UPSC AIR 79 Priyanka Choudhary: ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಬಂತೆಂದರೆ ಸಾಕು, ಅದು ಹಲವು ರೋಚಕ ಕಥೆಗಳಿಗೆ ವೇದಿಕೆಯಾಗುತ್ತದೆ. ಆದರೆ ಈ ಬಾರಿ ಪ್ರಿಯಾಂಕಾ ಚೌಧರಿ ಎಂಬ ಹೆಸರಿನಿಂದ ಸೃಷ್ಟಿಯಾದ ಗೊಂದಲ ಮಾತ್ರ ಅಚ್ಚರಿಯಂತಿದೆ. 79ನೇ Rank ಬಂದ ಖುಷಿಯಲ್ಲಿ ಊರೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದ ಕುಟುಂಬಕ್ಕೆ, ಅಂತಿಮವಾಗಿ ತಿಳಿದ ಸತ್ಯ ದೊಡ್ಡ ಆಘಾತವನ್ನೇ ಉಂಟು ಮಾಡಿದೆ. 

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಹಲವೆಡೆ ಹರ್ಷ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ಒಂದು ಘಟನೆಯಂತೂ ಜನರನ್ನು ಕೆಲಕಾಲ ಆತಂಕಕ್ಕೀಡು ಮಾಡಿತು. ಹೌದು. ಫಲಿತಾಂಶದ ಪಟ್ಟಿಯಲ್ಲಿ 79ನೇ Rankನಲ್ಲಿ (AIR 79) ಪ್ರಿಯಾಂಕಾ ಚೌಧರಿ ಎಂಬ ಹೆಸರು ಕಾಣಿಸಿಕೊಂಡಿತ್ತು. ಈ ಹೆಸರು ತಿಳಿಯುತ್ತಿದ್ದಂತೆ ಉತ್ತರ ಪ್ರದೇಶದ ಗಾಜಿಪುರದ ಪ್ರಿಯಾಂಕಾ ಚೌಧರಿ ಅವರ ಕುಟುಂಬದಲ್ಲಿ ಹಬ್ಬದ ವಾತಾವರಣ ಶುರುವಾಯಿತು.

ಡ್ರೈವರ್ ಮಗಳೊಬ್ಬಳು ಯುಪಿಎಸ್‌ಸಿಯಂತಹ ಕಠಿಣ ಪರೀಕ್ಷೆಯಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿದ್ದಾಳೆ ಎಂದೇ ಎಲ್ಲರೂ ನಂಬಿದ್ದರು. ಆದರೆ ಸತ್ಯಾಂಶ ತಿಳಿಯುತ್ತಿದ್ದಂತೆ ಸಂಭ್ರಮದಲ್ಲಿದ್ದ ಆ ಕುಟುಂಬಕ್ಕೆ ದೊಡ್ಡ ಆಘಾತ ಕಾದಿತ್ತು. ವಾಸ್ತವವಾಗಿ, ಆ Rank ಪಡೆದಿದ್ದು ಗಾಜಿಪುರದ ಪ್ರಿಯಾಂಕಾ ಅಲ್ಲ, ಬದಲಿಗೆ ಚಂಬಾದಲ್ಲಿ ಡಿಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಖೇಶ್ ರೆಪ್ಸ್‌ವಾಲ್ ಅವರ ಪತ್ನಿ ಪ್ರಿಯಾಂಕಾ ಚೌಧರಿ! ಇವರಿಬ್ಬರ ಹೆಸರಿನ ನಡುವಿನ ಈ ಗೊಂದಲದ ಸ್ಟೋರಿ ಇಲ್ಲಿದೆ.

ಗಾಜಿಪುರದ ಪ್ರಿಯಾಂಕಾ ಚೌಧರಿ

ಗಾಜಿಪುರದ ಗೌರಾ ಖಾಸ್ ಗ್ರಾಮದ ನಿವಾಸಿಯಾದ ಪ್ರಿಯಾಂಕಾ ಚೌಧರಿ ಅವರ ತಂದೆ ನೀರಾರಾಮ್ ಅವರು ಸರ್ಕಾರಿ ಕಚೇರಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಫಲಿತಾಂಶದಲ್ಲಿ ಪ್ರಿಯಾಂಕಾ ಚೌಧರಿ ಎಂಬ ಹೆಸರು ಕಂಡ ತಕ್ಷಣ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಖುಷಿಯಿಂದ ಕುಣಿದಾಡಿದ್ದರು. ತಂದೆ ನೀರಾರಾಮ್ ಅವರು ಭಾವುಕರಾಗಿ, "ನನ್ನ ಮಗಳು ನಿಜವಾಗಿಯೂ ಐಎಎಸ್ ಆಗಿದ್ದರೆ, ಅವಳ ಕಾರನ್ನು ನಾನೇ ಹೆಮ್ಮೆಯಿಂದ ಓಡಿಸುತ್ತೇನೆ" ಎಂದು ಹೇಳಿದ್ದರು.

ಗ್ರಾಮದಲ್ಲಿ ಸಿಹಿ ಹಂಚಲಾಗಿತ್ತು ಮತ್ತು ಅಭಿನಂದನೆಗಳ ಸುರಿಮಳೆಯೇ ಹರಿದು ಬಂದಿತ್ತು. ಪ್ರಿಯಾಂಕಾ ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದರು ಮತ್ತು ಪ್ರಸ್ತುತ ಜಿಎಸ್‌ಟಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹೆಸರಿನ ಸಾಮ್ಯತೆಯಿಂದಾಗಿ ತಮ್ಮೂರ ಮಗಳೇ ಐಎಎಸ್ ಆಗಿದ್ದಾಳೆ ಎಂದು ಎಲ್ಲರೂ ತಪ್ಪಾಗಿ ಭಾವಿಸಿದ್ದರು.

ಅಸಲಿಗೆ ಪ್ರಿಯಾಂಕಾ ಚೌಧರಿ ಯಾರು?
79ನೇ Rank ಪಡೆದ ಪ್ರಿಯಾಂಕಾ ಚೌಧರಿ ಮೂಲತಃ ರಾಜಸ್ಥಾನದ ಬಿಕಾನೇರ್ ಮೂಲದವರು. ಇವರು ಐಐಟಿ ರೂರ್ಕಿಯಿಂದ (IIT Roorkee) ಜಿಯೋಫಿಸಿಕಲ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇದು ಪ್ರಿಯಾಂಕಾ ಅವರ ನಾಲ್ಕನೇ ಪ್ರಯತ್ನವಾಗಿದ್ದು, ಕೊನೆಗೂ ಅವರು ಯಶಸ್ಸು ಕಂಡಿದ್ದಾರೆ. ಪ್ರಿಯಾಂಕಾ ಅವರ ಪತಿ ಮುಖೇಶ್ ರೆಪ್ಸ್‌ವಾಲ್ ಈಗಾಗಲೇ ಐಎಎಸ್ ಅಧಿಕಾರಿಯಾಗಿದ್ದು, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ (DC) ನಿಯೋಜನೆಗೊಂಡಿದ್ದಾರೆ. ಈಗ ಅಸಲಿ ಪ್ರಿಯಾಂಕಾ ಚೌಧರಿ ಅವರ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ಹಿಂದೆಯೂ ನಡೆದಿವೆ ಇಂತಹ ಘಟನೆಗಳು

ಯುಪಿಎಸ್‌ಸಿ ಪಟ್ಟಿಯಲ್ಲಿ ಹೆಸರಿನ ಗೊಂದಲದಿಂದಾಗಿ ಸಂಭ್ರಮ ಮತ್ತು ಆಘಾತಗಳು ಏಕಕಾಲಕ್ಕೆ ಎದುರಾದ ಘಟನೆಗಳು ಈ ಹಿಂದೆಯೂ ನಡೆದಿವೆ. ಈ ಪ್ರಮಾದಗಳು ಎಷ್ಟು ಗಂಭೀರವಾಗಿದ್ದವೆಂದರೆ, ಅಂತಿಮವಾಗಿ ಸ್ವತಃ ಯುಪಿಎಸ್‌ಸಿ ಮಂಡಳಿಯೇ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಳೆದ ವರ್ಷ ಯುಪಿಎಸ್‌ಸಿ ಫಲಿತಾಂಶ ಬಂದಾಗ ತುಷಾರ್ ಕುಮಾರ್ ಎಂಬ ಹೆಸರಿನ ಇಬ್ಬರು ಅಭ್ಯರ್ಥಿಗಳು 44ನೇ Rank ತಮಗೆ ಬಂದಿದೆ ಎಂದು ಹಕ್ಕು ಸಾಧಿಸಿದ್ದರು.

ಹರಿಯಾಣದ ತುಷಾರ್ ಮತ್ತು ಬಿಹಾರದ ತುಷಾರ್ ಎಂಬ ಇಬ್ಬರು ಯುವಕರು ಒಂದೇ Rank ಪಡೆದಿದ್ದೇವೆ ಎಂದು ಸಂಭ್ರಮಿಸಿದ್ದರು.

ಇಬ್ಬರೂ ತಮ್ಮ ಅಡ್ಮಿಟ್ ಕಾರ್ಡ್‌ಗಳನ್ನು ಮಾಧ್ಯಮಗಳಿಗೆ ತೋರಿಸಿದ್ದರು! ಕೊನೆಗೆ ಯುಪಿಎಸ್‌ಸಿ ರೋಲ್ ನಂಬರ್ ಪರಿಶೀಲಿಸಿದಾಗ ಬಿಹಾರದ ತುಷಾರ್ ಅಸಲಿ ಸಾಧಕನೆಂದು ಸಾಬೀತಾಯಿತು. ಹರಿಯಾಣದ ತುಷಾರ್ ಪರೀಕ್ಷೆಯಲ್ಲೇ ಫೇಲ್ ಆಗಿದ್ದರು ಎಂಬ ಆಘಾತಕಾರಿ ಸತ್ಯ ಹೊರಬಂದಿತ್ತು.

ಇದೇ ರೀತಿಯ ಮತ್ತೊಂದು ಘಟನೆ ಆಯಿಷಾ ಫಾತಿಮಾ ಮತ್ತು ಆಯಿಷಾ ಮಕ್ರಾಮಿ ಎಂಬ ಇಬ್ಬರು ಯುವತಿಯರ ನಡುವೆ ನಡೆದಿತ್ತು.

184ನೇ Rank ತನಗೆ ಬಂದಿದೆ ಎಂದು ಇಬ್ಬರೂ ಸಂಭ್ರಮಿಸಿದ್ದರು. ಆಯಿಷಾ ಮಕ್ರಾಮಿ ಅವರು ತಮಗೆ ಬಂದ Rank ಬಗ್ಗೆ ಮಾಧ್ಯಮಗಳಿಗೆ ಸಂದರ್ಶನವನ್ನೂ ನೀಡಿದ್ದರು.

ಆದರೆ ರೋಲ್ ನಂಬರ್ ಪರಿಶೀಲಿಸಿದಾಗ ಆಯಿಷಾ ಫಾತಿಮಾ ಅವರು ನಿಜವಾದ Rank ವಿಜೇತೆ ಎಂದು ತಿಳಿದುಬಂತು. ಈ ಘಟನೆ ಆಯಿಷಾ ಮಕ್ರಾಮಿ ಅವರ ಕುಟುಂಬಕ್ಕೆ ದೊಡ್ಡ ಮುಜುಗರ ತಂದಿಟ್ಟಿತ್ತು.

ಈ ಗೊಂದಲಗಳಿಗೆ ಕಾರಣವೇನು?
ಸಾಮಾನ್ಯವಾಗಿ ಯುಪಿಎಸ್‌ಸಿ ಪಟ್ಟಿಯಲ್ಲಿ ಹೆಸರಿನ ಮುಂದೆ ಅಡ್ಮಿಟ್ ಕಾರ್ಡ್ ನಂಬರ್ ಇರುತ್ತದೆ. ಆದರೆ, ಹಲವು ಅಭ್ಯರ್ಥಿಗಳು ಅಥವಾ ಅವರ ಕುಟುಂಬದವರು ಕುತೂಹಲದ ಅತೀವ ಗಡಿಬಿಡಿಯಲ್ಲಿ ಕೇವಲ 'ಹೆಸರನ್ನು' ಮಾತ್ರ ಸರ್ಚ್ ಮಾಡುತ್ತಾರೆ. ಇದರಿಂದಾಗಿ ಒಂದೇ ಹೆಸರಿನ ಇತರ ವ್ಯಕ್ತಿಗಳು ಸಂಭ್ರಮ ಪಡುತ್ತಾರೆ.

ತಜ್ಞರ ಕಿವಿಮಾತು: ಯುಪಿಎಸ್‌ಸಿಯಂತಹ ದೊಡ್ಡ ಪರೀಕ್ಷೆಗಳ ಫಲಿತಾಂಶ ನೋಡುವಾಗ ಕೇವಲ ಹೆಸರನ್ನಷ್ಟೇ ನಂಬಬೇಡಿ. ನಿಮ್ಮ ರೋಲ್ ನಂಬರ್ (Roll Number) ಅಧಿಕೃತ ಪಟ್ಟಿಯೊಂದಿಗೆ ತಾಳೆಯಾಗುತ್ತಿದೆಯೇ ಎಂದು ಕನಿಷ್ಠ ಎರಡು ಬಾರಿ ಪರೀಕ್ಷಿಸಿಕೊಳ್ಳುವುದು ಉತ್ತಮ.