮಾಡುವ ಕೆಲವರ ಪೈಕಿ ಈ ಯುವಕನ ಸಾಧನೆಯನ್ನು ಅಂಕಿತ್ ಪಾಂಡೆ ಎನ್ನುವವರು ಶೇರ್​ ಮಾಡಿದ್ದಾರೆ. ತಮ್ಮ ನೆರೆಯ ಯುವಕನೊಬ್ಬನ ಸ್ಟೋರಿಯನ್ನು ಅಂಕಿತ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಯುಕ ಒಂದು ಕಂಪೆನಿಯಲ್ಲಿ ಉದ್ಯೋಗಕ್ಕೆ ಇದ್ದ. ಅಲ್ಲಿ ಆತನಿಗೆ ತಿಂಗಳಿಗೆ 38 ಸಾವಿರ ರೂಪಾಯಿ ಸಂಬಳ. ಆದರೆ, ತಾವು ಮಾಡುವ ಕೆಲಸಕ್ಕೆ ಈ ಸಂಬಳ ತುಂಬಾ ಕಡಿಮೆ ಎನ್ನಿಸಿತು. ಹಾಗೆಂದು ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಕುಳಿತುಕೊಳ್ಳಲಿಲ್ಲ. ತಮಗೆ ಇದಕ್ಕಿಂತ ಹೆಚ್ಚಿಗೆ ದುಡಿಯುವ ತಾಕತ್ತು ಇದೆ ಎಂದುಕೊಂಡು ಧೈರ್ಯ ಮಾಡಿ ಕೆಲಸ ಬಿಟ್ಟು ಇದೀಗ ತಿಂಗಳಿಗೆ ಎಲ್ಲಾ ಖರ್ಚು ಕಳೆದು ಕನಿಷ್ಠ 1 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಎನ್ನುವ ಸ್ಟೋರಿ ಶೇರ್​ ಮಾಡಿದ್ದಾರೆ.

ತಿಂಗಳಿಗೆ 38 ಸಾವಿರ ಸಂಬಳ

ಅಂಕಿತ್ ಅವರ ಪ್ರಕಾರ, ಈ ಯುವಕ, ಹಿಂದೆ ಟೆಲಿಪರ್‌ಫಾರ್ಮನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು, ಸುಮಾರು ₹38,000 ಮಾಸಿಕ ಸಂಬಳವನ್ನು ಗಳಿಸುತ್ತಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿತ. ಬಿಡುವೇ ಇಲ್ಲದ ಕೆಲಸ. ಆದರೆ ತಮ್ಮ ಸಂಬಳ ಕಡಿಮೆ ಎನ್ನಿಸಿತು. ಕಳೆದ ಮೇ ತಿಂಗಳಲ್ಲಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಅವರು ಕೆಲಸ ತ್ಯಜಿಸಿದಾಗ, ಅವರ ಸುತ್ತಲಿನ ಜನರು ಮತ್ತು ಪರಿಚಯಸ್ಥರು ಟೀಕಿಸಿದರು. ಆದರೆ ಯುವಕ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ, ಆಟೋ ಸ್ಟ್ಯಾಂಡ್ ಬಳಿ ಚಹಾ ಅಂಗಡಿಯನ್ನು ತೆರೆದರು. ಆರಂಭದಲ್ಲಿ ಮಾಡಿದ್ದು, ಸುಮಾರು 2 ಲಕ್ಷ ರೂಪಾಯಿ ಹೂಡಿಕೆ. ಆಟೋ ಸ್ಟ್ಯಾಂಡ್ ಬಳಿ ಸುಂದರವಾಗಿ ವಿನ್ಯಾಸಗೊಳಿಸಲಾದ ಚಹಾ ಅಂಗಡಿಯನ್ನು ತೆರೆದರು. ಅಂಗಡಿಯನ್ನು ಪರಿಣಾಮಕಾರಿಯಾಗಿ ನಡೆಸಲು, ಅವರು ಚಹಾ ತಯಾರಿಸಲು ಮತ್ತು ಬಡಿಸಲು ಇಬ್ಬರು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಂಡರು. ಅವರು ಒಂದು ಕಪ್ ಚಹಾವನ್ನು ₹10 ಕ್ಕೆ ಮತ್ತು ಒಂದು ಕಪ್ ಅನ್ನು ₹20 ಕ್ಕೆ ಮಾರಾಟ ಮಾಡುತ್ತಾರೆ.

ಮಾಸಿಕ ವಹಿವಾಟು ₹1.8 ಲಕ್ಷ

ಅಂಗಡಿ ತೆರೆದ ಕೂಡಲೇ ಅವರ ಈ ಕಲ್ಪನೆ ಜನಪ್ರಿಯವಾಯಿತು. ಇಂದು, ಅವರ ಅಂಗಡಿಯು ಪ್ರತಿದಿನ ಸುಮಾರು 400 ಕಪ್ ಚಹಾವನ್ನು ಮಾರಾಟ ಮಾಡುತ್ತದೆ. ಇದು ಅವರ ದೈನಂದಿನ ಆದಾಯವನ್ನು ಸುಮಾರು ₹6,000 ಕ್ಕೆ ತರುತ್ತದೆ, ಅಂದರೆ ಮಾಸಿಕ ವಹಿವಾಟು ಸುಮಾರು ₹1.8 ಲಕ್ಷ. ಅವರ ವೆಚ್ಚಗಳು ಹೀಗಿವೆ:

ಅಂಗಡಿ ಬಾಡಿಗೆ: ₹25,000

ಸಿಬ್ಬಂದಿ ವೇತನ: ₹30,000

ವಿದ್ಯುತ್ ಮತ್ತು ಕಚ್ಚಾ ವಸ್ತುಗಳು (ಹಾಲು, ಸಕ್ಕರೆ, ಎಲೆಗಳು, ಇತ್ಯಾದಿ): ₹25,000

ನಿವ್ವಳ ಲಾಭ: ₹1 ಲಕ್ಷ

ಈ ಎಲ್ಲಾ ಖರ್ಚುಗಳನ್ನು ಕಡಿತಗೊಳಿಸಿದ ನಂತರವೂ, ಅವರು ಪ್ರತಿ ತಿಂಗಳು ಸುಮಾರು ₹1 ಲಕ್ಷ ನಿವ್ವಳ ಲಾಭವನ್ನು ಮನೆಗೆ ತರುತ್ತಾರೆ. ಇದು ಅವರ ಹಿಂದಿನ ಸಂಬಳಕ್ಕಿಂತ (₹38,000) ಸುಮಾರು ಎರಡೂವರೆ ಪಟ್ಟು ಹೆಚ್ಚು. ಈ ಕಥೆ ಚಹಾಕ್ಕೆ ಸೀಮಿತವಾಗಿಲ್ಲ. ಅವರ ಯಶಸ್ವಿ ವ್ಯವಹಾರದ ನಂತರ, ಅವರು ಅದನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಅಂಗಡಿಯ ಬಳಿ ವಡಾ ಪಾವ್, ಸಮೋಸಾ ಮತ್ತು ಜಿಲೇಬಿಗಳನ್ನು ಮಾರಾಟ ಮಾಡುವ ಹೊಸ ಕೌಂಟರ್ ಅನ್ನು ತೆರೆದರು. ಈ ಹೊಸ ಆರಂಭವನ್ನು ಆಚರಿಸಲು, ಅವರು ತಮಗೆ ಸ್ವೀಟ್​ ನೀಡಿ ಆಹ್ವಾನ ನೀಡಿರುವುದಾಗಿ ಅಂಕಿತ್‌ ಬರೆದುಕೊಂಡಿದ್ದಾರೆ.