ಮುಂಬೈ(ಮಾ.15): ಮಾರಕ ಕೊರೋನಾ ಸೋಂಕಿನಿಂದಾಗಿ ಏ.15ರ ವರೆಗೂ ಅಮಾನತುಗೊಂಡಿರುವ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ನಡೆಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಸರತ್ತು ಆರಂಭಿಸಿದೆ. ಶನಿವಾರ ಇಲ್ಲಿ ನಡೆದ ಐಪಿಎಲ್‌ ಆಡಳಿತ ಮಂಡಳಿಯ ಮಹತ್ವದ ಸಭೆಯಲ್ಲಿ ಎಲ್ಲಾ 8 ತಂಡಗಳ ಮಾಲಿಕರೊಂದಿಗೆ ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಸಮಾಲೋಚನೆ ನಡೆಸಿದರು.

ಆಟಗಾರರು, ಅಭಿಮಾನಿಗಳ ಆರೋಗ್ಯವೇ ಮುಖ್ಯ ಎನ್ನುವುದನ್ನು ಒಪ್ಪಿದ ಮಾಲಿಕರು, ಬಿಸಿಸಿಐ ಪ್ರಸ್ತಾಪಿಸಿದ 6ರಿಂದ 7 ಆಯ್ಕೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುವುದಾಗಿ ತಿಳಿಸಿದರು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ವಿದೇಶಿ ಆಟಗಾರರ ಅಲಭ್ಯತೆ, 3 ರಾಜ್ಯಗಳಲ್ಲಿ ಪಂದ್ಯ ನಡೆಸಲು ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಮಾ.29ರಿಂದ ಆರಂಭಗೊಳ್ಳಬೇಕಿದ್ದ 13ನೇ ಆವೃತ್ತಿಯನ್ನು ಏ.15ರ ವರೆಗೂ ಅಮಾನತು ಮಾಡಲು ಶುಕ್ರವಾರ ಬಿಸಿಸಿಐ ನಿರ್ಧರಿಸಿತ್ತು.

IPL 2020ಗೆ ಕೊರೋನಾ ಕಾಟ, BCCI ಮುಂದಿರುವ ಆಯ್ಕೆಗಳೇನು?

ಟೂರ್ನಿ ಸ್ಥಳಾಂತರ ಇಲ್ಲ: ಈ ಹಿಂದೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 2 ಬಾರಿ ವಿದೇಶದಲ್ಲಿ ಐಪಿಎಲ್‌ ಪಂದ್ಯಗಳನ್ನು ನಡೆಸಲಾಗಿತ್ತು. ಆದರೆ ಕೊರೋನಾ ಸೋಂಕು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹರಡಿರುವ ಕಾರಣ ಟೂರ್ನಿಯನ್ನು ಸ್ಥಳಾಂತರಗೊಳಿಸುವ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ನಷ್ಟದ ಬಗ್ಗೆ ಚಿಂತಿಸುತ್ತಿಲ್ಲ: ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಸಹ ಮಾಲಿಕ ನೆಸ್‌ ವಾಡಿಯಾ, ‘ಬಿಸಿಸಿಐ ಹಾಗೂ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ಸ್ಪೋರ್ಟ್ಸ್ ಸಂಸ್ಥೆ ಹಣಕಾಸು ನಷ್ಟದ ಬಗ್ಗೆ ಚಿಂತಿಸುತ್ತಿಲ್ಲ. ಆರೋಗ್ಯ ಮೊದಲು ನಂತರ ಹಣಕಾಸು ಎನ್ನುವುದನ್ನು ಸಭೆಯಲ್ಲಿ ಎಲ್ಲರೂ ಒಪ್ಪಿಕೊಂಡರು. ಸರ್ಕಾರ ನೀಡುವ ಸೂಚನೆಗಳಿಗೆ ನಾವು ಬದ್ಧರಾಗಿದ್ದೇವೆ. ಈ ತಿಂಗಳಾಂತ್ಯದವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇಲ್ಲ. ಪರಿಸ್ಥಿತಿ ಸುಧಾರಿಸಿದರಷ್ಟೇ ಟೂರ್ನಿ ನಡೆಸುವ ಬಗ್ಗೆ ನಿರ್ಧರಿಸಲಾಗುತ್ತದೆ. ಐಪಿಎಲ್‌ ನಡೆದರೆ ಸಂತೋಷ, ಇಲ್ಲದಿದ್ದರೆ ಚಿಂತೆ ಇಲ್ಲ’ ಎಂದರು.

ಕೊರೋನಾದಿಂದ ಏ.15ರ ವರೆಗೆ IPL ರದ್ದು, BCCI ನಿರ್ಧಾರಕ್ಕೆ ಕ್ರಿಕೆಟಿಗರ ಪ್ರತಿಕ್ರಿಯೆ!

ಡೆಲ್ಲಿ ಕ್ಯಾಪಿಟಲ್ಸ್‌ ಮಾಲಿಕ ಪಾರ್ಥ್ ಜಿಂದಾಲ್‌ ಸಹ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು. ‘ಬಿಸಿಸಿಐ ಟೂರ್ನಿ ನಡೆಸಲು ಇರುವ ಆಯ್ಕೆಗಳ ಬಗ್ಗೆ ಚರ್ಚಿಸಲು ಮತ್ತೊಂದು ಸಭೆ ಕರೆಯಲಿದೆ. ಸಾರ್ವಜನಿಕರ ಆರೋಗ್ಯ ಮುಖ್ಯ’ ಎಂದರು.

ಕೋಲ್ಕತಾ ನೈಟ್‌ರೈಡರ್ಸ್ ಮಾಲಿಕ, ಬಾಲಿವುಡ್‌ ನಟ ಶಾರುಖ್‌ ಖಾನ್‌, ‘ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ. ಕೊರೋನಾ ಸೋಂಕು ಹರಡುವುದು ಕಡಿಮೆಯಾಗಿ, ಪರಿಸ್ಥಿತಿ ಸುಧಾರಿಸಲಿದೆ ಎನ್ನುವ ವಿಶ್ವಾಸವಿದೆ’ ಎಂದರು ಟ್ವೀಟ್‌ ಮಾಡಿದ್ದಾರೆ.

ಬಿಸಿಸಿಐ ಬಳಿ ಇರುವ ಆಯ್ಕೆಗಳು

* ಪಂದ್ಯಗಳ ಸಂಖ್ಯೆ ಕಡಿತಗೊಳಿಸಿ ಮಿನಿ ಐಪಿಎಲ್‌ ಆಯೋಜನೆ

* 2 ಗುಂಪುಗಳನ್ನು ರಚಿಸಿ ಅಗ್ರ 4 ತಂಡಗಳು ಪ್ಲೇ-ಆಫ್‌ಗೆ ಪ್ರವೇಶ

* 2 ಇಲ್ಲವೇ 3 ನಗರಗಳಲ್ಲಿ ಟೂರ್ನಿ ನಡೆಸುವುದು

* ಪ್ರತಿ ದಿನ 2 ಪಂದ್ಯ ನಡೆಸಿ 60 ಪಂದ್ಯಗಳನ್ನು ಪೂರೈಸುವುದು

* ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸುವುದು