ಪಿಎಫ್ ಬಡ್ಡಿ ಹೆಚ್ಚಳದ ಜೊತೆ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಇನ್ನೊಂದು ಗುಡ್ನ್ಯೂಸ್ ನೀಡಿದೆ. ಅದೇನೆಂದರೆ, ಉದ್ಯೋಗ ಬದಲಾವಣೆಯಾದ ಸಂದರ್ಭದಲ್ಲಿ ಹಣ ವಾಪಸ್, ವರ್ಗಾವಣೆ ಸಮಸ್ಯೆಗೂ ಮುಕ್ತಿ ನೀಡಿದೆ. ಏನಿದು ವಿಷ್ಯ?
ಇದಾಗಲೇ ನೌಕರರ ಭವಿಷ್ಯ ನಿಧಿಯ (EPFO) ಮೇಲಿನ ಬಡ್ಡಿದರವನ್ನು ಶೇಕಡಾ 8.25 ಕ್ಕೆ ಸರ್ಕಾರ ಅನುಮೋದಿಸಿದೆ, ಇದರಿಂದಾಗಿ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ವಾರ್ಷಿಕ ಬಡ್ಡಿಯನ್ನು 7 ಕೋಟಿಗೂ ಹೆಚ್ಚು ಚಂದಾದಾರರ ನಿವೃತ್ತಿಯ ನಂತರದ ನಿಧಿಯಲ್ಲಿ ಠೇವಣಿ ಇಡಲು ಅನುವು ಮಾಡಿಕೊಡುತ್ತದೆ. ಫೆಬ್ರವರಿ 28 ರಂದು, ಇಪಿಎಫ್‌ಒ, ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿದರವನ್ನು 2024-25ರ ಹಣಕಾಸು ವರ್ಷಕ್ಕೆ ಹಿಂದಿನ ಹಣಕಾಸು ವರ್ಷದಲ್ಲಿ ಒದಗಿಸಲಾದ ದರಕ್ಕೆ ಸಮನಾಗಿ ಶೇ. 8.25 ರಷ್ಟು ಉಳಿಸಿಕೊಳ್ಳಲು ನಿರ್ಧರಿಸಿತ್ತು. 2024-25ರ ಅನುಮೋದಿತ ಬಡ್ಡಿದರವನ್ನು ಹಣಕಾಸು ಸಚಿವಾಲಯದ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ಈಗ 2025 ಹಣಕಾಸು ವರ್ಷಕ್ಕೆ ಅನುಮೋದಿಸಲಾದ ದರದ ಪ್ರಕಾರ ಬಡ್ಡಿ ಮೊತ್ತವನ್ನು ಇಪಿಎಫ್‌ಒದ ಏಳು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಇದರ ಬೆನ್ನಲ್ಲೇ ಇದೀಗ ಪಿಎಫ್ ಹಣ ವಾಪಸ್ ಪಡೆಯುವುದು ಹಾಗೂ ಕೆಲಸ ಬದಲಾವಣೆ ಮಾಡಿದರೆ ಪಿಎಫ್ ಖಾತೆ ವರ್ಗಾವಣೆಯ ಮಾರ್ಗವನ್ನೂ ಕೇಂದ್ರ ಸರ್ಕಾರ ಸುಲಭಗೊಳಿಸಿದೆ. ಉದ್ಯೋಗ ಬದಲಾವಣೆ ಮಾಡಿದ್ದ ಸಂದರ್ಭದಲ್ಲಿ, ಹಳೆಯ ಉದ್ಯೋಗದಾತರು ಉದ್ಯೋಗಿಯ ಕೊನೆಯ ಕೆಲಸದ ದಿನಾಂಕವನ್ನು ತಡವಾಗಿ ನಮೂದಿಸಿದರೆ ಅಥವಾ ಹೊಸ ಉದ್ಯೋಗದಾತರು ಮೊದಲೇ ಪ್ರಾರಂಭ ದಿನಾಂಕವನ್ನು ನಮೂದಿಸಿದರೆ, ಇದು ನೌಕರರ ಸೇವಾ ಅವಧಿಗಳಲ್ಲಿ ಏರುಪೇರಿಗೆ ಕಾರಣವಾಗುತ್ತಿತ್ತು. ಕೆಲವೊಮ್ಮೆ, ಇಪಿಎಫ್‌ಒ ಡೇಟಾಬೇಸ್‌ನಲ್ಲಿ ತಪ್ಪಾದ ಡೇಟಾವನ್ನು ನಮೂದಿಸುವುದರಿಂದಲೂ ಈ ಸಮಸ್ಯೆ ಉದ್ಭವಿಸುತ್ತಿತ್ತು. ಇದರಿಂದ ಸೇವಾ ಅವಧಿ ಸೇರಿದಂತೆ ನೌಕರರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಿತ್ತು.
ಇದೀಗ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 7 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ಪರಿಹಾರ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿಯಮದಡಿಯಲ್ಲಿ, ನೌಕರರ ಸೇವಾ ಅವಧಿ ಓವರ್ಲ್ಯಾಪ್ ಆಗುವುದನ್ನು ತಡೆಯುತ್ತದೆ. ಒಂದು ವೇಳೆ ಹಿಂದಿನ ಉದ್ಯೋಗದಾತತು ಕೊನೆಯ ಕೆಲಸದ ದಿನಾಂಕವನ್ನು ತಡವಾಗಿ ನಮೂದಿಸಿದರೆ ಮತ್ತು ಹೊಸ ಉದ್ಯೋಗದಾತರರು ಮೊದಲೇ ನಮೂದು ಮಾಡಿದರೆ, ದಿನಾಂಕ ಓವರ್ಲ್ಯಾಪ್ ಆಗುತ್ತಿತ್ತು. ಒಂದು ವೇಳೆ ಹೀಗೆ ಆಗಿದ್ದೇ ಆದರೂ ಈ ಹೊಸ ನಿಯಮದ ಅನ್ವಯ ಪಿಎಫ್ ಹಣದ ವರ್ಗಾವಣೆ ಅಥವಾ ಅದನ್ನು ಹಿಂಪಡೆಯುವಿಕೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಹೊಸ ನಿಯಮದ ನಂತರ, ಪಿಎಫ್ ವರ್ಗಾವಣೆ ಪ್ರಕ್ರಿಯೆಯು ವೇಗಗೊಳ್ಳುತ್ತದೆ.
ಪ್ರಾದೇಶಿಕ ಕಚೇರಿಗಳು ಸೇವಾ ಅವಧಿ ಓವರ್ಲ್ಯಾಪ್ ಆಗುವ ಆಧಾರದ ಮೇಲೆ ಪಿಎಫ್ ಕ್ಲೈಮ್‌ಗಳನ್ನು ತಿರಸ್ಕರಿಸುವುದು ತಪ್ಪು ಎಂದು ಸ್ಪಷ್ಟಪಡಿಸುವ ಸುತ್ತೋಲೆಯನ್ನು ಇಪಿಎಫ್‌ಒ ಹೊರಡಿಸಿದೆ. ಹಲವು ನೈಜ ಕಾರಣಗಳಿಂದ ಇಂಥ ಸಮಸ್ಯೆ ಸಂಭವಿಸಬಹುದು, ಆದ್ದರಿಂದ ಕ್ಲೈಮ್ ವರ್ಗಾವಣೆಯನ್ನು ತಡೆಯಲು ಇದನ್ನು ಒಂದು ಆಧಾರವೆಂದು ಪರಿಗಣಿಸಬಾರದು ಎಂದು ಸಂಸ್ಥೆ ಹೇಳಿದೆ. ಒಬ್ಬ ಉದ್ಯೋಗಿ ತನ್ನ ಹಳೆಯ ಉದ್ಯೋಗದಾತರೊಂದಿಗೆ ಸಲ್ಲಿಸಿರುವ ಸೇವಾ ದಾಖಲೆ ಮತ್ತು ಹೊಸ ಉದ್ಯೋಗದಾತರೊಂದಿಗೆ ಸಲ್ಲಿಸಿರುವ ಸೇವಾ ದಾಖಲೆಗಳು ವಿಭಿನ್ನವಾಗಿದ್ದರೂ, ಉದ್ಯೋಗಿಗಳಿಗೆ ಸಮಸ್ಯೆ ತಂದೊಡ್ಡಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಇಷ್ಟೇ ಅಲ್ಲದೇ ಈ ಬದಲಾವಣೆಗಳು EPFO ನಲ್ಲೂ ಸಂಭವಿಸಿವೆ. ಉದ್ಯೋಗಿಗಳಿಗೆ ಪರಿಹಾರ ಒದಗಿಸಲು, ಇಪಿಎಫ್‌ಒ ಹಲವು ನಿಯಮಗಳನ್ನು ಸರಳೀಕರಿಸಿದೆ. ಅವುಗಳು ಹೀಗಿವೆ:
-ಇದರಲ್ಲಿ ಬ್ಯಾಂಕ್ ಖಾತೆಯನ್ನು ಸಾರ್ವತ್ರಿಕ ಖಾತೆ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಉದ್ಯೋಗದಾತರ ಅನುಮೋದನೆಯ ಅಗತ್ಯವನ್ನು ಸಹ ತೆಗೆದುಹಾಕಲಾಗಿದೆ.
-ಆನ್‌ಲೈನ್ ಕ್ಲೈಮ್‌ಗಾಗಿ ಚೆಕ್ ಅಥವಾ ಪಾಸ್‌ಬುಕ್‌ನ ಪ್ರತಿಯನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲ.
-ಉದ್ಯೋಗಿಗಳಿಗೆ ಪರಿಹಾರ ಒದಗಿಸಲು, EPFO API ಮತ್ತು ATM ಮೂಲಕ PF ಹಿಂಪಡೆಯುವ ಸೌಲಭ್ಯವನ್ನು ಪ್ರಾರಂಭಿಸಲು ಯೋಜಿಸಿದೆ.
