ಕೇರಳದ ಫೋರ್ಟ್ ಕೊಚ್ಚಿಯಲ್ಲಿರುವ ಕಾಶಿ ಆರ್ಟ್ ಕೆಫೆ ಬಗ್ಗೆ ಯುಟ್ಯೂಬರ್ ಅಮೃತ್ ಸಿಂಗ್ ಕೋಮು ಪ್ರಚೋದನಕಾರಿ ವಿಡಿಯೋ ಹಂಚಿಕೊಂಡಿದ್ದಾನೆ. ಕೆಫೆಯಲ್ಲಿ ಗಾಂಧೀಜಿ ಜೊತೆ ಜಿನ್ನಾ ಪ್ರತಿಮೆ ಇಟ್ಟು ಗೋಮಾಂಸ ನೀಡಲಾಗುತ್ತಿದೆ ಎಂಬ ಆರೋಪದ ಮೇಲೆ ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೇರಳದ ಕೊಚ್ಚಿಯಲ್ಲಿರುವ, ಪೋರ್ಟ್ ಕೊಚ್ಚಿ ಎಂದೇ ಪ್ರಸಿದ್ಧವಾಗಿರುವ ಈ ಪ್ರದೇಶ ಅತ್ಯುತ್ತಮ ಕೆಫೆಗಳಿಗೆ ಹೆಸರುವಾಸಿ. ಪ್ರವಾಸಿಗರು ಹೆಚ್ಚು ಭೇಟಿ ನೀಡುವುದು ಇಲ್ಲಿನ ಕೆಫೆಗಳಿಗೆ ಆದರೆ ಇದೀಗ ಅಲ್ಲಿ ನಡೆದಿರುವ ಒಂದು ಆಘಾತಕಾರಿ ಕೃತ್ಯದಿಂದಾಗಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ. ಈ ಘಟನೆಗೆ ಕೇರಳ ಸಿಎಂ ತೀವ್ರವಾಗಿ ಖಂಡಿಸಿದ್ದಾರೆ. ಪೋರ್ಟ್ ಕೊಚ್ಚಿ ಕೆಫೆಯಲ್ಲಿ ನಡೆದಿದ್ದೇನು? ಅಷ್ಟಕ್ಕೂ ಯುಟ್ಯೂಬರ್ ಮಾಡಿರುವ ಗಂಭೀರ ಆರೋಪವೇನು?
ಯುಟ್ಯೂಬರ್ ಮಾಡಿರುವ ವಿಡಿಯೋದಲ್ಲಿ ಏನಿದೆ?
ಕೇರಳದೆ ಈ ಕೆಫೆ ಭೇಟಿ ನೀಡಿದ್ದ ಯುಟ್ಯೂಬರ್ ಅಮೃತ್ ಸಿಂಗ್ ಡ್ಯಾರೆನ್ ಎಂಬಾತ ಇನ್ಸ್ಟಾಗ್ರಾಮ್ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾನೆ. ಕೇರಳದ ಪೋರ್ಟ್ ಕೊಚ್ಚಿ ಕೆಫೆಯಲ್ಲಿ ಮಹಾತ್ಮ ಗಾಂಧೀಜಿಯ ಪ್ರತಿಮೆ ಜೊತೆಗೆ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಪ್ರತಿಮೆಯನ್ನ ಇರಿಸಲಾಗಿದೆ. ಮಹಾತ್ಮನ ಪ್ರತಿಮೆ ಇಂಥ ಕೆಫೆಯಲ್ಲಿ ಗೋಮಾಂಸ ನೀಡಲಾಗುತ್ತಿದೆ ಎಂದು ತಿಳಿಸಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ದೇಶಾದ್ಯಂತ ವೈರಲ್ ಆಗಿದ್ದು ಕೋಮು ಗಲಭೆಗೆ ಪ್ರಚೋದನೆ ನೀಡಿದಂತಾಗಿದೆ. ಈ ವಿಡಿಯೋ ನೋಡಿದ ಬಳಿಕ ಹಿಂದೂ-ಮುಸ್ಲಿಂ ಆರೋಪ ಪ್ರತ್ಯಾರೋಪಗಳು ಮತ್ತೆ ಜೋರಾಗಿವೆ.
ಕೋಮು ಪ್ರಚೋದನಕಾರಿ ಹೇಳಿಕೆ ಯುಟ್ಯೂಬರ್ ವಿರುದ್ಧ ಎಫ್ಐಆರ್
ಯುಟ್ಯೂಬರ್ ಹಂಚಿಕೊಂಡಿರುವ ವಿಡಿಯೋದಿಂದಾಗ ಸಾಮಾಜಿಕ ಜಾಲತಾಣದಲ್ಲಿ ಕೆಫೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಕ್ಟೋಬರ್ 22ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು. ಈ ವಿಡಿಯೋ ಕಾಡ್ಗಿಚ್ಚಿನಂತೆ ದೇಶಾದ್ಯಂತ ಹಬ್ಬಿ ಇದೀಗ ವಿವಾದ ಸೃಷ್ಟಿಸಿದೆ ಅಲ್ಲ, ಹಿಂದೂ ಮುಸ್ಲಿಂ ನಡುವಿನ ಸೌಹಾರ್ದತೆಗೆ ಕೊಳ್ಳಿ ಇಟ್ಟಂತಾಗಿದೆ. ಈ ಘಟನೆಯನ್ನು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಅವರು ಕೂಡ ತೀವ್ರವಾಗಿ ಖಂಡಿಸಿದ್ದಾರೆ. ಫೋರ್ಟ್ ಕೊಚ್ಚಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 353(2) ಮತ್ತು 192ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾಶಿ ಆರ್ಟ್ ಕೆಫೆಯಲ್ಲಿ ಜಿನ್ನಾ ಪ್ರತಿಮೆ ಇದೆಯೇ?
ಯುಟ್ಯೂಬರ್ ಆರೋಪಿಸಿದಂತೆ ಕಾಶಿ ಆರ್ಟ್ ಕೆಫೆಯಲ್ಲಿ ಮಹಾತ್ಮ ಗಾಂಧೀಜಿ ಜೊತೆಗೆ ಪಕ್ಕದಲ್ಲಿ ಬೆಳ್ಳಿಯಿಂದ ತಯಾರಿಸಲಾದ ಮೊಹಮ್ಮದ್ ಅಲಿ ಜಿನ್ನಾ ಪ್ರತಿಮೆ ಇಡಲಾಗಿದೆಯೇ? ಈ ಕೆಫೆಯಲ್ಲಿ ನಿಜಕ್ಕೂ ಗೋಮಾಂಸ ನೀಡಲಾಗುತ್ತದೆಯೇ? ಈ ಆರೋಪಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿವೆ. ಕೆಲವರು ಯುಟ್ಯೂಬರ್ ಹೇಳುವುದು ನಿಜ ಎಂದರೆ, ಇನ್ನು ಕೆಲವರು ವಿರೋಧಿಸಿದ್ದಾರೆ.
ಆದರೆ ಎಫ್ಐಆರ್ ವರದಿ ಪ್ರಕಾರ ಆರೋಪಿ ತನ್ನ ಕೃತ್ಯದಿಂದ ಸಾರ್ವಜನಿಕ ಶಾಂತಿಗೆ ಭಂಗ ತರಬಹುದು ಎಂದು ಗೊತ್ತಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅಂದರೆ ಹಿಂದೂ ಮುಸ್ಲಿಂ ನಡುವೆ ಸಂಘರ್ಷ ತಂದಿಡಲೆಂದೇ, ಉದ್ದೇಶಪೂರ್ವಕವಾಗಿ ಶೇರ್ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಿಂದೂಗಳಿಗೆ ಧಾರ್ಮಿಕ ಮಹತ್ವ ಹೊಂದಿರುವ ಕಾಶಿ ಕೆಫೆ ಎಂದು ಹೆಸರಿಡಲಾಗಿದ್ದರು. ಈ ಕೆಫೆಯ ಸುತ್ತಮುತ್ತಲು ಮುಸ್ಲಿಂರ ಸಂಖ್ಯೆ ಹೆಚ್ಚಿರುವ ಕಾರಣ ಅಲ್ಲಿ ಗೋಮಾಂಸ ನೀಡಲಾಗುತ್ತಿದೆ ಎಂಬ ಅರ್ಥ ಬರುವಂತೆ ವಿಡಿಯೋದಲ್ಲಿ ಹೇಳಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಇದು ಕೋಮು ವೈಷಮ್ಯಕ್ಕೆ ಕಾರಣವಾಗುತ್ತದೆ ಎಂದು ಎಫ್ಐಆರ್ನಲ್ಲಿ ತಿಳಿಸಿದೆ.
ಯುಟ್ಯೂಬರ್ ವಿರುದ್ಧ ಕೇಸ್ ದಾಖಲು
ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶ, ಹಿಂದೂ ಮುಸ್ಲಿಂ ಕೋಮು ಸಂಘರ್ಷಕ್ಕೆ ಪ್ರಚೋದಿಸುವ ಉದ್ದೇಶದಿಂದ ವಿಡಿಯೋ ಹಂಚಿಕೊಳ್ಳಲಾಗಿದೆ ಎಂಬ ಆರೋಪ ಹಿನ್ನೆಲೆ ಯುಟ್ಯೂಬರ್ ವಿರುದ್ಧ ಬಿಎನ್ಎಸ್ ಸೆಕ್ಷನ್ 353(2) ಸಾರ್ವಜನಿಕರಲ್ಲಿ ಗೊಂದಲ ಉದ್ವಿಗ್ನತೆ, ಪ್ರಚೋದನೆ ಮಾಡುವ ಕೃತ್ಯಕ್ಕೆ ಸಂಬಂಧಿಸಿದ ಸೆಕ್ಷನ್ 192 ರ ಅಡಿ ಕೇಸ್ ದಾಖಲಾಗಿದೆ.
ಯುಟ್ಯೂಬರ್ ವಿಡಿಯೋ ಖಂಡಿಸಿದ ಕೇರಳ ಸಿಎಂ
ಈ ವಿಡಿಯೋವನ್ನು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರವಾಗಿ ಖಂಡಿಸಿದ್ದಾರೆ. ಕೇರಳದ ಜನರು ಒಗ್ಗಟ್ಟಿನಿಂದ ಇದ್ದಾರೆ. ಇಲ್ಲಿ ಕೋಮು ದ್ವೇಷ ಹರಡುವ ಪ್ರಯತ್ನಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ರಾಜ್ಯದ ಹೊರಗಿನ ವ್ಲಾಗರ್ ಒಬ್ಬರು ಫೋರ್ಟ್ ಕೊಚ್ಚಿ ಕುರಿತು ತಪ್ಪು ಮಾಹಿತಿಯನ್ನು ಹರಡಿ, ನಮ್ಮ ರಾಜ್ಯವನ್ನು ಕೆಟ್ಟದಾಗಿ ಬಿಂಬಿಸಿ, ಸಮುದಾಯಗಳ ನಡುವೆ ವಿಭಜನೆ ಮೂಡಿಸಲು ಪ್ರಯತ್ನಿಸಿರುವ ಇತ್ತೀಚಿನ ಇನ್ಸ್ಟಾಗ್ರಾಂ ವಿಡಿಯೋ ಸ್ವೀಕಾರಾರ್ಹವಲ್ಲ. ದೇವರ ಸ್ವಂತ ನಾಡಿನಲ್ಲಿ ಹೊಸ ಯುಗ ಆರಂಭವಾಗಿದೆ. ದ್ವೇಷಕ್ಕೆ ಇಲ್ಲಿ ಅವಕಾಶವಿಲ್ಲ. ನಮ್ಮ ಕೋಮು ಸೌಹಾರ್ದಕ್ಕೆ ಯಾರೂ ಧಕ್ಕೆ ತರಲು ನಾವು ಬಿಡುವುದಿಲ್ಲ ಎಂದು ಸತೀಶನ್ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಜಿ ಸಿಎಂ ಪಿಣರಾಯಿ ಕಿಡಿ
ಕೇರಳದಲ್ಲಿ ದ್ವೇಷ ಹರಡಲು ಯತ್ನಿಸಿದ್ದಾರೆ ಎಂದು ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ವಿಜಯನ್, ಫೋರ್ಟ್ ಕೊಚ್ಚಿ ಮತ್ತು ವರ್ಕಲಾ ಪ್ರದೇಶಗಳು ವಿವಿಧ ಸಂಸ್ಕೃತಿಗಳು ಒಂದಾಗುವ, ಇತಿಹಾಸಗಳು ಬೆಸೆದುಕೊಳ್ಳುವ ಮತ್ತು ವೈವಿಧ್ಯತೆ ಬೆಳೆಯುವ ಸ್ಥಳಗಳಾಗಿವೆ ಎಂದು ಹೇಳಿದ್ದಾರೆ. ಅಲ್ಲದೆ ಸುಳ್ಳು ಸುದ್ದಿ ಶೇರ್ ಮಾಡಿಕೊಂಡಿರುವ ಯುಟ್ಯೂಬರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ
ಯುಟ್ಯೂಬ್ ವೀಕ್ಷಣೆ, ಸಬ್ಸ್ಕ್ರೈಬ್ ಪಡೆಯಲು ಈ ರೀತಿ ದ್ವೇಷ ಹರಡುವ ವ್ಲಾಗರ್ ಒಬ್ಬರು ಪೋರ್ಟ್ ಕೊಚ್ಚಿ ಕೆಫೆ ಬಗ್ಗೆ ಕೋಮು ವಿಭಜನೆ ದೃಷ್ಟಿಯಿಂದ ವ್ಲಾಗರ್ ಯತ್ನಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸೂಕ್ತ ಹಾಗೂ ಕಠಿಣ ಕ್ರಮಕ್ಕೆ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ.







