ಪಾಕ್ ಬೇಹುಗಾರಿಕೆ ಆರೋಪದಲ್ಲಿ ಬಂಧಿತ ಯೂಟ್ಯೂಬರ್ ಜ್ಯೋತಿ, ಹನಿಟ್ರ್ಯಾಪ್‌ಗೆ ಬಲಿಯಾಗಿ ಪಾಕ್‌ಗೆ ಮಾಹಿತಿ ರವಾನಿಸುತ್ತಿದ್ದಳು. ಪಹಲ್ಗಾಂ, ಪುರಿ, ಕೇರಳ ಸೇರಿದಂತೆ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದ್ದ ಜ್ಯೋತಿ, ಪಾಕ್ ರಾಯಭಾರ ಕಚೇರಿ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ರೀಲ್ಸ್ ಸ್ಟಾರ್‌ಗಳನ್ನು ಬಳಸಿಕೊಂಡು ಪಾಕ್ ಬೇಹುಗಾರಿಕೆ ನಡೆಸುತ್ತಿರುವ ಅಂಶ ಬೆಳಕಿಗೆ ಬಂದಿದೆ.
ನವದೆಹಲಿ (ಮೇ.19): ಪಾಕ್ ಪರ ಬೇಹುಗಾರಿಕೆ ಆರೋಪದಲ್ಲಿ ಬಂಧಿತ ಯುಟ್ಯೂಬರ್ ಜ್ಯೋತಿ 26 ಪ್ರವಾಸಿಗರ ನರಮೇಧ ನಡೆದ ಪಹಲ್ಗಾಂ, ಕೇರಳ, ಒಡಿಶಾದ ಪುರಿ ದೇಗುಲಕ್ಕೂ ಭೇಟಿ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಆಕೆ ಹನಿಟ್ರ್ಯಾಪ್‌ಗೆ ಒಳಗಾಗಿದ್ದರಿಂದಲೇ ಪಾಕ್ ಪರವಾಗಿ ಬೇಹುಗಾರಿಕೆ ಆರಂಭಿಸಿದ್ದಳು ಎನ್ನುವ ಮಾಹಿತಿ ಬಹಿರಂಗವಾಗಿದೆ.
ಯೂಟ್ಯೂಬರ್ 'ಗುಪ್ತ'ಗಾಮಿನಿ ಜ್ಯೋತಿ ಮಲೋತ್ರಾ ಪಹಲ್ಗಾಂ ದಾಳಿಗೂ ಮುನ್ನ ಅಲ್ಲಿ ಭೇಟಿ ನೀಡಿದ್ದಳು. ಆಕೆಯ ಬಂಧನದ ಬಳಿಕ ಒಂದೊಂದೇ ಕಳ್ಳಾಟ ಹೊರಬೀಳುತ್ತಿವೆ. ಪಹಲ್ಗಾಂ ಘಟನೆಗೂ ಮೂರು ತಿಂಗಳು ಮುನ್ನ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದಳು.
ಐಎಸ್ ಐ ಏಜೆಂಟ್, ಪಾಕ್ ಹೈಕಮೀಷನರ್ ಕಚೇರಿಯ ಸಿಬ್ಬಂದಿ ಡ್ಯಾನಿಶ್‌ನಿಂದ ಜ್ಯೋತಿ ಮಲ್ಹೋತ್ರಾ ಹನಿಟ್ರ್ಯಾಪ್ ಗೆ ಒಳಗಾಗಿದ್ದಳು ಎನ್ನುವ ಮಾಹಿತಿ ಗೊತ್ತಾಗಿದೆ. ಭಾರತದ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಪಾಕ್ ಗೆ ಮುಟ್ಟಿಸಿದ್ದ ಆರೋಪದ ಮೇಲೆ ಈಕೆಯ ಬಂಧನವಾಗಿದೆ. ಪಾಕ್, ಬಾಂಗ್ಲಾದೇಶ, ಚೀನಾ ದೇಶಗಳ ರಾಯಭಾರಿ ಕಚೇರಿ, ಹೈಕಮೀಷನರ್ ಕಚೇರಿಗೆ ಪದೇ ಪದೇ ಭೇಟಿ ಕೊಡುವವರ ಮೇಲೆ ನಮ್ಮ ನಿಗಾ ಇದ್ದೆ ಇರುತ್ತದೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಜ್ಯೋತಿ ಮಲ್ಹೋತ್ರಾ ಪಹಲ್ಗಾಂ, ಕೇರಳ, ಒಡಿಶಾದ ಪುರಿ ದೇಗುಲದ ಸ್ಥಳಗಳ ಕುರಿತು ಆಕೆ ಪಾಕಿಸ್ತಾನದೊಂದಿಗೆ ಮಾಹಿತಿ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜ್ಯೋತಿ ಇದೇ ವರ್ಷದ ಜನವರಿಯಲ್ಲಿ ಕಾಶ್ಮೀರದ ಶ್ರೀನಗರ, ಸೋನ್ಮಾರ್ಗ್, ಗುಲ್ಮಾರ್ಗ್ ಮತ್ತು ಇತ್ತೀಚೆಗೆ ಉಗ್ರದಾಳಿಗೆ ಸಾಕ್ಷಿಯಾದ ಪಹಲ್ಗಾಂಗೆ ಭೇಟಿ ನೀಡಿದ್ದಳು.
ಪಾಕಿಸ್ತಾನ ಭಾರತದ ವಿರುದ್ಧ ಸಾಮಾಜಿಕ ಜಾಲತಾಣ ಪ್ರಭಾವಿಗಳು ಮತ್ತು ರೀಲ್ಸ್ ಸ್ಟಾರ್‌ಗಳನ್ನು ತನ್ನ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಪಾಕ್‌ಗೆ ಭಾರತದ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಶನಿವಾರ ಬಂಧನಕ್ಕೊಳಗಾಗಿದ್ದ ಹರ್ಯಾಣದ ಜ್ಯೋತಿ ಮಲ್ಹೋತ್ರಾ ವಿಚಾರಣೆ ವೇಳೆ ಇಂಥದ್ದೊಂದು ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಜ್ಯೋತಿ ಬಂಧನದ ಬೆನ್ನಲ್ಲೇ ಆಕೆಯೊಂದಿಗೆ ಮತ್ತು ಭಾರತದಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿ ಸಿಬ್ಬಂದಿ ಜೊತೆ ನಂಟು ಹೊಂದಿದ್ದ, ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ, ಪಾಕಿಸ್ತಾನದಲ್ಲಿ ಭಾರತವನ್ನು ತೆಗಳುವ ಕೆಲಸ ಮಾಡಿದ್ದ ಹಲವು ರೀಲ್ಸ್ ಸ್ಟಾರ್‌ಗಳ ಮೇಲೆ ಇದೀಗ ಕೇಂದ್ರೀಯ ಗುಪ್ತಚರ ಸಂಸ್ಥೆಗಳು ಕಣ್ಣಿಟ್ಟಿದ್ದು, ಶೀಘ್ರವೇ ಇನ್ನಷ್ಟು ಜನರ ಬಂಧನದ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಎಲ್ಲರ ಮೇಲೆ ನಿಗಾ ಇರಿಸುತ್ತೇವೆ ಎಂದ ಗುಪ್ತಚರ ಇಲಾಖೆ
ಶನಿವಾರ ಬಂಧನಕ್ಕೆ ಒಳಗಾದ ಜ್ಯೋತಿ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಿಸಾರ್‌ನ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್, ‘ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಸಾಮಾಜಿಕ ಮಾಧ್ಯಮ ಪ್ರಭಾವಿಗಳನ್ನು ಬಳಸಿಕೊಂಡು, ಅವರು ತಮ್ಮ ಪರವಾಗಿ ಮಾತನಾಡುವಂತೆ ಮಾಡುತ್ತಾರೆ. ಅಂತಹ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ ಜ್ಯೋತಿ ಈಗಾಗಲೇ ಹಲವು ಬಾರಿ ಪಾಕ್‌ಗೆ ಮತ್ತು ಒಮ್ಮೆ ಚೀನಾಗೆ ಹೋಗಿ ಬಂದಿರುವುದು ಕಂಡುಬಂದಿದೆ. ಅಂತೆಯೇ, ಜ್ಯೋತಿಯ ಆದಾಯ ಮತ್ತು ಖರ್ಚು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಈ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ. ಆಕೆಯ ಪ್ರವಾಸವೆಲ್ಲಾ ಪಾಕ್ ಪ್ರಾಯೋಜಿತವಾಗಿತ್ತು. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ವೇಳೆ ಆಕೆ ಭಾರತದಲ್ಲಿನ ಪಾಕ್ ರಾಯಭಾರ ಕಚೇರಿ ಸಿಬ್ಬಂದಿ ಜೊತೆ ನಿರಂತರ ಸಂಪರ್ಕದಲ್ಲಿದ್ದಳು. ಅದರಲ್ಲಿ ಆಕೆಯ ನಂಟು ಅಥವಾ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ಜತೆಗೆ, ಭಾರತೀಯ ಸೇನೆ ಅಥವಾ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಆಕೆಗೆ ತಿಳಿದಿರಲಿಲ್ಲ ಎಂದೂ ಹೇಳಿದ್ದಾರೆ.
ಹೇಗೆ ಬಳಕೆ?: ಜಾಲತಾಣದಲ್ಲಿ ಸಾಕಷ್ಟು ಹಿಂಬಾಲಕರನ್ನು ಹೊಂದಿರುವ ರೀಲ್ಸ್ ಸ್ಟಾರ್‌ಗಳಿಗೆ ಹಣ ಮತ್ತು ಇತರೆ ಆಮಿಷವೊಡ್ಡಿ ಅವರನ್ನು ತಮ್ಮ ಜಾಲಕ್ಕೆ ಪಾಕ್ ಬೀಳಿಸಿಕೊಳ್ಳುತ್ತಿತ್ತು. ಅವರ ಮೂಲಕ ಭಾರತದ ಆಯಕಟ್ಟಿನ, ಪ್ರಮುಖ ಸ್ಥಳಗಳ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿತ್ತು. ಉಚಿತ ಪ್ರವಾಸಗಳ ಮೂಲಕ ಪಾಕಿಸ್ತಾನಕ್ಕೆ ಕರೆದೊಯ್ದು, ಅಲ್ಲಿ ಪಾಕಿಸ್ತಾನ ಪರವಾದ, ಭಾರತಕ್ಕೆ ವಿರುದ್ಧವಾದ ಸಂಗತಿಗಳನ್ನು ಅವರಿಂದ ಹೇಳಿಸಲಾಗುತ್ತಿತ್ತು. ಹೀಗಾಗಿ ಸಾಮಾಜಿಕವಾಗಿ ಸದ್ದಿಲ್ಲದೇ ಜನರ ಮೇಲೆ ಪ್ರಭಾವ ಬೀರುವ ಕೆಲಸ ಮಾಡಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಹಲವರ ಮೇಲೆ ಶಂಕೆ: ಈ ನಡುವೆ ಜ್ಯೋತಿಯ ಹಳೆಯ ವಿಡಿಯೋ ಕೆದಕಿದಾಗ ಆಕೆಯ ಜೊತೆ ಇನ್ನೂ ಹಲವಾರು ಜಾಲತಾಣ ಪ್ರಭಾವಿಗಳು ದೆಹಲಿಯಲ್ಲಿನ ಪಾಕ್ ರಾಯಭಾರ ಕಚೇರಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು, ಪಾಕಿಸ್ತಾನಕ್ಕೆ ವ್ಲಾಗರ್‌ಗಳ ಹೆಸರಲ್ಲಿ ತೆರಳಿರುವುದು, ಭಾರತ ವಿರೋಧಿ ಅಂಶಗಳನ್ನು ತಮ್ಮ ವ್ಲಾಗ್‌ಗಳಲ್ಲಿ ಪ್ರಸಾರ ಮಾಡಿರುವುದು ಕಂಡುಬಂದಿದೆ. ಜೊತೆಗೆ ಕಳೆದ ವರ್ಷ ಜ್ಯೋತಿ, ಒಡಿಶಾದ ಪುರಿಗೆ ಬಂದಾಗ ಸ್ಥಳೀಯ ಯೂಟ್ಯೂಬರ್ ಜೊತೆ ಸಂಪರ್ಕ ಬೆಳೆಸಿದ್ದು ಕಂಡುಬಂದಿದೆ. ಈ ಭೇಟಿಯ ಬಳಿಕ ಒಡಿಶಾ ಮಹಿಳೆ ಪಾಕ್‌ನಲ್ಲಿರುವ ಕರ್ತಾರ್‌ಪುರಕ್ಕೆ ಹೋಗಿಬಂದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಎಂದು ಒಡಿಶಾ ಪೊಲೀಸರು ಹೇಳಿದ್ದಾರೆ.
ಪಹಲ್ಗಾಂ, ಪುರಿ, ಕೇರಳ, ಕುಂಭಕ್ಕೆ ಜ್ಯೋತಿ ಭೇಟಿ
ಚಂಡೀಗಢ: ಪಾಕ್ ಪರ ಬೇಹುಗಾರಿಕೆ ಆರೋಪದಲ್ಲಿ ಬಂಧಿತ ಯುಟ್ಯೂಬರ್ ಜ್ಯೋತಿ, 26 ಪ್ರವಾಸಿಗರ ನರಮೇಧಗೈದ ಪಹಲ್ಗಾಂ, ಕೇರಳ, ಒಡಿಶಾದ ಪುರಿ ದೇಗುಲಕ್ಕೂ ಭೇಟಿ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಈ ಸ್ಥಳಗಳ ಕುರಿತು ಆಕೆ ಪಾಕಿಸ್ತಾನದೊಂದಿಗೆ ಮಾಹಿತಿ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಜ್ಯೋತಿ ಇದೇ ವರ್ಷದ ಜನವರಿಯಲ್ಲಿ ಕಾಶ್ಮೀರದ ಶ್ರೀನಗರ, ಸೋನ್ಮಾರ್ಗ್, ಗುಲ್ಮಾರ್ಗ್ ಮತ್ತು ಇತ್ತೀಚೆಗೆ ಉಗ್ರದಾಳಿಗೆ ಸಾಕ್ಷಿಯಾದ ಪಹಲ್ಗಾಂಗೆ ಭೇಟಿ ನೀಡಿದ್ದಳು. ಅದಾದ ಬಳಿಕ, ದಕ್ಷಿಣದ ರಾಜ್ಯವಾದ ಕೇರಳಕ್ಕೆ ಪ್ರವಾಸ ಕೈಗೊಂಡಿದ್ದಳು. ಯೋಜನೆಯ ಪ್ರಕಾರ, ಕೊಚ್ಚಿ ಮೂಲಕ ಕೇರಳ ಪ್ರವೇಶಿಸುವುದಾಗಿ ಹೇಳಿಕೊಂಡಿದ್ದಳಾದರೂ, ಅಲ್ಲಿಗೆ ಹೋಗದೆ ಕಣ್ಣೂರಿನ ದಾರಿ ಹಿಡಿದಳು. ಆ ಊರನ್ನೂ ನೋಡದೆ, ಅಲಕ್ಕಾಡಿಗೆ ಹೋದಳು. ಅದು ಎಳಿಮಲ ನೌಕಾ ತರಬೇತಿ ಅಕಾಡೆಮಿಯಿಂದ ಕೇವಲ 17 ಕಿ.ಮೀ. ದೂರದಲ್ಲಿದೆ ಹಾಗೂ 11 ಯುವಕರು ಐಸಿಸ್ ಸೇರಿದ ಪದನ್ನಾ ಗ್ರಾಮವೂ ಇಲ್ಲಿಗೆ ಹತ್ತಿರ.
ಇದಾದ ಬಳಿಕ, ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳಕ್ಕೂ ಜ್ಯೋತಿ ಹೋಗಿದ್ದಳು. ನಂತರ ಒಮ್ಮೆ ಪಾಕಿಸ್ತಾನಕ್ಕೂ ಹೋಗಿ ಬಂದಿದ್ದಳು. ಸಾಲದ್ದಕ್ಕೆ, ಪಹಲ್ಗಾಂ ದಾಳಿ ನಡೆದಾಗಲೂ ಪಾಕ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಳು.
ಇನ್ನು 2024ರ ನವೆಂಬರ್‌ನಲ್ಲಿ ಈಕೆ ಒಡಿಶಾದ ಪುರಿಗೆ ಭೇಟಿ ನೀಡಿ, ಜಗನ್ನಾಥ ದೇವಸ್ಥಾನ, ಸಮುದ್ರತೀರ ಮತ್ತು ಊರಿನ ಫೋಟೋಗಳನ್ನು ಹಂಚಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ, ಆಕೆ ಪುರಿ ಕುರಿತ ಮಾಹಿತಿಯನ್ನೂ ಪಾಕ್ ಜತೆ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.


