ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿನಿ ರುಚಿ ಅಗರ್ವಾಲ್, ಎಂಬಿಎ ಪದವಿ ಪಡೆದರೂ ಜಾಗತಿಕ ಸಲಹಾ ಸಂಸ್ಥೆಯಲ್ಲಿ ಕೆಲಸ ಮಾಡಲು ಪದವಿಯೊಂದೇ ಸಾಕಾಗಲಿಲ್ಲ ಎಂದು ಹೇಳಿದ್ದಾರೆ. ಕ್ಲೈಂಟ್‌ಗಳಿಗೆ ಸ್ಪಷ್ಟ ಮತ್ತು ನಿಖರವಾದ ಉತ್ತರಗಳನ್ನು ನೀಡುವ ಕೌಶಲ್ಯದ ಮಹತ್ವವನ್ನು ಅವರು ವಿವರಿಸಿದ್ದಾರೆ.

ಬೆಂಗಳೂರು (ಏ.10): ಐಐಎಂನಲ್ಲಿ ಪದವಿ ಪಡೆದರೆ, ಎಂಬಿಎ ಮಾಡಿದರೆ, ಜಗತ್ತಿನ ಯಾವುದೇ ಸಂಸ್ಥೆಯಲ್ಲಿ ಬೇಕಾದರೂ ಕೆಲಸ ಸಿಗುತ್ತದೆ ಅನ್ನೋ ನಂಬಿಕೆ ಎಲ್ಲರಲ್ಲಿದೆ. ಆದರೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್ (IIM-A) ನ ಹಳೆಯ ವಿದ್ಯಾರ್ಥಿನಿಯೊಬ್ಬರು, ತಾನು ಪ್ರತಿಷ್ಠಿತ ಮ್ಯಾನೇಜ್‌ಮೆಂಟ್‌ ಸಂಸ್ಥೆಯಿಂದ ಎಂಬಿಎ ಪದವಿ ಪಡೆದರೂ, ಜಾಗತಿಕ ಸಲಹಾ ಸಂಸ್ಥೆಯಲ್ಲಿ ಕೆಲಸ ಮಾಡಲು ನನಗೆ ಇಲ್ಲಿನ ಪದವಿಯೊಂದೇ ಸಾಕಾಗಿರಲಿಲ್ಲ ಎಂದಿದ್ದಾರೆ. ಅದರೊಂದಿಗೆ ಅವರ ವಿಚಾರ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

ಮುಂಬೈ ಮೂಲದ ಮೆಂಟರ್‌ಶಿಪ್ ಸಂಸ್ಥೆ ಮೆಂಟೋರ್‌ಸಲ್ಟ್‌ನ ಸಂಸ್ಥಾಪಕಿ ರುಚಿ ಅಗರ್ವಾಲ್, ಜಾಗತಿಕ ಸಲಹಾ ಸಂಸ್ಥೆಯೊಂದರ ಮೊದಲ ಪ್ರೆಸೆಂಟೇಷನ್‌ನಲ್ಲಿಯೇ ನನಗೆ ಈ ಅನುಭವವಾಯಿತು. ಐಐಎಂನ ಕ್ಲಾಸ್‌ರೂಮ್‌ಗಳಲ್ಲಿ ಕಲಿಸದ ಒಂದು ವಿಚಾರವನ್ನು ಅಲ್ಲಿ ಕಲಿತೆ ಎಂದು ಹೇಳಿದ್ದಾರೆ.

ಈ ವೇಳೆ ನನಗೆ, 'ಐಐಎಂ ಅಹಮದಾಬಾದ್‌ನಲ್ಲಿ ಪಡೆದ ಡಿಗ್ರಿಯೊಂದೇ ಕೆಲಸಕ್ಕೆ ಸಾಕಾಗೋದಿಲ್ಲ ಅನ್ನೋದು ತಿಳಿಯಿತು. ನನ್ನಲ್ಲಿ ಎಕ್ಸಿಕ್ಯೂಟಿವ್‌ ಫಿಲ್ಟರ್‌ನ ಕೊರತೆ ಇತ್ತು' ಎಂದು ಅವರು ಲಿಂಕ್ಡಿನ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ತನ್ನ ಮೊದಲ ಕ್ಲೈಂಟ್ ಪ್ರೆಸೆಂಟೇಷನ್‌ ಸಮಯದಲ್ಲಿ, ನಾನು 15 ರೆಕಮಂಡೇಷನ್‌ನೊಂದಿಗೆ ಸಿದ್ದವಾಗಿದ್ದೆ ಎಂದು ಅವರು ಹೇಳಿದ್ದಾರೆ. 'ನಾನು ಒಂದಲ್ಲ, 15 ರೆಕಮಂಡೇಷನ್‌ಅನ್ನು ಸಿದ್ದ ಮಾಡಿದ್ದೆ. ಹೋಟೆಲ್‌ನಲ್ಲಿ ಮೆನ್ಯುಗಳಿದ್ದ ರೀತಿ. ಬ್ಯಾಕಪ್‌ ರೆಕಮಂಡೇಷನ್‌ಗಳನ್ನು ನಾನು ಇರಿಸಿಕೊಂಡಿದ್ದೆವು. ನನ್ನ ಕ್ಲೈಂಟ್‌ ಇದರಲ್ಲಿನ ಒಂದು ರೆಕಮಂಡೇಷನ್‌ಅನ್ನು ಪಿಕ್‌ ಮಾಡಬೇಕು ಅನ್ನೋದು ನನ್ನ ಆಸೆಯಾಗಿತ್ತು' ಎಂದಿದ್ದಾರೆ.

ಆದರೆ, ನನ್ನ ಕ್ಲೈಂಟ್‌, ಪ್ರೆಸೆಂಟೇಷನ್‌ನ ನಡುವಲ್ಲಿಯೇ ಮಾತನ್ನು ಕಟ್‌ ಮಾಡಿ, ಸಿಂಪಲ್‌ ಆಗಿ, 'ರುಚಿ, ನಾವು ಮಾಡಬಹುದಾದ ಒಂದು ವಿಚಾರ ತಿಳಿಸು ಸಾಕು. ಬೇಕಾಗಿರೋದು ಒಂದು ವಿಚಾರ' ಎಂದು ಹೇಳಿದ್ದರು.

ಈ ಹಂತದಲ್ಲಿ ನಿಜಕ್ಕೂ ನಾನು ಸ್ತಬ್ಧಳಾಗಿದ್ದೆ ಎಂದು ಹೇಳಿದ್ದಾರೆ. ನಿಜವಾದ ಕ್ಲೈಂಟ್ ಮೀಟಿಂಗ್‌ಗಳಲ್ಲಿ, ಉನ್ನತ ಕಾರ್ಯನಿರ್ವಾಹಕರು ಮೆನು ಕೇಳಲು ಬಯಸುವುದಿಲ್ಲ. ಅವರಿಗೆ ನಿಖರವಾದ, ಅತ್ಯಂತ ನಿಖರವಾದ ಉತ್ತರ ಬೇಕು. ಇದು ಎಕ್ಸಿಕ್ಯೂಟಿವ್‌ ಫಿಲ್ಟರ್ - ಅಲ್ಲಿ ನೀವು ಬೇರೆ ಯಾವುದನ್ನಾದರೂ ಫಿಲ್ಟರ್ ಮಾಡಬಹುದು ಮತ್ತು ಹೆಚ್ಚು ಪ್ರಸ್ತುತವಾದ ಉತ್ತರವನ್ನು ಮಾತ್ರ ಹಂಚಿಕೊಳ್ಳಬಹುದು."

ಐಐಎಂ-ಎ ಪದವೀಧರೆಯಾಗಿರುವ ರುಚಿ ಅಗರ್ವಾಲ್‌ಗೆ, ಬ್ಯುಸಿನೆಸ್‌ ಸ್ಕೂಲ್‌ಗಳಲ್ಲಿ ಇಂಥ ನಿಜ ಜೀವನದ ಕೌಶಲ್ಯಗಳನ್ನು ಕಲಿಸಲಾಗುತ್ತಿಲ್ಲ ಎನ್ನುವುದು ನನಗೆ ಅರಿವಾಯಿತು ಎಂದು ಹೇಳಿದ್ದಾರೆ.

"ಎಲ್ಲಾ ಕೋನಗಳನ್ನು ಹೇಗೆ ಪರಿಗಣಿಸಬೇಕೆಂದು ಕಲಿಯಲು ನಾನು ವರ್ಷಗಳನ್ನು ಕಳೆದಿದ್ದೇನೆ, ಆದರೆ ವಾಸ್ತವ ಜಗತ್ತಿನಲ್ಲಿ, ಎಕ್ಸಿಕ್ಯೂಟಿವ್‌ಗಳಿಗೆ ಸ್ಪಷ್ಟತೆ ಬೇಕು, ಸಂಕೀರ್ಣತೆಯಲ್ಲ. ಸಂಕೀರ್ಣ ಸಮಸ್ಯೆಗಳನ್ನು ಸರಳ ಪರಿಹಾರಗಳಾಗಿ ಬಟ್ಟಿ ಇಳಿಸಲು ಕಲಿಯುವುದು ನನ್ನ ಕಠಿಣ ಆದರೆ ಅತ್ಯಮೂಲ್ಯವಾದ ಕಲಿಕೆಯ ವಿಚಾರವಾಗಿತ್ತು" ಎಂದು ಅವರು ಹೇಳಿದರು.

ಐಐಎಂ-ಎ ನಲ್ಲಿ ಯಾವಾಗಲೂ "ನಿಮಗೆ ಎಷ್ಟು ತಿಳಿದಿದೆ?" ಎನ್ನುವ ಪ್ರಶ್ನೆಯೇ ಇರುತ್ತದೆ. ಆದರೆ, ನೀವು ಕೆಲಸ ಮಾಡುವ ಸ್ಥಳಗಳಲ್ಲಿ "ನೀವು ಅದನ್ನು ಎಷ್ಟು ಸ್ಪಷ್ಟವಾಗಿ ಹೇಳಬಲ್ಲಿರಿ?" ಎಂಬ ಪ್ರಶ್ನೆಯೇ ಎದುರಲ್ಲಿರುತ್ತದೆ ಎಂದು ಬರೆದುಕೊಂಡಿದ್ದಾರೆ.

ಈ ಮಹತ್ವದ ಕಲಿಕೆಯ ಬಗ್ಗೆ ತಿಳಿಸುತ್ತಾ "ಎಲ್ಲಾ ಉತ್ತರಗಳನ್ನು ಹೊಂದಿರುವುದು ಯಾವತ್ತಿಗೂ ಯಶಸ್ಸು ಅಲ್ಲ. ಸರಿಯಾದ ಉತ್ತರಗಳನ್ನು ಹೊಂದಿರುವುದು ಮತ್ತು ಅವುಗಳನ್ನು ಸ್ಪಷ್ಟವಾಗಿ ತಿಳಿಸುವುದೇ ದೊಡ್ಡ ಯಶಸ್ಸು" ಎಂದು ತೀರ್ಮಾನಿಸಿದ್ದಾಗಿ ಬರೆದಿದ್ದಾರೆ.

ಈಕೆಯ ಪೋಸ್ಟ್‌ಗೆ ಹಲವಾರು ಬ್ಯುಸಿನೆಸ್‌ ಸ್ಕೂಲ್‌ನ ಮಾಜಿ ವಿದ್ಯಾರ್ಥಿಗಳು ಹಾಗೂ ಸಲಹಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಸಹಮತ ವ್ಯಕ್ತಪಡಿಸಿದ್ದಾರೆ. 'ನಿಜಕ್ಕೂ ಉತ್ತಮ ಪೋಸ್ಟ್‌. ಆರಂಭದಲ್ಲಿ, ಒಂದು ಡಜನ್ ಆಯ್ಕೆಗಳನ್ನು ಟೇಬಲ್‌ ಮೇಲೆ ಹಾಕುವುದರಿಂದ ನಾನು ಬುದ್ಧಿವಂತನಾಗಿ ಕಾಣುತ್ತೇನೆ ಎಂದು ನಾನು ಭಾವಿಸಿದ್ದೆ. ಆದರೆ, ಯಾರಿಗೂ ಅದಕ್ಕೆ ಸಮಯ (ಅಥವಾ ತಾಳ್ಮೆ) ಇಲ್ಲ ಎಂದು ನನಗೆ ಅರಿವಾಗುವವರೆಗೂ ಇದನ್ನೆ ಮಾಡುತ್ತಿದ್ದೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಕ್ಯಾಟ್ ಪರೀಕ್ಷೆ ಎಂದರೇನು? MBA ಆಕಾಂಕ್ಷಿಗಳಿಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಮತ್ತೊಬ್ಬರು ಈ ಪೋಸ್ಟ್‌ಅನ್ನು ಒಪ್ಪುತ್ತಾ, "ಕೊನೆಯಲ್ಲಿ, ಇದು ನಿಮ್ಮ ಕಲ್ಪನೆ ಅಥವಾ ಪರಿಕಲ್ಪನೆಯನ್ನು ಅವರಿಗೆ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಲಭಗೊಳಿಸುವ ರೀತಿಯಲ್ಲಿ ಮಾರಾಟ ಮಾಡುವುದರ ಬಗ್ಗೆ. ಇದು ಸುಲಭವಲ್ಲ, ಆದರೆ ನಿರಂತರ ಕಲಿಕೆ ಮತ್ತು ಅನುಭವವು ಕಾಲಾನಂತರದಲ್ಲಿ ಈ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ನಮಗೆ ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ" ಎಂದು ಬರೆದುಕೊಂಡಿದ್ದಾರೆ.

QS Rankings: ಬೆಂಗಳೂರು ಐಐಎಂ ಭಾರತದ ನಂ.2, ವಿಶ್ವದಲ್ಲಿ 40ನೇ ಸ್ಥಾನ!

ಯಾರೀಕೆ ರುಚಿ ಅಗರ್ವಾಲ್‌: CAT (99.99 ಶೇಕಡಾ), GMAT ಮತ್ತು CA ನಲ್ಲಿ ಅತ್ಯುನ್ನತ ಶ್ರೇಣಿಗಳೊಂದಿಗೆ, ಟಾಪ್ 10% ರಲ್ಲಿ ಪದವಿ ಪಡೆದ IIM-A ಹಳೆಯ ವಿದ್ಯಾರ್ಥಿನಿ ರುಚಿ ಅಗರ್ವಾಲ್ ಈಗ ಜಾಗತಿಕ ವೃತ್ತಿ ಮಾರ್ಗದರ್ಶನದ ಮೂಲಕ 25+ ದೇಶಗಳಲ್ಲಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.