ಬೆಂಗಳೂರಿನ ತಂಪಾದ ವಾತಾವರಣ ಮತ್ತು ಜನರ ದೈನಂದಿನ ಕೆಲಸದ ಉತ್ಪಾದಕತೆಯನ್ನು ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ. ಕಾಮೆಡಿಯನ್ ಶುಭಂ ಪೂಜಾರಿ ಅವರು ದೆಹಲಿ ಹಾಗೂ ಬೆಂಗಳೂರಿನ ಹವಾಮಾನವನ್ನು ವಿಡಂಬನಾತ್ಮಕವಾಗಿ ಹೋಲಿಸಿದ್ದು, ಇಲ್ಲಿನ ವೆದರ್ ಕಂಬಳಿ ಹೊದ್ದು ಮಲಗಲು ಮಾತ್ರ ಪ್ರೇರೇಪಿಸುತ್ತದೆ ಎಂದಿದ್ದಾರೆ. ಇದಕ್ಕೆ ನೆಟ್ಟಿಗರು ಇಎಂಐಗಳೇ ನಮ್ಮನ್ನು ಕೆಲಸಕ್ಕೆ ಓಡಿಸುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯ ಆಹ್ಲಾದಕರ ಹವಾಮಾನದ ಬಗ್ಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಆದರೆ, ಇದೇ ತಂಪಾದ ವಾತಾವರಣವು ಜನರ ಕೆಲಸದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಶುಭಂ ಪೂಜಾರಿ ತಮ್ಮ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಅತ್ಯಂತ ಹಾಸ್ಯಭರಿತವಾಗಿ ವಿವರಿಸಿದ್ದಾರೆ. ಅವರ ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
ವಿಶ್ರಾಂತಿಯ ತಾಣದಂತೆ ಬೆಂಗಳೂರು:
ಶುಭಂ ಪೂಜಾರಿ ಅವರ ಪ್ರಕಾರ, ಬೆಂಗಳೂರಿನ ತಂಗಾಳಿ ಮತ್ತು ಮೋಡ ಕವಿದ ವಾತಾವರಣವು ಕೆಲಸ ಮಾಡಲು ಬಿಡುವುದೇ ಇಲ್ಲ. "ಇಲ್ಲಿಗೆ ಬಂದ ತಕ್ಷಣ ನನಗಂತೂ ಕಂಬಳಿ ಹೊದ್ದು, ಫ್ಯಾನ್ ವೇಗವನ್ನು ಮಧ್ಯಮದಲ್ಲಿಟ್ಟುಕೊಂಡು, ಮೊಬೈಲ್ ಸ್ಕ್ರಾಲ್ ಮಾಡುತ್ತಾ ಮಲಗಬೇಕೆನಿಸುತ್ತದೆ. ಇದು ಐಟಿ ಹಬ್ ತರ ಕಾಣಲ್ಲ, ಬದಲಿಗೆ ನಿವೃತ್ತಿಯ ನಂತರ ವಿಶ್ರಾಂತಿ ಪಡೆಯುವ ತಾಣದಂತೆ ಭಾಸವಾಗುತ್ತದೆ" ಎಂದು ಅವರು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡಲು ಇಎಂಐಗಳೇ ಪ್ರೇರಣೆ!
ದೆಹಲಿಯ ಹವಾಮಾನಕ್ಕೆ ಹೋಲಿಸಿದ ಶುಭಂ, "ದೆಹಲಿಯಲ್ಲಿ ಒಂದು ಕಪ್ ಚಹಾ ಕುಡಿದರೆ ಸಾಕು, ಮರುಕ್ಷಣವೇ ಕೆಲಸದ ಮೂಡ್ ಬರುತ್ತದೆ. ಆದರೆ ಬೆಂಗಳೂರಿನಲ್ಲಿ ಮೂರ್ನಾಲ್ಕು ಕಪ್ ಚಹಾ ಕುಡಿದರೂ ಆಲಸ್ಯ ದೂರಾಗುವುದಿಲ್ಲ. ಇಂತಹ ನಿದ್ದೆ ಬರಿಸುವ ಹವಾಮಾನದಲ್ಲೂ ಬೆಂಗಳೂರಿಗರು ಪ್ರತಿದಿನ ಬೆಳಿಗ್ಗೆ ಎಚ್ಚರಗೊಂಡು ಆಫೀಸ್‌ಗೆ ಹೇಗೆ ಓಡುತ್ತಾರೆ? ಬಹುಶಃ ಇವರೆಲ್ಲರಿಗೂ ದೊಡ್ಡ ದೊಡ್ಡ ಸಾಲ ಮತ್ತು ಇಎಂಐ (EMI) ಗಳ ಭಾರ ಇರಬೇಕು. ಇಲ್ಲದಿದ್ದರೆ ಈ ವೆದರ್‌ನಲ್ಲಿ ಕೆಲಸ ಮಾಡಲು ಬೇರೆ ಯಾವುದೇ ಪ್ರೇರಣೆ ಸಿಗಲು ಸಾಧ್ಯವೇ ಇಲ್ಲ!" ಎಂದು ತಮಾಷೆ ಮಾಡಿದ್ದಾರೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:
ಈ ವಿಡಿಯೋಗೆ ಕಾಮೆಂಟ್ ಬಾಕ್ಸ್‌ನಲ್ಲಿ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರರು, "ಹೌದು, ಇಲ್ಲಿನ ದಿನಚರಿ ಎಂದರೆ ಮಲಗುವುದು, ಏಳುವುದು, ಸ್ವಲ್ಪ ಕೆಲಸ ಮಾಡಿ ಮತ್ತೆ ಮಲಗುವುದು ಅಷ್ಟೇ" ಎಂದಿದ್ದಾರೆ. ಮುಂಬೈಗೆ ಹೋಲಿಸಿದ ಮತ್ತೊಬ್ಬರು, ಮುಂಬೈನಲ್ಲಿರುವ ಅವ್ಯವಸ್ಥೆಯ ನಡುವೆಯೂ ಅಲ್ಲಿನ ಜನ ಹೆಚ್ಚು ಉತ್ಪಾದಕರು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇನ್ನು ಕೆಲವು ಸ್ಥಳೀಯರು, "ದಯವಿಟ್ಟು ಬೆಂಗಳೂರಿನ ಹವಾಮಾನವನ್ನು ವೈಭವೀಕರಿಸುವುದನ್ನು ನಿಲ್ಲಿಸಿ. ಇಲ್ಲಿ ಈಗಾಗಲೇ ವಾಹನ ದಟ್ಟಣೆ ಹೆಚ್ಚಾಗಿದೆ, ಮಳೆ ಕೊರತೆಯಿಂದ ನೀರಿನ ಸಮಸ್ಯೆಯೂ ಎದುರಾಗುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


