ಚೆನ್ನೈ(ಜ.20): ಎಂ.ಎಸ್‌.ಧೋನಿಯನ್ನು 2021ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಉಳಿಸಿಕೊಳ್ಳಲಿದೆ ಎಂದು ತಂಡದ ಮಾಲಿಕ, ಐಸಿಸಿ ಮಾಜಿ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಸ್ಪಷ್ಟಪಡಿಸಿದ್ದಾರೆ. 

ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಧೋನಿ ಹೊರಬಿದ್ದ ಹಿನ್ನೆಲೆಯಲ್ಲಿ ಅವರ ಕ್ರಿಕೆಟ್‌ ಭವಿಷ್ಯದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಆದರೆ ಐಪಿಎಲ್‌ ಭವಿಷ್ಯದ ಬಗ್ಗೆ ಅಭಿಮಾನಿಗಳಲ್ಲಿ ಇರುವ ಅನುಮಾನಗಳನ್ನು ಶ್ರೀನಿವಾಸನ್‌ ದೂರವಾಗಿಸಿದ್ದಾರೆ.

ಟೀಂ ಇಂಡಿಯಾ ಆಯ್ಕೆಗೆ ಎಂ.ಎಸ್.ಧೋನಿ ಲಭ್ಯ; ಶೀಘ್ರದಲ್ಲೇ ಘೋಷಣೆ?

‘ಧೋನಿ ಯಾವಾಗ ನಿವೃತ್ತಿಯಾಗುತ್ತಾರೆ. ಎಷ್ಟು ದಿನ ಅವರು ಆಡುತ್ತಾರೆ ಎಂದು ಜನ ಕೇಳುತ್ತಲೇ ಇದ್ದಾರೆ. ಅವರು ಆಡುತ್ತಾರೆ, ಅದನ್ನು ನಾನು ಖಚಿತವಾಗಿ ಹೇಳಬಲ್ಲೆ. ಈ ವರ್ಷ ಖಂಡಿತವಾಗಿಯೂ ಆಡುತ್ತಾರೆ. ಮುಂದಿನ ವರ್ಷ ಧೋನಿ ಹರಾಜಿನಲ್ಲಿ ಪಾಲ್ಗೊಂಡರೂ ಅವರನ್ನು ಉಳಿಸಿಕೊಳ್ಳುತ್ತೇವೆ. ಯಾವುದೇ ಅನುಮಾನ ಬೇಡ’ ಎಂದು ಶ್ರೀನಿವಾಸನ್‌ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಕಳೆದ ವರ್ಷ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಸದ್ಯದಲ್ಲೇ ಅವರು ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸುವ ನಿರೀಕ್ಷೆ ಇದೆ.